ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, September 1, 2017

ಉತ್ತಮ ಶಿಕ್ಷಕ ಪ್ರಶಸ್ತಿಗಳೂ , ಆದರ್ಶ ಶಿಕ್ಷಕರೂ..

೧. "ಮೊದಲು ಇಲ್ಲಿಂದ ತೊಲಗಿ, ನಿಮ್ಮಂಥವರು ನಮಗೆ ಬೇಕಾಗಿಲ್ಲ!"
ಸಭೆಯಲ್ಲಿ ಪೋಷಕರು ಹೀಗೆ ಛೀಮಾರಿ ಹಾಕಿದ್ದು ಒಬ್ಬ ಮೇಷ್ಟ್ರಿಗೆ! ಆ ಮೇಷ್ಟ್ರು ಮೂರು ವರ್ಷ ಆ ಶಾಲೆಯಲ್ಲಿದ್ದರು. ಅಬ್ಬಬ್ಬಽ ಎಂದರೆ ನೂರು ದಿನ ಶಾಲೆಗೆ ಬಂದಿರಬಹುದು. ಒಂದೇ ಒಂದು ದಿನವೂ ತರಗತಿಗೆ ಹೋಗಿ ಅವರಿಗೆ ಕೊಟ್ಟಿದ್ದ ವಿಷಯವನ್ನು ಬೋಧಿಸಲಿಲ್ಲ!

ಅವರಿಗೆ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿತು!!

೨. ಅವರು ಮೇಷ್ಟ್ರು ಎಂದು ಬಹುತೇಕ ಮಂದಿಗೆ ತಿಳಿದೇ ಇರಲಿಲ್ಲ; ದೊಡ್ಡ ಅಧಿಕಾರಿ ಎಂದುಕೊಂಡಿದ್ದರು! ಕೆಲಸಕ್ಕೆ ಸೇರಿ ಸುಮಾರು ವರ್ಷಗಳಾಗಿದ್ದರಿಂದ ಕಚೇರಿಯಲ್ಲಿ 'ಶಿಕ್ಷಣ ಸಂಯೋಜಕ'ನಾಗಿ ದರ್ಪದಿಂದ ಕಾರ್ಯನಿರ್ವಹಿಸುತ್ತಿದ್ದರು.ಅಧಿಕಾರಿಗಳನ್ನು ನಯವಿನಯಗಳ ಸೋಗಿನಿಂದ ತನ್ನೆಡೆಗೆ ಸೆಳೆದುಕೊಂಡಿದ್ದರು. ಯಾವ ಶಾಲೆಗೆ ತೆರಳಿದರೂ "ನಿಮಗೆ ನಾವು ಸುಮ್ಮನೆ ಸಂಬಳ ಕೊಡುತ್ತಿಲ್ಲ" ಎಂದು ಅಧಿಕಾರ ಚಲಾಯಿಸುತ್ತಿದ್ದರು. ಹೊಸದಾಗಿ ನೇಮಕವಾದ ಶಿಕ್ಷಕರುಗಳೇ ಆತನ ಟಾರ್ಗೆಟ್ ! ಅವರ ಸಂಬಳ ತಡೆಹಿಡಿಯುವಂತೆ ಮಾಡುವುದು, ಚಾಡಿ ಹೇಳುವುದು...ಹೀಗೆ ಮಾಡುತ್ತಾ ವಿಕೃತ ಸುಖ ಅನುಭವಿಸುತ್ತಿದ್ದರು!

ಹೀಗೆ ಹೊಟ್ಟೆಬೆಳೆಸಿಕೊಂಡು ಕಾಲ ಕಳೆದ ಅವರಿಗೆ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿತು!!

ಇವರಿಬ್ಬರೂ ಇತಿಹಾಸದಲ್ಲಿ 'ಆದರ್ಶ ಶಿಕ್ಷಕರು' ಎಂದು ಅಚ್ಚಾದರು.
*

೧. ನಾನು ಒಂದನೇ ತರಗತಿಯಲ್ಲಿದ್ದಾಗ ನನ್ನ ತುಂಟತನವನ್ನು ಸಹಿಸದ ಹೇಮಾವತಿ ಟೀಚರ್ ತಕ್ಕ ಶಾಸ್ತಿಯನ್ನೇ ಮಾಡಿದ್ದರು. ನನ್ನ ಅಳು ಗಂಟಗಟ್ಟಲೆ ಮುಂದುವರಿದಾಗ ಕಂಗಾಲಾದರು ಟೀಚರ್. ಮಧ್ಯಾಹ್ನದ ಊಟವನ್ನೂ ಬಿಟ್ಟು ಅಳು ಮುಂದುವರಿಸಿದಾಗ ನನ್ನನ್ನು ಎತ್ತಿಕೊಂಡು ತುತ್ತು ಕೊಟ್ಟಿದ್ದರು! ಒಂದನೇ ತರಗತಿಯಲ್ಲಿದ್ದಾಗಲೇ ನನ್ನಂಥವರಿಗೆ ಕನ್ನಡವನ್ನು ಓದಲು, ಬರೆಯಲು ಕಲಿಸಿದ ಆ ಟೀಚರ್ ಒಮ್ಮೆಯೂ ಇಂತಹ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲಿಲ್ಲ; ರಾಜಕೀಯ ಮಾಡಲಿಲ್ಲ!


೨. ಪ್ರೌಢ ಶಾಲೆಯಲ್ಲಿದ್ದಾಗ ಗಣಿತ ಮೇಷ್ಟ್ರಾಗಿದ್ದವರು ಗುರುಸ್ವಾಮಿ ಸರ್ . ಅವರ ಬ್ಯಾಗಿನಲ್ಲಿ ಒಂದು ಟಾರ್ಚ್ ಇರುತ್ತಿತ್ತು! ಬೆಳಕು ಮೂಡುವ ಹೊತ್ತಲ್ಲಿ ಮನೆಬಿಟ್ಟರೆ, ಮನೆ ತಲುಪಿದ್ದದ್ದು ಕತ್ತಲು ಕವಿದ ಮೇಲೆಯೇ ! ಅವರ ಅಸಾಧಾರಣ ಕರ್ತವ್ಯ ಪ್ರಜ್ಞೆ , ಉದಾತ್ತ ಗುಣಗಳು ನನ್ನಂಥವರ ಹೃದಯಗಳನ್ನು ಎಂದೆಂದೂ ಆಳುತ್ತಿರುತ್ತದೆ. ಅವರು ಒಮ್ಮೆಯೂ ಪ್ರಶಸ್ತಿಗಳ ಬೆನ್ನುಬೀಳಲಿಲ್ಲ.

*

ಎಂಥವರನ್ನು ಬೆಳೆಸುತ್ತಿದ್ದೇವೆ ನಾವು! ಎಂಥವರನ್ನು ಮತ್ತಷ್ಟೂ ಕೊಬ್ಬುವಂತೆ ಮಾಡುತ್ತಿದ್ದೇವೆ!

ಎಂಥವರನ್ನು ಈ ಕಾಲ ಸ್ಮರಿಸಿಕೊಂಡು ಅವರನ್ನು ಇತಿಹಾಸದಲ್ಲಿ 'ಉದಾತ್ತ ಪುರುಷ' ಎಂದು ಪೋಷಿಸುತ್ತಿದೆ!