ನಾನು ರಸ್ತೆಬದಿಯ ಒಂದು ಮರ
ನನ್ನದೇ ನೆರಳಿನಿಂದ ಗುರುತಿಸಿಕೊಳ್ಳಲಿಲ್ಲ ನಾನು
ನನ್ನ ಹಣ್ಣುಗಳಿಂದಲೂ.
ಹೆಗಲಲ್ಲಿ ಕಾಲದ ಕೊಡಲಿಯಿಟ್ಟು
ನಡೆದುಹೋಗುತ್ತಿರುವೆ ನೀನು.
ಸವೆತದ ಸಾಧ್ಯತೆಯಿದ್ದರೂ
ಬೇರು ಹೊದ್ದು ಮಲಗಿದ್ದೇನೆ ನಾನು.
ನಿನ್ನ ಹಾದಿಯಲ್ಲಿ
ನಾನೊಂದು ಗಾಳಿಯಲ್ಲಿ ಹಾರುವ ಎಲೆ
ಹಸಿರು, ಹಳದಿ, ಕೆಂಪು.
ಗಡಗಡ ಚಳಿಯಲ್ಲಿ
ಮುಗಿದುಹೋಗುತ್ತವೆ ನನ್ನ ಋತುಗಳು
ನಾನು ನನ್ನ ಮೇಲೇ ಅಪ್ಪಿಕೊಂಡು ಮಲಗುತ್ತೇನೆ
ಎಲ್ಲ ವಸಂತಗಳಲ್ಲೂ.
ಹೂಗಳು ಬಣ್ಣಗಳ ಕಳಚೆಸೆಯುತ್ತಿವೆ
ನಗುತ್ತಿವೆ
ಕಪ್ಪು ಕುಹಕ ನಗು
ಬಿಳಿ ನಿರ್ಲಿಪ್ತ
ಒಳಗೆ
ಹಸಿರುವರ್ಣದ ಕಣ್ಣುಗಳುಳ್ಳ
ಒಂದು ಮರಕುಟಿಗ
ಸ್ವರ್ಗ ನರಕಗಳ ಕುಟುಕುವ ಶಬ್ದ.
ಒಂದು ಮಧುರ ಸ್ವರ
ಒಳಕ್ಕೆ ನುಗ್ಗಿ
ಆಳದಾಳಕ್ಕೆ ಬೀಳುತ್ತಿರುವ ಸದ್ದು.
ಬದುಕು
ಸಾವಿಗಿಂತಲೂ ನಿಶ್ಯಬ್ದ.
*
ಮಲಯಾಳಂ ಮೂಲ- ಚಿತ್ರ ಕೆ ಪಿ
ಕನ್ನಡಕ್ಕೆ -ಕಾಜೂರು ಸತೀಶ್