ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, November 4, 2018

ಗಾಯದ ಹೂವುಗಳು ಕುರಿತು ಡಾ. ಮಹಾಂತೇಶ ಪಾಟೀಲ

ಕೊಡಗಿನ ಕುಶಲ ಕವಿ- ಕಾಜೂರು ಸತೀಶ್. ಇದು ಅವರ ಮೊದಲ ಸಂಕಲನವಾದರೂ, ಹೂವು ಅರಳುವ ಸಹಜಗಾರಿಕೆ, ಇಲ್ಲಿನ ಕವಿತೆಗಳಲ್ಲಿದೆ. ವ್ಯವಸ್ಥೆಯ ಬಗೆಗೆ ವಿಷಾದವನ್ನೂ ವ್ಯಕ್ತಪಡಿಸುವಲ್ಲಿಯೂ ಬದುಕಿನ ಕುರಿತು ಒಲವಿದೆ. ಈ ಗಾಯದ ಹೂಗಳಿಗೆ ಕವಿತ್ವದ ಗಂಧ ಮೆತ್ತಿಕೊಂಡಿದೆ.

ಕೊಡಗಿನ ಕಾವೇರಿ ನದಿ, ಈ ಸಂಕಲನದಲ್ಲಿ ನೇರವಾಗಿ ಕಾಣಿಸಿಕೊಳ್ಳದಿದ್ದರೂ, ಆ ನದಿಯ ಲವಣಗಳನ್ನುಂಡು ಗಾಯದ ಹೂಗಳ ಪರಿಮಳ ಓದುಗನ ಮನಸ್ಸನ್ನು ಆವರಿಸುತ್ತದೆ.

*ಚಪ್ಪಲಿಗಳು, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ಬೇಲಿ, ನಿನ್ನ ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಗಾಯದ ಹೂವುಗಳು, ಯಾರದಿದು?, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ- ಕವಿತೆಗಳು 'ಇಜಮ್' ಗಳ ಅಹಮ್ಮಿಕೆಯನ್ನು ಮೀರಿ, ಬದುಕನ್ನು ಎದುರುಗೊಳ್ಳುತ್ತವೆ.

'ಓದುವ ದೇವದಾಸರಿಗೆ, ರಿಂಗಣಿಸುವ ಕವಿತೆಯೊಂದು ಹೊಸ ಗೆಳತಿಯಂತೆ ತೋರಿದ್ದು' - ಕಾಜೂರ ಸತೀಶ್ ರ ' ಗಾಯದ ಹೂವುಗಳು' ಕವನ ಸಂಕಲನ. ನನ್ನ ಗಾಯಗಳನ್ನು ಮುಟ್ಟಿ ನೆನಪಿಸಿಕೊಳ್ಳಲು ಇಲ್ಲಿನ ಕವಿತೆಗಳು ಕಾರಣವಾದುದರಿಂದ, ಈ ಹೂಗಳಿಗೆ, ಈ ಕವಿಗೆ ಆಭಾರಿಯಾಗಿರುವೆ.
*

ಡಾ. ಮಹಾಂತೇಶ ಪಾಟೀಲ