ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, October 19, 2016

ಒಂದಾದರೂ ಬರಬಾರದೇ ?

ಎಷ್ಟೊಂದು ಹಕ್ಕಿಗಳಿವೆ ಇಲ್ಲಿ ಒಂದಾದರೂ ಬರಬಾರದೇ?

ಒಂದು ಮರಕುಟಿಗವಾದರೂ ಬಂದು ಕುಟುಕುಟು ಕುಟುಕಿ
ಮೊಬೈಲಿನಲ್ಲೊಂದು ತೂತುಮಾಡಿ ನುಗ್ಗಿ
ಜೋರಾಗಿ ಹಾಡಿ...

ಆಮೇಲೆ ಅದರ ಹಾಡೇ ರಿಂಗ್ಟೋನಾಗಿ
ಅದರ ಚಿತ್ರವೇ ಡಿಪಿಯಾಗಿ
ಅದರ ಹಾಡು ಅಪಶಕುನವೆಂಬೊ ಮಾತು ಕೂಡ ಅಳಿಯುವಂತಾಗಿ
ಅದು ಪುರ್ರೆಂದು ಹಾರಿಹೋಗುವಾಗ ಬಿದ್ದ ಹಿಕ್ಕೆಯಲ್ಲೊಂದು ಬೀಜ ಮೊಳೆತು ಮರಹುಟ್ಟಿ
ಒಂದಾಗಿ ಹತ್ತಾಗಿ ನೂರು-ಸಾವಿರವಾಗಿ 
ನೆಲದ ಇಂಚಿಂಚುಗಳಲ್ಲೆಲ್ಲ ಮರಗಳೇ ಆಗಿ
ಟವರುಗಳೆಲ್ಲ ನೆಲಕ್ಕಚ್ಚಿ
ಸಿಗ್ನಲ್ಲುಗಳಿಗೆ ಅಪಘಾತವಾಗಿ
ಚಕ್ರಗಳೆಲ್ಲ ಟುಸ್ಸಾಗಿ
ಗಾಜುಗಳೆಲ್ಲ ಪುಡಿಪುಡಿಯಾಗಿ...


ಮತ್ತೆ ಈ ನರಸತ್ತ ನರರೆಲ್ಲ ಸರಸರ ನಡೆಯುವಂತಾದಾಗ
ರಾತ್ರಿ ಬೆಳದಿಂಗಳನ್ನೇ ನಂಬಿ ಬದುಕುವಂತಾದಾಗ...

ಆಕಾಶದಲ್ಲಿ ಚಂದ್ರ ತಾರೆಯರಿಗೆ ಮರುಜೀವ ಬಂದು
ಭೂಮಿಯಲ್ಲಿ ಹಕ್ಕಿಗಳ ಹಾಡುಹುಟ್ಟಿ
ಛಿಲ್ಲೆಂದು ರಕ್ತ ಚಿಮ್ಮಿದರೂ ಸರಿಯೆ
ಎದೆಯೊಳಗೆ ಹೊಕ್ಕ ಮರಕುಟಿಗ ಕುಟುಕುಟು ಕುಟುಕಿ
ಎದೆಗೊಂದು ಹೆದ್ದಾರಿ ಮಾಡಿ
ಹಕ್ಕಿಗಳು ಒಳನುಗ್ಗಿ ಹಾಡಿದಾಗ
ಹಚ್ಚಹಸಿರ ಹೃದಯದ ಮನುಷ್ಯರ ನೋಡಬಹುದಿತ್ತು.

ಛೆ!
ಎಷ್ಟೊಂದು ಹಕ್ಕಿಗಳಿವೆ ಇಲ್ಲಿ ಒಂದಾದರೂ ಬರಬಾರದೇ ?
*

ಕಾಜೂರು ಸತೀಶ್

Monday, October 17, 2016

ಅಪ್ಪ ತೀರಿದ ಬಳಿಕ

ತೀರಿದ ಬಳಿಕ ಅಪ್ಪ ಮಗುವಾಗಿ ಮಲಗಿದ್ದಾನೆ ಇಲ್ಲಿ-ನನ್ನ ಹೃದಯದಲ್ಲಿ

ಅವನ ಸುಡಲು ಮಲಗಿಸಿದ ಸೌದೆಯಲ್ಲಿ ನಾನು ಬೆಂದು ಬೂದಿಯಾಗಿದ್ದೇನೆ
ಅಪ್ಪ ಮಗುವಾಗಿ ಮಲಗಿದ್ದಾನೆ ಇಲ್ಲಿ- ನನ್ನ ಹೃದಯದಲ್ಲಿ.

ಅಗ್ನಿಸ್ಪರ್ಶಗೈಯ್ದ ನನ್ನ ಕೈಗಳು ಬೂದಿಯೊಳಗಿಂದಲೂ ಬೇಯುತಿವೆ
ಆರುವ ಮೊದಲೇ ಗೋರಿ ಕಟ್ಟಬೇಕು ಇನ್ನು ನನ್ನ ಚಿತಾಭಸ್ಮದ ಮೇಲೆ.

ಎದ್ದು ಕೂರುತ್ತಾನೆ ಅಪ್ಪ ನನಗೆ ನೆನಪಾದಾಗಲೆಲ್ಲ
ದುಃಖವಿಲ್ಲದ ಜೋಗುಳವ ಹಾಡಲು ಕಲಿಯಬೇಕು ಇನ್ನು.


ಅವನು ತೀರಿದ ಮೇಲೆ 'ಅಪ್ಪ' ಎಂಬ ಶಬುದ ಅನಾಥ
ಅಕ್ಕ ಅಣ್ಣ ನಾನು ಅದರ ಬೆನ್ನುಬಿದ್ದಿದ್ದೇವೆ ಬೊಗಸೆಯೊಡ್ಡುತ್ತಾ.

ತೀರಿದ ಮೇಲೆ ಅಪ್ಪ ಮಗುವಾಗಿ ಹುಟ್ಟಿದ್ದಾನೆ
ಅವನು ತೀರಿದ ಮೇಲೆ ನಾನು ಅಪ್ಪನಾಗಿ ತೀರಿಹೋಗಿದ್ದೇನೆ.

ಚರಿತ್ರೆಯಾಗಲಿಲ್ಲ ಅಪ್ಪ
ಮಗುವಾದ
ನನ್ನ ಮಗುವಾದ.
*
ಕಾಜೂರು ಸತೀಶ್

Sunday, October 16, 2016

ಸಾವು ಹೃದಯವನ್ನು ಪ್ರೀತಿಸುತ್ತದೆ

ಅಪ್ಪ ತೀರಿಕೊಂಡ ಮೇಲೆ ಒಂದು ವಿಷಯವನ್ನು ತಿಳಿಸಲೇಬೇಕು:


ಬೀಡಿ-ಸಿಗರೇಟು ಸೇದದ, ಹೆಂಡ ಮುಟ್ಟದ, ಪಾನ್ ಮಸಾಲ- ಹೊಗೆಸೊಪ್ಪು ಜಗಿಯದ, ಕೊಬ್ಬಿನಂಶವಿರುವ ಆಹಾರ ವಸ್ತುಗಳಿಂದ ದೂರವಿರುವ, ಹೋಟೆಲಿನಲ್ಲಿ ಟೀ-ಕಾಫಿ ಕುಡಿಯುವುದಾಗಲೀ, ಊಟ ಮಾಡುವುದಾಗಲೀ ಮಾಡದ, ನಿತ್ಯ ವಾಕಿಂಗ್ ಮಾಡುವ, ವಿಪರೀತ ಕೆಲಸ ಮಾಡುವ, ಶಿಸ್ತಿನಿಂದ ಬದುಕುವ, ಒಂದು ರೂಪಾಯಿ ಹೆಚ್ಚಿಗೆ ಸಿಕ್ಕರೂ ಅದನ್ನು ವ್ಯಕ್ತಿ/ಅಂಗಡಿಗಳಿಗೆ ಹಿಂತಿರುಗಿಸುವ(ಕಡಿಮೆ ಇದ್ದರೆ ಕೇಳಿ ಪಡೆದುಕೊಳ್ಳುವ), ತಮ್ಮ ಪಾಡಿಗೆ ತಾವು ಬದುಕುವಂತಹ ಜನರ ಹೃದಯವನ್ನು ಸಾವು ತುಂಬಾ ತುಂಬಾ ಪ್ರೀತಿಸುತ್ತದೆ!

Friday, October 14, 2016

ಸೈಫ್ ಜಾನ್ಸೆ ಕೊಟ್ಟೂರರು ಕಂಡ 'ಗಾಯದ ಹೂವುಗಳು'

ಗೆಳೆಯ ಕಾಜೂರು ಸತೀಶ್ ರವರ ಬಿಡಿ ಪದ್ಯಗಳನ್ನು ಹಾಗೂ ಮಲಯಾಳಂ ಕವಿತೆಯ ಅನುವಾದಗಳನ್ನು ಕಂಡುಂಡ ನನಗೆ ಗಾಯದ ಹೂಗಳು ಎಂಬ ಸಂಕಲನ ಓದುವ ಖುಷಿಯನ್ನು ಇಮ್ಮಡಿಗೊಳಿಸಿದೆ.

ಕವಿತೆಯೆಂದರೇನೆಂದೇ ತಿಳಿಯದ, ನನ್ನನ್ನೇ ಉಸಿರಾಡುತ್ತಿರುವ ಅಪ್ಪ-ಅಮ್ಮನಿಗೆ ಎಂದಾರಂಭಿಸುವ ಕವಿ ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ ಕವಿತೆಯ ತೆಕ್ಕೆಯೊಳಗೆ ಬಿದ್ದೆ.
ಖಿನ್ನತೆಯ ಶಿಖರದಲ್ಲಿದ್ದಾಗಲೂ ಒಂದು ಹೂವನ್ನೇ ಧ್ಯಾನಿಸುತ್ತಾ ಕೂರುವವನು ನಾನು. ಇಷ್ಟಾದರೂ ಬದುಕಿಕೊಳ್ಳಲು ಹಡೆದ ಕವಿತೆಗಳು ಎದೆಯ ಟನ್ನುಗಟ್ಟಲೆಯ ಭಾರವನ್ನು ಕೊಂಚ ಇಳಿಸಿವೆ
ಎನ್ನುವಂತಹ ಆಳದ ಮಾತುಗಳಿಂದ ತನ್ನ ಕವಿತೆಯ ಆಶಯಗಳನ್ನು ಕಟ್ಟಿಕೊಡುತ್ತಾರೆ.

ಸುಡುವ ತಣ್ಣನೆಯ ಹೂ ಹುಡುಕುತ್ತಾ ಎಂಬ ಶೀರ್ಷಿಕೆಯ ಅಡಿಯ ಮುನ್ನುಡಿಯಲ್ಲಿ ವಾಸುದೇವ್ ನಾಡಿಗ್ ಅವರು ಇಡೀ ಕವಿತಾ ಸಂಕಲನದ ಹಂದರವನ್ನು ಚಿಕಿತ್ಸಕ ಕಾಳಜಿಯಿಂದ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಲ್ಲಿ ಉದಾಹರಣೆಗಳಿಗಿಂತಲೂ ಹೆಚ್ಚು ಸ್ವಯಂ ಓದಿ ಅನುಭವಿಸುವ ತಾಜಾತನ ಆಪ್ತವಾಗಬಲ್ಲದು. ಪ್ರವೀಣ್ ಕುಮಾರ ದೈವಜ್ಞಾಚಾರ್ಯರವರು ಟಂಕಿಸಿರುವ ಬೆನ್ನುಡಿ ಬರಹದ ದಿಟ್ಟತೆ ಸಾರುವಂತೆ ಇವು ಯಾರು ಬೇಕಾದರೂ ಮುಡಿಯಬಹುದಾದ ಹೂಗಳು. ಸತೀಶ್ ಬದುಕು ಮತ್ತು ಕವಿತೆಯನ್ನು ಒಟ್ಟೊಟಿಗೆ ಸಮೀಕರಿಸುವ ಭರವಸೆಯ ಕವಿ. ಅವರ ಗಾಯದ ಹೂಗಳು ನಮ್ಮೊಲ್ಲೊಂದು ಆತ್ಮದೀಪ ಸ್ಫುರಿಸಬಲ್ಲದೆಂಬ ಭಾವ ಈ ಹೊತ್ತು ದಟ್ಟವಾಗಿದೆ ಎನ್ನುವ ಸಾಲುಗಳು ಸಂಕಲನದ ಪ್ರಾಣಕ್ಕೆ ದೀವಟಿಗೆ ಹಿಡಿಯಬಲ್ಲ ಕೈಯಾಸರೆಯಂತೆ ಕಾಣುತ್ತಿವೆ.

ಚುಟುಕೂ ಅಲ್ಲದೆ ನೀಳ್ಗವಿತೆಯೂ ಅಲ್ಲದ ನಡುಗಾತ್ರದ ಪರಿಮಿತಿಯಲ್ಲಿ ತನ್ನ ಪದ್ಯಗಳನ್ನು ಅಚ್ಚುಕಟ್ಟುತನದಿಂದ ನಿರ್ವಹಿಸುತ್ತಿರುವ ಕವಿ ಪದ್ಯ ಓದುವ ಕಾಲದ ದರ್ದುಗಳನ್ನು ಪ್ರಜ್ಞಾಪೂರಕವಾಗಿ ಮುಖಾಮುಖಿಯಾದಂತಿದೆ.

ಕವಿ, ಕವಿತೆ ಮತ್ತು ಚರಿತ್ರೆ ಎನ್ನುವ ಪದಗಳನ್ನು ಬಹುತೇಕ ಕವಿತೆಗಳಲ್ಲಿ ಮರು ಮಾತಿಗೆ ಕರೆಯುತ್ತಾರೆ. ಆ ಮಾತುಕತೆಯಲ್ಲೊಂದು ಸನಿಹವಿದೆ, ಗುದ್ದಾಟವಿದೆ, ಅನುಭವವಿದೆ, ಅನುಸಂಧಾನವಿದೆ. ಕವಿತೆ ಬರೀ ಕವಿತೆಗಾಗಿ ಅನ್ನಿಸದೇ ಬದುಕಿನ ಒಟ್ಟು ಅಭಿವ್ಯಕ್ತಿ ಎನಿಸಿದೆ.

ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ ಎನ್ನುವ ಸಾಲು ಸಾಕು ಉಳಿದದ್ದು ನೆಪವಾಗಿಬಿಡಬಹುದು.ಇನ್ನು ಕವಿಗೆ ಚರಿತ್ರೆಯೆಂದರೆ ಓದಿಕೊಳ್ಳುವ ಒಣ ಪ್ರಕ್ರಿಯೆಯೆನಿಸದೆ ಜೀವನದ ಪರಸ್ಪರ ಎದುರುಗೊಳ್ಳುವ ಸಂವಾದವಾಗಿಯೂ ಆಗಿಂದಾಗ್ಗೆ ನವೀಕರಿಸುವ ಇಂಧನದ ಒರತೆಯಂತೆಯೂ ಕಾಣಿಸಿದೆ. ಮುರಿದು ಕಟ್ಟುಕಟ್ಟುವ ಚಲನಶೀಲ ಕಾರ್ಯಗತಿಯೂ ಅನ್ನಿಸಿದೆ. ಆ ಕಾರಣಕ್ಕಾಗಿಯೇ ಇತಿಹಾಸದ ಕೊಂಡಿ ಕವಿತೆಗಳಲ್ಲಿ ಪ್ರತಿಧ್ವನಿಸಿದೆ.


ತನ್ನ ಸುತ್ತಲಿನ ತೆಕ್ಕೆಯಲ್ಲಿ ಹಾಯುವ ಕಾಡು ಬೀಜ ಮರ ಹೂವು ಹಣ್ಣು ಜಿಂಕೆ ಮೊಲ ಹಾವು ಹಕ್ಕಿ ಗೊಬ್ಬರಗಳಂಥಹ ನಿಸರ್ಗವಾದಿ ಪರಿಕರಗಳೇ ಕವಿತೆಯ ಮೂಲ ದ್ರವ್ಯವಾಗಿದ್ದಾಗಲೂ ಕವಿಯ ಧ್ಯಾನಕ್ರೇಂದ ಗಟ್ಟಿಯಾಗಿ ಮಾತನಾಡುತ್ತಿರುವುದು ಕಡೆಗಣಿಸಲ್ಪಟ್ಟ ಧ್ವನಿ ಮತ್ತು ಜಾಗತೀಕರಣದ ಸಿಡಿಲ ಸ್ಫೋಟಕ್ಕೆ ಕರಕಲಾದ ಮಿಣುಕು ನಕ್ಷತ್ರಗಳ ಬದುಕಿನ ಹಕ್ಕಿನ ಪ್ರಶ್ನೆಯನ್ನು ಕವಿಯ ತಾಕಲಾಟಗಳು ತಾರ್ಕಿಕ ಅಂತ್ಯಕ್ಕೆ ದಾಟಿಸುವ ಪ್ರಯತ್ನದಂತೆ ಕಾಣಿಸುತ್ತವೆ.

ಇಲ್ಲಿನ ಕವಿತೆಗಳಲ್ಲಿ ನಳನಳಿಸುವ ಜೀವಂತಿಕೆ ಇದೆ. ಶಬ್ದಗಳಿಗೆ ಸಂವೇದನೆಯಿದೆ. ಕಟ್ಟ ಕಡೆಯ ಕ್ಷಣಗಳಲ್ಲಿಯೂ ಬದುಕಿತೋರಿಸುವ ತ್ರಿವಿಕ್ರಮ ಛಲವಿದೆ. ಜಗತ್ತಿನ ಸಮಸ್ತವನ್ನು ಅಪ್ಪಿಕೊಳ್ಳುವ ಜೀವಪರತೆ ಇದೆ. ತುಳಿಯಲ್ಪಟ್ಟ ದನಿಗಳಿಗೆ ಪ್ರಾಣಮಿತ್ರನಂತೆ ಮಿಡಿಯುವ ಕವಿ ಗಹನವಾದ ನೋವನ್ನೂ ಕುಲುಮೆಯಲ್ಲಿ ಕಾಯಿಸಿ ಬಡಿದು ತಿದ್ದಿ ತೀಡಿ ದಾಟಿಸುವ ನುರಿತ ಲೋಹಗಾರನಂತೆ. ಇಲ್ಲಿ ಉರಿಗಟ್ಟುವ ಪ್ರತಿ ನೋವು ಹೆಪ್ಪುಗಟ್ಟಿದ ತಣ್ಣನೆಯ ರೂಪಾಂತರಗಳಲ್ಲಿ ಲೋಕದ ದೇಹ ಮತ್ತು ಮೆದುಳುಗಳೊಳಗೆ ದಾಟಿ ಆವರಿಸುವ ಕ್ರಮ ಕವಿಯ ಗಟ್ಟಿತನಕ್ಕೆ ಪುರಾವೆ ಒದಗಿಸುತ್ತಿವೆ.

ಕವಿ ತನ್ನ ಸುತ್ತಲೂ ತಾನೇ ಗರೆ ಎಳೆದುಕೊಂಡ ಗಮ್ಯಕೇಂದ್ರವನ್ನು ಒಡೆದು ಹೊರಬರಬೇಕಿದೆ. ತಪ್ಪಿಹೋದ ಅನುಭವದ ಕಡೆಗೂ ನೋಟ ಹಾಯಿಸಬೇಕಿದೆ. ಕಳಚಿಕೊಂಡ ನೆಲೆಗಳನ್ನು ಮರು ವಿಮರ್ಶಿಸಬೇಕಿದೆ;ಕಟ್ಟಿ ಬದುಕಿಸಬೇಕಿದೆ. ನೆಲಕ್ಕೆ ಪಿಡುಗಿನಂತೆ ಕಾಡುತ್ತಿರುವ ಕೋಮುವಾದ, ಲಂಪಟ, ದುರಾಸೆಯಿಂದ ಹುಟ್ಟುವ ವ್ಯಕ್ತಿಕೇಂದ್ರಿತ ಬದುಕಿನ ಅಧ್ವಾನಗಳು,ಮಹಿಳಾ ಅಸಮಾನತೆ, ನಗರಗಳು ಹಡೆದ ಅನಾಮಿಕ ಸರಪಳಿಗಳ ಕಡೆಗೊ ಕಾಜೂರರ ಕಾವ್ಯ ಹೊರಳುವ ಕಾಲವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇನೆ.
ಬದುಕಿನ ರಾಚುವ ರೌದ್ರವ ದಾರುಣತೆಯನ್ನು ಹೇಳುವ ಮಾರ್ಗಕ್ಕೂ ಸತೀಶ್ ರವರ ಕಾವ್ಯ ಝರಿಗೆ ಜಾಗವಿರಲಿ.

ವಿಮರ್ಶಕರ ಕಸರತ್ತಿನಾಚೆಗೂ
ಬೆನ್ನುಡಿಯ ಬೆಂಬಲದಾಚೆಗೂ
ಪರಿಚಯಕರ ಸಂಕಟಗಳಾಚೆಗೂ
ಓದುಗರ ಹಪಾಹಪಿಗಳಾಚೆಗೂ
ಈ ಕೃತಿ ಓದಿನ ಖುಷಿ ಅನುಭವಿಸಲು ರವಷ್ಟನ್ನು ಖಂಡಿತಾ ಉಳಿಸಿಕೊಟ್ಟಿದೆ. ಅದಕ್ಕಾಗಿ ಕಾಜೂರು ಸತೀಶ್ ಅಭಿನಂದನಾರ್ಹರು.
*

ಸೈಫ್ ಜಾನ್ಸೆ, ಕೊಟ್ಟೂರು

ಇಂಥವರಿದ್ದಾರೆ ನಮ್ಮ ನಡುವೆ (ದಿನಚರಿ -23)

ಮನುಷ್ಯರು ನಾವು!

ಯಾರದಾದರೂ ತಲೆಯೊಡೆದು ಖಜಾನೆಗಳ ನಿರ್ಮಿಸಿಕೊಳ್ಳುತ್ತೇವೆ. ಬಂಗಲೆಗಳ ಕಟ್ಟಿಕೊಳ್ಳುತ್ತೇವೆ. ಆಧುನೀಕತೆಯ ಸಿ.ಸಿ. ಕ್ಯಾಮರಾಗಳ ಕಣ್ಣಿಗೆ ಮಣ್ಣೆರಚಿ, ಕಣ್ಣುಮುಚ್ಚಿ ಹಾಲು ಕುಡಿದು ಸಭ್ಯತೆಯ ಸೋಗುಹಾಕಿಕೊಳ್ಳುತ್ತೇವೆ. ಹೊಟ್ಟೆ ತುಂಬಿದಷ್ಟೂ ಆಸೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತೇವೆ; ಪೂರೈಕೆಗೆ ಅನ್ಯಾಯದ ಹಾದಿ ಹಿಡಿಯುತ್ತೇವೆ. ಅದನ್ನೇ ತಲೆತಲಾಂತರಗಳಿಗೆ ಹಂಚಿಬಿಡುತ್ತೇವೆ...
*
ಆದರೆ, ಇವರಿಬ್ಬರು?!
ಮೇಲಿನ ಅಷ್ಟೂ ಮಾತುಗಳನ್ನು ಸುಳ್ಳಾಗಿಸಿಬಿಡುತ್ತಾರೆ!


*

ಗೆಳೆಯ ಜಾನ್ ಸುಂಟಿಕೊಪ್ಪ ಅವರು ಪರಿಚಯಿಸಿದ ಇವರ ಬಗ್ಗೆ ಬರೆಯಲೇಬೇಕೆಂದು ಕುಳಿತೆ. ಇವತ್ತಿಗೆ ಆರನೇ ದಿನ!!

ಮೊದಲ ದಿನ ಇವರಿಬ್ಬರ ಬಗ್ಗೆ ಒಂದು ವಾಕ್ಯ ಬರೆದೆ. ಆಮೇಲೆ ಅದು ಮುಂದಕ್ಕೆ ಹೊರಳಲೇ ಇಲ್ಲ. ಎರಡನೇ ದಿನ ಒಂದಕ್ಷರವೂ ಮೊಳೆಯಲಿಲ್ಲ. ಮೂರನೇ ದಿನ ನಾಲ್ಕಾರು ಸಾಲುಗಳು ಹುಟ್ಟಿದವು- ವಸ್ತುಸ್ಥಿತಿಯ ನೇರಾನೇರ ನಿಲ್ಲಬಲ್ಲ ಕಸುವನ್ನು ಕಳೆದುಕೊಡಿದ್ದವು. ನಾಲ್ಕನೇ ದಿನ ಬರೆಯಲೇಬೇಕೆಂಬ ಹಠತೊಟ್ಟು ಕುಳಿತೆ; ಆಗಲಿಲ್ಲ. ಐದನೇ ದಿನವೂ ಹೀಗೇ...

ಹೃದಯವಷ್ಟೇ ಬರೆಯಬಲ್ಲ ಸಾಲುಗಳನ್ನು ನಾನೇ ಬರೆಯಲು ಹೊರಟದ್ದರಿಂದಾಗಿಯೇ ಹೀಗೆ ತಿಣುಕಾಡಿದ್ದು, ತಿಣುಕಾಡುತ್ತಿರುವುದು!

*

ಅಂದ ಹಾಗೆ ನಾನು ಬರೆಯಲು ಹೊರಟ ಇವರಿಬ್ಬರು- ಬೆಂಗಳೂರಿನ ಶ್ರೀ ಗುರುಪ್ರಸಾದ್ ಎನ್. - ಶ್ರೀಮತಿ ಪೂರ್ಣಿಮಾ ಅಯ್ಯಂಗಾರ್ ದಂಪತಿಗಳು.ಅವರ ಮೇರು ವ್ಯಕ್ತಿತ್ವವನ್ನು ಬರೆಯಬೇಕೆಂದುಕೊಂಡಾಗಿನಿಂದ(ಜೂನ್ ೧೮ರಿಂದ) ಇಲ್ಲಿಯವರೆಗೆ ನಾಲ್ಕು ತಿಂಗಳುಗಳೇ ಸರಿದುಹೋಗಿವೆ.



ಕುಗ್ರಾಮದಲ್ಲಿರುವ ಸೌಲಭ್ಯವಂಚಿತ ಸರ್ಕಾರಿ ಶಾಲೆಯ ಮಕ್ಕಳೇ ಇವರ ಟಾರ್ಗೆಟ್. ಎಂಥ ಕುಗ್ರಾಮವಾದರೂ ಸರಿ, ತಿಂಗಳಾನುಗಟ್ಟಲೆ ಯೋಚಿಸಿ, ಯೋಜಿಸಿ ಅಂತಹ ಶಾಲೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಪೋಷಕರೊಂದಿಗೆ, ಮಕ್ಕಳೊಂದಿಗೆ ದಿನ ಕಳೆಯುತ್ತಾರೆ. ಕಂಪ್ಯೂಟರ್, ಅಮೂಲ್ಯವಾದ ಪುಸ್ತಕಗಳು, ಪ್ರತೀ ಮಗುವಿಗೆ ಹೈಜೀನ್ ಕಿಟ್, ನೋಟ್ ಪುಸ್ತಕಗಳು, ಕ್ರೀಡಾ ಸಾಮಗ್ರಿಗಳು, ಬಟ್ಟೆ , ಶೂ- ಸಾಕ್ಸ್, ವಿದ್ಯುತ್  ಸೌಲಭ್ಯವಿಲ್ಲದ ಮಕ್ಕಳಿಗೆ ಸೋಲಾರ್ ಲ್ಯಾಂಪ್ .. ಹೀಗೆ ಸರ್ಕಾರ ಮಾಡಬೇಕಾದ ಕೆಲಸವನ್ನು ತಾವು ಮಾಡಿ, ಪ್ರತೀ ಮಗುವಿನಲ್ಲೂ ಭವ್ಯ ಭಾರತದ ಕನಸ್ಸನ್ನು ಕಟ್ಟಿಕೊಳ್ಳುತ್ತಾರೆ. ಶಾಲೆಯೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಾ ಸಲಹೆ-ಸಹಕಾರ ನೀಡುತ್ತಾರೆ. ಶಾಲೆಗಳಿಂದಾಚೆಗೂ ಅವರ ಸೇವೆ ವಿಸ್ತರಿಸಿಕೊಳ್ಳುತ್ತಾರೆ.


*

ಸಿಕ್ಕಿದ್ದನೆಲ್ಲ ಕೊಳ್ಳೆಹೊಡೆಯುವ ವರ್ತಮಾನದ ಭ್ರಷ್ಟ ವ್ಯವಸ್ಥೆಯ ನಡುವೆಯೂ ಇಂಥವರಿದ್ದಾರೆ ಎನ್ನುವುದು ಮನುಷ್ಯತ್ವದ ಮೇಲೆ, ಮನುಷ್ಯರ ಮೇಲೆ ಭರವಸೆಯನ್ನು ಮೂಡಿಸುತ್ತದೆ. ಯಾವ ಫಲಾಪೇಕ್ಷೆಯ ಹಂಬಲವಿಲ್ಲದೆ ಪರರಿಗಾಗಿ ತಮ್ಮ ಬದುಕನ್ನೇ ತೆತ್ತುಕೊಳ್ಳುವ ಇಂತಹ ಉದಾತ್ತ ವ್ಯಕ್ತಿತ್ವಗಳ ಸಂಖ್ಯೆ ಸಾವಿರವಾಗಲಿ.

ಶರಣು ತಮ್ಮಿಬ್ಬರಿಗೆ!

*
ಕಾಜೂರು ಸತೀಶ್