ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, May 16, 2019

ಮೋಸ

ಹರಿವು ನಿಲ್ಲಿಸಿ
ಸಾಯುವ ಕಡೇ ಕ್ಷಣದಲ್ಲಿ
ನದಿಯು ಹಾದಿಯೊಡನೆ ಉಸುರಿತು:

'ಸಮುದ್ರವನ್ನು ನೋಡಲು ಸಾಧ್ಯವಾದರೆ
ನಾನು ಶ್ರಮಿಸಿದ್ದೆ ಎಂದು ಹೇಳಬೇಕು'

ಅಷ್ಟರಲ್ಲಾಗಲೇ
ಹಾದಿಯ ಮರಳಕಣ
ಮರುಭೂಮಿಯೊಡನೆ
ರಹಸ್ಯ ಮಾತುಕತೆ ಆರಂಭಿಸಿತ್ತು!
*

 #ಮಲಯಾಳಂ ಮೂಲ- ಜಿನೇಶ್ ಮಡಪ್ಪಳ್ಳಿ

#ಕನ್ನಡಕ್ಕೆ - ಕಾಜೂರು ಸತೀಶ್

Monday, May 13, 2019

ಮಳೆ'ಹನಿ'

ಮಳೆ ನಿಂತಿದೆ
ಮರಕ್ಕೀಗ ಮೋಡದ ಕೆಲಸ!
*
ಮಳೆ ನಿಂತಿದೆ
ಮೋಡ ದಣಿವಾರಿಸಿಕೊಳ್ಳುತ್ತಿರುವಾಗ
ಮರವದರ ಬೆವರೊರೆಸಿಕೊಡುತ್ತಿದೆ!
*
ಮಳೆ ನಿಂತಿದೆ
ಒದ್ದೆಯಾದ ಗಾಳಿ ಮೈಕೊಡವುತ್ತಿದೆ!
*
ಮಳೆ ನಿಂತಿದೆ
ಮರ ಮಾತಿಗಿಳಿದಿದೆ!
*
ಮಳೆ ನಿಂತಿದೆ
ನಕ್ಷತ್ರಗಳು ನಿದ್ದೆಗೆ ಜಾರಿವೆ!
*

ಕಾಜೂರು ಸತೀಶ್

Sunday, May 5, 2019

ಪುನರಪಿ ಮರಣ ಮತ್ತು ನಡುವಿನ ಇಷ್ಟೇ ಇಷ್ಟು ಬದುಕು

ವಿದ್ಯುತ್ತಿಲ್ಲದ ಒಂದು ರಾತ್ರಿ. ಅವರು ಹೊರಡಲಣಿಯಾದರು. ನಾನು 'ಟಾರ್ಚ್ ತಗೊಂಡ್ಹೋಗಿ ಸಾರ್' ಎಂದೆ. 'ಬೇಡಬಿಡಿ' ಎಂದರು. ಮೂರ್ನಾಲ್ಕು ಹೆಜ್ಜೆ ಮುಂದೆ ಹೋದವರು ನಿಮಿಷದ ನಂತರ ಮತ್ತೆ ಬಂದರು. 'ತುಂಬಾ ಕತ್ತಲು, ಟಾರ್ಚ್ ಕೊಡಿ' ಎಂದರು. ಮತ್ತೆ ಹೊರಟವರು ಎರಡು ನಿಮಿಷಗಳ ಕಳೆದ ಮೇಲೆ ಏದುಸಿರು ಬಿಡುತ್ತಾ ಬಂದರು. 'ಮೇಷ್ಟ್ರೇ...ಇವತ್ತೇನಾದ್ರೂ ಟಾರ್ಚ್ ತಗೊಂಡ್ಹೋಗಿಲ್ಲ ಅಂದಿದ್ರೆ ಔಟ್ ಮೇಷ್ಟ್ರೇ ನಾನು... ಕರೆಂಟ್ ಲೈನ್ ಕಟ್ಟಾಗಿ ರೋಡಲ್ಲಿ ಬಿದ್ದಿದೆ, ಕರೆಂಟ್ ಇದೆ ಅದ್ರಲ್ಲಿ' ಎಂದರು.

'ಸಾವು' ಎಂದರೆ ಹಾಗೆ. ಎಲ್ಲೆಲ್ಲೋ ಹೇಗ್ಹೇಗೋ ಹೊಂಚುಹಾಕಿ ಕುಳಿತಿರುತ್ತದೆ. ಒಂಬತ್ತು ವರ್ಷಗಳ ಹಿಂದೆ, ಇದನ್ನು ಬರೆಯುತ್ತಿರುವ ಈ ದಿವಸದಂದು(ಮೇ 5) ಮೇಷ್ಟ್ರೊಬ್ಬರ ತಲೆಮೇಲೆ ಅಡಿಕೆ ಮರ ಬಿದ್ದು ಸ್ಥಳದಲ್ಲೇ ಅಸುನೀಗಿದ್ದರು. ಆಗಿದ್ದಿಷ್ಟು: ಅಡಿಕೆ ಮರವನ್ನು ಕಡಿಸುತ್ತಿದ್ದರು. ಇನ್ನೇನು ಮರ ಬೀಳಬೇಕೆನ್ನುವಷ್ಟರಲ್ಲಿ 'ಸ್ವಲ್ಪ ದೂರ ನಿಲ್ಲಿ ಮೇಷ್ಟ್ರೇ' ಎಂದಿದ್ದಾರೆ ಮರ ಕಡಿಯುವವರು. ಇವರು ಪಕ್ಕಕ್ಕೆ ಸರಿಯುವಾಗ ಅದುವರೆಗೆ ನೋಡಿರದ ಗುಂಡಿಯೊಂದರಲ್ಲಿ ಕಾಲು ಸಿಲುಕಿದೆ. ಮರ ಸಾವಾಗಿ ಅವರ ನೆತ್ತಿಗೆ ಬಡಿದಿದೆ!

ಅದರ ಹಿಂದಿನ ದಿನ ರಾತ್ರಿ 11 ಗಂಟೆಯವರೆಗೆ ಅವರು ನಮ್ಮೊಂದಿಗಿದ್ದರು.ನಮ್ಮಲ್ಲೇ ಊಟಮಾಡಿ ಹೋಗಿದ್ದರು.

'ಸಾವು' ಯಾಕಿಷ್ಟು ಕಾಡುತ್ತೋ ಗೊತ್ತಿಲ್ಲ. ನನ್ನ ಸಾವು ಕೂಡ ಕೂದಲೆಳೆಯಲ್ಲಿ ತಪ್ಪುತ್ತಾ ತಪ್ಪುತ್ತಾ ನನ್ನನ್ನು ಇದನ್ನೆಲ್ಲ ಗೀಚುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದೆ. ಮದುವೆ, ಮನೆ,ಆಸ್ತಿ, ಬದನೆಕಾಯಿ ಎಂದೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವ ನಾವು ನಮ್ಮ ಸಾವಿಗೆ ಮಾತ್ರ ಸಿದ್ಧತೆಯನ್ನೇ ಮಾಡಿಕೊಳ್ಳುವುದಿಲ್ಲ. ಸಾವು ಬಂದಾಗ ನಾವೆಷ್ಟು ನಿಕೃಷ್ಟರಾಗಿರುತ್ತೇವೆ ಎಂಬುದನ್ನೂ ನಾವು ಯೋಚಿಸುವ ಗೊಡವೆಗೆ ಹೋಗುವುದಿಲ್ಲ.

*

ಕಾಜೂರು ಸತೀಶ್

Friday, May 3, 2019

ಪರಿಚಯ ಮತ್ತು ಸೆಲ್ಫಿ

2013ರ ಸೆಪ್ಟೆಂಬರ್ 5ರಂದು ಆ ಕಾಲೇಜಿನ ಹಿಂದಿ ಮೇಷ್ಟ್ರು ಅದೇ ಕಾಲೇಜಿನ ಇಂಗ್ಲಿಷ್ ಮೇಷ್ಟ್ರಿಗೆ ನನ್ನನ್ನು ಪರಿಚಯಿಸಿದರು. ಅವರು ನನಗಿಷ್ಟವಿಲ್ಲದ ಇಂಗ್ಲೀಷಿನಲ್ಲಿ ಮಾತುಬೆಳೆಸಿದ್ದರಿಂದ ಮಾತನಾಡುತ್ತಾ ಮಾತನಾಡುತ್ತಾ ನಾವಿಬ್ಬರು ಶುದ್ಧ ಪರಕೀಯರಾಗಿಬಿಟ್ಟಿದ್ದೆವು!
'ಎರಡು ವರ್ಷಗಳ ಹಿಂದೆ'____'  ಹೆಸರಿನಲ್ಲಿ ಒಂದು ಪತ್ರ ಬಂದಿತ್ತಲ್ವಾ.. ನಾನೇ ಬರ್ದಿದ್ದು' ನಾನು ಹೇಳಿದೆ.  ತಮ್ಮ ಕಛೇರಿಯಲ್ಲಿ ಕೂರಿಸಿ ಆಗಷ್ಟೇ ಬಿಡುಗಡೆಗೊಂಡಿದ್ದ ಕವನ ಸಂಕಲನಕ್ಕೆ ತಮ್ಮ ಹಸ್ತಾಕ್ಷರವನ್ನುಣಿಸಿ ನನಗೆ ನೀಡಿದ್ದರು.

ಮತ್ತೆ ಮೂರು ತಿಂಗಳ ನಂತರ ಅವರು ಸೈಬರ್ ಸೆಂಟರಿನಲ್ಲಿ ಸಿಕ್ಕರು. ಅವರಿಗೆ ನನ್ನ ಪರಿಚಯ ಹತ್ತಲಿಲ್ಲ.ನನಗೆ ಬಸ್ಸು ಹಿಡಿಯುವ ಧಾವಂತ; ಒಂದು ನಗುನಕ್ಕು ಹೊರಟುಬಿಟ್ಟೆ.

ಮತ್ತೊಮ್ಮೆ ಕಾಲೇಜಿನಲ್ಲಿ ಸಿಕ್ಕಾಗ ನಕ್ಕು ಸುಮ್ಮನಾದೆ. ಅವರೂ ನನ್ನನ್ನು ಅನುಕರಿಸಿದರು.

ಕಳೆದ ಮಾರ್ಚ್ 19ಕ್ಕೆ ಮತ್ತದೇ ಕಾಲೇಜಿನಲ್ಲಿ ಸಿಕ್ಕರು. ನಾನು 'ನಮಸ್ತೆ' ಹೇಳಿ ಒಂದು ನಗು ಚೆಲ್ಲಿದೆ. ಅವರು ಮತ್ತದೇ ನಿರ್ಲಿಪ್ತ ಭಾವದಿಂದ ನಕ್ಕರು.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ - ಇನ್ನೊಮ್ಮೆ ಸಿಕ್ಕಾಗ ನನ್ನ ಹೆಸರನ್ನು ಚೆನ್ನಾಗಿ ಬಲ್ಲ ಅವರೊಂದಿಗೆ ಒಂದು ಸೆಲ್ಫಿ ತೆಗೆದು ಅದನ್ನು facebookಕ್ಕಿಗೆ ಅಂಟಿಸಬೇಕೆಂದುಕೊಂಡಿದ್ದೇನೆ. ಅದಕ್ಕಾಗಿ ಕಾಯುತ್ತಿದ್ದೇನೆ!

ನೀವೂ ಕಾಯುತ್ತಿರಿ!

 *

ಕಾಜೂರು ಸತೀಶ್