ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, August 10, 2015

ಕಡೆಂಗೋಡ್ಲು ಕಾವ್ಯ ಪುರಸ್ಕಾರ 2015

[ಉದಯವಾಣಿ]

ಉಡುಪಿ : ಕನ್ನಡ ಉಳಿಸಲು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದವರಿಗೆ ಎಲ್ಲ ಉದ್ಯೋಗಗಳಲ್ಲಿ ಕನಿಷ್ಠ ಶೇ. 25 ಮೀಸಲಾತಿ ನೀಡಬೇಕು ಎಂದು ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಆಗ್ರಹಿಸಿದ್ದಾರೆ.

ಎಂಜಿಎಂ ಕಾಲೇಜಿನಲ್ಲಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಶ್ರಯದಲ್ಲಿ ರವಿವಾರ ಮಡಿಕೇರಿಯ ಕಾಜೂರು ಸತೀಶರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದ ಅವರು, ಸುವರ್ಣಮಹೋತ್ಸವ, ಶತಮಾನೋತ್ಸವ ಕಂಡ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ತೀರಾ ಚಿಂತಾಜನಕವಾಗಿವೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಸಬೇಕೆಂದಿದ್ದರೂ ಅದು ನಡೆಯುತ್ತಿಲ್ಲ. ರಾಜಕಾರಣಿಗಳು, ಅವರ ಸಂಬಂಧಿಕರು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಮೀಸಲಾತಿ ಅತೀ ಅಗತ್ಯ ಎಂದರು.

ಕಡೆಂಗೋಡ್ಲು ಶಂಕರ ಭಟ್‌ ಅವರು "ಶುದ್ಧಾಂಗ ಕೃಷಿಕ' ಎಂದು ಪ್ರಯೋಗ ಮಾಡಿದ್ದಾರೆ. ಇತ್ತೀಚಿಗೆ ಒಬ್ಬ ರೈತ ಕೇವಲ 5,000 ರೂ. ಸಾಲವಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದಾಗ ಇದು ಅರ್ಥವಾಗುತ್ತದೆ ಎಂದು ಸಂಸ್ಮರಣ ಭಾಷಣ ಮಾಡಿದ ಕವಿ, ಪ್ರಾಧ್ಯಾಪಕ ಡಾ| ನರೇಂದ್ರ ರೈ ದೇರ್ಲ ಹೇಳಿದರು.

ಈಗಿನ ಮಾಧ್ಯಮಗಳಂತೆ ಕಡೆಂಗೋಡ್ಲು ತೀರ್ಪು ಕೊಡುತ್ತಿರಲಿಲ್ಲ. ಅವರೊಳಗೊಬ್ಬ ಉಪನ್ಯಾಸಕನಿದ್ದ ಕಾರಣ ಸಂವೇದನಶೀಲರಾಗಿ ಓದುಗರೊಂದಿಗೆ ಸಂವಾದ ನಡೆಸುತ್ತಿದ್ದರು. ಸಾಯುವವರೆಗೂ ಅಧ್ಯಯನ ನಡೆಸುತ್ತಿದ್ದರು. ಕಡಿಮೆ ಓದಿದ್ದೇ ಇದಕ್ಕೆ ಕಾರಣ ಎಂದು ದೇರ್ಲ ಹೇಳಿದರು.

ಕಡೆಂಗೋಡ್ಲು ಪುತ್ರರಾದ ಕಡೆಂಗೋಡ್ಲು ಈಶ್ವರ ಭಟ್‌, ಡಾ| ಕೆ.ಎಸ್‌. ಭಟ್‌ ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತ "ಗಾಯದ ಹೂವುಗಳು' ಕವನ ಸಂಕಲನದ ಕುರಿತು ಡಾ| ಪ್ರಜ್ಞಾ ಮಾರ್ಪಳ್ಳಿ ಮಾತನಾಡಿದರು. ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ| ಹೆರಂಜೆ ಕೃಷ್ಣ ಭಟ್‌ ಸ್ವಾಗತಿಸಿ ಜಿ.ಪಿ. ಪ್ರಭಾಕರ್‌ ವಂದಿಸಿದರು.

ಮಹಾಯುದ್ಧಗಳೂ ರಸಗೊಬ್ಬರಗಳೂ...
ಎರಡು ಮಹಾಯುದ್ಧಗಳಾದ ಬಳಿಕ ಭಾರತಕ್ಕೆ ಜಾನ್‌ ಆಗಸ್ಟಿನ್‌ ಬಂದು ಆಹಾರ ಉತ್ಪಾದನೆ ಹೆಚ್ಚಿಸಲು "ಮ್ಯಾಜಿಕ್‌ ಪುಡಿ' ತಂದಿರುವುದಾಗಿ ಪ್ರಧಾನಿ ನೆಹರೂ ಅವರಿಗೆ ಹೇಳಿದ. ಯುವ ನೆಹರೂ ಬರಲಿ ಎಂದರು. ಮ್ಯಾಜಿಕ್‌ ಪುಡಿಯನ್ನು ಗದ್ದೆಗಳಿಗೆ ಹಾಕಿದರು. ಇದೇ ಯೂರಿಯಾ, ಸುಫ‌ಲಾ. ಯುದ್ಧಾನಂತರ ಅಮೋನಿಯ ರಸಗೊಬ್ಬರ ಖರೀದಿಸಲು ಭಾರತ ಬೇಕಿತ್ತು. ಈಗ ಇದರ ಪರಿಣಾಮ ನೋಡುತ್ತಿದ್ದೇವೆ.
-ಡಾ| ನರೇಂದ್ರ ರೈ ದೇರ್ಲ

ಸಾಹಿತಿಗಳು ಸಮಾಜ ಒಡೆಯುವ ಬದಲು ಯಾವುದೇ ಪಂಥಗಳಿಗೆ, ವರ್ಗಗಳಿಗೆ ಅಂಟಿಕೊಳ್ಳದೆ ಶುದ್ಧ ಅಂತಃಕರಣದವರಾಗಿರಬೇಕು. ಕಿರಿಯರನ್ನು ಹಿರಿಯರು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರಬೇಕು.
-ಕಾಜೂರು ಸತೀಶ್‌

ಯುದ್ಧೋದ್ಯಮ
ಈಗ ಶಿಕ್ಷಣ, ಧರ್ಮ, ಆರೋಗ್ಯ, ಪತ್ರಿಕೆ ಎಲ್ಲವೂ ಉದ್ಯಮವಾಗಿವೆ. ಪಾಶ್ಚಾತ್ಯ ದೇಶಗಳು ಯುದ್ಧವನ್ನೂ ಉದ್ಯಮವಾಗಿ ಮಾಡಿಕೊಂಡಿರುವುದನ್ನು ಗಮನಿಸಿ ಕಡೆಂಗೋಡ್ಲು ಅವರು "ಯುದ್ಧೋದ್ಯಮ' ಎಂಬ ಶಬ್ದ ಬಳಸಿದ್ದಾರೆ. ಮಾಧವ ಗಾಡ್ಗೀಳ್‌ಗೆ ಈಗಿರುವ ಪರಿಸರ ಕುರಿತ ಕಳವಳ ಆಗಲೇ ಕಡೆಂಗೋಡ್ಲು ವ್ಯಕ್ತಪಡಿಸಿದ್ದರು ಎಂದು ನರೇಂದ್ರ ರೈ ದೇರ್ಲ ಹೇಳಿದರು.

1 comment: