ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, June 24, 2023

ಉದ್ಯೋಗ

ತೋಟದಲ್ಲಿ ಕೂಲಿ ಮಾಡಿ ಪದವಿಯವರೆಗೆ ಓದಿದ. ನಿತ್ಯ ಓದುತ್ತಿದ್ದ. ಸರ್ಕಾರಿ ಕೆಲಸಕ್ಕೆ ಆಯ್ಕೆಯಾದ. ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ .

ಪರಿಶೀಲನೆಯ ವೇಳೆಯಲ್ಲಿ ಅವನ ದಾಖಲಾತಿ ಪುಸ್ತಕದಲ್ಲಿ ತಾಯಿಯ ಹೆಸರು 'ಚೆನ್ನಮ್ಮ' ಎಂದಿದ್ದು ಉಳಿದ ದಾಖಲೆಗಳಲ್ಲೆಲ್ಲ 'ಚೆನ್ನಿ' ಎಂದಾಗಿತ್ತು. ಜಾತಿ ಕಾಲಮ್ಮಿನಲ್ಲಿ 'ಮಾತೃಭಾಷೆ' ಬಂದು ಸೇರಿಕೊಂಡಿತ್ತು.

ಹೀಗಾಗಿ ಅವನ ಸರ್ಕಾರಿ ಕೆಲಸದ ಕನಸು ಕಮರಿತು.
*
ಯಜಮಾನರ ತೋಟದಲ್ಲಿ ಮರಕಪಾತು ಮಾಡುವಾಗ, ಎರತೆ- ಅಗತೆ ಮಾಡುವಾಗ ಒಮ್ಮೊಮ್ಮೆ ಯೋಚಿಸುತ್ತಿದ್ದ- "ಒಂದೊಮ್ಮೆ ನನಗೆ ಸರ್ಕಾರಿ ಕೆಲಸ ಸಿಕ್ಕಿದ್ದಿದ್ದರೆ ಕೆಲಸ ಮಾಡಬೇಕಾಗಿದ್ದವರು ನನ್ನ ಜಾತಿಯೋ ಅಥವಾ ನನ್ನಮ್ಮನ ಹೆಸರೋ?"

ಅಂದಿನಿಂದ ಎಲ್ಲಾ ದಾಖಲೆಗಳಿಂದಲೂ ತನ್ನ ಹೆಸರು ತೆಗೆಸಿದ.

ಬಿಡುವಾದಾಗಲೆಲ್ಲ 'ದೇಶಭಕ್ತಿ ಎಂದರೇನು?' 'ಮರಣದಂಡನೆ ಹೇಗಿರುತ್ತದೆ' ಎಂದು ಓದುತ್ತಿದ್ದ.
*
ಕಾಜೂರು ಸತೀಶ್