ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, December 3, 2019

ನನ್ನ ಹೆಸರು ಮತ್ತು ಕಾಡುವ ಕೆಲವು ಪಾತ್ರಗಳು

ಅಮ್ಮ ಹೇಳಿ ನಗುತ್ತಿದ್ದರು!
*
ಕಳೆದ ವರ್ಷದ ಡಿಸೆಂಬರ್ ತಿಂಗಳು. ನಾನು ಸಂಜೆ ಹಿಂತಿರುಗುವಾಗ ವ್ಯಕ್ತಿಯೊಬ್ಬರು ರಸ್ತೆಯ ಎಡಕ್ಕೊಮ್ಮೆ ಬಲಕ್ಕೊಮ್ಮೆ ವಾಲುತ್ತಾ ಬರುತ್ತಿರುವುದು ದೂರದಿಂದ ಕಾಣಿಸಿತು.

ಹತ್ತಿರ ಬಂದಾಗ ' ಛೆ! ನೀವಾ ಇದು?! ನಾನು ಯಾರೋ ಬೇರೆಯವ್ರು ಅಂದ್ಕೊಂಡಿದ್ದೆ , ನೀವು ಈ ಥರಾ ಮಾಡ್ತೀರಿ ಅಂದ್ಕೊಂಡಿರ್ಲಿಲ್ಲ!' ಎಂದು ಹೇಳಿ ನನ್ನ ದಾರಿ ಹಿಡಿದೆ.

'ಅವರು ಕುಡಿಯುವುದನ್ನು ಬಿಟ್ಟಿದ್ದಾರಂತೆ' ಎಂದು ಅಮ್ಮ ಹೇಳಿದರು. ನನಗೆ ಆಶ್ಚರ್ಯ ! 'ಅದ್ಹೇಗೆ ಬಿಟ್ಟರು?' ಕೇಳಿದೆ. ಕಳೆದ ವರ್ಷ ನೀನು ಏನೋ ಹೇಳಿದ್ಯಂತೆ, ಅದರಿಂದ ಅವರಿಗೆ ತುಂಬಾ ಮುಜುಗರ
ಆಯ್ತಂತೆ. 'ಅವ್ನಿಂದ ಹೀಗೆ ಹೇಳಿಸ್ಕೊಂಡ್ನಲ್ಲಾ ಎಂದು ದಿನಾ ದುಃಖಿಸುತ್ತಿದ್ದರಂತೆ'!

ಅಮ್ಮ ನಗುತ್ತಿದ್ದರು. ನನಗೋ ದಿಗ್ಭ್ರಮೆ!

**

ಇವತ್ತು ಮತ್ತೊಂದು ಘಟನೆ ನಡೆಯಿತು. 'ಸತೀಶ್ ಯಾರು' ಎಂದು ಕೇಳಿಕೊಂಡು ಬಂದರು ಒಬ್ಬರು. 'ಇವರೇ' ಎಂದರು ಪಕ್ಕದವರು. 'ನಮಸ್ತೆ ಸರ್' ಎಂದು ಹೇಳಿ ಅವರು ಹೊರಟುಹೋದರು!

ಯಾಕೋ ಈ ಬದುಕು ಇಷ್ಟೆಲ್ಲಾ ವಿಚಿತ್ರವಾಗಿರುತ್ತಾ ಅನ್ನಿಸತೊಡಗಿದೆ!

Whatsapp ಮತ್ತು ಗುಮಾಸ್ತೀಕರಣ

ತಂತ್ರಜ್ಞಾನದಲ್ಲಿ ನಮ್ಮ ಬೆಳವಣಿಗೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ದೈಹಿಕ ಮತ್ತು ಬೌದ್ಧಿಕ ಶ್ರಮವನ್ನು ಕಡಿಮೆ ಮಾಡುವ ಅವು ಒಂದು ಕೆಲಸವನ್ನು ಶೀಘ್ರವಾಗಿ ಮುಗಿಸಿಕೊಡುವಲ್ಲಿ ನೆರವಾಗುತ್ತವೆ. ಈ ಬೆಳವಣಿಗೆಯನ್ನು ಮೆಚ್ಚಲೇಬೇಕು!


ನಾವೆಲ್ಲಾ ಬೆನ್ನುತಟ್ಟಿಕೊಳ್ಳುವ ತಂತ್ರಜ್ಞಾನವು ಇಂದು ಇಂಡಿಯಾದ ಎಲ್ಲಾ ಸರಕಾರಿ ನೌಕರರನ್ನು ಗುಮಾಸ್ತರನ್ನಾಗಿಸಿದೆ. ಇಡೀ ಕೆಲಸಗಳೆಲ್ಲ ದಾಖಲೀಕರಣದ ನಿಮಿತ್ತವಾಗಿಯೇ ನಡೆಯುತ್ತಿದೆ. ಅದಕ್ಕಾಗಿ ಒಬ್ಬರು ಮತ್ತೊಬ್ಬರ ಮೇಲೆ ತಮ್ಮ ಅಧಿಕಾರವನ್ನು ಹೇರಬೇಕಾಗುತ್ತದೆ. ಶ್ರೇಣೀಕರಣದ ಅಡಿಯಿಂದ ಮುಡಿಯವರೆಗೆ ಹಬ್ಬಿಕೊಂಡಿರುವ ಈ ಪ್ರಕ್ರಿಯೆಯು ಕೆಲಸವನ್ನು ಮತ್ತಷ್ಟೂ ಜಟಿಲವಾಗಿಸುತ್ತಿದೆ.

ಅಧಿಕಾರಿಯಾದವರು ಕಾಲ್ ಸೆಂಟರ್ ನೌಕರರ ಹಾಗೆ ಕರೆ ಸ್ವೀಕರಿಸಬೇಕು, ಟೈಪಿಸ್ಟಿನ ಹಾಗೆ ಸಂದೇಶ ಕುಟ್ಟಬೇಕು ಇತ್ಯಾದಿ. ಹೀಗಾದಾಗ ಮಾಡಬೇಕಿರುವ ನಿಜದ ಕೆಲಸಗಳೆಲ್ಲಾ ಹಳ್ಳ ಹಿಡಿಯುತ್ತವೆ!

whatsapp ಈ ವ್ಯವಸ್ಥೆಯನ್ನು ನಿಜಕ್ಕೂ ಬುಡಮೇಲು ಮಾಡಿಬಿಡುತ್ತದೆ.