ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, December 20, 2024

ಕೊಂದವರು

'ಮಹಾತ್ಮನನ್ನು ಕೊಂದಿದ್ದು ಯಾರು?' ಮೇಷ್ಟ್ರು ಕೇಳಿದರು. ಮಕ್ಕಳು ಹೇಳದಿದ್ದಾಗ 'ಮುತ್ತಪ್ಪ ಕಣ್ರೋ' ಎಂದರು. ಮುತ್ತಪ್ಪ ಹುಟ್ಟಿದ್ದು, ಬೆಳೆದದ್ದು, ಓದಿದ್ದು.. ಹೀಗೆ ಅವನ ಜೀವನ ಚರಿತ್ರೆಯನ್ನೇ ತೆರೆದಿಟ್ಟರು.

ಪರೀಕ್ಷೆಯಲ್ಲೂ ಮಹಾತ್ಮನನ್ನು ಕೊಂದವರ ಹೆಸರನ್ನು ಕೇಳಿದರು. ಮಕ್ಕಳು ಸರಿಯುತ್ತರ ಬರೆದು ಉತ್ತೀರ್ಣರಾದರು.

ಕಡೆಯ ಬೆಂಚಿನಲ್ಲಿ ಕುಳಿತಿದ್ದ ತಿಮ್ಮ ಯೋಚಿಸಿದ. ಮುತ್ತಪ್ಪನ ಬಗ್ಗೆ ತಿಳಿಯಿತು. ಮಹಾತ್ಮನ ಬಗ್ಗೆ ಯಾರನ್ನು ಕೇಳಿ ತಿಳಿದುಕೊಳ್ಳಲಿ?
*


ಕಾಜೂರು ಸತೀಶ್

Tuesday, December 17, 2024

ಮೌನ

ಯುವಕ ಯುವತಿಯರು ಹುಚ್ಚೆದ್ದು ಕುಣಿಯುತ್ತಿದ್ದರು. ಡಿಜೆ ಸದ್ದಿಗೆ ಯುವಕನೊಬ್ಬ ಎದೆಯೊಡೆದು ಸತ್ತ.

ಮೃತನಿಗೆ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ಆ ಒಂದು ನಿಮಿಷದ ಮೌನವನ್ನು ಅನುಭವಿಸಲಾಗದೆ ಹಲವು ಯುವಕ ಯುವತಿಯರು ಕುಸಿದುಬಿದ್ದರು.

ಡಿಜೆಯ ಸದ್ದಿಗೆ ಮತ್ತೆ ಎಚ್ಚರವಾದರು.
*
ಕಾಜೂರು ಸತೀಶ್

Friday, December 13, 2024

ಚಿಟ್ಟೆ


ಉದುರುವ ಹೂವುಗಳು
ಚಿಟ್ಟೆಗಳಾಗಿ
ಭೂಮಿಗೆ ಮರಳುತ್ತವೆಂದು
ಮಗುವಿಗೆ ಅಮ್ಮ ಹೇಳಿದ್ದರು

ಮಗು
ಮುಂದೊಂದು ದಿನ
ಓದಿ ಮೇಷ್ಟ್ರಾಯಿತು.

ಅಮ್ಮ ಹೇಳಿಕೊಟ್ಟ
ಅದೇ ಕಥೆಯನ್ನು
ಮೇಷ್ಟ್ರು ಮಕ್ಕಳಿಗೆ ಹೇಳಿದರು 
ಮಕ್ಕಳು ನಕ್ಕರು 
'ಎಂಥಾ ಪೆದ್ದ ಮೇಷ್ಟ್ರು!'

ಆದರೆ, 
ಅಷ್ಟು ಮಕ್ಕಳ ಪೈಕಿ 
ಒಬ್ಬಳು ಮಾತ್ರ ಅತ್ತಳು 
ಮೇಷ್ಟ್ರ ಹಾಗೆ 
ಅವಳಿಗೂ ಅಮ್ಮನಿರಲಿಲ್ಲ.
*
ಮಲಯಾಳಂ ಮೂಲ - ಹರೀಶ್ ಶಕ್ತಿಧರನ್ 


ಕನ್ನಡಕ್ಕೆ- ಕಾಜೂರು ಸತೀಶ್ 

Monday, December 9, 2024

ಹೂವು

ಕಂದಾಯ ಕಚೇರಿಗೆ ಹೋಗಿ ಬಂದ ತಿಮ್ಮ ತನ್ನದೇ ಭಾವಚಿತ್ರಕ್ಕೆ ಮಾಲೆಮಾಡಲು ಹೂ ಕೊಯ್ಯುತ್ತಿದ್ದ. ಹೂವಿಗೆ ಹೇಳಿದ.

"ಹೂವೇ, ದಯವಿಟ್ಟು ಕ್ಷಮಿಸು. ಜಗತ್ತು ಹಿಂಸೆಯನ್ನೇ ಬಿತ್ತುತ್ತದೆ. ನಾನೂ ಈಗ ಅದನ್ನೇ ಮಾಡುತ್ತಿರುವೆ!''
*
ಕಾಜೂರು ಸತೀಶ್