ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, June 29, 2014

ಕೊಡಗು

ಆಹಾ...
ಇಲ್ಲಿ ಶಬ್ದಗಳೆಲ್ಲ ಸ್ತಬ್ಧ!

ಹಸಿರು :
ನೀರ್ಮಣ್ಣುಗಳಣುಗಳು ಜೀವರಸವ ಕಡೆದು
ಎಲೆಗಳಿಗುಣೆಸಿ ಮುದ್ದಿಸುವ ತುತ್ತು
ದಿಟ್ಟಿಸುವ ಕಣ್ಣೊಳಗೊಂದೇ ವರ್ಣ
ಅದು ಉಸುರುವ ಉಸಿರಿಗೆ
ಜಗದ ನಾಸಿಕಗಳೆಲ್ಲ ಕೊಳಲು.


ಗಿರಿ:
ತಡಿಯಂಡಮೋಳ್,ಬ್ರಹ್ಮಗಿರಿ
ಕೋಟೆಬೆಟ್ಟ, ಪುಷ್ಪಗಿರಿಗಳ
ಬಲಿಷ್ಠ ತೋಳುಗಳು
ಆಕಾಶಕ್ಕೆ ಹೆಗಲು
ಮೋಡಗಳಿಗೆ ತೊಟ್ಟಿಲು,
ಮೆಟ್ಟಿಲು
ಸೂರ್ಯನಿಗೆ ಮುತ್ತಿಕ್ಕಿ
ಸುಟ್ಟುಕೊಂಡ ತುಟಿಗಳು .


ನೆಲ-ಜಲ:
ಉಮ್ಮತ್ತಾಟ್,ಬೊಳಕಾಟ್
ಹೆಜ್ಜೆ ಎತ್ತಿಟ್ಟರೆ ಸಾಕು
ಅಲ್ಲೇ ಅಚ್ಚು
ಅಷ್ಟು ಕೆಚ್ಚು
ಕಾಫಿ,ಕಿತ್ತಳೆ ಏಲಕ್ಕಿಗಳೆಂಬೊ
ಹಚ್ಚಿಟ್ಟ ಹಣತೆ
ಒಂಭತ್ತು ದ್ವಾರಗಳಿಂದ
ಅಬ್ಬಿ,ಇರ್ಪು,ಮಲ್ಲಳ್ಳಿಗಳ ತಿಳಿಹಾಲು
ಕಾವೇರಿಗೆ ಕಾವೇರಿಸುವಷ್ಟು ಪುರುಷತ್ವ.


ಮಾಗಿ:
ಬಿರುಸು ನಾಲಿಗೆ
ದೈತ್ಯನ ಬಾಯಿ
ನೆಕ್ಕಿದರೆ ಸೀಳಿ ಬರುವುದು
ನೆಲಾಕಾಶಗಳ ಸಿಪ್ಪೆ .




ಮಳೆ:
ಆಕಾಶ  ನಕ್ಕೂ ನಕ್ಕೂ
ಧುಮ್ಮಿಕ್ಕುವ ಆನಂದಬಾಷ್ಪ .



-2-

ಉಹೂಂ ...
ಇಲ್ಲಿ ಬಿಕ್ಕುಗಳೂ ಸ್ತಬ್ಧ!

ಕಛೇರಿ :
ಒಳಗೆ ಕಾಲಿಡುವ ಮುಗ್ಧ ಮೈಗೆ
ಕಟಕಟ ಮರಕುಟಿಕನ ಕುಟುಕು
ಇಷ್ಟುದ್ದದ ಹಸ್ತ
ತೆರೆದು-ಮುಚ್ಚುವ ಡ್ರಾಯರ್.




ರಸ್ತೆ:
ಚಚ್ಚಿಸಿಕೊಂಡು ಅರೆಜೀವವಾಗಿ
ಮುದುಡಿ ಮಲಗಿದ ಕೇರೆ ಹಾವು
ಕಾಡಾನೆಯ ಲದ್ದಿಯ ಸಿಂಡು
ಹುಲಿಯ ಹೆಜ್ಜೆಯ ಹಚ್ಚೆ
ಆಚೀಚೆ ಅಪ್ಪಿಕೊಳ್ಳಲು ಹವಣಿಸುವ
ಬೇಲಿಯ ಭಯದ ನೆರಳು.

ಕಾರ್ಮಿಕ:
ಆಕಾಶದ ತಾರಸಿ
ನೆಲದ ಗಟ್ಟಿ ಅಡಿಪಾಯ
ಚಂದಿರನ ಚಿತ್ರ ಪ್ರದರ್ಶನ
' ಠೇಂಽಽ..' ಓಂದೇ ಒಂದು ಗುಂಡೇಟಿಗೆ
ಪೂರ್ಣವಿರಾಮ.




ಕಾಡು:
ಬೇಸಿಗೆಗೆ ಬೆದರಿ ನರಸತ್ತ ತೇಗ
ಅಲ್ಲಲ್ಲಿ ತಂತಿ ಬೇಲಿಗೆ ಬೊಜ್ಜು
ಸರಾಗ ನಡೆದಾಡಲು ಸುಗಮ ದಾರಿ.


-3-

ಬೇಲಿಗಳೇ ಇಲ್ಲದ
ಕಾಂಪೌಂಡುಗಳೇ ಇಲ್ಲದ
ಹಚ್ಚಹಸುರಿನ ಕೊಡಗೆಂದರೆ ಮಾತ್ರ ನಂಗಿಷ್ಟ.



ಪ್ರಭೂ,
ಪ್ರಭುತ್ವದ ಆಸೆಗೆ ಬಿದ್ದ
ಎಂಥ ಮಳೆಗೂ
ನೆಲ ಬಿರುಕುಬಿಡದಂತೆ ನೋಡಿಕೊಂಡಿರು!


**
-ಕಾಜೂರು ಸತೀಶ್ 

Monday, June 23, 2014

ಇನ್ಕ್ವಿಲಾಬ್ ಜಿಂದಾಬಾದ್[ಕಥೆ]

ಒಂದು ವಾರ ಎಡೆಬಿಡದೆ ಗೇರು ಬೀಜ ಹೆಕ್ಕಿ, ಇನ್ನೊಂದು ವಾರ ಕಾಡು ಸುತ್ತಿ ಅಲ್ಲಿನ ಜನರೊಂದಿಗೆ ಬೆರೆತ ಕಾರಣ,ಬಿಡುವೇ ಇಲ್ಲದಂತಾಗಿ ತುಂಬ ದಣಿದಂತಾಗಿದ್ದೆ.



ನಾನು ಕಾಡಿಗೆ ನುಗ್ಗಿದಂದಿನಿಂದ ನನ್ನನ್ನು ಜನ ವಿಚಿತ್ರವಾಗಿ ನೋಡಲಾರಂಭಿಸಿದ್ದು ನನಗೂ ಅರಿವಿಗೆ ಬಂದಿತ್ತು. ಮೊದಲೇ ನಾನಿರುವುದು ಬಾಡಿಗೆ ಮನೆಯಲ್ಲಿ. ಅಷ್ಟೇನೂ ಪರಿಚಿತವಲ್ಲದ ಊರು. ಊರು ಎಂದರೆ ಕಾಡಿನಂಥ ಒಂದು ಊರು. ಮನೆಗಳಿದ್ದರೂ ಅಷ್ಟು ಸುಲಭವಾಗಿ ಕಣ್ಣಿಗೆ ಬೀಳುವುದಿಲ್ಲ. ಊರಿಡೀ ಹುಡುಕಿದರೂ ಪತ್ರಿಕೆ ಓದುವವರು ನಾಲ್ಕೈದು ಮಂದಿ ಸಿಗಬಹುದು. ಆದರೆ,ರಾಜಕೀಯದ ವಿಷಯಕ್ಕೆ ಬಂದಾಗ ಮಾತ್ರ ತುಂಬ ಚಾಣಾಕ್ಷರು. ಇತ್ತೀಚೆಗೆ ರೇಡಿಯೋವನ್ನೂ ಮೂಲೆಗೆಸೆದು ಟಿ.ವಿ. ಧಾರಾವಾಹಿಗಳನ್ನು ತಪ್ಪದಂತೆ ನೋಡುವುದನ್ನು ರೂಢಿಸಿಕೊಂಡಿದ್ದಾರೆ. ಮೊಬೈಲ್ ಫೋನ್  ಬಳಸುವುದನ್ನು ಕಲಿತಿದ್ದಾರೆ. ಮುಂದಿನ ವರ್ಷಕ್ಕೆಇರೋಬರೋ ಗೇರು ತೋಟವನ್ನೆಲ್ಲ ಕಡಿದು ರಬ್ಬರ್ ನೆಡುವ ಯೋಜನೆ ಪ್ರತಿಯೊಬ್ಬರ ಬಾಯಿಂದ ಬಾಯಿಗೆ ಕಾಯಿಲೆಯಂತೆ ಹರಡಿದೆ .ತುಂಬ ಹುಡುಕಿದರೆ ಸಿಗುವುದುಎರಡೇ ಎರಡು ಭತ್ತದ ಗದ್ದೆ. ಬರುವ ವರ್ಷ ಅದರಲ್ಲೂ ರಬ್ಬರ್ ಹುಟ್ಟುತ್ತದಂತೆ.  ಸಾಂಸಾರಿಕ ಜೀವನವಂತೂ ರಸವತ್ತಾದದ್ದು. ಪ್ರೀತಿಸಿದ ಜೋಡಿ ಕಾಡಿಗೆ ತೆರಳಿ ಎರಡು ದಿನ ಪತ್ತೆಯಾಗಿಲ್ಲವೆಂದರೆ ಮದುವೆಯಾಯಿತೆಂದೇ ಅರ್ಥ.ಮದುವೆಯಾದ ಗಂಡ -ಹೆಂಡತಿಯರು ಮತ್ತೊಬ್ಬರೊಂದಿಗೆ ಓಡಿಹೋಗುವುದು ಸಹಜವಾದ ವಿಚಾರ.





ಇಂಥ ಊರಲ್ಲಿ ನಾನು ಪ್ರತೀ ವರ್ಷ ಗೇರು ತೋಟದ ಗುತ್ತಿಗೆ ಪಡೆಯಲು ಬರುತ್ತೇನೆ . ಅಬ್ಬಬ್ಬ ಅಂದರೆ ಎರಡು ತಿಂಗಳ ಕೆಲಸ. ಹೀಗಾಗಿ, ಜನಗಳಿಗಿಂತ ನನಗೆ ಇಲ್ಲಿರುವ ಕಾಡಿನ ಮೂಲೆ ಮೂಲೆಗಳೇ ಹೆಚ್ಚು ಪರಿಚಿತ. ನಾನೂ ಜನಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ. ಕಾಡಿನಲ್ಲಿ ಮೀನು ಹಿಡಿಯುವುದು, ತೂಗುಪಾಲ ಕಟ್ಟಲು ಸಹಕರಿಸುವುದು, ಹಳೆಯ ಪತ್ರಿಕೆಗಳನ್ನು ಕೊಂಡೊಯ್ದು ಶಾಲೆಗೆ ತೆರಳದೆ ಕದ್ದು ಕುಳಿತ ಮಕ್ಕಳನ್ನು ಓದಿಸುವುದು..ಇಂಥದ್ದನ್ನೆಲ್ಲ ಮಾಡುತ್ತಿದ್ದೆ.





ಆದರೆ, ಈಚೆಗೆ ಕಾಡಿಗೆ ನುಗ್ಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನೂರೆಂಟು ಪ್ರಶ್ನೆಗಳು,ತಪಾಸಣೆ ,ಗಸ್ತು ತಿರುಗುವುದು ಇತ್ಯಾದಿ .







ಮನಸ್ಸು ಏಕಾಂತವನ್ನು ಬಯಸುತ್ತಿತ್ತು,. ಎಲ್ಲಾದರೂ ದೇಶಾಂತರ ಹೊರಟುಹೋಗಬೇಕೆನಿಸುತ್ತಿತ್ತು. ಕೋಣೆಗೆ ತೆರಳಿದೆ.
*

ಮೊದಲ ದಿನ:

ಕತ್ತಲಾಗುತ್ತಲೇ ಬಾಗಿಲು ಕುಂಯ್ಗುಟ್ಟದ ಹಾಗೆ ನಿಧಾನಕ್ಕೆ ತೆರೆದು ಮುಂಬಾಗಿಲಿಗೆ ಬೀಗ ಜಡಿದೆ. ಹಿಂಬಾಗಿಲಿನಿಂದ ಒಳಗೆ ಸೇರಿಕೊಂಡು ಭದ್ರಪಡಿಸಿದೆ.



ಹಾಗೆ ಮಾಡೋದಕ್ಕೂ ಮುಂಚೆ ಮೂರು ದಿನಗಳ ಮಟ್ಟಿಗೆ ಬೇಕಾಗಬಹುದಾದ ಜೋಳದ ರೊಟ್ಟಿ,ಚಟ್ನಿಪುಡಿ,ಸೇಬು,ಬಾಳೆಹಣ್ಣು,ಅವಲಕ್ಕಿ,­ಪುರಿ,ಪೇಸ್ಟು,ಸೋಪು..ಇತ್ಯಾದಿ ಇತ್ಯಾದಿ ವಸ್ತುಗಳೆಲ್ಲ ಇವೆಯೇ ಎಂದು ಖಾತ್ರಿಪಡಿಸಿಕೊಂಡೆ. ಪರ್ಫ್ಯೂಮು,ಹೇರ್ ಡೈ ಮುಗಿದುಹೋಗಿದ್ದರೂ,ರೂಮಿನಲ್ಲಿದ್ದಾಗ ಅದರ ಅವಶ್ಯಕತೆ ಇಲ್ಲವಲ್ಲ ಎಂದು ಸುಮ್ಮನಾಗಿದ್ದೆ. ಕಿಟಕಿಗೆ ಕಪ್ಪು ಕರ್ಟನನ್ನು ಚೆನ್ನಾಗಿಯೇ ಕಟ್ಟಿದ್ದೆ. ನೆಲವನ್ನೆಲ್ಲ ಗುಡಿಸಿದೆ. ಒರೆಸಿದೆ.ಅನ್ನದ ತಪಲೆ,ನೀರಿನ ಪಾತ್ರೆಗಳನ್ನೆಲ್ಲ ತೊಳೆದು ಮಕಾಡೆ ಮಲಗಿಸಿದೆ. ಅಪ್ಪಿತಪ್ಪಿ ಮರೆತು ಕರೆಂಟು ಸ್ವಿಚ್ಛು ಒತ್ತುತ್ತೇನೊ ಎಂಬ ಭಯದಲ್ಲಿ ಬಲ್ಬುಗಳನ್ನು ಬಿಚ್ಚಿಟ್ಟೆ. ಕ್ಯಾಂಡಲನ್ನು ಕೈಗೆ ಸಿಗದ ಹಾಗೆ ಬಚ್ಚಿಟ್ಟೆ. ಬೆಳಕಿರುವಷ್ಟು ಹೊತ್ತು ಓದಲು ಒಂದಷ್ಟು ಪುಸ್ತಕಗಳನ್ನು ಗುಡ್ಡೆಹಾಕಿದೆ: ಕಾರಂತ,ತೇಜಸ್ವಿ,ಲಂಕೇಶ,­ಫ್ರಾಯ್ಡ್,ಚೆ,ನೆರೂಡ,ಲಾರೆನ್ಸ್,ಕಾಫ್ಕಾ,ವೈಕ್ಕಂ...ಹೀಗೆ.ಅವುಗಳಲ್ಲಿ ಲಾರೆನ್ಸನ 'ದಿ ರೈನ್ ಬೌ' ವನ್ನು ಮೊದಲು ಓದಲು ಮನಸ್ಸು ಹೇಳಿತು. ಏಕಾಂತದ ಒತ್ತಡವನ್ನು ಅದು ನಿಭಾಯಿಸುತ್ತದೆ ಎಂದು ಯಾರೊ ಹೇಳಿದ ನೆನಪು. ಅಗತ್ಯವಿದ್ದವರಿಗೆಲ್ಲ ಕರೆಮಾಡಿ ಮೊಬೈಲ್ ಹಾಗೂ ನನ್ನ ಸಾಫ್ಟ್ವೇರ್ ಹೋಗಿದೆಯೆಂದೂ,ರಿಪೇರಿಗೆ ಕೊಡುತ್ತಿದ್ದೇನೆ ಎಂದೂ ,ಸರಿಯಾಗಲು ಮೂರು ದಿನಗಳಾದರೂ ಬೇಕಾಗಬಹುದು ಎಂದೂ ಸೊಗಸಾಗಿ ಸುಳ್ಳು ಹೇಳಿದೆ. ಮೊಬೈಲಿನ ಸಿಮ್ ಕಳಚಿಟ್ಟೆ. ಇನ್ನುಇಂಟರ್ನೆಟ್ ಸಹವಾಸವೂ ಬೇಡ. ಮೂರು ದಿನಗಳ ಕಾಲ ಫ್ಯಾನಿನ ತಿರುಗುವ ಸ್ವಾತಂತ್ರ್ಯವನ್ನೂ ಕಸಿದುಕೊಂಡೆ.





ರಾತ್ರಿ ದೀಪ ಹಚ್ಚಲಿಲ್ಲ. ಎಂದಿನ ಸಮಯಕ್ಕೆ ಚಾಪೆಯ ಮೇಲುರುಳಿದರೂ, ಬೇಗ ನಿದ್ದೆ ಹತ್ತಲಿಲ್ಲ. ಮರುದಿನ ಮುಂಜಾವ ಮೂರರ ಸುಮಾರಿಗೆ ಎದ್ದು ಬಚ್ಚಲ ಮನೆಗೆ ಮೆತ್ತಗೆ ಹೆಜ್ಜೆಯಿಡುವಾಗ ಕತ್ತಲಿನ ಅರ್ಥ ತಿಳಿಯುತ್ತಾ ನನ್ನೊಳಗೆ ಬೆಳಕು ಹಬ್ಬಿತು. ಒಳಗಿನ ಬೆಳಕು,ಹೊರಗಿನ ಕತ್ತಲು ಗಾಢವಾಗಿ ಮತ್ತೆ ಹಾಸಿಗೆಗೆ ಹೊರಳಿದೆ.



ಎರಡನೇ ದಿನ:

ಕತ್ತಲಲ್ಲಿ ಬೆಳಕು ಹಚ್ಚಲು ಹೆದರಿ ತಡವಾಗಿ ಎದ್ದಿದ್ದೆ. ನಾನು ಹೆದರಿದ್ದು ಬೆಳಕಿಗೊ ಅಥವಾ ನನ್ನ ಸುತ್ತಲಿರುವ ಜನಗಳಿಗೊ ಎನ್ನುವ ಪ್ರಶ್ನೆ ನನ್ನನ್ನು ಸಣ್ಣಗೆ ಕೊರೆಯುತ್ತಿತ್ತು. ಜೋಳದ ರೊಟ್ಟಿ, ಶೇಂಗಾ ಚಟ್ನಿಯ ನಿಜವಾದ ರುಚಿ ನನಗೆ ಅವತ್ತು ತಿಳಿಯಿತು.




ಯಾರೋ ಬಾಗಿಲು ಬಡಿದರು.ಈ ಹಾಳು ಕೊತ್ತಿ ಪಾತ್ರೆ ತಟ್ಟಿ ಬೀಳಿಸಿ ಸದ್ದು ಮಾಡಿದ್ದು ಅವರಿಗೆ ಕೇಳಿಸಿರಬೇಕು.

ಬೀಗ ಹಾಕಿದ್ದರೂ ಈ ಮನುಷ್ಯರು ಬಾಗಿಲು ತಟ್ಟುತ್ತಾರಲ್ಲಾ ಎನಿಸಿತು.


ಮಧ್ಯಾಹ್ನ ಹಸಿವು ಸ್ವಲ್ಪ ಜಾಸ್ತಿಯೇ ಕಾಡುತ್ತಿತ್ತು. ಹೊಟ್ಟೆ ಖಾಲಿಯಾದಾಗಲೆಲ್ಲ ಒಂದೆರಡು ಹೋಳು ಗೇರುಹಣ್ಣು ತಿಂದರೆ ಹಸಿವಿನ ಸಮುದ್ರ ಶಾಂತವಾಗುವಾಗುತ್ತದೆ ಎಂಬುದು ನನ್ನ ಅನುಭವ.ಹಾಗೇ ಮಾಡಿದೆ. ವಾರ್ತೆ ಕೇಳಬೇಕೆನಿಸಿತು. ಮೊಬೈಲಿನಲ್ಲಿ ರೇಡಿಯೊ ಹಾಕಿದೆ. ಹಾಡು ಬರುತ್ತಿತ್ತು:

'ಮನೆಯೊಳಗೆ ಮನೆಯೊಡೆಯನಿದ್ದಾನೋ  ಇಲ್ಲವೋ...'

ರೇಡಿಯೊ ಆಫ್ ಮಾಡಿ ನಾನೇ ಹೇಳಿಕೊಂಡೆ:
'ಮನೆಯೊಳಗೆ ಮನೆಯೊಡೆಯನಿದ್ದಾನೆ. ಆದರೆ ಹೊಸ್ತಿಲೊಳಗೆ ರಜ ತುಂಬಿ ,ಮನೆಯೊಳಗೆ ಕಸ ತುಂಬಿಹೋಗಿದೆ..'

ಮೇಜಿನ ಮೇಲೆ ಗುಡ್ಡೆ ಹಾಕಿದ್ದ ಪುಸ್ತಕಗಳಲ್ಲಿ ಯಾವುದನ್ನೂ ಓದಿ ಪೂರ್ಣಗೊಳಿಸಲಾಗಲಿಲ್ಲ. ಆಡು ಮೇಯ್ದ ಹಾಗೆ ಸ್ವಲ್ಪ-ಸ್ವಲ್ಪ ಮೇಯ್ದರೂ ಹೊಟ್ಟೆ ತುಂಬಿದಷ್ಟು ತೃಪ್ತಿಯಾಗಿರಲಿಲ್ಲ.




ನನಗೆ ಆಗಾಗ ತಲೆಬಿಸಿ ಮಾಡುತ್ತಿದ್ದದ್ದು ಪಕ್ಕದ ಮನೆಯ ಟಾಮಿ. ನನ್ನ ವಾಸನೆ ಹಿಡಿದು ಬಾಗಿಲ ಬಳಿ ಬಂದು 'ಕುಂಯ್ಕುಂಯ್' ಅಂದಾಗ ಯಾರಾದರೂ ಅನುಮಾನ ಪಟ್ಟಾರು ಎಂಬ ಭಯ ನನ್ನನ್ನು ಕಾಡುತ್ತಿತ್ತು. ಅದು ದಿನಾಲೂ ನನ್ನ ಬಳಿ ಬಂದಾಗ ಮೀನಿನ ತಲೆಯೊ ಅಥವಾ ಬಿಸ್ಕೇಟೊ ಕೊಟ್ಟು ಅಲ್ಲಾಡುವ ಬಾಲವನ್ನು ನೆಟ್ಟಗೆ ಮಾಡಿ ಕಳಿಸುತ್ತಿದ್ದೆ.




ಮೂಲೆಯ ಯಾವುದೋ ಪ್ಲಾಸ್ಟಿಕ್ಕಿನಿಂದ ಜಿರಲೆಗಳು ಸಂಗೀತ ಹೊಮ್ಮಿಸುತ್ತಿದ್ದವು. ಹಲ್ಲಿಗಳೆರಡು ತಮಗಿಷ್ಟವಾದ ಕ್ರೀಡೆಯಲ್ಲಿ ನಿರತವಾಗಿದ್ದವು. ಹೊರಗಿರುವ ರಸ್ತೆಯಲ್ಲಿ ಜನ ನನ್ನ ಇಲ್ಲದಿರುವಿಕೆಯ ಭಾವದಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಬಳಸಿಕೊಂಡು ಯಾರದೋ ಮನೆಯ ಕಥೆಯೊಂದನ್ನು ಟಿ.ವಿ.ಯಲ್ಲಿ ಮಾತನಾಡುವಂತೆ ಮುಕ್ತವಾಗಿ ಚರ್ಚಿಸಿಕೊಂಡು ಹೋಗುತ್ತಿದ್ದರು.




ನಿಜ ಹೇಳಬೇಕೆಂದರೆ, ನನ್ನ ಖಿನ್ನತೆ ಸ್ವಲ್ಪ ಕಡಿಮೆಯೇ ಆಗಿತ್ತು.





ತುಸು ಗಾಳಿ ಬರಲೆಂದು ಮೇಲ್ಭಾಗದ ಹೆಂಚನ್ನು ಸರಿಸಿದೆ. ಚಂದ್ರ ಕಂಡೊಡನೆ ನನಗೆ ಸ್ವಾತಂತ್ರ್ಯ ಸಿಕ್ಕಷ್ಟು ಖುಷಿಯಾಯಿತು.



ಮಧ್ಯರಾತ್ರಿಯಲ್ಲಿ ಎದ್ದೆ, ಸಪ್ಪಳ ಬಾರದ ಹಾಗೆ ನಡೆದೆ. ಫಳಾರನೆ ಮಿಂಚು ಕವಿಯಿತು. ಗೋಡೆಯ ಮೇಲೆ ನೇತು ಹಾಕಿದ್ದ ಬುದ್ಧನ ಚಿತ್ರದ ಮಂದಸ್ಮಿತಕ್ಕೆ ಪ್ರತಿಯಾಗಿ ನಾನೂ ಅದನ್ನೇ ಅನುಕರಿಸಬೇಕೆನಿಸಿತು. ಸ್ವಲ್ಪ ಮಳೆಯಾದರೂ ಬೀಳಬಾರದೇ ಎನ್ನಿಸಿದಾಗಲೇ ಕೆಲವು ಹನಿಗಳು ಉದುರತೊಡಗಿದವು.


ಮೂರನೇ ದಿನ:


ಬೆಳಕಾಗುವ ಮೊದಲೇ ಹಿಂಬಾಗಿಲಿನಿಂದ ಬಂದು ನಾನು ಬೀಗ ತೆಗೆಯಬೇಕಿತ್ತು. ಯಾಕೋ ಹಾಗನ್ನಿಸಲಿಲ್ಲ. ಕೋಣೆಯೊಳಗಿನ ಅರ್ಧಂಬರ್ಧ ಕತ್ತಲು, ಬೆಳಕು ,ಮೌನ..ಎಲ್ಲ ತುಂಬ ಹಿಡಿಸಿತ್ತು, ಈಚೆಗೆ ಮನುಷ್ಯರನ್ನು ಕಂಡರೇನೆ ಭಯವಾಗುತ್ತೆ ಎಂದು ಮೊನ್ನೆ ಆಫ್ರಿಕಾದಗೆಳೆಯನಿಗೆ ಮೈಲ್ ಕಳಿಸಿದ್ದೆ.

'ಅದು ಯಾವುದೋ 'ಕಾಂಪ್ಲೆಕ್ಸ್' ಇರಬಹುದು ,ಬೇಗ ಮನೋವೈದ್ಯರನ್ನು ಭೇಟಿಯಾಗು' ಎಂದು ಅದರ ಮಾರನೇ ದಿನ ಸೂಚಿಸಿದ್ದ.

'ನನಗೆ ಯಾವ ಕಾಂಪ್ಲೆಕ್ಸೂ ಇಲ್ಲ ಮಾರಾಯ , ಕಟ್ಟಿಸಲೂ ಕೂಡ ಹಣವಿಲ್ಲ' ಎಂದು ಉತ್ತರಿಸಿದ್ದೆ.

ಪ್ರಜ್ಞಾಪೂರ್ವಕವಾಗಿರುವಾಗ ಮಾ ತ್ರ ಕೇಳಿಸುವ ತೋಡು ನೀರಿನ ಹಾಡು ಬದಲಾಗಿರಲಿಲ್ಲ. ಅದು ಬದಲಾಗಬೇಕೆಂದರೆ ಮಳೆ ಸುರಿಯಬೇಕು. ಅದು ತಾರಕದಲ್ಲಿ ಹಾಡುತ್ತಿದ್ದರಂತೂ ಈಚೇಚೆಗೆ ರೇಡಿಯೋದಲ್ಲಿ ಕೇಳಿಬರುತ್ತಿರುವ ಕೆಲವರ ಅರಚುಗಾನದಂತೆ ಕೇಳಿಬರುತ್ತದೆ. ಅದಕ್ಕೇ, ಹಾಗಾಗದಿರಲಿ ಎಂದುಕೊಳ್ಳುತ್ತಿದ್ದೆ.





ಗೋಡೆಯ ಮೇಲೆ ಮಹಾನ್ ಕಳ್ಳನಂತೆ ಹತ್ತಿಳಿಯುತ್ತಿದ್ದ ಶತಪದಿ, ಸಹಸ್ರಪದಿಗಳು ಒಮ್ಮೊಮ್ಮೆ ಕಾಲಿಗೆ ಸಿಕ್ಕಿ 'ಕಚಕ್' ಆಗಿಬಿಡುತ್ತಿದ್ದವು. ಬಾಗಿಲು ತೆರೆಯದಿದ್ದುದಕ್ಕೆ ಗೋಡೆಯಲ್ಲಿ ನೀರಿನ ಪಸೆ ಇತ್ತು. ಹೊಳೆ, ತೋಡಿನ ಬಳಿ ಮನೆಯಿದ್ದರೆ ಈ ಸಮಸ್ಯೆ ಇದ್ದದ್ದೇ. ನೆಲವೂ ಓಯಾಸಿಸ್ನಂತಾಗಿತ್ತು.




ಯಾರದೋ ಮಾತು ಕೇಳಿಸಿತು. ಬಾಗಿಲು ಕುಟ್ಟುವ ಶಬ್ದ. ಆಮೇಲೆ ಗರಗಸದ ಸದ್ದು. ಇದ್ದಕ್ಕಿದ್ದಂತೆ ನಾಲ್ಕಾರು ಮಂದಿ ಬಾಗಿಲು ಮುರಿದು ಒಳಬಂದರು! ಜೊತೆಗೆ ಟಿ.ವಿ. ಮಾಧ್ಯಮದವರು, ಫೊಟೋಗ್ರಾಫರುಗಳು,ಪತ್ರಕರ್ತರು.ಕೆಲವರು ಒಳನುಗ್ಗಿದವರೇ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ಹೊರನಡೆದರು!



ಆಸ್ಪತ್ರೆ! ನನಗೆ ಹುಚ್ಚು ಹಿಡಿದಿದೆಯೆಂದು ಪಕ್ಕದ ಊರಿನ ಒಬ್ಬಳು ದೇವರು ಬರುವ ಮುದುಕಿ ಹೇಳಿದ್ದಳಂತೆ. ಇನ್ನೂ ಏನೇನೋ ಹೇಳಿದಳಂತೆ.



ಮುಜುಗರಕ್ಕೊಳಗಾದ ನಾನು ಬೆವತುಹೋದೆ. ವೈದ್ಯರೊಬ್ಬರು ಬಂದವರೇ ನನ್ನ ಜೇಬು ತಪಾಸಣೆ ಮಾಡತೊಡಗಿದರು. ನಾನು ಬರೆದಿಟ್ಟ ಕವಿತೆಯೊಂದು ಸಿಕ್ಕಿತು. ನಾನು ಬರೆದಿದ್ದೆ:

'ಬಾಗಿಲು ತೆರೆದೊಡನೆ
ಒಳಗಿರುವ ಕತ್ತಲಿಗೆ
ಹೊರಗಿರುವ ಬೆಳಕಿಗೆ
ಸ್ವಾತಂತ್ರ್ಯೋತ್ಸವ!'


ಅದನ್ನು ಅರ್ಥಮಾಡಿಕೊಳ್ಳಲಾಗದೆ ಕಸದ ಬುಟ್ಟಿಗೆ ಎಸೆದರು. ಅದು ರಕ್ತ ಮೆತ್ತಿದ ಹತ್ತಿಯ ಮೇಲೆ ಬಿದ್ದು ಕೆಂಪಾಯಿತು. ನಾನು 'ಕೆಂಪು ಕಾವ್ಯ' ಎಂದೆ. ನನ್ನನ್ನೊಮ್ಮೆ ದುರುಗುಟ್ಟಿ ನೋಡಿದರು. ನಾನು ನೋಟದಲ್ಲಿ ಪ್ರತಿಭಟಿಸಲಿಲ್ಲ.ಅವರು, ಸಿರಿಂಜಿನೊಂದಿಗೆ ಒಳಪ್ರವೇಶಿಸಿದ ಸುಂದರವಾಗಿದ್ದ ನರ್ಸಿನ ಗಲ್ಲವನ್ನು ಹಿಡಿದು ಪೋಲಿ ಜೋಕೊಂದನ್ನು ಹೇಳಿದರು. ಅವಳ ಮುಖವು ಬೆಳಗು-ಬೈಗುಗಳ ಪೂರ್ವ-ಪಶ್ಚಿಮಗಳಾಗಿ ಅಲ್ಲಿಂದ ಕಾಲ್ಕಿತ್ತಳು.


'ಡಾಕ್ಟರ್, ಆಯ್ಯಾಮ್ ಆಲ್ರೈಟ್' ಎಂದೆ.

ತುಸು ನಕ್ಕವನಂತೆ ನಟಿಸಿ ಯಾವುದೋ ವ್ಯವಹಾರದೊಂದಿಗೆ ಎಗ್ರಿಮೆಂಟ್ ಮಾಡಿಕೊಂಡವರಂತೆ ಗಂಭೀರವಾಗಿ ಮಾತನಾಡುತ್ತಿದ್ದರು.



ನನ್ನ ಪಕ್ಕದ ಬೆಡ್ಡಿನಲ್ಲಿದ್ದ ವ್ಯಕ್ತಿ ನನ್ನನ್ನು ನೋಡಿ ಪರಿಚಯಸ್ಥನಂತೆ ನಕ್ಕ. ಅವನ ತಲೆ ನಿಜವಾಗಿಯೂ ಕೆಟ್ಟಿತ್ತು. ಮತ್ತೊಮ್ಮೆ ನೋಡಿದೆ. ಅರೆ , ಬಡ್ಡಿಮಗ! ನಮ್ಮೂರಿನ ತಾಲ್ಲೂಕು ಆಫೀಸಿನಲ್ಲಿ ವಿಎ ಆಗಿದ್ದವ. ಅವನು ನನ್ನನ್ನು ಪೀಡಿಸುತ್ತಿದ್ದ ಪಾಡನ್ನು ನೆನೆದು ಮೈಯೆಲ್ಲಾ ಉರಿದುಹೋಯಿತು. ಶಾಲೆಗೆ ಹೋಗುತ್ತಿದ್ದಾಗ ಇವನನ್ನು ಕೊಲ್ಲಬೇಕು ಎಂದು ಸೇಡು ಇಟ್ಟುಕೊಂಡಿದ್ದೆ.'ನಿನ್ದು ಆ ಜಾತಿಯಲ್ಲ, ಆದಾಯ ಜಾಸ್ತಿ ಇದೆ' ಎಂದಿದ್ದಕ್ಕೆ 'ನಂಗೆ ಜಾತಿಯೇ ಇಲ್ಲವೆಂದು ಬರೆದುಕೊಡು' ಎಂದು ಗುಡುಗಿದ್ದೆ. 'ನಿನ್ನಂತವರ ಹಿಂಸೆಯಿಂದ ನಾನು ಮತಾಂತರ ಹೊಂದುತ್ತೇನೆ' ಎಂದಿದ್ದೆ.




ಅವನಿಂದಾಗಿ ದೊಡ್ಡವನಾದ ಮೇಲೆ ಒಬ್ಬ ಭಯೋತ್ಪಾದಕನಾಗಬೇಕು ಎಂದುಕೊಂಡಿದ್ದೆ. ನಾನಾಗ ನೋಡುತ್ತಿದ್ದ ಕೆಲವು ಕನ್ನಡ,ಮಲಯಾಳಂ,ತಮಿಳು ಸಿನಿಮಾಗಳು ನನಗೆ ಸಾಥ್ ಕೊಡುತ್ತಿದ್ದವು. ಆದರೆ,ಈಗ ನನಗೆ ಹಾಗೇನೂ  ಅನ್ನಿಸುತ್ತಿರಲಿಲ್ಲ. ಪಾಪ,ಹಾಳಾಗಿ ಹೋಗಲಿ ಎಂದು ಸುಮ್ಮನಾದೆ.


ನನ್ನನ್ನು ಮಲಗಿಸಿದ್ದ ಬೆಡ್ಡಿನ ಪಕ್ಕದಲ್ಲಿಟ್ಟ ಸ್ವಲ್ಪ ತುಕ್ಕುಹಿಡಿದಿದ್ದ ಸ್ಟೂಲಿನ ಮೇಲೆ ಡಿಸ್ಚಾರ್ಜ್ ಆಗಿದ್ದ ರೋಗಿಯ ಕಡೆಯವರು ಕಣ್ಣಾಡಿಸಿ ಬಿಟ್ಟುಹೋದ ಪತ್ರಿಕೆಯಿತ್ತು. ಖುಷಿಯಿಂದ ನೋಡತೊಡಗಿದೆ. ನನ್ನ ಭಾವಚಿತ್ರವನ್ನೇ ನೋಡಿದಂತೆನಿಸಿತು. ಅಯ್ಯೋ.. ಹೌದು,ನನ್ನದೇ!. ಕೆಲವೇ ಗೆರೆಗಳಲ್ಲಿ ಕಲಾವಿದನೊಬ್ಬ ನನ್ನ ಭಾವಚಿತ್ರವನ್ನು ಅದ್ಭುತವಾಗಿ ಬಿಡಿಸಿದ್ದ. ಇದಕ್ಕೂ ಮುಂಚೆ ನಾನೂ ಎಷ್ಟೋ ಸಲ ನನ್ನನ್ನು ಬಿಡಿಸಲು ಪ್ರಯತ್ನಿಸಿದ್ದೆ. ಆದರೆ ಅದು ನನ್ನ ಮುಪ್ಪಿನ ಕಾಲದ ಭಾವಚಿತ್ರವಾಗಿರುತ್ತಿತ್ತು. ಅಥವಾ ಹಾಗೆಂದುಕೊಂಡು ನನ್ನೊಳಗಿನ ಆಗಷ್ಟೆ ಕಣ್ಣುಬಿಡುತ್ತಿದ್ದ ಕಲಾವಿದನನ್ನು ಸಮಾಧಾನಪಡಿಸುತ್ತಿದ್ದೆ.





ಆದರೆ, ಇಲ್ಲಿರುವ ನನ್ನ ಚಿತ್ರದ ಕೆಳಗೆ 'ಶಂಕಿತ ಆರೋಪಿ' ಎಂದಿತ್ತು!






ನನಗೆ ಹಸಿವು, ನೀರಡಿಕೆ ಜಾಸ್ತಿಯಾಗಿತ್ತು. ಏನಾದರೂ ಸಿಗಬಹುದಾ ಎಂದು ಆಸೆಯಿಂದ ನೋಡಿದೆ . ಪಕ್ಕದ ಆ ವಿಎಗೆ ಅವನ ಮನೆಯವರು ಫ್ಲಾಸ್ಕಿಂದ ಚಹಾ ಉಯ್ಯುತ್ತಿದ್ದರು. ಲೋಟದ ಮೇಲೆ ತೇಲುತ್ತಿದ್ದ ಇರುವೆ ಸಮೇತ ಕುಡಿದುಬಿಟ್ಟ.

'ಇರುವೆ ತಿಂದರೆ ಕಣ್ಣೀಗೆ ಒಳ್ಳೇದು' ಎಂದು ಕಾಫಿಯಲ್ಲಿ ಬಿದ್ದಿರುತ್ತಿದ್ದ ಇರುವೆಯನ್ನು ನೋಡಿ ಅಮ್ಮ ಯಾವುತ್ತೂ ಹೇಳುತ್ತಿದ್ದದ್ದು ನೆನಪಾಯಿತು.

ಊಹೂಂ.ನನಗೆ ಆಹಾರ ಸಿಗುವ ಯಾವ ಲಕ್ಷಣಗಳು ಅಲ್ಲಿ ಕಾಣಲಿಲ್ಲ.


ಮತ್ತೆ ಓದಿದೆ.. ಏನೂ ಅರ್ಥವಾಗಲಿಲ್ಲ. ಇನ್ನೊಮ್ಮೆ ಓದಿ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂದು ನಿರ್ಧರಿಸಿದಾಗಲೇ ಪೊಲೀಸರ ಹೆಜ್ಜೆಗಳು ಸಂಗೀತದಂತೆ ತೇಲಿಬಂದವು.

***

ಅಪ್ಪ,ಅಮ್ಮ ಚಿಂತೆಯಿಂದ ಸೊರಗಿಹೋಗಿದ್ದರು.



ಮೊನ್ನೆ ಅಪ್ಪ ಹೇಳುತ್ತಿದ್ದರು- ಜೈಲಿಗೆ ಒಯ್ಯುವಾಗ , ಅದರೊಳಗಿರುವಾಗಲೆಲ್ಲ ಪ್ರತೀ ದಿನ ನಾನು 'ಇನ್ಕ್ವಿಲಾಬ್ ಜಿಂದಾಬಾಬ್' ಎನ್ನುತ್ತಿದ್ದೆನಂತೆ.

ಆದರೆ ನನಗೀಗ ಅದ್ಯಾವುದೂ ಅಷ್ಟಾಗಿ ನೆನಪಿಗೆ ಬರುತ್ತಿಲ್ಲ.



ನರೆತು,ಹಳಸಿಹೋದ ಗಡ್ಡವನ್ನು ನೀವುತ್ತಾ, ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಟಿ.ವಿ. ವೀಕ್ಷಿಸುತ್ತಿದ್ದೆ.

ನನ್ನ ಕುರಿತು ಚರ್ಚೆ ನಡೆಯುತ್ತಿತ್ತು. ಚಾನಲ್ ಬದಲಾಯಿಸಿದೆ. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ವೈಭವೋಪೇತವಾಗಿ ಸಾಗಿತ್ತು.

**
-ಕಾಜೂರು ಸತೀಶ್ 



Sunday, June 22, 2014

ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ

ಜುಳುಜುಳು ಆಕಾಶದಲ್ಲಿ ಬಾವಲಿಗಳೆಂಬೊ ತಿಮಿಂಗಿಲಗಳು
ಟಪಟಪ ರೆಕ್ಕೆಬಡಿದು ವೈಯ್ಯಾರದಿಂದ ಈಜುತ್ತಿವೆ.




ಕಿತ್ತು ತಟ್ಟಾಟ ಆಡಿ ಬಿಸುಟಿದ ಚೆಂಡುಮಲ್ಲಿಗೆ ಹೂಗಳು
ಆಕಾಶದುದ್ದಕ್ಕೂ ಮುಳುಗಿ ಚುಕ್ಕಿಗಳಾಗಿ ಬೆಳಗಲು ಪ್ರತಿಷ್ಠಾಪನೆಗೊಂಡಿವೆ.




ಈ ಗುಲಾಬಿ ಹೂವು ಚೆಂಡುಮಲ್ಲಿಗೆಗಳಿಗೆಲ್ಲ ರಾಣಿಯೆಂಬಂತೆ
ಜಲರಾಶಿಯಲ್ಲುರಿದುರಿದು ಕೆಂಪು ಎಸಳುಗಳ ಭೂಮಿಗೆಸೆದು ಬೆಳಕು ಹಬ್ಬಿಸಿದೆ.




ವಿಮಾನಗಳು ಹಡಗುಗಳಾಗಿ ಹಕ್ಕಿಗಳ ಕಲ್ಲುಬಂಡೆಗಳಿಗೆ ಢಿಕ್ಕಿಯಾಗದಂತೆ
ಗಾಳಿಯ ನೀರನ್ನು ಸೀಳಿ ಸಿಳ್ಳೆಹಾಕಿ ಮುನ್ನುಗ್ಗುತ್ತಿವೆ.




ಕಪ್ಪು ಕಪ್ಪೆಗಳು ಮೋಡಗಳಾಗಿ ನೀರೊಳಗೆ ಕುಪ್ಪಳಿಸಿ ಹನಿಗಳ ಚಿಮುಕಿಸುತಿವೆ ನೆಲಕೆ;
ಅವು ಲೋಕದುದರವ ಹುಡುಕ್ಹುಡುಕಿ ಸಮಾಗಮಿಸುವಂತೆ ತಟತಟ ಉದುರುತ್ತಿವೆ.




ಅಡ್ಡಾಡಲೆಂಬಂತೆ ಮೇಲೆದ್ದ ಮಲೆಗಳು ಆಕಾಶದ ನೀರ ಸೀಳಲು -ದ್ವೀಪ;
ಮುಖ ತೊಳೆಯಲೆದ್ದ ಮರದ ತಲೆಮೇಲೆ ಉರಿವ ಹೂವಿನ ದೀಪ.




ಮೇಲೆ ನೀರು, ಕೆಳಗೆ ನೆಲ ;
ಮುಳುಗೇಳುತ್ತಾ ನಾವಿಲ್ಲಿ- ನಡುವಿನ ಉಬ್ಬು-ತಗ್ಗುಗಳಲ್ಲಿ.

**
-ಕಾಜೂರು ಸತೀಶ್

ಒಂದು ಪೆದ್ದು- ಪೆದ್ದಾದ ಪತ್ರ !

ಪ್ರೀತಿಯ ಸ್ಮಿತಾ ಮೇಡಂ,

ನಮಸ್ಕಾರ . ಕವಿತೆಗಳು ನಿಮ್ಮ ಜೊತೆಯಲ್ಲಿರುವಾಗ ನೀವು ಆರೋಗ್ಯದಿಂದ್ದೀರಿ ಎಂದುಕೊಳ್ಳುತ್ತೇನೆ!!

ಒಂದು ದಿನ ಮಯೂರದಲ್ಲಿ ಒಂದು ಚುಟುಕ ಓದಿದ್ದೆ.ಅಲ್ಲಿ ನನ್ನನ್ನು ಕಾಡಿದ್ದು ನಿಮ್ಮ ಹೆಸರಲ್ಲ- ಅದರ ಮುಂದಕ್ಕಿದ್ದ 'ಸಂಪಾಜೆ' ಎಂಬ ಹೆಸರು . ಅದೇ ಚುಟುಕು ಮಯೂರದಲ್ಲಿ ಮತ್ತೊಮ್ಮೆ ಪ್ರಕಟಗೊಂಡಾಗ ಅದು 'ಪಂಪಾಜೆ' ಎಂದು ಓದಿಸಿಕೊಂಡಿತ್ತು! ಆಮೇಲೆ , ಕೊಡಗಿನ ಇಂಥದ್ದೊಂದು ಊರಲ್ಲಿ ಇಂಥವರೊಬ್ಬರು ಬರೆಯುತ್ತಿದ್ದಾರೆ ಎಂದು ಗುರುತು ಮಾಡಿಕೊಂಡೆ.

ಮೂರ್ನಾಲ್ಕು ವರ್ಷಗಳ ಹಿಂದೆ 'ಕೊಡಗಿನ ಶತಮಾನದ ಕಾವ್ಯ ' ಎಂದು ಒಂದಷ್ಟು ಶ್ರಮವಹಿಸಿ ಹೊರತಂದ ಕೃತಿಯಲ್ಲಿ ನಿಮ್ಮ ಕವಿತೆ ಇರಬೇಕಿತ್ತು ಎಂದು ಅದರ ಸಂಪಾದಕಿ ಡಾ. ಕವಿತಾ ರೈಯವರಿಗೆ ಬರೆದ ಉದ್ದದ ಪತ್ರದಲ್ಲಿ ಸೂಚಿಸಿದ್ದೆ.

ಮತ್ತೊಂದು ದಿನ ನೀವು ಫೇಸ್ಬುಕ್ಕಿನಲ್ಲಿ ಕಾಣಿಸಿಕೊಂಡಾಗ , ಹೀಗೀಗೆ 'ಬೇರೆ ಬೇರೆ ' ಕಡೆಗಳಲ್ಲಿ ನಿಮ್ಮನ್ನು ಓದಿಕೊಂಡಿದ್ದೇನೆ ಎಂದು ಮೆಸೇಜು ಟೈಪಿಸಿದ್ದೆ.

ಆಮೇಲಾಮೇಲೆ, ಮಡಿಕೇರಿ ಆಕಾಶವಾಣಿಯ ರಾತ್ರಿ 8ರ ಯುವವಾಣಿಯಲ್ಲಿ ಮೊದಲ ಬಾರಿಗೆ ನಿಮ್ಮ ದನಿಯನ್ನು ಗುರುತಿಸಿದ್ದೆ. ಮತ್ತೆ , ಚೌತಿಗೋ/ದೀಪಾವಳಿಗೋ ಕಾವೇರಿ ಎಕ್ಸಪ್ರೆಸ್ಸಿನಲ್ಲಿ ಬಡಿಸಿದ ಖಾದ್ಯವನ್ನು ನನ್ನ ಮೊಬೈಲಿಗೆ ತುಂಬಿಟ್ಟಿದ್ದೆ.[ಕಳೆದ ಮಾರ್ಚ್ ನಲ್ಲಿ ಯಾವುದೋ ವೈರಸ್ಸೊಂದು ಅವುಗಳನ್ನು ಓದಿಕೊಳ್ಳಲು ಪಡೆದು ಹಿಂತಿರುಗಿಸಲೇ ಇಲ್ಲ !!]
*

ಕವಿತೆಯನ್ನು,ಬದುಕನ್ನು ಬೆಂಕಿಚೆಂಡಿನಂತೆ ಉಳ್ಳಾಡಿಸುತ್ತಿರುವ ನಾನು , ಕೆಸದ ಎಲೆ ಮೇಲಿನ ನೀರಿನ ಹಾಗೆ ಎತ್ತಿ ಅಂಗೈಯಲ್ಲಿಟ್ಟುಕೊಳ್ಳುವಾಗ ಎಲ್ಲಿ ಜಾರಿ ಹೋಗುತ್ತದೋ ಎನ್ನುವಂತಿರುವ ನಿಮ್ಮ ಕವಿತೆಗಳ ಕುರಿತು ನಾನೇನು ಹೇಳಲಿ ನೀವೇ ಹೇಳಿ ! ನನ್ನ ಮಾತುಗಳೀಗ ತುಟಿಯಂಚಲ್ಲೇ ಉ'ಳಿ'ಯುತ್ತಿವೆ ! ಹಹ್ಹಹ್ಹಾ..

ಅಂದ ಹಾಗೆ, ನೀವು ಓದುವ ಶೈಲಿಯಲ್ಲೇ ನಾನು ನಿಮ್ಮ ಕವಿತೆಗಳನ್ನು ಓದಿ ಮುಗಿಸಿದ್ದು! ಪುಸ್ತಕ ಕಳಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ ಆಯ್ತಾ..

*

ನನಗೆ ಖುಷಿಕೊಟ್ಟ ಸಾಲುಗಳು :

ನಿನ್ನೆಗಳೆಲ್ಲವನ್ನೂ ಮರೆತು/
ಲಾಲಿ ಹಾಡುತ್ತಿದೆ ಮರೆಗುಳಿ /
ಮರ.[ಎಲೆ-ಮರ]

ಅವರಿವರ ಕೈದಾಟುತ್ತಾ ಬಾಡುವ/
ಅನಾಥ ಕೂಸು ಮಾತು.[ಮೌನದ ಪದಗಳು ]

ಬಲವಂತದಲ್ಲಿ ಹುಟ್ಟುವುದಿಲ್ಲ ಕವಿತೆ[ಕವಿತೆಗೆ].

ಸುರುಳಿ ಸುತ್ತುವ ಅಲೆಗಳು /
ಕೆಲ ಕ್ಷಣವಾದರೂ ನನ್ನವೇ ಅಲ್ಲವೇ?[ಒಂದು ಬಿನ್ನಹ]

ಸುರಿವ ಬೆವರೊರೆಸಿಕೊಳ್ಳದೆಯೇ/
ಒಡಲೊಳಗೆ ಇಳಿದುಬಿಟ್ಟ..
[ತೊರೆಯ ಅಹವಾಲು]

ಬೆಳಕಿನುರಿಯಲ್ಲಿ ಕಿಸಕ್ಕನೆ/
ನಕ್ಕವರು ಎಲ್ಲಿ ?[ಪ್ರೀತಿ ದೀಪ ]

'ಮುಂಬಾಗಿಲ ಕವಿತೆ ' ನನಗೆ ಹೆಚ್ಚು ಇಷ್ಟವಾದ ಕವಿತೆ.

***

ಇನ್ನು ,ನನ್ನ ಹಾಗೆ ಹೆಚ್ಚು ಮಾತನಾಡುವ ಕವಿತೆಗಳೂ ಇವೆ!!

ಈ ವರ್ಷದಲ್ಲಿ ಮತ್ತೊಂದು ಸಂಕಲನ ಹೊರತನ್ನಿ. ಹೀಗೆ ಏನೇನೋ ತೀರಾ ಪೆದ್ದುಪೆದ್ದಾಗಿ ಗೀಚುವ ನನ್ನನ್ನು ಪ್ರೋತ್ಸಾಹಿಸುತ್ತಿರಿ!!

ಹೆಚ್ಚು ಬರೆಯಲು ಗೊತ್ತಿಲ್ಲ . ವಿರಮಿಸುತ್ತೇನೆ.

ವಂದನೆಗಳು ಮೇಡಂ..

-ಕಾಜೂರು ಸತೀಶ್



ಛಾಯೆ

ಮೊದಲ ಸಲ ಮನೆಗೆ ಬಂದ ಗೆಳೆಯ
ಗೋಡೆಗೆ ನೇತುಹಾಕಿದ
ನನ್ನ ಹಳೆಯ ಭಾವಚಿತ್ರ ನೋಡಿ ಕೇಳಿದ :
'ನಿನ್ನ ತಮ್ಮನಲ್ವಾ?'



"ಹೌದು"



"ಅಲ್ಪ-ಸ್ವಲ್ಪ ನಿನ್ನದೇ ಮುಖ,
ಅಡ್ಡಾದಿಡ್ಡಿ ಸರಿದ ನಿನ್ನಂಥದ್ದೇ ಕೂದಲು,
ನಿನಗಿಂತಲೂ ಸವಿನೆನಪುಗಳ ಹೊತ್ತ ಮುಖಭಾವ,
ನಿನ್ನಷ್ಟು ಗುಳಿಬೀಳದ ಕಣ್ಣುಗಳು ,
ನಿನಗಿಂತಲೂ ಚೆಲುವ..."



ಅವನ ಆತ್ಮವಿಶ್ವಾಸ ಹೆಚ್ಚುತ್ತಿದ್ದಂತೆ
ಮಾತಿಗೆ ವೇಗ ಹೆಚ್ಚಿತು
ಹೋಲಿಕೆಯ ಕುರಿತ ತರ್ಕಕ್ಕೆ ದೃಢತೆ ಹೆಚ್ಚಿತು
ಆ ಏಕಾಂತದಲ್ಲೂ
ಅವನಿಗೆ ಸುಮ್ಮನಿರಲಾಗಲಿಲ್ಲ.



ಮತ್ತೆ ಭಾವಚಿತ್ರವನ್ನು ದಿಟ್ಟಿಸಿ
ದನಿ ಕುಗ್ಗಿಸಿ ಕೇಳಿದ:
"ಇವನು ಬದುಕಿಲ್ವಾ?"



"ಇಲ್ಲ
ಬಹುತೇಕ ಇಲ್ಲ "

**
ಮಲಯಾಳಂ ಮೂಲ- ಕಲ್ಪೆಟ್ಟ ನಾರಾಯಣನ್

ಕನ್ನಡಕ್ಕೆ - ಕಾಜೂರು ಸತೀಶ್