ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, February 1, 2016

ಮತ್ತೆ ಮತ್ತೆ ಕಾಡುವ ಊರ್ಮಿಳೆ

ಗೆಳೆಯ ಅನಿಲ್ ಕುಮಾರ್ ಹೊಸೂರು ಅವರ ಮತ್ತೆ ಮತ್ತೆ ಊರ್ಮಿಳೆ ಕವನ ಸಂಕಲನವನ್ನು ಓದಿದ ಮೇಲೆ ಅನಿಸಿದ್ದು.. ಮೂರ್ನಾಲ್ಕು ವರ್ಷಗಳಿಂದೀಚೆಗೆ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೂ, ಕವಿತೆಗಳು ಪ್ರಬುದ್ಧವಾಗಿವೆ. ಸಾಕ್ಷಿಗೆ ಈ ಸಾಲುಗಳನ್ನೇ ನಿಮ್ಮ ಮುಂದಿರಿಸುತ್ತಿದ್ದೇನೆ:

ಜೋರು ಗಾಳಿಯ ಒಳಗೆ ಸುಳಿದ ಹಂಸಗೀತೆ[ಸಾವು]
*

ಅಂಗೈ ಕಿನಾರೆಯ ಅಸ್ಪಷ್ಟ ರೂಹುಗಳಲಿ
ಹರಿದುಬಿಡಬಲ್ಲವು ನದಿಗಳು ಅರಿವಿಲ್ಲದೇ[ಈ ಕಡಲು]
*

**ಇಲ್ಲಿನ್ನೂ ಮಳೆಯಾಗಿಲ್ಲ
ಕೊನೆಯ ಉಸಿರು
ಆವಿಯಾಗುತ್ತಿದೆ[ಮುಖವಾಡ ಕಳಚಿದಾಗ]*
*

ದೀರ್ಘ ಇರುಳೊಂದು ಮೈಮುರಿದು
ಮುಂಜಾವು ಆಕಳಿಸುವಷ್ಟರಲ್ಲಿ
ಜೋರು ಮಳೆ ಶುರುವಾಗಿತ್ತು[ಒಂದು ಮಳೆ ಚಿತ್ರಣ]
*

ನಮ್ಮ ಕೊಠಡಿಯಲ್ಲಿ
ಕನ್ನಡಿಯಿಲ್ಲ
ಪರಸ್ಪರ
ಕಣ್ಣಿಗಳಿಗಿಳಿದು
ನೋಡಿಕೊಳ್ಳುತ್ತೇವೆ

ಪ್ರತಿ ಉಚ್ವಾಸ ನೀನು
ನಿಶ್ವಾಸ
ಈ ಕವಿತೆ[ಒಂದು ಕನ್ನಡಿಯ ಸುತ್ತ]
*

ಜಿಗಿದ ಕಪ್ಪೆ
ಕೊಳದೊಳಗೆ
ಅಲೆ -ಅಲೆ
ಅಲೆತ
ತೀರಕ್ಕೆ
ತೀರದ
ರೋಮಾಂಚನ

ಚಿಟ್ಟೆ
ರೆಕ್ಕೆ ಬಿಚ್ಚಿತು
ದಿಗಂತದಲಿ
ಹಬ್ಬುತಿದೆ
ಮಳೆಬಿಲ್ಲು

ಶಕುಂತಳೆಯಿನ್ನೂ
ಉಂಗುರ
ಹುಡುಕುತ್ತಿದ್ದಾಳೆ
ದುಶ್ಯಂತ
ಕಲಕಿದ ಕೊಳದಲ್ಲಿ[ಒಂದಷ್ಟು ಮುತ್ತಿನ ಕವಿತೆಗಳು]

*
ಅಭಿನಂದನೆಗಳು ಅನಿಲ್ ಕುಮಾರ್ ಹೊಸೂರು ಅವರಿಗೆ .
*

ಕಾಜೂರು ಸತೀಶ್


ಪ್ರಜಾವಾಣಿ ವಿಮರ್ಶೆ - ಗಾಯದ ಹೂವುಗಳು

ನಿದ್ದೆಯಿರದ ರಾತ್ರಿಗಳನ್ನು
ನಿದ್ರಿಸಲು ಬಿಡುವೆ
ಬೆಳಕು ಮೊಳೆತ ಮೇಲೆ
ನಾನೂ ನಿದ್ದೆಹೋಗುವೆ
(ಈ ರಾತ್ರಿಗಳಲ್ಲಿ ನಿದ್ರಿಸಲಾರೆ/55)

ಬದುಕಿನ ಸಹಜಸ್ಪಂದನೆಗಳನ್ನು ಹಿಡಿಯುವ ಕವಿ ಕಾಜೂರು ಸತೀಶ್‌. ಹೊಸತಲೆಮಾರಿನ ಹೊಸದನಿಯ ಹುಡುಕಾಟದಲ್ಲಿರುವ ಕವಿಯಾಗಿರುವ ಸತೀಶ್‌ರ ಮೊದಲ ಸಂಕಲನ ಇದು. ಬಿಡಿಬಿಡಿ ಚಿತ್ರಗಳಲ್ಲಿ ಕಾವ್ಯದ ಅನುಭವ ತಾಕುವಂತಹ ಕವಿತೆಗಳನ್ನು, ತಮ್ಮ ಪ್ರಾಮಾಣಿಕ ಅನಿಸಿಕೆಗಳ ಮಂಡನೆಗಳನ್ನು ಇಲ್ಲಿ ಅವರು ಕೊಟ್ಟಿದ್ದಾರೆ. ಬದುಕಿನ ದ್ವಂದ್ವಗಳು ಅವರ ಕವಿತೆಗಳ ವಸ್ತು. ‘ಗಾಯದ ಹೂವುಗಳು’ ಎಂಬ ರೂಪಕವೇ ಅವರ ಕಾವ್ಯದ ಶಕ್ತ ರೂಪವಾಗಿದೆ. ಅದು ಅವರ ಕವಿತೆಗಳಲ್ಲಿ ಬೇರೆಬೇರೆ ರೀತಿಗಳಲ್ಲಿ ಕಾಣಿಸಿಕೊಂಡಿದೆ.

ಹೊಸಸವಾಲುಗಳನ್ನು ಎದುರಿಸಿ, ವಿಶಿಷ್ಟ ವಸ್ತುಗಳನ್ನು ಹುಡುಕಿ ಬರೆಯುವ ಕವಿ ಇವರಲ್ಲ. ಅವರ ಕವಿತೆಗಳೆಲ್ಲ ದೈನಿಕದ ಹಲಬಗೆಯ ಚಿತ್ರ, ಅನುಭಗಳಾಗಿವೆ. ತಮ್ಮ ಅನುಭವವನ್ನು ತಮ್ಮದೇ ವಿಶಿಷ್ಟ ನೋಟದ ಮೂಲಕ ಎಲ್ಲರಿಗೂ ಕಾಣಿಸಬೇಕೆಂಬ ಹಂಬಲ ಅವರದು. ಅದಕ್ಕಾಗಿ ಅವರು ನಿತ್ಯ ನಾವು ಕಾಣುವ ಚಿತ್ರಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ.


‘ಕೆಂಡದಲ್ಲಿ ಸುಟ್ಟ ಹಸಿಮೀನು/ ನನ್ನ ಕವಿತೆ. (ಹಸಿಮೀನು ಮತ್ತು ನನ್ನ ಕವಿತೆ/88) ಎನ್ನುವ ಕವಿ ಎಣ್ಣೆಹಾಕಿ, ಮಸಾಲೆ ಸೇರಿಸಿ ಎಲ್ಲರಂತೆ ಮೀನು ಹುರಿದು ತಿನ್ನುವ ಬದಲು ‘ನಾನು ಒಲೆಯ ಕೆಂಡದಲ್ಲಿ/ ಉಪ್ಪು ಸವರಿ/ ಸುಟ್ಟು ತಿನ್ನುತ್ತೇನೆ’ ಎನ್ನುತ್ತಾರೆ. ಇಂತಹ ಸರಳ ಮನೋಧರ್ಮ, ಬದುಕನ್ನು ಸಹಜವಾಗಿ ನೋಡುವ ರೀತಿಯೇ ಇಲ್ಲಿನ ಕವಿತೆಗಳನ್ನು ರೂಪಿಸಿದೆ.

‘ವ್ಯಾಲಿಡಿಟಿ ಮುಗಿದ ನಿನ್ನ/ ಮೊಬೈಲ್‌ ಸಂಖ್ಯೆಯನ್ನು/ ರೀಚಾರ್ಜ್‌ ಮಾಡಲು ಹೊರಟಿದ್ದೇನೆ/ ...ಬೆಳಕಾಗುವ ವರೆಗೂ/ ಕರೆಮಾಡಿ ಕೇಳುತ್ತಲೇ ಇರುತ್ತೇನೆ’ (ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು/51) ಎಂಬ ಈ ಕಾಲದ ಭಾಷೆ, ರೂಪಕಗಳೂ ಈ ಸಂಕಲನದಲ್ಲಿವೆ. ತಮ್ಮ ಅನುಭವನ್ನು ಇನ್ನಷ್ಟು ಸಂಗ್ರಹವಾಗಿ, ಖಚಿತವಾದ ನುಡಿಗಟ್ಟು, ರೂಪಕಗಳಲ್ಲಿ ಚಿತ್ರಿಸುವ ಶಕ್ತಿ ಬಂದಾಗ ಸತೀಶ್‌ ಮಹತ್ವದ ಕವಿತೆಗಳನ್ನು ಕೊಡಬಲ್ಲರು.
*
ಸಂದೀಪ ನಾಯಕ