ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, February 4, 2017

ಭೂಪಟ ಬರೆದಾಗ

ಅಮ್ಮ ಹೇಳಿದಳು-
ಭೂಪಟ ಬರೆಯುವಾಗ
ಅವಳಿರಬೇಕು
ಕಂಕುಳಲ್ಲೊಂದು ಮಗುವಿರಬೇಕು.

ಅಪ್ಪ ಹೇಳಿದ-
ಗಡಿಗಳ ಬರೆಯುವಾಗ
ನೆರೆಮನೆಯವರಿರಬೇಕು
ಕಿಟಕಿಗಳ ತೆರೆದಿಡಬೇಕು.

ಅವಳು ಹೇಳಿದಳು-
ಧರ್ಮಗಳ ಬರೆಯುವಾಗ
ಮನುಷ್ಯನಿರಬೇಕು
ಗೋಡೆಗಳಿರಬಾರದು
ಒಂದು ನದಿಯಾದರೂ ಇರಬೇಕು

ಅವರ ಕಲ್ಪನೆ-
ಒದ್ದೆಯಾದ ಸೀಮೆಸುಣ್ಣ
ಮಸಿ ತುಂಬಿದ ಅಡುಗೆ ಕೋಣೆ.

ನನ್ನ ನಿಲುವು-
ವಿಸ್ತಾರ ಕಡಲು
ನನ್ನ ಭೂಮಿ
ನನ್ನ ಆಕಾಶ.

'ಕತ್ತರಿಸು
ಅಟ್ಟಾಡಿಸಿ ಹೊಡೆ.....'
ಭೂಪಟದ ತುಂಬ ತಿದ್ದುಪಡಿಗಳು
ಕೆಂಪು ವೃತ್ತಗಳು
ಹೆಜ್ಜೆ ಗುರುತುಗಳು.

ಕೈಯಲ್ಲೊಂದು ಬೆತ್ತ
ಒಂದು ಡಸ್ಟರ್
ನಾನು ಕಪ್ಪುಹಲಗೆಯತ್ತ
ಬೆರಳು ನೆಟ್ಟು ನಿಲ್ಲುತ್ತೇನೆ.

ಅಮೀಬಾದ ಹಾಗಿರೋ ಒಂದು ಬಿಂದು
ಜಿಗಣೆಯ ಹಾಗೆ ಊದಿ
ಆನೆಯ ಹಾಗೆ ಬೆಳೆಯಿತು.

ನನ್ನ ದೇಶ
ನನ್ನ ಭಾಷೆ
ನನ್ನ ಭೂಪಟ!
*

ಮಲಯಾಳಂ ಮೂಲ- ಟಿಸಿವಿ ಸತೀಶನ್

ಕನ್ನಡಕ್ಕೆ- ಕಾಜೂರು ಸತೀಶ್

ಸ್ಮಶಾನದ ಕುತ್ತಿಗೆಗಳು

ಕುತ್ತಿಗೆ ರಹಸ್ಯ ಹೇಳಿತು.

ಸಹಿಸಲಾಗದೆ ನರ ಉಗುರಿಗೆ ಹೇಳಿತು
ತಾಳಲಾರದೆ ಉಗುರು ಬೆಳೆಯತೊಡಗಿತು
ಬೆಳೆದೂ ಬೆಳೆದೂ ಶರೀರದಿಂದ ಹೊರಬಂದು ಹಿಚುಕಿದಾಗ
ರಹಸ್ಯಗಳೆಲ್ಲ ಬಟಾಬಯಲು.

ಕುತ್ತಿಗೆ ನರದ ಜೊತೆ ಮಾತು ಬಿಟ್ಟಿತು.

ಈಗ ಉಗುರು ಬೆಳೆಯುತ್ತಿಲ್ಲ
ಹೊರಜಗತ್ತಿಗೆ ರಹಸ್ಯಗಳು ತಿಳಿಯುತ್ತಿಲ್ಲ.

ಉಳಿದ ರಹಸ್ಯಗಳನ್ನೆಲ್ಲ
ಕತ್ತು ಸ್ಮಶಾನದೊಂದಿಗೆ ಉಸುರಿತು
ಆಲಿಸಿದ ಸ್ಮಶಾನ ಕತ್ತನ್ನು ಪ್ರೀತಿಸಲಾರಂಭಿಸಿತು.

ಸುಮಾರು ಕಾಲವಾಯಿತು
ಸ್ಮಶಾನಕ್ಕೆ ಸಾವಿನ ಮೌನ.
*

ಮಲಯಾಳಂ ಮೂಲ- ಜಿನು ಕೊಚ್ಚುಪ್ಲಾಮೂಟ್ಟಿಲ್

ಕನ್ನಡಕ್ಕೆ- ಕಾಜೂರು ಸತೀಶ್

ನೆಂಟರಿಲ್ಲ

ಮೊದಮೊದಲೆಲ್ಲ
ಪ್ರತೀಕ್ಷೆಯ ಕಪ್ಪುಹಕ್ಕಿಗಳು
ಮೊಬೈಲ್ ಫೋನಿನಲ್ಲಿ ಕುಳಿತು
ನೆಂಟರು ಬರುವರೆಂದು ಕೂಗಿ ಹೇಳುತ್ತಿತ್ತು.

ಈಗ
ಟಚ್ ಸ್ಕ್ರೀನ್ ಮೊಬೈಲ್ ಆಗಿದ್ದಕ್ಕೋ ಏನೊ
ಕಪ್ಪುಹಕ್ಕಿಗಳು ಕುಳಿತು
ನೆಂಟರು ಬರುವರೆಂದು ಹಾಡಲು
ರೆಂಬೆಗಳು ಸಿಗುತ್ತಿಲ್ಲ
ಪಾಪ
ಹಾರಿ ಹಾರಿ ರೆಕ್ಕೆಗಳು ಬಳಲಿವೆ
*

ಮಲಯಾಳಂ ಮೂಲ- *ಜಿನು ಕೊಚ್ಚುಪ್ಲಾಮೂಟ್ಟಿಲ್

ಕನ್ನಡಕ್ಕೆ- ಕಾಜೂರು ಸತೀಶ್