ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 26, 2017

ಕಾಜೂರು ಸತೀಶರ ಕಾವ್ಯ: ಮಣ್ಣಿನಪ್ಸರೆಯರ ಸಖ್ಯವೂ, ಕೆಂಡದಲ್ಲಿ ಸುಟ್ಟ ಮೀನೂ

ಸುಬ್ಬು ಒಂದು ವಚನದ ಹಾಡು ಕೇಳ್ಸಿದ್ದು ನೆನಪಾಯ್ತು. ಅದು 'ಅಪ್ಪನು ನಮ್ಮ ಮಾದಾರ ಚನ್ನಯ್ಯ' ಅನ್ನೋ ಹಾಡು ಎಂ. ವೆಂಕಟೇಶಕುಮಾರರು ಆರೋಹಣದಲ್ಲಿ ಆ ಹಾಡನ್ನಾ ತಗೊಳ್ತಾ ಹೋಗ್ತಾರೆ ಎಷ್ಟು ಆರೋಹಣ ಅಂದ್ರೆ ಪಂಚಭೂತಗಳಲ್ಲಿ ಲೀನ ಆಗೋದು ಅಂತಾ ನಾವು ಕೇಳ್ತೀವಲ್ಲ ಹಂಗೆ. ಅಂದ್ರೆ ಅಲ್ಲಿ ಅದು ಮೆಲ್ಟ್ ಆಯ್ತು ಅನ್ನೋಹಾಗೆ. ಹೀಗೆ ಎಲ್ಲ ನಿರೂಪಗಳೊಂದಿಗೆ ಮೆಲ್ಟ್ ಆದ ಆ ಸ್ವರದ ಎಳೆ ಒಂದನ್ನು ಹಿಡಿದು ವಿವರಿಸುವುದು ಶಬ್ದಗಳ ವೆಚ್ಚವಷ್ಟೆ. ಇಲ್ಲಿ ನೋಡಿ ಜಿಡ್ಡು ಕೃಷ್ಣಮೂರ್ತಿಯವರು ಮಾತು."ಶಬ್ದ ರೂಪ ಕೊಡದೇ ಆಲೋಚಿಸುವುದು ಸಾಧ್ಯವೆ? ಸಂಕೇತಗಳಿಲ್ಲದ ಚಿಂತನೆ ಇದೆಯೆ? ಆಲೋಚನೆಗೆ ಶಬ್ದಗಳು ಅವಶ್ಯಕವೆ? ಸಂಕೇತಗಳು, ಉಲ್ಲೇಖಗಳು ಇಲ್ಲದಿದ್ದಲ್ಲಿ ನಾವು ಹೇಳುವ ಚಿಂತನೆ ಇರುವುದೆ? ಎಲ್ಲ ಚಿಂತನೆಗಳು ಶಾಬ್ದಿಕವೆ? ಅಥವಾ ಶಬ್ದರಹಿತ ಚಿಂತನೆ ಇದೆಯೆ?" ಅಂತಾ. ನಾವು ಓದುವ ಸಾಹಿತ್ಯದ ಎಲ್ಲ ಪ್ರಕಾರವು ಈ ಮೇಲಿನವುಗಳಿಲ್ಲದೆ ಸಾಧ್ಯವೇ ಇಲ್ಲ. ಹಾಗಾದ್ರೆ ಸಾಹಿತ್ಯದಲ್ಲಿ ಶಬ್ದರಹಿತ ಚಿಂತನೆ ಇಲ್ಲಾ ಅಂತ್ಲೂ ಅಲ್ಲ. ಓದಿದ ಮೇಲೆ ಕೃತಿಯು ಹೇಳದೆ ಉಳಿಸುವುದಿದೆಯಲ್ಲ ಅದೆಲ್ಲವೂ ಶಬ್ದರಹಿತ. ಶಬ್ದಗಳಲ್ಲಿ ಹಿಡಿದಿಟ್ಟಂತೆಲ್ಲ ಅದು ಶಾಬ್ದಿಕವೆ. ಇಲ್ಲಿ ಶಬ್ದಗಳಿಗೆ ಅತೀತವಾದದನ್ನು ಹಿಡಿದಿಡೋದು ಒಂದು ಕ್ರಮ. ಜೆಕೆಯವರು ಹೇಳಿದ್ದು ಶಬ್ದದಲ್ಲಿಯೇ. ಇದೆಲ್ಲ ವಿಪರ್ಯಾಸ ಅನ್ಸಿದ್ರು ಶಬ್ದಗಳ ಹೊಸೆದು ಅತೀತತೆಯನ್ನು, ನಿರೂಪಗಳನ್ನು ಕಾಣಿಸುವುದು ಕೆಲ ಮಟ್ಟಿಗಾದರೂ ನೀಗಬಲ್ಲದ್ದು ಕಾವ್ಯ ಅಂತಾ ನಾನು ತಿಳಿದಿದ್ದೀನಿ.

ಇಷ್ಟೆಲ್ಲಾ ಪೂರ್ವ ಪೀಠಿಕೆ ಕಾಜೂರು ಸತೀಶರ ಕವಿತೆಗಳ ಕುರಿತ ನನ್ನ ಅಭಿಪ್ರಾಯಕ್ಕೆ ಪೂರಕವಾಗಿ ಹೇಳಬೇಕಿತ್ತು. ಸತೀಶರ ಎಷ್ಟೆಲ್ಲಾ ನಿರೂಪಗಳ ಸ್ವರಗಳನ್ನು ಕಾಣಿಸಿದ್ದಾರೆ ಅಂದ್ರೆ ಅದು ಕಾವ್ಯದ ಸಹಜತೆಗೆ ಮುಕ್ಕಾಗದ ಹಾಗೆ. ಮತ್ತದು ಕಾವ್ಯದ ಒಟ್ಟು ಬಂಧದಲ್ಲಿ ಹೊಸೆದುಕೊಂಡ ಪರಿಯು ಮತ್ತೆ ಮತ್ತೆ ಓದಿಕೊಳ್ಳಲೂ ಒಂದು ಕಾರಣ. ಕವಿತೆಗೆ ಮೊದಲಿನಿಂದ ಹೋಗುವುದಾದರೆ- ಒಂದು ಸಾಲಿದೆ ಅರ್ಪಣೆಯದು ನನ್ನನ್ನೇ ಉಸಿರಾಡಿಕೊಳ್ಳುತ್ತಿರುವ ಅಂತ. ಇಲ್ಲಿಯ ಎಷ್ಟೋ ಕವಿತೆಗಳು ಉಸಿರಿನಷ್ಟು ಸಹಜವಾಗಿಯೂ, ವಿಮರ್ಶಾ ಲೋಕ ಬೇಡುವ ಬೌದ್ಧಿಕ ಪರಿಶ್ರಮ, ಹುಡುಕಾಟವೂ ಎಲ್ಲ ಕವಿತೆಗಳಲ್ಲಿದೆ.ಇಲ್ಲಿ ಬೌದ್ಧಿಕ ಪರಿಶ್ರಮವು ಅನೇಕ ಜ್ಞಾನಶಾಖೆಗಳ ಆಳದಲಿ ಕುಡಿಯೊಡೆದ ಭಾವತೀವ್ರತೆ ಅನ್ನುವ ಅರ್ಥದಲ್ಲಿ ನೋಡುವುದಾದರೆ

ತನುವ ಶುದ್ಧಿಗೊಳಿಸಿದ
ಬಚ್ಚಲ ಮನೆಯ ನೀರು
ಹಿತ್ತಲ ಬಸಳೆ ಬಳ್ಳಿಗೆ ಹಾಲುಣಿಸುವುದು


ಕೊಳೆತ ಮಾವಿನ ಹಣ್ಣಿನ ಒಳಗೆ
ಮೊಳಕೆಯೊಡೆದಿದೆ ಗೊರಟೆ
ಸಿಪ್ಪೆ ಸೀಳದೆ ಒಳಗೆ ನುಸುಳಿದ ಹುಳುಗಳಿಂದ
ಕಚಗುಳಿ ಅದಕೆ
ಮಣ್ಣಲ್ಲಿ ಅಂಬೆಗಾಲಿಡುವ ತವಕ

( ಮೈಲಿಗೆ -30)

ನನ್ನ ಮರಣದ ನಂತರ
ಏಕವಾಗುವ , ಅಭೇದವಾಗುವ
ನನ್ನೊಲುಮೆಯ ಬ್ಯಾಕ್ಟೀರಿಯಾಗಳದು
ಅಹರ್ನಿಶಿ ನೃತ್ಯ

(ಉಯಿಲು -96)

ಅಮೀಬಾದ ತಾಯೇ
ಬುದ್ಧ ನ್ಯೂಟನ್ನರ ಗುರುವೇ
ಮಣ್ಣಿನಬ್ಬೆಯ ಅಬ್ಬೆಯೇ
ನಿನಗೆ ಶರಣು

(ಮರ -92)

ಹೀಗೆ ಸಂಕಲನದ ತುಂಬ ತುಂಬಿ ಹೋಗಿರುವ ಸಾಲುಗಳು ತಾಳ್ಮೆಯ ಓದಿಗೆ ದಕ್ಕಿಬಿಡುತ್ತವೆ. ಕೆಲವು ಕವಿತೆಗಳನ್ನು ಸ್ಪರ್ಶಿಸಿಯೇ ಓದಬೇಕಾಗುತ್ತದೆ. ಇಲ್ಲಿ ಸ್ಪರ್ಶ ಅಪಾರ ತಾಳ್ಮೆಯನ್ನು ಕೆಲವು ಸಿದ್ಧತೆಗಳನ್ನು ಬೇಡುತ್ತದೆ. ಅಡಿಗರ ಕಾವ್ಯದಲ್ಲಿ ಸಿಗುವ ಹಲವು ಹೊಳಹುಗಳು ಸಿಗುವುದು, ಬೇಂದ್ರೆ ಅಜ್ಜನ ಹಲವು ಕವಿತೆಗಳಲ್ಲಿ 'ನೃತ್ಯ ಯಜ್ಞ' ಉತ್ತಮ ಉದಾಹರಣೆ. 'ಒಡೆದ ಮಣಿಗಳಿಲ್ಲಿ ಒಂದುಗೂಡುವವಿಲ್ಲಿ' ಅಂತಾ ಹೇಳ್ತಾರಲ್ಲ ಎಸ್ ಮಂಜುನಾಥ್ ಹಾಗೆ.
*
ಇಲ್ಲಿ ಕವಿಗೆ ಎಲ್ಲವೂ ಮುಖ್ಯ ಅಂತ್ಲೆ ಅನಿಸಿದೆ. ಅಮುಖ್ಯ ಅಂತಾ ಅನಿಸುವುದೆ ಸಿಗಲ್ವೇನೊ ಅನ್ನೊ ಹಾಗೆ. ಇಲ್ಲಿ ನೆಡೆಯುವುದೆಲ್ಲ ಒಂದಕ್ಕೆ ಒಂದು ಹೊಸೆದುಕೊಂಡು ಹುಟ್ಟಿವೆ. ಪೂರಕತತ್ವ ಅನ್ನೊ ಮಾತನ್ನು ಇಲ್ಲಿ ಲಗತಿಸುವುದಾದ್ರೆ.

ಮೊಲದ ಮಲದ ಹರಳು ಕಣಗಳನ್ನು
ಎಲ್ಲೋ ಕಂಡುಹಿಡಿದ ದೇವಕಣದಂತೆ
ಪ್ರೀತಿಸಿ ಪರೀಕ್ಷಿಸುತ್ತೇನೆ
(ಕಾಡು ಕವಿತೆ - 44)

ನನ್ನೂರಿಂದಂಟಿದ ಜಿಗಣೆಯೊಂದು
ಹೆದ್ದಾರಿಯಲ್ಲೆಲ್ಲೋ ಕಳಚಿಬಿದ್ದಿದೆ
ಅಂಟಲಾರದು ಬೂಟುಕಾಲು, ಕೀಲಿಮಣೆಗಳಿಗೆ
ಕಡೆಯ ಉಸಿರೇ ಕೊಂಚ ನಿಲ್ಲು
ನನ್ನ ಕುದಿವ ನೆತ್ತರನೋಮ್ಮೆ ಅದಕ್ಕುಣಿಸುವೆ
(ಈ ರಾತ್ರಿಗಳಲ್ಲಿ ನಿದ್ರಿಸಲಾರೆ - 54 )

ಹೀಗೆ ಕವಿತೆಯ ತುಂಬಿಹೋದ ಸಾಲುಗಳು ಸುಸೂಕ್ಷ್ಮ ಪದಗಳಿವೆ. ಇಲ್ಲಿ ಬಳೆಸಿದಂತೆಲ್ಲ ಹೊಸ ಹೊಳಪನ್ನೇ ಹೊತ್ತು ತರುತ್ತವೆ. ಎಷ್ಟು ಹೇಳಿದರು ಕವಿಗೆ ಸಮಾದಾನವೇ ಇಲ್ಲ. ಮಣ್ಣಿನೊಂದಿಗೆ ಕಟ್ಟಿದ ಈಡಿಮ್ ಇದೆಯಲ್ಲ ಇಲ್ಲಿ ಅದು ಈ ಕವಿಯ ಮುಖ್ಯ ಕಾವ್ಯ ಸೆಲೆಯ ಜ್ಞಾನಧಾರೆಗಳಲ್ಲಿ ಒಂದು ಅನಿಸಿದೆ. ಒಂದು ಸಾಲು ನೋಡಿ:

ಉದ್ದುದ್ದ ಬೇರಿನ ಬೆರಳ ಚಾಚಿ
ಮಣ್ಣಿನಪ್ಸರೆಯ ಬಾಚಿ ತಬ್ಬಿಕೊಳ್ಳಬೇಕೆಂದು (ಬೋನ್ಸಾಯ್ ಸ್ವಗತ -61)

ಮಣ್ಣಾಗಿಹೋದ ನಾನು
ಸಿಕ್ಕಿಸಿಕ್ಕ ಕಾಡುಹೂಗಳೊಂದಿಗೆ ಕೂಡಿ
ಸುಂದರ ಹೆಂಗಳೆಯರ ಹೆರಳಲ್ಲಿ
ಹಾಯಾಗಿ ನಿದ್ರಿಸುತ್ತೇನೆ
(ನಾವಿಬ್ಬರು ತೀರಿಕೊಂಡ ಮೇಲೆ -56)
*


ನೋವನ್ನೂ ,ವಿಷಾದವನ್ನೂ ಓದುಗನಿಗೆ ದಾಟಿಸಿಬಿಡುವುದು, ಮತ್ತೆ ಮತ್ತೆ ಓದುವಂತೆ ಕಾಡುವ ಕವಿತೆ ಬರೆಯುವುದು ಬಲು ಸವಾಲಿನದು. ಇಲ್ಲಿ ಭಾಷೆ, ರೂಪಕ, ಇಮೇಜ್ಗಳು ಎಷ್ಟು ಮುಖ್ಯವೂ ಅಷ್ಟೆ ಪದದ ಮಿತ ಬಳಕೆ ಭಾವತೀವ್ರತೆಯೂ ಅಷ್ಟೇ ಮುಖ್ಯ ಅನ್ಸಿದೆ ನನಗೆ. ನನ್ನ ಓರಿಗೆ ಎಷ್ಟೋ ಗೆಳೆಯರು ಶಬ್ದಗಳಿಂದ ಕವಿತೆಯನ್ನು ಮುಚ್ಚಿಟ್ಟಿದ್ದಿದೆ. ಅಪವಾದವೆಂಬಂತೆ ಬರೆಯುವ ಅನೇಕರಿದ್ದಾರೆ. ಇವರು ನೋವನ್ನು, ವಿಷಾದವನ್ನೂ ಎಷ್ಟೊಂದು ಅಬ್ಜರ್ವಡಾಗಿ ಕಾಣ್ಸಿದಾರೆ ಅನ್ನೋದೆ ನನಗೆ ಸೋಜಿಗ. ನನ್ನ ಓದಿನ ಮಿತಿಗೆ ಸದ್ಯಕ್ಕೆ ಕಂಡ ದೊಡ್ಡಕಲ್ಲಹಳ್ಳಿಯ ಒಂದು ಕವಿತೆ ಹೀಗಿದೆ.

ಎಲೆ ಉದುರುವಷ್ಟು ಹಗುರವಾಗಿ
ಇಬ್ವನಿ ಕರಗುವಷ್ಟು ಹಿತವಾಗಿ
ಬಿಡಿಸಿಕೋ ತಂದೆ
ನಿನ್ನ ಬನದ ಕುಸುಮಗಳನು


ನಡೆವ ಹಾದಿಯ ತುಂಬ ಬಿದ್ದ ನೋವಿನ ಮುಳ್ಳ ಹೆಕ್ಕಿ ತೆಗೆದೆವು ಕತ್ತಲಲಿ
ಆಸರೆಗೆ ಒರಗಿ ನಿಂತಾಗ ಮರವೊಂದು ನಮ್ಮಿಬ್ಬರನು ಒದ್ದೆಯಾಗಿಸಿತು

ಇದು ಹೊಸ್ಮನೆಯ ಗಜಲ್.

ನೋಡಲಾಗದು ಗೆಳತಿ
ಹೂಮನೆಯ ಮಂದಿಯ
ನಗೆಮಾಸಿದ ಮುಖ
ನೀನೇನೆ ಅನ್ನು
ನಾಲ್ದೆಸೆಯ ಬೀಸುಗಾಳಿಗೆ
ಮುಂದಣ ಜಗಲಿ ಹೇಳಿಮಾಡಿಸಿದ್ದಲ್ಲ

-ಕಾವ್ಯಶ್ರೀ ಮನ್ಮನೆಯವರದು.

ಇನ್ನೂ ಒಂದು ನೋಡೋಣ:

ನನಗೆ ಗೊತ್ತು
ಆ ಎಂದಾದರೊಂದು ದಿನ
ಈ ಅತೃಪ್ತ ಲೋಕ ಕೆಂಪಾಗಲಿದೆ
ಮೇಲೆ ಹಾರುವ ಮೋಡಗಳೂ
ನೆತ್ತರಲಿ ಅದ್ದಿದ ಹತ್ತಿ ಹಿಂಜುಗಳಂತೆ
ಉದುರಲಿವೆ ಜಗದ ತುಂಬ

ಈ ಸಾಲು ಬಸವರಾಜ್ ಹೃತ್ಸಾಕ್ಷಿಯದು.

ಸತೀಶರ ಕವಿತೆ ಕೇಳಿ:
ನಾನು ಸತ್ತ ಮೇಲೆ
ಅಳುವವರ ಕಂಬನಿಗಳ ಸಂಗ್ರಹಿಸಿ
ಚಿಮುಕಿಸಿಬಿಡಿ ಮಣ್ಣತುಂಬ
ಹೂವು ಬಿರಿಯಲಿ ಕಾಡ ಕಂಗಳಲಿ
ಲವಣಗಳ ಕುಡಿಕುಡಿದು


ಕಂಬನಿಗಳು ಉದುರುವುದಿದ್ದರೆ
ಎಣಿಸಿ, ಗುರುತುಮಾಡಿ
ಬಿದ್ದಲ್ಲೆಲ್ಲಾ ಪೈರು ನೆಡಬೇಕು


ದೇಹ ಹೊತ್ತರೆ
ಹೊಟ್ಟೆಯೊಳಗಿನ ಮಲವನ್ನೂ ಹೊತ್ತಂತೆ
ಆ ಭಂಗಿಯ ಹಿಂಸೆ ಬೇಡ
ದರದರ ಎಳೆದೊಯ್ಯಬೇಕು
ಮೃತಕೋಶಗಳು ಒಡೆದು
ಚರಿತ್ರೆಯಿಂದ ಬಿಡುಗಡೆಗೊಳ್ಳಲಿ


ಮರೆತುಬಿಡಿ ನನ್ನ
ನಿತ್ಯದ ನಿಮ್ಮ ವಿಸರ್ಜನೆಯ ಹಾಗೆ

(ನೆಲವಿಲ್ಲದವನ ಉಯಿಲು -38 ಉಯಿಲು -96)

ದೀಪ ಆರಿಸಿ ಬೂದಿಯ ಹಾಸಿ ಮಲಗಿದರೂ
ಸುಡುವ ಕೆಂಡ ಒಳಗೆ..

ಅವ್ವನ ಉಸಿರು ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ ಮುಂಜಾವದವರೆಗೂ..

ಹೊಗೆಯಿರದ ಮಹಾನಗರದ ಒಲೆಗಳಲ್ಲಿ
ಸುಟ್ಟ ಸಂಬಂಧಕ್ಕೆ ಸಾಕ್ಷಿಯಾಗಿ
ಬೂದಿ ಕೂಡ ಉಳಿಯುವುದಿಲ್ಲ

ಹೊತ್ತಿಕೊಂಡಿರಲಿ ಒಲೆ
ಅನ್ನ ಬೇಯುವವರೆಗೂ
(ಒಲೆ ಮತ್ತು ಅವ್ವ - 58)

ಹೀಗೆ ನೋವುಗಳನ್ನಾ ಅಟ್ಯಾಕ ಮಾಡೋದು ತೀರ ದುರ್ಲಬದ ಕೆಲಸ. ಕವಿತೆ ಆಳದಲ್ಲಿ ಕೆಣಕುವಿಕೆಯ ಈ ಪರಿ ಬರಹ ಉರ್ದು ಕಾವ್ಯಗಳಲ್ಲಿ ಹೆಚ್ಚು ಅಂತಾ ಕೇಳಿದ್ದಿದೆ. ಭಕ್ತಿಯನ್ನು ಒಲುಮೆಯನ್ನಾಗಿಸಿ ದೈವ ಸಂಬಂಧವಾಗಿಸುವ ವಿರಹವೂ ದೇಹಾತೀತವಾಗಿ ಬೆಸೆಯುವುದಿದೆ. ಕವಿತೆ ಭಾಷಾಲಯಕ್ಕೆ ಜೊಳ್ಳೂ ಅನಿಸಿದೆ ತೀರ ಬಿಗುವೂ ಅನಿಸದ ಹುಟ್ಟುವ ರಚನೆಗಳನ್ನು ಸತೀಶರ ಕವಿತೆಗಳಲ್ಲಿ ಕಾಣಬಹುದು. ಹಾಗೆ ಶಬ್ದಗಳ ಹೊರಮೈಗೆ ಮಾರುಹೋಗದ ರಚನೆಗಳೂ ಇಲ್ಲಿವೆ. "ಹಾಗೆ ನೋಡಿದರೆ ಶಬ್ದಗಳ ಹೊರಮೈಗೆ ಮಾರು ಹೋಗುವುದೇ ಕಾವ್ಯ" ಅಂತಾ ಪ್ರವೀಣ ಹೇಳಿದ ನೆನಪು. ಅವನ ಮಾತನ್ನು ಒಪ್ತಾನೆ ಇಲ್ಲಿ ಒಂದನ್ನ ಕೇಳುವುದಾದ್ರೆ,

ನಿಜಕ್ಕೂ ಬೇಕಿರಲಿಲ್ಲ
ಇದೊಂದಾದರೂ ಇರಲಿ
ಅಕ್ಷರ ಕಲಿತ ಸಾಕ್ಷಿಗೆ
ಗೋರಿಯಂತೆ
( ನೆಲವಿಲ್ಲದವನ ಉಯಿಲು- 38)




ಉಯಿಲು, ಮರ, ಗಾಯದ ಹೂವುಗಳು ಸಾರ್ಥಕ ಕವಿತೆಗಳು ಅನಿಸಿವೆ. ಇವೆ ಯಾಕೆ ಸಾರ್ಥಕ ಕವಿತೆಗಳು ಅನಿಸಿವೆ ಎಂಬ ಪ್ರಶ್ನೆಗೆ ಮತ್ತೆ ನನ್ನನ್ನೇ ನಾನು ನೋಡಿಕೊಳ್ಳಬೇಕಾಗುತ್ತೆ ಅಥವಾ ಕಾವ್ಯಮಿಮಾಂಸೆಯಲ್ಲಿ ಉದಾಹರಣೆಗಳನ್ನೇ ಕೊಡೋಣಾಂದ್ರೆ ಅದು ನನಗೆ ಅರ್ಥವೇ ಆಗಿಲ್ಲ ಅಂತ್ಲೆ ಹೇಳಬೇಕಾಗುತ್ತೆ. ಆದ್ರೆ ಹೀಗೆ ನಾನು ಹೇಳಿದ್ದರಲ್ಲಿಯದನ್ನೇ ಹೇಳಿಬಿಡ್ತಿನಿ. ಇಲ್ಲಿ ಅಭೇದವಾಗುವ ಸಾಲುಗಳಿಲ್ಲ ಅಂದ್ರೆ ತಾನು ಏನು ಹೇಳಬೇಕು ಅಂತಿದ್ದಾನೊ ಆ ಕಡೆಗೇ ಕವಿಯ ಲಕ್ಷವಿದೆ ಇಲ್ಲಿ. ಇನ್ನೊಂದು ಮಾತು ಅಂದ್ರೆ ಉಯಿಲು ರಚನೆಯಲ್ಲಿ ಸ್ವಲ್ಪ ವಾಲಿದರೂ ಒಟ್ಟು ಕಾವ್ಯ ನೋಡುವಲ್ಲಿ, ಮಿತಪದಗಳಲ್ಲಿ ಹಿಡಿದಿಡುವ ಗುಣ, ರೂಪಕದೊಂದಿಗೆ ಹೊಸೆದ ಕಲ್ಪನಾ ಪ್ರತಿಭೆ ಎನ್ನುವುದಾದಲ್ಲಿ ಈ ಕವಿತೆ ಅಷ್ಟರ ಮಟ್ಟಿಗೆ ದಕ್ಕಿದೆ. ಮರ, ಗಾಯದ ಹೂವುಗಳು ಪೂರ್ಣತೆಯನ್ನು ನಿಲುಕಿಸಿವೆ. ಬಹುಕಾಲ ಕಾಡುತ್ತವೆ ಡಿಸ್ಟರ್ಬ್ ಅನ್ನುವ ಅರ್ಥದಲ್ಲಿ. ಇಲ್ಲಿ ಮತ್ತೆ ಮತ್ತೆ ಬರುವ ಜಿಗಣೆ, ಹಿಕ್ಕೆ, ಸಾವು, ಹುಳು-ಹುಪ್ಪಟೆ, ಇತಿಹಾಸಗಳೆಲ್ಲೂ ಎಷ್ಟೊಂದಿವೆ ಇಲ್ಲಿ. ನಾವು ಕೇಳದ ಲೋಕದಿಂದಲೇ ಹೊಸ ರೂಪಕವೂ ಆಗಿ ಇಮ್ಯಾಜಿನ್ಗೂ ಸಿಗದ ರೀತಿಯಲ್ಲಿ ಬರುತ್ತಿರುವುದು ಬರವಸೆ ಹುಟ್ಟಿಸುತ್ತದೆ. ಹಾಗೆ ರೂಪಕವೇ ಕವಿತೆಯನ್ನು ತಾಳಿಸಲಾರದು ಎಂಬುದೂ ಸಹ. ಹೀಗೆ ಹೇಳಿದ ಕಾರಣಕ್ಕೆ ಸತೀಶರು ತಮ್ಮ ಕವಿತೆಗಳಲ್ಲಿ ತರುವ ನವೀನ ರೂಪಕಗಳು ಸೋತಿಲ್ಲ. ಒಂದು ಅಂತರದಲ್ಲಿಯೇ ಹುಟ್ಟುವ ಹಾಗೇ ಪೂರಕವೂ ಆಗವ ಗುಣದಿಂದ ನನಗೆ ಹಿಡಿಸಿವೆ. ಕಿ ರಂ, ಎನ್ಕೆಯವರನ್ನು ರೂಪಕಗಳ ಚಕ್ರವರ್ತಿ ಅಂದಾಗ ನಾನು ಅವರ ಕವಿತೆಗಳನ್ನು ಓದಿದ್ದು ಅಲ್ಲಿಯ ರೂಪಕಗಳಂತು ದಂಗುಬಡಿಸುತ್ತವೆ. ಭಾಷೆಯ ಹೊಸ ವಿನ್ಯಾಸಗಳು ಕವಿತೆಗಳಲ್ಲಿವೆ ಒಂದೇ ಲಯಕ್ಕೆ ಮತ್ತೆ ಮತ್ತೆ ಹೋಗದೆ ಹೊಸದನ್ನೇ ತರುತ್ತಾರೆ. ಹೊಸದೊಂದು ತಾತ್ವಿಕತೆಯನ್ನೇ ಕಟ್ಟಿಕೊಡುವ( ಹೀಗೆ ಅನ್ನಬೇಕೆ) ಒಂದು ಕವಿತೆಯಾಗಿ ‘ಎಡ ಮತ್ತು ಬಲ’ ಕಂಡಿದೆ:

ದೊಡ್ಡವನಾದ್ಮೇಲೆ
ಎಡಕ್ಕೂ ಬೇಡ ಬಲಕ್ಕೂ ಬೇಡ
ನೀನೇ ಒಂದು ವಾಹ್ನ ಕೊಂಡು
ಮಧ್ಯದಲ್ಲೇ ಹೋಗು
ಎಡ ಬಲದಲ್ಲಿ ಚಲ್ಲಿದ ರಕ್ತ
ಸ್ವಲ್ಪ ಉಬ್ಬಿಕೊಂಡಿರೋ ಅಲ್ಲಿ
ನಿಲ್ಲೋದಿಲ್ಲ ಮಗಾ
ನಿಲ್ಲೋದೇ ಇಲ್ಲ
(ಎಡ ಮತ್ತು ಬಲ -89)

*

ನನಗೆ ಇಷ್ಟವಾದ ಕವಿತೆಗಳಿವು: ಮೈಲಿಗೆ, ಕೇಳಿಸಿಕೊಳ್ಳಿ, ಒಂಟಿ, ನಾವಿಬ್ಬರು ತೀರಿಕೊಂಡಮೇಲೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ಒಲೆ ಮತ್ತು ಅವ್ವ, ನೀನು ನನ್ನ ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯಿ ಸ್ವಗತ, ಸಲಾಮು, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಅಪ್ಪ ಮತ್ತವನ ಹತ್ಯಾರಗಳು, ಆಲ್ಬಮ್, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ಎಡ ಮತ್ತು ಬಲ.

ಸತೀಶರ ಕವಿತೆಗಳ ಬಗ್ಗೆ ಇಷ್ಟನ್ನು ಹೇಳಿದ ಮೇಲೆ ಇಲ್ಲಿರುವ ಅಥವಾ ನನಗೆ ಹಾಗೆ ತೋರುವ ದೋಷಗಳನ್ನು ( ಹೀಗೆ ಅನ್ನಬೇಕೊ- ಬೇಡ್ವೊ ಅಂತಾ ಸುಬ್ಬು, ಪ್ರವೀಣ ನನ್ನ ಜೊತೆ ಜಗಳವಾಡಿದ್ದು ನೆನಪಾಗ್ತಿದೆ. ಇರಲಿ) ಹೇಳದಿದ್ದಲ್ಲಿ ಅಪಚಾರವಾದೀತು ಅಂತಾ ಅನ್ಸಿದೆ. ಇಲ್ಲಿ ಅನೇಕ ಕವಿತೆಗಳು ನಡು ನಡುವೆ ಮಾತಿಗಿಳಿಯುತ್ತವೆ. (ಚಪ್ಪಲಿಗಳು, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ಕಡಲಾಚೆಯ ಹುಡುಗಿಗೆ...) ತನ್ನನ್ನು ತಾನು ಸ್ಪಷ್ಟಪಡಿಸಿಕೊಳ್ಳುವಂತೆ ತೋರುವ ಕೆಲ ರಚನೆಗಳಲ್ಲೇ ಮಾತುಗಳು ತೂರುತ್ತವಾದರೂ ಕೆಲ ಕಡೆ ಕತ್ತರಿಸಿಟ್ಟಂತೆ ತೋರುವ ಸಾಲುಗಳು ಏನು ಹೇಳಲು ಹೊರಟಿವೆ ಅನ್ನುವುದೆ ಸ್ಪಷ್ಟವಾಗುವುದಿಲ್ಲ. ಈ ಎರಡು ಒಂದೇ ಮಗ್ಗುಲಲ್ಲಿರುವುದರಿಂದ ಕವಿಗೆ ಈ ಮಿತಿಗಳನ್ನು ಮೀರುವುದೇನು ಕಷ್ಟದ್ದಲ್ಲ. ನಾಡಿಗರು ಹೇಳುವುದನ್ನು ನೆನಪಿಸುವುದಾದ್ರೆ 'ಸಾವಯವ ಬಂಧವು ಅವರು ತಲುಪಬೇಕಾದ ಗಮ್ಯದೆಡೆಗೇ ದುಡಿಯಬೇಕು'. ಇಲ್ಲಿ ಬಳಸಿರುವ ಕೆಲ ಪರಭಾಷೆಯ ಪದಗಳು ಕವಿತೆ ಜೊತೆ ಬಾಗಿಕೊಂಡಿಲ್ಲ ಅನ್ನಿಸ್ತು.

ನಾನು ಕಟ್ಟಿಕೊಂಡ ಅರ್ಥಲೋಕದ ಟಿಪ್ಪಣೆಗಳಿವು. ನನ್ನ ಓದಿನ ಮಿತಿ ಈ ಕವಿತೆಗಳನ್ನು ಗ್ರಹಿಸಲು, ಆಳದಲ್ಲಿ ಸ್ಪರ್ಶಿಸಲು ಆಗದೆ ಹೋಗಿರಬಹುದು. ಹಾಗೆ ಕೆಲ ಕವಿತೆಗಳು ನನಗೆ ದಕ್ಕದೆಯೂ ಹೋಗಿರಬಹುದು. ಹೀಗೆ ಒಪ್ಪಿಕೊಂಡಿರುವುದು ನಾನು ಹೇಳಿದ ಅಭಿಪ್ರಾಯಗಳಿಂದ ನುಣಿಚಿಕೊಳ್ಳುವುದಕ್ಕಲ್ಲ ನಾನು ಹೇಳಿದ ಮಾತುಗಳಿಗೆ ಬದ್ಧವಾಗಿಯೂ ಈ ಮಾತು ಸೇರಿಸಿದ್ದೇನೆ. ಓ ಎಲ್ ನಾಗಭೂಷಣ ಸ್ವಾಮಿಯವರ ಈ ಮಾತುಗಳು ನಾನು ಹೇಳಬೇಕಿದ್ದಿದ್ದಕ್ಕಿಂತ ಸ್ಪಷ್ಟವಾದ ರೂಪದಲ್ಲಿವೆ ಕೇಳಿ."ಕವಿತೆಯನ್ನು ಕುರಿತು ಚರ್ಚಿಸುವುದೆಂದರೆ ನಾವು ಅನುಭವ ಪಡೆದ ರೀತಿಯನ್ನು ಚರ್ಚಿಸುವುದೇ. ಹಾಗೆ ಹೊಸ ನೋಟವನ್ನು, ಅರ್ಥದ ಹೊಸ ಸಾಧ್ಯತೆಗಳನ್ನು ಒಳಗೊಂಡಿರುವ, ತೋರುವ ಕವಿತೆಯೇ ನಿಜವಾದ ಕವಿತೆಯಾಗಿರುತ್ತದೆ. ಆದರೆ ಕೇವಲ ಅರ್ಥ ಪ್ರತಿಪಾದನೆಯ ಉದ್ದೇಶದಿಂದ ಬರೆದ ಕವಿತೆಗಳು ಸಾಮಾನ್ಯವಾಗಿ ಅಲ್ಪಾಯುಗಳಾಗಿರುತ್ತವೆ. ಬುದ್ಧಿ ವಿಲಾಸಕ್ಕೆ, ತರ್ಕಕ್ಕೆ ಅತಿಹೆಚ್ಚಿನ ಮನ್ನಣೆಯನ್ನು ನೀಡದೆ ಭಾಷೆಯ ಮೂಲಕ ಭಾವಸೂಚನೆಗಳನ್ನು ಒಳಗೊಂಡಿರುವ ಕವಿತೆ ಹೆಚ್ಚು ತಾಳುತ್ತದೆ. ಭಾವ ಪ್ರಾಮಾಣಿಕತೆ ಉತ್ತಮ ಕವಿತೆಯ ಮುಖ್ಯ ಲಕ್ಷಣ. ಆದರೆ ಅದೊಂದೇ ಉತ್ತಮ ಕವಿತೆಯ ಸೃಷ್ಟಿಗೆ ಕಾರಣವಾಗಲಾರದು. ಸೂಕ್ತ ಮತ್ತು ಸಮರ್ಥ ಭಾಷಿಕ ರೂಪ ಮತ್ತು ಲಯವೈವಿಧ್ಯತೆಯ ಸಾಧನೆ ಉತ್ತಮ ಕವಿತೆಯ ಇನ್ನೆರಡು ಲಕ್ಷಣಗಳು. ಕಲಾತ್ಮಕತೆಯ ಲಕ್ಷಣಗಳು ಕಾಲಕಾಲಕ್ಕೆ ಬದಲಾಗಬಹುದು....ಅರ್ಧ ಹೇಗೆ ನಮ್ಮ ಗ್ರಹಿಕೆಯ ಸಾಮರ್ಥ್ಯದ ಮಿತಿಗೆ ಅನುಗುಣವಾಗಿ ನಮಗೆ ದಕ್ಕುವುದೋ ಹಾಗೆಯೇ ಕವಿತೆಯೊಂದರ ಅರ್ಥವೂ ನಮ್ಮ ಗ್ರಹಿಕೆಯ ಮಿತಿಗೆ ಒಳಪಟ್ಟಿದೆ. ಆದ್ದರಿಂದಲೇ ಕವಿತೆಯೊಂದರ ಅರ್ಥವನ್ನು ವಿವರಿಸಿ ಮುಗಿಸಲು ಸಾಧ್ಯವಿಲ್ಲ. ಒಂದೊಂದು ಓದಿನ ಸಂದರ್ಭದಲ್ಲೂ ಕವಿತೆ ಮತ್ತೆ ಜೀವತಾಳುತ್ತದೆ. ಓದುವ ಕ್ರಿಯೆಯಲ್ಲಿ ಕವಿತೆ ಜೀವತಾಳುವುದರಿಂದಲೇ ಒಂದೊಂದು ಕವಿತೆಯೂ ಒಂದೊಂದು 'ಕೃತಿ' ಓದುಗರು ತಮ್ಮ 'ಇಷ್ಟ' ಮತ್ತು 'ಸಾಮರ್ಥ್ಯ'ಕ್ಕೆ ಅನುಸಾರವಾಗಿ ನಿರ್ಮಿಸಿಕೊಳ್ಳುವ 'ಕೃತಿ'. ಆದ್ದರಿಂದಲೇ ಕವಿತೆಯನ್ನು ಕುರಿತು ಮಾಡುವ ಯಾವುದೇ ವ್ಯಾಖ್ಯಾನವೂ ಕವಿತೆಯಿಂದ ಓದುಗರು ಪಡೆವ ಅನುಭವಕ್ಕೆ ಪರ್ಯಾಯವಾಗಲಾರದು. ವ್ಯಾಖ್ಯಾನವೂ ಇನ್ನೊಂದು ಕೃತಿ ಅಷ್ಟೆ." ಇಷ್ಟು ಸಾಕು ಮುಂದೆ ಈ ಕವಿತೆಗಳ ಕುರಿತು ಮಾತು ಬಂದಾಗ ಖಂಡಿತಾ ಮಾತನಾಡೋಣ. ಕವಿಯ ಸಾಲುಗಳಿಂದಲೇ ಮಾತು ಮುಗಿಸುವುದಾದರೆ.

ಸುಡುವ ಬೀದಿ ಬೀದಿಗಳಲ್ಲಿ
ಪಾದಗಳ ಊರಿ ನಡೆದುಹೋಗುತ್ತೇನೆ
ಊರಿದ
ಒಂದು ಪಾದದಡಿಯ
ನೆಲ ಯಾರದು?
ಗಾಳಿಯಲ್ಲಿರುವ
ಇನ್ನೊಂದು ಪಾದದ ಬಗ್ಗೆ
ನನಗೆ ಭಯವಿಲ್ಲ
ಅಲ್ಲಿ ಯಾರೂ
ಬೇಲಿ ಹಾಕುವುದನು ಕಲಿತಿಲ್ಲ (ಯಾರದಿದು? - 81)

*



ಎಚ್ ಎಸ್ ರಾಮನಗೌಡ,
ಕೊಂಡಿಕೊಪ್ಪ




--------------------
ಕಾಜೂರು ಸತೀಶ್
ಗಾಯದ ಹೂಗಳು
ಫಲ್ಗುಣಿ ಪ್ರಕಾಶನ
₹- 75
2015

Sunday, July 9, 2017

'ಕಡಲ ಕರೆ'ಯ ಕುರಿತು ಆರ್. ವಿಜಯರಾಘವನ್

ಕೆ ಸಚ್ಚಿದಾನಂದನ್, ರಾಜೀವನ್ ಹೊರತಾಗಿ ಇಲ್ಲಿ ಸೇರಿರುವ ಕವಿಗಳು ಹೊಸಬರು ಎಂಬಂತಿದೆ. ಅವರೆಲ್ಲರ ಕಾವ್ಯದ ಭಾಷೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆಗಳು ಭಿನ್ನವಾದವು. ಇವತ್ತಿನ ಅಂದರೆ ಪಕ್ಕಾ ವರ್ತಮಾನದ ಕಾವ್ಯದ ಹಾಗೆ ಕನ್ನಡದ ಓದುಗರಿಗೆ ತೋರುವ ರಚನೆಗಳು ಇವು. ಈ ಬಗೆಯ ಬರೆಹಗಳು ಕನ್ನಡದಲ್ಲಿ ಕಡಿಮೆ. ಹಾಗಾಗಿಯೇ ಎಲ್ಲವೂ ಕನ್ನಡಕ್ಕಿಂತ ಭಿನ್ನವಾಗಿವೆ ಅನ್ನಿಸುತ್ತವೆ. ಇದ್ದರೂ ಯಾವ ಭಾಷೆಯಲ್ಲಾದರೂ ಬರೆಯಬಹುದಾದ ಅರ್ಬೇನ್ ಅನುಭಾವದ ಕವಿತೆಗಳಿವು.


ಈ ಕವಿತೆಗಳನ್ನು ನಿರ್ದಿಷ್ಟ ಹಿನ್ನೆಲೆಯಿಂದ ಗಮನಿಸುವುದು ಸಾಧ್ಯವಾಗಿಲ್ಲ ಏಕೆಂದರೆ ಇವು ಯಾವ ಜಿಯಾಗ್ರಫಿಯ ಹುಟ್ಟುಗಳೆಂಬ ಮಾಹಿತಿಯಿಲ್ಲ. ಕವಿತೆಗಳ ಆಯ್ಕೆಯಲ್ಲಿ ಗಮನಿಸಿದ ಮಾನದಂಡಗಳೇನು ಎನ್ನುವುದೂ ತಿಳಿಯದು. ಆದ್ದರಿಂದ ಇದು ಪ್ಯಾನ್ ಕೇರಳೈಟ್ ಆದ ಅನುಭವವೇ? ಇಡೀ ಕೇರಳದ ಕಾವ್ಯ ಇದೇ ಬಗೆಯ ನರಳುವಿಕೆಯಲ್ಲಿ ತೊಡಗಿಕೊಂಡಿದೆಯೇ? ಸಾಮುದಾಯಿಕ ಅನುಭವ ಗ್ರಹಣವೇ ನಾಪತ್ತೆಯಾಗಿ ಬರೀ ಸ್ವಕೇಂದ್ರಿತ ಅನುಭವಗಳು ಮಾತ್ರವೇ ಕಾವ್ಯವೆಂಬುದಕ್ಕೆ ಸಾಮಗ್ರಿಯಾಗಿ ಒದಗುತ್ತಿದೆಯೇ? ಅಥವಾ ಈ ಹಳಹಳಿಕೆ ಇಡೀ ಮಲಯಾಳಂ ಭಾಷಿಕ ಕವಿಗಳಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿದೆಯೇ? ಇಂದಿನ ಅಮೆರಿಕನ್ ಕಾವ್ಯದ ಹಾಗೆ ಎಸೋಟೆರಿಕ್ ಅನ್ನುವುದಕ್ಕೆ ಹಿಂದಿನ ದಶಕಗಳ (ಸಂತೆಗಳಲ್ಲಿ ಕವಿತೆಯೋದುತ್ತಿದ್ದ ಕವಿಯೊಬ್ಬರು ನೆನಪಾಗುತ್ತಾರೆ) ಮಲಯಾಳಂನಲ್ಲಿ ಬಹು ಪ್ರಖ್ಯಾತವಾಗಿದ್ದ ಎಕ್ಸೋಟೆರಿಕ್ ಮಾರ್ಗವು ದಾರಿ ಮಾಡಿಕೊಟ್ಟಿದೆಯೇ? ಇದೊಂದು ಬಗೆಯಲ್ಲಿ ಗಮನವನ್ನು ಅಪೇಕ್ಷಿಸುತ್ತದೆ.

ಇದ್ದರೂ ಕೆಲವು ಕವಿತೆಗಳು ಭಿನ್ನವಾಗಿವೆ. ಪರ್ಷಿಯನ್ ಸೂಫಿಯ ಕಾವ್ಯವನ್ನು ನೆನಪಿಸುವಂತೆ ಒಂದೆರಡಿವೆ; ಒಂದು ಕ್ರೈಸಿಸ್ ಅನ್ನು, ಒಂದು ಹಳವಂಡವನ್ನು ಕುರಿತು ಸಂಯಮದಿಂದ ಹಾಡುವ ಕನಸುಗಳಿವೆ; ಬದುಕಿನ ನಂಬಿಕೆಗಳಿಂದ ಮನುಷ್ಯನನ್ನು ಡಿಲೀಟ್ ಮಾಡಬಹುದೆಂಬ ಕಳವಳದ ಕವಿತೆಯಿದೆ; ಅಳತೆ ಮೀರಿದ ಅಪನಂಬಿಕೆಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಕಾವ್ಯಾಭ್ಯಾಸಿಗೆ ಭಿನ್ನ ಅನುಭವವನ್ನು ಕೊಡುವ ಕವಿತೆಗಳಿವೆ. ಆದ್ದರಿಂದ ಇದರ ಪ್ರಕಟಣೆ ಅಗತ್ಯವಿದೆ ಎನ್ನಿಸುತ್ತದೆ, ನನಗೆ.
*

-ಆರ್. ವಿಜಯರಾಘವನ್