ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, October 18, 2017

ಎಂ ಆರ್ ಕಮಲ ಅವರ ಮಾರಿಬಿಡಿ ಕವನ ಸಂಕಲನದ ಕುರಿತು

ಮಾರಿಬಿಡಿ ಇದು ಎಂ. ಆರ್. ಕಮಲ ಅವರ ನಾಲ್ಕನೆಯ ಕವನ ಸಂಕಲನ. ಉಪಶೀರ್ಷಿಕೆಯೇ ಹೇಳುವಂತೆ ಈ ಕಾಲದ ತಲ್ಲಣಗಳಿವು.


ಸಂಕಲನವು ಮನುಷ್ಯ ಸಂಬಂಧಗಳು ಈ ಅಂತರ್ಜಾಲ ಯುಗದಲ್ಲಿ ಜಾರಿಕೊಳ್ಳುತ್ತಿರುವ ಬಗೆಗೆ ಹತಾಶೆಯನ್ನು ವ್ಯಕ್ತಪಡಿಸುತ್ತಲೇ ಮರುಸ್ಥಾಪಿಸುವ ಹಂಬಲವನ್ನೂ ಇಟ್ಟುಕೊಂಡಿದೆ.

ಬೀದಿಯಲ್ಲಿ ಯಾರೋ ಅಮ್ಮ ಎಂದರೆ
ದಿಢೀರನೆ ಏಳುತ್ತಾಳೆ ತನ್ನನ್ನೇ ಕರೆದಂತೆ!

(ಅವಳಿಗೀಗ ಐವತ್ತು )

ಢಿಕ್ಕಿ ಹೊಡೆದರೂ, ಎಡವಿ ಬಿದ್ದರೂ ಕತ್ತೆತ್ತದ,
ಕೀಲಿಮಣೆಯಲ್ಲೇ ಕೀಲಿಸಿದ ಕೀಲುಗೊಂಬೆಗಳು

(ಮೌನೇಶನೊಂದಿಗೆ ವಾಕಿಂಗ್)

*

ಎಮೋಟಿಕಾನ್ಗಳಲ್ಲಿ ಹೊಮ್ಮುವ ಬದುಕಿದು . ಇಲ್ಲಿ ಎದೆಯ ಭಾಷೆ ಸತ್ತರೂ ದಿಗಿಲಾಗಬೇಕಿಲ್ಲ . ಏಕೆಂದರೆ ಈಗಾಗಲೇ ಸಂಭ್ರಮದ ಬದುಕಿನ ಗೆಜ್ಜೆ ಕಟ್ಟಿ ಅಟ್ಟಕ್ಕಿಟ್ಟಾಗಿದೆ. ಹೀಗಾಗಿ ಮನುಷ್ಯನ ಮುಗ್ಧತೆಯನ್ನು ಇಲ್ಲಿ ಮಾರಲಾಗುತ್ತದೆ. 'ಮಾರಿಬಿಡಿ' ಎಂದು ಕವಿ ಹೇಳುತ್ತಿಲ್ಲ; ಯಾರೋ ಟಿವಿಯಲ್ಲಿ ಅರಚುತ್ತಿದ್ದಾರೆ. ಇಂತಹ ವಿಷಾದಗಳ ನಡುವೆ ಬೆಳೆದು ನಿಲ್ಲುವ ಎಂ.ಆರ್.ಕಮಲ ಅವರ ಆಶಯ ನ್ಯಾಯೋಚಿತ ಮಾರ್ಗವನ್ನು ಹಂಬಲಿಸುತ್ತದೆ.

ಮೊಗದಲ್ಲಿನ ನಗು ಮಾಸದಂತೆ ಕಾದಿರಿಸುವ
ಮುಖಪುಸ್ತಕದ ಮುಖಚಿತ್ರವಾಗಬೇಕು

(ಮುಖಪುಸ್ತಕವೆಂಬ ಮಾರುಕಟ್ಟೆ)

ಇಷ್ಟಾದರೂ ಕಾಲಕ್ಕೆ ಒಗ್ಗಿಕೊಳ್ಳಲೇಬೇಕು. ಅದಕ್ಕಾಗಿ ಕೊನೆಗೆ ಕೀಲಿಮಣೆಯಲ್ಲಿ ಮುಂಜಾನೆಯ ಸಂದೇಶ ಒತ್ತಿ ಕಳಿಸಿ ಕೃತಕೃತ್ಯರಾಗುತ್ತಾರೆ

*

ಬಾಲ್ಯದ ಮುಗ್ಧ ಶಬ್ದ ಚಿತ್ರಗಳಿವೆ ಇಲ್ಲಿನ ಅನೇಕ ಕವಿತೆಗಳಲ್ಲಿ . ಸ್ತ್ರೀಪರ ದನಿಯು ಸ್ತ್ರೀವಾದದ ಆಚೆಗೆ ಚಾಚಿಕೊಂಡಿದೆ.

ಉರಿದುರಿದು ಈಗ ಕರಕಲಾದವಳು
ಇರುಳಿಗೇ ಕರಿಬಣ್ಣ ಮೆತ್ತಿದ್ದೇನೆ

(ನಿನ್ನ ರಾತ್ರಿಗಳಲ್ಲಿ)

ಅಪ್ಪ ಮನ್ನಿಸಿ ನಾನೀಗ ಜಾಲಾರಿಯ ದಾರಿಯಲ್ಲಿ
(ಜಾಲಾರಿ ಹೂ ಪರಿಮಳವರಸಿ)

'ನೋವು' ಯಾರೋ ಕೂಗಿದರು
ಹೆಣ್ಣುಮಕ್ಕಳೆಲ್ಲ ದಬದಬನೆ
ಹೊರಗೋಡಿ ಸಿಕ್ಕಸಿಕ್ಕವರ
ಕಣ್ಣಲ್ಲೆಲ್ಲ ಮುಖ ನೋಡಿಕೊಂಡರು

(ನೋವು).

*

ರಾಚನಿಕವಾಗಿ ಕವಿತೆಗಳಲ್ಲಿ ವೈವಿಧ್ಯತೆಯಿದೆ. ಎಲ್ಲ ಕವಿತೆಗಳಿಗೂ ಧ್ಯಾನಸ್ಥ ಭಂಗಿ. ಸರಳ, ಸಹಜ ಅಭಿವ್ಯಕ್ತಿಕ್ರಮದ ಜೊತೆಗೆ ಪ್ರಯೋಗಶೀಲ ಆಕೃತಿಗಳಿವೆ. ಸಮಕಾಲೀನ ಕವಯಿತ್ರಿ ಸವಿತಾ ನಾಗಭೂಷಣ ಅವರ ಕವಿತೆಗಳನ್ನು ಜೊತೆಗಿಟ್ಟುಕೊಂಡು ವಿವಿಧ ಆಯಾಮಗಳಲ್ಲಿ ಓದುವ ತುರ್ತನ್ನೂ ಕಾವ್ಯಾಭ್ಯಾಸಿಗಳಲ್ಲಿ ಇವು ಬೇಡುತ್ತವೆ.
*

ಕಾಜೂರು ಸತೀಶ್