ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, April 19, 2015

ಹಲಸಿನ ಹಣ್ಣು


ಪ್ರಕಾಶನ್ ಮಡಿಕೈ


ಎಷ್ಟು ಬಲಿಷ್ಠ ಈ ಹಲಸಿನ ಹಣ್ಣು
ಎಷ್ಟೆತ್ತರದಿಂದ ಬಿದ್ದು ಉರುಳಿದರೂ
ಅದೇ ರುಚಿ
(ಬೇಡಿಕೆ ಕುಂದುತ್ತದಷ್ಟೆ).



ಹಲಸಿನ ಹಣ್ಣಿಗೆ
ಒಬ್ಬರ ಕುತ್ತಿಗೆ ಮುರಿಯಬೇಕೆನಿಸಿದರೆ
ಮರದಿಂದ ಕೆಳಗಿರುವವನ ತಲೆಗೆ ನೇರವಾಗಿ ಬಿದ್ದರೆ ಸಾಕು!


ಸುಮ್ಮನೆ ಬಿಡುವುದಿಲ್ಲ ಅದು-
ಕತ್ತರಿಸುವವರ ಬೆರಳುಗಳನ್ನೇ ಅಂಟಿಸಿ ಬಂಧಿಸಿಬಿಡುವುದು.
ಸ್ವಲ್ಪ ತಣ್ಣೀರು ಮುಟ್ಟಿ ಕತ್ತರಿಸಬೇಕು-
ಅಂಟಿಸಿಕೊಳ್ಳದಿರಲು
ಬಂಧಿಸಿಕೊಳ್ಳದಿರಲು.


ಹಣ್ಣುಗಳಿಗೂ ವರ್ಗಭೇದ ತಪ್ಪಿಲ್ಲ.
ತೂಕ ಹೆಚ್ಚಿದ್ದಕ್ಕೆ
ಉಳಿದ ಹಣ್ಣುಗಳೊಂದಿಗೆ ಜಾಗವಿಲ್ಲ,
ಮುದ್ದಿಸುವವರಿಲ್ಲ,
ಹಣ್ಣಿನಂಗಡಿಯಲ್ಲಿ
ಮಾರುವವರೂ ಇಲ್ಲ.


ಹಸಿವು ಪ್ರಾಣ ಹಿಂಡುವಾಗ
ಹಲಸಿನ ಹಣ್ಣೇ ಅಮೃತ.
ಚಿಕ್ಕ-ಚಿಕ್ಕ ಹಣ್ಣುಗಳನ್ನಷ್ಟೇ ಕೊಳ್ಳುವ ಧನಿಕರಿಗೆ
ಹಲಸಿನ ಹಣ್ಣೊಂದು ಕತ್ತರಿಸಿ ದನಕ್ಕೆಸೆಯುವ ವಸ್ತು.


ಹಲಸಿನ ಹಣ್ಣಿನ ಕವಿತೆ ಬರೆದರೆ
ಬಡವನೊಬ್ಬ ಎತ್ತಿಕೊಂಡು ಹೋಗಿ
ಹಿಟ್ಟುಮಾಡಿ ತಿನ್ನುತ್ತಾನೆ.
ಸಿರಿವಂತರಿಗೆ ಸಿಕ್ಕರೆ
ಕಾಲಡಿಯಲ್ಲಿ ಅಪ್ಪಚ್ಚಿ!
*

ಮಲಯಾಳಂ ಮೂಲ- ಪ್ರಕಾಶನ್ ಮಡಿಕೈ

ಕನ್ನಡಕ್ಕೆ -ಕಾಜೂರು ಸತೀಶ್

No comments:

Post a Comment