ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, November 14, 2023

ಸ್ಪರ್ಧೆ



ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಾ ಪತ್ರಿಕೆಗಳಲ್ಲಿ ಸದಾ ಸದ್ದುಮಾಡುವ ಕಥೆಗಾರರು ಈ ಬಾರಿಯ ಕಥಾಸ್ಪರ್ಧೆಗೆ ಕಥೆ ಕಳುಹಿಸುವುದಿಲ್ಲವೆಂಬುದನ್ನು ಖಾತ್ರಿಪಡಿಸಿಕೊಂಡ 'ತಿಮ್ಮ' ಅವರ ಹೆಸರಿನಲ್ಲಿ ತನ್ನ ಕಥೆಯೊಂದನ್ನು ಕಳುಹಿಸಿದ.

ತಿಮ್ಮನ ನಿರೀಕ್ಷೆಯಂತೆ ಆ ಕಥೆಗೆ ಮೊದಲ ಬಹುಮಾನ ಬಂತು!

ತಮ್ಮ ಹೆಸರನ್ನು ನೋಡಿದ ಆ ಕಥೆಗಾರರು ಹೌಹಾರಿ ' ಇದು ಅಕ್ಷಮ್ಯ. ಹೀಗೆ ನನ್ನ ಹೆಸರನ್ನು ಬಳಸಿದವರ ಕಥೆಯನ್ನು ಇನ್ನುಮುಂದೆ ಯಾವುದೇ ಪತ್ರಿಕೆಯಲ್ಲಿ ಪ್ರಕಟಿಸಬಾರದು' ಎಂದು ಜಾಲತಾಣಗಳಲ್ಲಿ ಬರೆದುಕೊಂಡರು.

ಆ ಕಥೆಯನ್ನು ತಿಮ್ಮನೇ ಬರೆದದ್ದೆಂದು ತಿಮ್ಮನ ಹೊರತಾಗಿ ಮತ್ತ್ಯಾರಿಗೂ ತಿಳಿದಿರಲಿಲ್ಲ, ತಿಳಿಯಲೂ ಇಲ್ಲ. ತಿಮ್ಮ ಬರೆದ ಆ ಕಥೆಯ ವಸ್ತುವೂ ಅದೇ ಆಗಿತ್ತು: ಹೆಸರಾಂತ ಕಥೆಗಾರನ ಹೆಸರಿನಲ್ಲಿ ಯುವ ಕಥೆಗಾರನೊಬ್ಬ ಕಥೆ ಬರೆದು ಅದಕ್ಕೆ ಬಹುಮಾನ ಘೋಷಣೆಯಾದ ಮೇಲೆ ನಡೆಯುವ 'ಪ್ರಸಂಗ'ಗಳು!
*
ಕಾಜೂರು ಸತೀಶ್

ನೋಟ

'ಜಗತ್ತಿನ ಅದ್ಭುತ ತಾಣ' ಎಂದು ಗುರುತಿಸಲ್ಪಟ್ಟ ಸ್ಥಳ ಅದಾಗಿತ್ತು. ಯಾರೇ ಹೋಗಲಿ , ಒಂದು ಕ್ಷಣ ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಾರೆ, ಅಷ್ಟು ಚೆಲುವು ಆ ತಾಣಕ್ಕೆ.
ಆ ಬೆಟ್ಟ, ಹರಿವ ನದಿ, ಮೋಡಗಳ ಸಾಲು, ಸೂರ್ಯಾಸ್ತ...ಉಫ್!

ಮನುಷ್ಯರು ಇರದಿದ್ದ ಆ ಸಂಜೆ ಸಿಂಹವೊಂದು ಬಂದು ಅಲ್ಲಿ ಕುಳಿತಿತು. ಅದರ ತೀಕ್ಷ್ಣ ನೋಟವು ಅಷ್ಟ ದಿಕ್ಕುಗಳಲ್ಲೂ ಹರಡಿ ಆಹಾರವನ್ನು ಅರಸುತ್ತಿದ್ದವು!
*
ಕಾಜೂರು ಸತೀಶ್