ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, June 6, 2016

ಮನೆ

ಸುಮಾರು ಕಿಟಕಿಗಳಿರುವ ಕೋಣೆಯಲ್ಲಿ
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಣ್ಣದ ಪೆನ್ಸಿಲುಗಳು.
ಮಗುವೊಂದು
ಗೋಡೆಗಳೇ ಇಲ್ಲದ
ಮನೆಯ ಚಿತ್ರ ಬಿಡಿಸುತ್ತಿದೆ.

ಆ ಮನೆ
ಮನೆಯಿಂದೆದ್ದು
ಬೀದಿಯಲ್ಲಿ ನಡೆದಾಡುತ್ತಿದೆ.

ಬೀದಿಯಲ್ಲೊಬ್ಬಳು ಹಾಡುಗಾರ್ತಿ
ಮತ್ತವಳ ಮಗು.
ಅವಳು ಗಡಿಗಳೇ ಇಲ್ಲದ ಲೋಕದ ಕುರಿತು
ಹಾಡುತ್ತಿದ್ದಾಳೆ.
ಮಗು ಮುದ್ದು ಮುದ್ದಾಗಿ ನಗುತ್ತಿದೆ.
ಅವಳ ಕಣ್ಣುಗಳು ಬೆಳಗುತ್ತಿವೆ.

ಆ ಬೀದಿ
ಬೀದಿಯಿಂದೆದ್ದು
ತನ್ನ ಮನೆಗೆ
ನಡೆದುಹೋಗುತ್ತಿದೆ.

ಮಗು ಬಿಡಿಸಿದ ಆ ಮನೆ
ಅಂಗಳದ ಬೇವಿನ ಮರವ ಸುತ್ತಿ
ಅದನ್ನು ಬಳಸಿದ ಮಲ್ಲಿಗೆ ಬಳ್ಳಿಯನ್ನು ಸುತ್ತಿ
ಗಿಳಿಗಳ ಕಣ್ಣಲ್ಲಿ ಕುಳಿತು
ಹಾರಿ ಹಾರಿ ಆಕಾಶಕ್ಕೇರುತ್ತಿದೆ.
*


ಮಲಯಾಳಂ ಮೂಲ- ಚಿತ್ರಾ ಕೆ ಪಿ

ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment