ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, May 27, 2017

'ಗಾಯದ ಹೂವುಗಳು' ಕುರಿತು ಸ್ವಾಮಿ ಪೊನ್ನಾಚಿ

ಕೇಳಿಸಿಕೊಳ್ಳಿ ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ...

ಪ್ರಭೂ,
ನಾನು ಸಾಯುವಾಗಲೂ ಕೂಡ
ಹೀಗೇ ಕೂಗಿ ಕರೆಯಲು
ಒಂದು ಇರುವೆಯನ್ನಾದರೂ ಬದುಕಿಸು
ನನ್ನ ಕಾಲ ಬುಡದಲ್ಲಿ


ಎಂಥಾ ಸಾಮ್ಯತೆ..ಪಕ್ಕದಲ್ಲಿ ಕೂತಿರುವ ಮಂದಿ ನರಳುತ್ತಿದ್ದರೂ ಗಮನಿಸಲಾಗದಷ್ಟು ಗಡಿಬಿಡಿತದಲ್ಲಿರುವ ಈ ಸಂತೆಯಲಿ ಒಂದು ಜೀವವನ್ನಾದರೂ ನನಗಾಗಿ ಕೊಡು ಎಂದು ಕೇಳುವ ಕವಿ ಈ ಜಗತ್ತಿನ ಹೃದಯ ಹೀನತೆಯನ್ನು ಹೀಗೂ ಬೆತ್ತಲು ಮಾಡುತ್ತಾರೆ .

ಖಾಲಿ ಎಂದೊಡನೆ
ಅವಮಾನಿತನಿಗೆ ಬಾಂಬಿಡುವ ಕನಸು
ಬೀದಿನಾಯಿಗೆ ಕಾಲೆತ್ತುವ ಕನಸು


ಹೌದು.. ಇಲ್ಲಿ "ಖಾಲಿ "ಎಂದರೆ ಬರೀ ಖಾಲಿಯಷ್ಟೇ ಅಲ್ಲ.!ಕಳೆದುಕೊಂಡಿದ್ದನ್ನು ತಿರುಗಿ ಪಡೆಯುವ ;ಮತ್ತೆ ಮತ್ತೆ ಹುಡುಕುವ ;ತನ್ನ ಎದೆಯಲ್ಲಡಗಿರುವ ಕರಾಳ ಮುಖವನ್ನು ಅಥವಾ ನಿಜಮುಖವನ್ನು ಬರಿಗನ್ನಡಿಯಲ್ಲಿ ನೋಡಿಕೊಳ್ಳುವ ಮತ್ತು ಖಾಲಿ ಎಂದಾಕ್ಷಣ ಮನುಷ್ಯ ಮನುಷ್ಯನಾಗಿ ಇರುವ ಻ದಮ್ಯ ಸುಖ....ಖಾಲಿ ಇರುವ ಒಂಟಿ ಹೆಣ್ಣನ್ನೂ ಬುಟ್ಟಿಗೆ ಹಾಕಿಕೊಳ್ಳುವ ತವಕದಲ್ಲಿರುವ ನಮಗೆ..

ಒಳಗೆ ಸೇರಿಕೊಂಡ ಇರುವೆ/
ಜಿರಳೆ, ಹಲ್ಲಿಯ ಸುದ್ದಿ /ಊರು ಸುತ್ತುವ ಗಾಳಿಗೂ ತಿಳಿಯದಂತೆ


"ಖಾಲಿ"ತನದೊಳಗಡಗಿರುವ ದುಃಖ ದುಮ್ಮಾನ ನೋವು ನಲಿವುಗಳು ನಮಗೆ ತಿಳಿಯುವುದಿಲ್ಲ. ಖಾಲಿ ಎಂದರೆ ಖಾಲಿಯಷ್ಟೇ ಅಲ್ಲ. ಻ಅದರೊಳಗೆ ಅನಂತ ಸತ್ಯವಿದೆ ...

'ಚಪ್ಪಲಿಗಳು' ಕವಿತೆಯಲ್ಲಿ ಜಾತಿ, ಧರ್ಮ,ಕೊಲೆ, ಮೋಸ ,ವಂಚನೆ,ಮೌಢ್ಯತೆ, ಕೆಲಸಕ್ಕೆ ಬರದ ಒಣ ಸಿದ್ಧಾಂತ ಚಪ್ಪಲಿ ಸವೆದು ಬಾಳುದ್ದಕ್ಕೂ ಕೂಡ ಹೋಲಿಸಲಾಗದ ಻ಅಸಹಾಯಕತೆಯಲ್ಲಿ ಕೊನೆಗೆ

ನಮ್ಮ ತಿನ್ನುವ ಹಸಿದ ನರಪೇತಲ ನಾಯಿಗಳೇ ನಿಮಗೆ ಶರಣು

ಎನ್ನುವ ಮೂಲಕ ಚಪ್ಪಲಿಯ ಧನ್ಯತೆ ಕುರಿತು ಹೇಳುತ್ತಾರೆ.

ಬುಸುಗುಡಲು ಹೆಡೆಯಿರದಿದ್ದರೆ
ಬಡಿಯಲು ಬಾಲವನ್ನಾದರೂ ಎತ್ತು
ಕಳಚು ಸುತ್ತಲಿನ ಪೊರೆ


ಕಡಲಿನ ಆಚೆಬದಿಯಲ್ಲಿ
ನಿನ್ನದೊಂದು ತೊಟ್ಟು ರಕ್ತ
ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ
ಚೆಲ್ಲಿಬಿಡೋಣ
ಸುತ್ತಲಿನ ಶಾರ್ಕುಗಳು
ಏನು ಮಾಡುತ್ತವೆಂದು ಕಾದು ಕೂರೋಣ


ನನ್ನ ಹೊರಮೈಯ ಮಾಂಸವನ್ನು
ಹಿಂಡಿ ಒಣಗಿಸಿಡುತ್ತೇನೆ
ಕಾಮವಿಲ್ಲದ ಅದನ್ನ ನೀನು ಪ್ರೀತಿಯಿಂದ ಅಪ್ಪಿಕೊಳ್ಳಬಹುದು


ಈ ಸಾಲುಗಳಿಗೆ ಯಾವ ಮಾತುಗಳೂ ಬೇಡವೆನಿಸಿ ಸುಮ್ಮನೆ ಓದಬೇಕೆನಿಸುತ್ತದೆ.

ಆಸ್ಪತ್ರೆಯ ತುಂಬ ತುಂಬಿ ಹೋಗಿರುವ
ಪ್ಯಾರಾಸೆಟಮೆಲ್ ಗಳು
ಜ್ವರದಿಂದ ಬಳಲುತ್ತಿವೆ ಹೊಟ್ಟೆಗಳಲ್ಲಿ


ನಿಜ...ಸದಾ ಒಂದಿಲ್ಲೊಂದು ಪ್ಯಾರಸಿಟಮೋಲ್ ಗಳನ್ನು ಮನಸಿಗೆ ಹೊಟ್ಟೆಗೆ ಹಾಕಿಕೊಳ್ಳುವ ನಾವು ಯಾವಾಗಲೂ ರೋಗಗ್ರಸ್ಥರೆ....ಅತ್ತ ಜೀರ್ಣವಾಗದೇ ಇತ್ತ ನೋವು ವಾಸಿ ಮಾಡದೆ ಸದಾ "ಮದ್ದೀಡಿ"ನಂತೆ ಹೊಟ್ಟೆಯೊಳಗೆ ಇದ್ದು ನರಳಿಸಿ ಹಿಂಡಿ ಹಿಪ್ಪೆ ಮಾಡಿ ನಮ್ಮತನವನ್ನ ಸಾಯಿಸಿ ಬರೀ ದೇಹವನ್ನಷ್ಟೇ ಉಳಿಸುತ್ತದೆ.(ನೆನಪಿರಲಿ ಖಾಯಿಲೆ ಎಂಬುದು ಬರೀ ದೇಹಕ್ಕಷ್ಟೇ ಅಲ್ಲ) ಈ ಜಗತ್ತನ್ನು ಒಂದು ಆಸ್ಪತ್ರೆ ಅಂದುಕೊಂಡರೆ ಸಾಕು ನಮ್ಮ ಖಾಯಿಲೆ ಏನೆಂಬುದು ನಮಗೆ ಥಟ್ಟನೆ ಅರ್ಥವಾಗಿಬಿಡುತ್ತದೆ.ಅಷ್ಟರ ಮಟ್ಟಿಗೆ ಕಾಜೂರರು ಕವಿತೆಯ ಸೂಜಿ ಚುಚ್ಚಿಬಿಟ್ಟಿದ್ದಾರೆ ಎದೆಯಲ್ಲಿ.........!ಹೀಗೆ ಬುಟ್ಟಿತುಂಬ ಘಮಘಮಿಸುವ ಹೂಗಳನ್ನು ತುಂಬಿಕೊಂಡು ಹೊರಡುವ ಕವಿಯ ಕೈಯಲ್ಲಿರುವ ಹೂಗಳನ್ನೇ ನೋಡುವ ನಮಗೆ ಹೂವಿಗಾದ ಗಾಯವನ್ನು ನೋಡುವ ಒಳಗಣ್ಣಿದ್ದರೆ ಕಾಜೂರರ ಕವಿತೆ ನಿಜಕ್ಕೂ ಕಾಡಿಸುತ್ತದೆ...
*


ಸ್ವಾಮಿ ಪೊನ್ನಾಚಿ

Saturday, May 20, 2017

'ಕಡಲ ಕರೆ' ಅನುವಾದಿತ ಮಲಯಾಳಂ ಕವಿತೆಗಳ ಕುರಿತು ಡಾ.ಅಶೋಕ್ ಕುಮಾರ್ ಅನಿಸಿಕೆ

​ಪ್ರಿಯ ಸತೀಶ್,

ಇದೀಗ ಕಡಲ ಕರೆ ಕೈಸೇರಿದೆ.​

​ನಿಮ್ಮ ಮುನ್ನುಡಿಯ ಮೇಲೆ ಕಣ್ಣಾಡಿಸಿದೆ. ಬಲು ಆಪ್ತವಾಗಿ ಪ್ರಬುದ್ಧವಾಗಿ ಬರೆದಿದ್ದೀರಿ. ಹಲವು ಅನುವಾದಕರ ಹಲಬಗೆಯ ಅನುವಾದಗಳ ಸುರಿಮಳೆಯಾಗುತ್ತಿರುವ ​​ಈ ಕಾಲದಲ್ಲಿ , ಕವಿತೆಗೆ ಓದುಗರ ಬಾಹುಳ್ಯ ಇಲ್ಲದ ವಾಸ್ತವದಲ್ಲಿ, ಅನೇಕ ಸಹೃದಯ ಕವಿಗಳ( ಎರಡೂ ಭಾಷೆಗಳ) ಸಂಪರ್ಕ,ಸ್ನೇಹ ಬೆಳೆಸಿ ಸಫಲರಾಗಿ, ಕು.ಭಾ.ಭಾ ಪ್ರಾಧಿಕಾರ ಕವಿತೆಯ ಪುಸ್ತಿಕೆ ಹೊರತರುವಂತೆ ಮಾಡಿರುವ ತಮ್ಮ ಸಾಧನೆ ಅಪಾರ. ಅದ್ಭುತ. ಎಲ್ಲ ಪ್ರೋತ್ಸಾಹಕರನ್ನೂ ಮರೆಯದೆ ನೆನೆದು ಬರೆದು ದೊಡ್ಡ ಗುಣ ಮೆರೆದಿದ್ದೀರಿ. ( ದೊಡ್ಡವರನೇಕರು ಮನಃಪೂರ್ವಕ ತಾವು ಮೇಲೇರಿದ ಏಣಿಯನ್ನು ತುಳಿದು ದೂರಾಗಿಸಿ ಮುಸಿನಗುವ ದೃಶ್ಯ ಈಗ ನಿತ್ಯದ ಹಾಡು ).


ಅನುವಾದಕರಿಗೆ ಭಿನ್ನ ವಿಭಿನ್ನ ದೃಷ್ಟಿಕೋನ ಇದ್ದರೂ ಸ್ವಾತಂತ್ರ್ಯ ಕೆಲವೊಮ್ಮೆ ಸಾಧ್ಯವಾದರೂ ಸ್ವೇಚ್ಛೆ ಸರ್ವಥಾ ಸಲ್ಲದು ಎಂಬುದೇ ನನ್ನ ಅಭಿಮತ.
ಅಹಂಕಾರಕ್ಕೂ ಬೊಕ್ಕತನಕ್ಕೂ ಮದ್ದಿಲ್ಲ ಎಂಬ ಗಾದೆಯನ್ನು ನೆನಪಿಗೆ ತರುವಂತಹ ಅನೇಕ ಅನುವಾದಾಪರಾಧಿಗಳು ನಮ್ಮ ನಡುವೆಯೇ ಇರುವುದರಿಂದ ಈ ಮಾತು ನಾ ಹೇಳಬೇಕಾಯಿತು. ತಮ್ಮಂತಹ ವಿನಯಶೀಲರನ್ನು ಕಂಡಾಗ ತಂಗಾಳಿ ತೀಡಿದನುಭವವಾಗುತ್ತಿದೆ.

ಗದ್ಯ, ಪದ್ಯ, ನಾಟಕ, ಲೇಖನ ಇತ್ಯಾದಿ ಅನುವಾದಗಳು ಬಗೆ ಬಗೆಯ ಸವಾಲುಗಳ್ನ್ನು ಒಡ್ಡ ಬಹುದು. ಈ ಕುರಿತು ' ಓದುಗ, ನೋಡುಗ, ಕೇಳುಗ' ಅಥವಾ ರಸಿಕರದೇ ಅಂತಿಮ ನಿರ್ಣಯ ಎಂಬ ಗಿರೀಶ್ ಕಾರ್ನಾಡ್ ರ ನಿಲುವೇ ನನ್ನದೂ ಸಹ.
*


ಡಾ. ಅಶೋಕ್ ಕುಮಾರ್