ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, March 16, 2017

ಮನಸು ಅಭಿಸಾರಿಕೆ ಮತ್ತು ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ

ನೂರಾ ಐದು ವರ್ಷಗಳ ಹಿಂದೆ ಜನಿಸಿದ ಅಪ್ರತಿಮ ಕತೆಗಾರ್ತಿ ಕೊಡಗಿನ ಗೌರಮ್ಮ. ತಮ್ಮ ಇಪ್ಪತ್ತೇಳನೆ ವರ್ಷಕ್ಕೇ ದಾರುಣವಾಗಿ ತೀರಿಕೊಂಡ ಗೌರಮ್ಮ ಅಷ್ಟರಲ್ಲಾಗಲೇ ತಮ್ಮ ಕಥಾ ಪ್ರತಿಭೆಯನ್ನು ನಾಡಿನ ಉದ್ದಗಲಕ್ಕೂ ಬೆಳಗಿದವರು. ಚಿರಸ್ಥಾಯಿಯಾಗುಳಿವ ಅವರ ಕಂಬನಿ(1939), ಮತ್ತು ಚಿಗುರು(1942) ಅದಕ್ಕೆ ಸಾಕ್ಷಿ.

*

ಈ ಸಾಲಿನ _ಕೊಡಗಿನ ಗೌರಮ್ಮ ದತ್ತಿ ನಿಧಿ_ ಪ್ರಶಸ್ತಿಗೆ ಹನ್ನೊಂದು ಕೃತಿಗಳು ಸ್ಪರ್ಧಾಕಣದಲ್ಲಿದ್ದವು. ಗಂಭೀರ ಬರವಣಿಗೆಗಳಿಂದ ಸದಾ ದೂರ ಉಳಿದ ಕೊಡಗು ಈ ಬಾರಿ ಇಷ್ಟು ಪ್ರಮಾಣದಲ್ಲಿ ಕೃತಿಗಳನ್ನು ಸ್ಪರ್ಧೆಗಿಳಿಸಿದೆಯಲ್ಲಾ ಎಂಬ ಸಂತೋಷ ಉಕ್ಕಿಸಿತು. ಅದು ಒಳ್ಳೆಯ ಬೆಳವಣಿಗೆಯೇ ಸರಿ.
*

ಯಾವತ್ತೂ ಒಂದು ಗಟ್ಟಿ ಕೃತಿ ನೂರ್ಕಾಲ ಬಾಳುತ್ತದೆ. ಯಾವ ಪೂರ್ವಗ್ರಹದ, ಭಟ್ಟಂಗಿಗಳ ಬೆಂಬಲವಿಲ್ಲದಿದ್ದರೂ ಅದು ಬೆಳೆಯುತ್ತದೆ. ಬರೆಯುವವರೆಲ್ಲರೂ ಪುಸ್ತಕ ಪ್ರಕಟಿಸುತ್ತಿರುವ ಇಂದಿನ ಕಾಲದಲ್ಲಿ ಉಳಿಯುವುದು ಮತ್ತು ಉಳಿಯಬೇಕಾದದ್ದು ಉತ್ತಮ ಕೃತಿಗಳಷ್ಟೆ.
*

ಮಹಿಳಾ ಸಾಹಿತ್ಯದ ಸಶಕ್ತ ಸಂವೇದನೆಗಳು ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿಗಿಂತಲೂ ಮೊದಲೇ ಗುರುತಿಸಬಹುದು. ಜೀವನಾನುಭವದ ಜನಪದ ಸಾಹಿತ್ಯ ಈ ನಿಟ್ಟಿನಲ್ಲಿ ಗಮನಾರ್ಹವಾದುದು. ಸ್ವಾತಂತ್ರ್ಯಾ ಪೂರ್ವದಲ್ಲೇ ಕನ್ನಡದ ಆರ್. ಕಲ್ಯಾಣಮ್ಮ, ನಂಜನಗೂಡು ತಿರುಮಲಾಂಬ, ಕೊಡಗಿನ ಗೌರಮ್ಮ ಮುಂತಾದವರು ಸಾಧಿಸಿದ ಸಿದ್ಧಿ ನಿಜಕ್ಕೂ ಅಭೂತಪೂರ್ವ.

*

ಸ್ಪರ್ಧೆಗೆ ಬಂದಿದ್ದ ಕೃತಿಗಳ ಒಳಪ್ರವೇಶ ಮಾಡಿದಂತೆಲ್ಲಾ ನಿರಾಸೆಯೇ ಆವರಿಸತೊಡಗಿತು. ಬರಹದ ಬಾಲಿಶತನ ಇನ್ನೂ ಯಾಕೆ ಈ ನೆಲದಲ್ಲಿ ಮನೆಮಾಡಿದೆ ಎಂಬ ಕೊರಗು ಕಾಡಿತು. ಆದರೆ ಅಷ್ಟೂ ಕೊರಗುಗಳನ್ನು ಸುಳ್ಳುಮಾಡುವಂತೆ ಶಾಂತಿ ಕೆ ಅಪ್ಪಣ್ಣ ಅವರ ಮನಸು ಅಭಿಸಾರಿಕೆ ಓದಿಸಿಕೊಂಡಿತು. ಕೊಡಗಿನ ಗೌರಮ್ಮ ಕಟ್ಟಿಕೊಟ್ಟ ವಿಶಿಷ್ಟ ಕಥಾಲೋಕದ ಹರಿವು ಈಗ ಈ ಕಾಲಘಟ್ಟದಲ್ಲಿ ಶಾಂತಿ ಅವರಿಂದ ಮುಂದುವರಿಯುತ್ತಿದೆ ಎನ್ನಲು ಹರ್ಷವಾಗುತ್ತಿದೆ.


ಶಾಂತಿ ಅವರು ಮೊದಲ ಸಂಕಲನದಲ್ಲೇ ತೋರಿದ ಸಾಧನೆ ನಿಜಕ್ಕೂ ಈ ನೆಲಕ್ಕೆ ಹೆಮ್ಮೆ ತರುವ ಸಂಗತಿ. ಏಕೆಂದರೆ, ಈ ಹೊತ್ತಿನಲ್ಲಿ ನಮ್ಮ ಕಥಾ ಸಂಸ್ಕೃತಿಯ/ ಪರಂಪರೆಯ ಎಳೆಯನ್ನಿರಿಸಿಕೊಂಡೇ ಹೊಸ ಹಾದಿಗೆ ಜಿಗಿಯುವುದು ಮಹತ್ತಾದ ಸವಾಲು. ಅದು ಅವರಿಗೆ ಅಷ್ಟು ಸಹಜವಾಗಿ, ಸಲೀಸಾಗಿ ಸಿದ್ಧಿಸಿದೆ. ಹೀಗಾಗಿಯೇ ಶ್ರೀಮತಿ ಶಾಂತಿ ಕೆ ಅಪ್ಪಣ್ಣ ಅವರ ಮನಸು ಅಭಿಸಾರಿಕೆ ಕಥಾಸಂಕಲನವನ್ನು 2016-17ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಮಾಡಿದ್ದು. ಈ ಕಥೆಗಾರ್ತಿ ಕ್ರಮಿಸುವ ನಾಳಿನ ಹಾದಿಗಳು ನಿಜಕ್ಕೂ ಕುತೂಹಲಕಾರಿ.


ಸ್ಪರ್ಧೆಗೆ ಬಂದಿದ್ದ- ಒಂದು ಲಲಿತ ಪ್ರಬಂಧ, ಒಂದು ನಾಟಕ, ನಾಲ್ಕು ಸಣ್ಣ ಕತೆ, ಎರಡು ಕಾದಂಬರಿ, ಒಂದು ಸಂಶೋಧನಾ ಕೃತಿ, ಒಂದು ಹಾಸ್ಯ ಬರಹ, ಒಂದು ವೈಚಾರಿಕ ಲೇಖನ- ಪುಸ್ತಕಗಳ ಪೈಕಿ ಸಂಗೀತಾ ರವಿರಾಜ್ ಅವರ ಕಪ್ಪು ಹುಡುಗಿ(ಪ್ರಬಂಧ), ಮುಲ್ಲೇಂಗಡ ರೇವತಿ ಪೂವಯ್ಯ ಅವರ ಕೊಡವ ಜನಪದ ನೃತ್ಯಗಳು ಒಂದು ಅಧ್ಯಯನ , ಹಾನಗಲ್ಲು ಜಲಾ ಕಾಳಪ್ಪ ಅವರ ಕ್ಷಮಯಾಧರಿತ್ರಿ(ಕಾದಂಬರಿ) ಗಮನ ಸೆಳೆದವು; ಭರವಸೆ ಮೂಡಿಸಿದವು. ಇಲ್ಲಿನ ಸಾಹಿತ್ಯದ ಜೀವಂತಿಕೆಗೆ ಸಾಕ್ಷಿ ಅವು.
*

**ಶಾಂತಿ ಅಪ್ಪಣ್ಣ ಅವರ ಕತೆಗಳು ಮತ್ತು ಮನುಷ್ಯ ಸ್ವಭಾವದ ನಿಗೂಢ ತಂತುಗಳ ಅನಾವರಣ**

ಒಂದು ಐಡಿಯಾಲಜಿಯನ್ನು ಹೊರಗೆಡುವುದಕ್ಕೆ ಕತೆಯನ್ನು ಮಾಧ್ಯಮವಾಗಿಸುವುದು ಸೃಜನಶೀಲ ನಿರ್ಬಂಧ. ಕತೆ ಹೇಳುತ್ತಾ ಕತೆಗಾರ ಬದುಕಿನ ಹೊಸ ಸಾಧ್ಯತೆಗಳನ್ನು ಮುಟ್ಟುತ್ತಾನೆ. ಪಾತ್ರಗಳಿಗೆ ಸೃಷ್ಟಿಶೀಲ ಗುಣಗಳು ಪ್ರಾಪ್ತಿಯಾಗುತ್ತಾ ಕತೆಗಾರ ಬೆಳೆಯುತ್ತಾನೆ. ಯಾವಾಗ ಕತೆಹೇಳುವ ಧಾವಂತ ಇರುವುದಿಲ್ಲವೋ ಮತ್ತು ಅದೊಂದು ತಾತ್ವಿಕ ಹುಡುಕಾಟವಾಗುತ್ತದೋ, ಆಗ ಕತೆ ಗೆಲ್ಲುತ್ತದೆ. ಶಾಂತಿ ಅಪ್ಪಣ್ಣ ಅವರ ಕತೆಗಳು ಗೆಲ್ಲುವುದೂ ಈ ಕಾರಣದಿಂದಾಗಿಯೇ.

ಹಾಗೆ ನೋಡಿದರೆ ಕೊಡಗಿನ ಗೌರಮ್ಮ ಅವರಿಗೂ ಶಾಂತಿ ಅವರಿಗೂ ತಾತ್ವಿಕ ಸಾಮ್ಯಗಳಿವೆ. ಈ ಇಬ್ಬರೂ ಬದಲಾಗುತ್ತಿರುವ ಸಮಾಜದ ಸಂಬಂಧಗಳ ಸ್ಥಿತ್ಯಂತರಗಳ ಕುರಿತು ಹೇಳುತ್ತಾರೆ. ಇಂತಹ ಪಲ್ಲಟಗಳನ್ನು ತಲ್ಲಣಗೊಂಡು ಹೇಳುವುದಿಲ್ಲ. ತೆರೆದ ಕಣ್ಣುಗಳಿಂದ ನೋಡುತ್ತಾರೆ. ತೀರ್ಪುಗಾರಿಕೆ ಕೊಡುವುದಿಲ್ಲ; ವಕಾಲತ್ತು ವಹಿಸುವುದಿಲ್ಲ. ಇಬ್ಬರೂ ಬಳಸುವುದು ಆಡು ಭಾಷೆ ಮತ್ತು ಗಂಭೀರ ಭಾಷೆಗಳ ನಡುವಿನ ಭಾಷೆ. (ಶಾಂತಿಯವರು ಪರಶುವಿನ ದೇವರು, ಪರಿಹಾರ ಕತೆಗಳಲ್ಲಿ ಹಾಸನ-ಮೈಸೂರು ಜಿಲ್ಲೆಯ ಹಳ್ಳಿಯ ಭಾಷೆಯನ್ನು ಬಳಸುವಲ್ಲಿಯೂ ಯಶ ಕಾಣುತ್ತಾರೆ).ಇಬ್ಬರದೂ 'ಸ್ವ'ವನ್ನು ವರ್ಜಿಸುವ ಕಥಾಭಿವ್ಯಕ್ತಿ. ಅಥವಾ ತಮ್ಮೊಳಗು ಮತ್ತು ಬದುಕಿನ ಬಹುತ್ವಗಳನ್ನು ಬೇರೆಯಾಗಿಸದೆ ನೋಡುವ ಕ್ರಮ.

ಶಾಂತಿ ಅಪ್ಪಣ್ಣ ಅವರ ದಾರಿ ಕತೆಯಲ್ಲಿ ಬರುವ ಮದುವೆಯಾದ ತಿಂಗಳಲ್ಲೇ ಗಂಡ ತೀರಿಕೊಂಡು ಮೈದುನನಿಂದ ಲೈಂಗಿಕ ಹಿಂಸೆಗೆ ಒಳಗಾಗುವ ಚಂದ್ರಾಮಳನ್ನು ಸಮಾಜ ಶೋಷಿಸತೊಡಗಿದಾಗ ಕಾಸೀಂ ಸಾಬಿಯನ್ನು ಮದುವೆಯಾಗಿ ಚಾಂದ್ಬೀ ಆದದ್ದು, ಗೌರಮ್ಮ ಅವರ ಅಪರಾಧಿಯರು ಕತೆಯ ಪಾರ್ವತಿ ತನ್ನ ಜಾತಿಯಿಂದ ಬಹಿಷ್ಕರಿಸಲ್ಪಟ್ಟಾಗ ರಜಿಯಾ ಆಗಿ ಉನ್ನೀಸನನ್ನು ಮದುವೆಯಾಗುವುದು ಇದಕ್ಕೊಂದು ಉದಾಹರಣೆ.

ಶಾಂತಿಯವರ ಕತೆಗಳ ಅಭಿವ್ಯಕ್ತಿಯ ದಾರಿ ಕೊಂಚ ಭಿನ್ನ. ಕೆಲವು ಕತೆಗಳು ಅವಾಸ್ತವದ ಬೆನ್ನುಬಿದ್ದು ನಿರೂಪಣೆಗೊಂಡರೆ, ಗೌರಮ್ಮ ಅವರದ್ದು ಪಕ್ಕಾ ಅನುಭವನಿಷ್ಠ, ನೇರ- ನಿರಾಡಂಬರ ಶೈಲಿಯದ್ದು. ಆದರೂ,ಗೌರಮ್ಮ ಅವರು ತಮ್ಮ ನಿಜಜೀವನದ ಪರಿಸರದ ಸೂಚನೆಯನ್ನು ನೀಡದೆ ರಾಷ್ಟ್ರೀಯವಾದದ ನೆಲೆಯಲ್ಲಿ ಕತೆ ಕಟ್ಟುತ್ತಾರೆ.

ಮನಸು ಅಭಿಸಾರಿಕೆಯ ಒಟ್ಟೂ ಸ್ವರೂಪವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ- ಅವು ಮನೋವಿಶ್ಲೇಷಣಾತ್ಮಕ ಕತೆಗಳು. ಸಂಕೇತನಿಷ್ಠ, ಫ್ಲ್ಯಾಷ್ ಬ್ಯಾಕ್ ತಂತ್ರ, ಉಪಕಥಾ ಮಾರ್ಗಗಳಲ್ಲಿ ಸಾಗಿ ಓದುಗರನ್ನು ತಡೆದು ನಿಲ್ಲಿಸಿ ಓದಿಸುತ್ತವೆ. ಪಾತ್ರಗಳೇ ನಿರೂಪಕರನ್ನೂ, ಓದುಗರನ್ನೂ ಏಕಕಾಲದಲ್ಲಿ ಬೆಳೆಸುವ ಪರಿ ಮನಸು ಅಭಿಸಾರಿಕೆಯ ಹೆಚ್ಚುಗಾರಿಕೆ.


ಶಾಂತಿ ಅಪ್ಪಣ್ಣ ಅವರ ಕತೆಗಳಲ್ಲಿ ಕಾಲ ಪ್ರಧಾನ ಪಾತ್ರ ವಹಿಸುತ್ತದೆ. ಕ್ಷಣಕ್ಷಣಕ್ಕೂ ಮಿಂಚಿ ಮರೆಯಾಗುವ 'ಅತ್ಯಾಧುನಿಕ'ವಾದ ಈ ಕಾಲದ ವಿಶ್ಲೇಷಣೆಯಿದೆ. ಎಲ್ಲ ಪಾತ್ರಗಳಿಗೂ ಆ ಕ್ಷಣದ ಗಾಢತೆಯಷ್ಟೆ. ಬಹುತೇಕ ಕತೆಗಳಲ್ಲಿ ಕಾಣಬರುವ ಪ್ರೇಮದ ವ್ಯಾಖ್ಯಾನವೂ ಆಧುನಿಕ ಪರಿಭಾಷೆಯಲ್ಲಿ ಕ್ಷಣಿಕತೆಯಿಂದ ಕೂಡಿದ್ದು. ಮುಖವಾಡ, ಸ್ವಾರ್ಥ, ಕಾಮ ಅವುಗಳನ್ನು ಆಕ್ರಮಿಸುತ್ತವೆ. ಉದಾಹರಣೆಗೆ:
_ಹಳೆಯ ಇಮೇಜುಗಳು ತಂತಾನೇ delete ಆಗುತ್ತಾ refresh ಆಗ್ತಿರಬೇಕೇನೊ ಅನ್ನಿಸಿ ಮಜ_(ನೆರಳು)

_ಕಾಲದ ನದಿಯ ಹರಿವು ನೋಡುತ್ತ ಅವನು_(ಬಿಂಬ)

_We just have to love the moment and move on_(ಪಾಸಿಂಗ್ ಕ್ಲೌಡ್ಸ್)

_ನಾವು ಸತ್ಯವನ್ನು ಶೋಧಿಸಬಾರದು ಆ ಕ್ಷಣವನ್ನಷ್ಟೆ ನಂಬಬೇಕು_(ಪಯಣ)

ಬಾಹುಗಳು ಕತೆಯಲ್ಲಿ ನಿರೂಪಕಿ ಹಾಸಿಗೆಯಿಂದ ಏಳುವಾಗ ಎದುರಾಗುವ ವಿಚಿತ್ರ ಜೀವಿ ಪ್ರಭುತ್ವದ ಶೋಷಣೆ, ಸರಿ-ತಪ್ಪುಗಳನ್ನು ಸಮಾನಾರ್ಥಕಗಳೆಂದುಕೊಳ್ಳುವ ನವೀನ ಪರಿಭಾಷೆಯನ್ನು ಹೇಳುತ್ತದೆ. ಪ್ರಸಿದ್ಧ ಕಾದಂಬರಿಕಾರ ಕಾಫ್ಕಾನ ಮೆಟಮಾರ್ಫಸಿಸ್ನಲ್ಲಿ ಕಥಾ ನಾಯಕ ಗ್ರಿಗರ್ ಸಂಸ ತಾನೇ ಹುಳುವಾಗಿ ರೂಪಾಂತರ ಹೊಂದುತ್ತಾನೆ. ಅದೇ ಬಗೆಯ ಮ್ಯಾನಿಫೆಸ್ಟೊ ಉಳ್ಳ ಅಸ್ತಿತ್ವವಾದಿ ಆಲೋಚನೆಗಳೂ ಶಾಂತಿಯವರ ಕತೆಗಳಲ್ಲಿ ಗುರುತಿಸಬಹುದು(ಆದರೂ ಆ ವಿಚಿತ್ರ ಜೀವಿಯ ಉಪದೇಶಾತ್ಮಕ ನುಡಿಗಳು ಕ್ಲೀಷೆಯಂತೆ ಕಾಣುತ್ತವೆ). ಪಾಸಿಂಗ್ ಕ್ಲೌಡ್ಸ್, ಬಿಂಬ, ಪ್ರಶ್ನೆ ಕತೆಗಳಲ್ಲೂ ಅಸ್ತಿತ್ವವಾದದ ಎಳೆಗಳನ್ನು ಗುರುತಿಸಬಹುದು. ಪ್ರಶ್ನೆ ಕತೆಯಲ್ಲಿ ಅತ್ತೆಯು ಗುಲಗಂಜಿ ಬೆರೆಸಿ ತನ್ನ ಗಂಡನನ್ನು ಕೊಲ್ಲುತ್ತಿರುವ ಸಂಗತಿಯನ್ನು ಹೀಗೆ ಹೇಳುತ್ತಾರೆ: ಅವನಿಗೆ ಊಟವಿಟ್ಟು ಆರಾಮಾಗಿ ಕೂತು ಮಾತಾಡಿದ್ದಳು. ಈಗ ಹೇಳೇ ಹೇಳಿದ್ದಳು. ತಾನು ಕೊಂದವರ ಬಗ್ಗೆ, ಮತ್ತೀಗ ಕೊಲ್ಲುತ್ತಿರುವವರ ಬಗ್ಗೆ. ಮಾವ ಅತ್ತ, ಅಕ್ಷರಶಃ ಅತ್ತ.

ಶೋಷಣೆಗೆ ಈಡಾಗುವ ಅನೇಕ ಮುಗ್ಧ ಜೀವಗಳು ಶಾಂತಿಯವರ ಕತೆಗಳಲ್ಲಿ ನಿಚ್ಚಳವಾಗಿ ಕಾಣಸಿಗುತ್ತವೆ. ಪರಶುವಿನ ದೇವರು ಕತೆಯಲ್ಲಿ ಪರಶುವಿನ ಹೆಂಡತಿ ಸುಜಾತಳಿಗೆ ಶ್ರೀಮಂತೆಯಾಗುವ ಕನಸು ಬಿದ್ದು ತನ್ನೂರಿನ ಅಷ್ಟೂ ಶ್ರೀಮಂತರನ್ನೂ ದುಡಿಸಿ ದಣಿಸುತ್ತಿದ್ದಳು. ಮೈಮೇಲೆ ದೇವರು ಬರುವ ಪರಶುವಿನ ಪಾತ್ರ ಕ್ರಾಂತಿಕಾರಕವಾದದ್ದು. ಒಂದೆಡೆ ತಮ್ಮ ಜಾತಿಯನ್ನೇ ಬಚ್ಚಿಟ್ಟು ಸುಖವಾಗಿ ಬದುಕಿಸಲು ಹವಣಿಸುವ ಸುಜಾತ, ಮತ್ತೊಂದೆಡೆ ತನ್ನ ಜಾತಿಯನ್ನು ದೇವರ ಮೂಲಕ ಬಟಾಬಯಲು ಮಾಡುವ ಪರಶು. ಒಡೆಯ ದೇವಯ್ಯನಿಗೆ ಹೇಳುವ ನಿನ್ನ ಹೆಂಡತಿ ಪರಶುವಿನೊಂದಿಗೆ ಮಲಗಿದ್ದಳು ಎಂಬ ಪರಶುವಿನ ದೇವರ ನುಡಿ ಮತ್ತು ಇಂತಹ ಕಾರಣಗಳಿಂದಾಗಿಯೇ ಕುಟುಂಬವನ್ನು ಕಟ್ಟಿಕೊಂಡು ಊರೂರು ಅಲೆಯಬೇಕಾದ ಸುಜಾತಾಳ ಅಸಹಾಯಕತೆ. ಪಾಸಿಂಗ್ ಕ್ಲೌಡ್ಸ್ ಕತೆ ಚಿತ್ರಿಸುವ ಬದುಕನ್ನೇ ಡಾಕ್ಯುಮೆಂಟರಿ ಮಾಡುವ, ಹೊಟ್ಟೆಯಲ್ಲಿರುವ ಇನ್ನೂ ಹುಟ್ಟದ ಮಗುವನ್ನು ಮಾರಲು ತೀರ್ಮಾನಿಸುವ ತಾಯಿ ಸೆಲ್ವಿ ಮನಕಲಕುವ ಸದ್ಯೋವರ್ತಮಾನದ ವಾಸ್ತವಗಳು. ನಗರೀಕರಣ ಏಕಕಾಲದಲ್ಲಿ ಸೃಷ್ಟಿಸುವ ಔದ್ಯೋಗೀಕರಣ ಮತ್ತು ಹಿಂಸೆ ಮುಳ್ಳುಗಳು ಕತೆಯಲ್ಲಿ ತೆರೆದುಕೊಳ್ಳುತ್ತವೆ(ಹಳ್ಳಿಯಿಂದ ಉದ್ಯೋಗ ಹುಡುಕಿ ಹೊರಟ ಟಿಪ್ಪು, ಅವನನ್ನು ಹುಡುಕಿ ಹೋಗುವ ಹೆಂಡತಿ ಸುಷ್ಮ, ಕಾಂಟ್ರಾಕ್ಟರುಗಳು ಅತ್ಯಾಚಾರವೆಸಗಿ ಅವಳನ್ನು ಕೊಲೆಮಾಡುವ, ಟಿಪ್ಪುವನ್ನೂ ಮುಗಿಸುವ ಕತೆ).

ದಾರಿ, ಸುಳಿ, ಪ್ರಶ್ನೆ, ಪಯಣ, ಪಾಸಿಂಗ್ ಕ್ಲೌಡ್ಸ್, ಪರಶುವಿನ ದೇವರು, ನೆರಳು, ಮನಸು ಅಭಿಸಾರಿಕೆ ಇವು ಈ ಸಂಕಲನದ ಮಹತ್ವದ ಕತೆಗಳು. ಇವು ಕನ್ನಡ ಸಾಹಿತ್ಯದಲ್ಲಿ ಸದಾ ಜೀವಂತವಾಗಿರಬಹುದಾದ ಕಸುವುಳ್ಳ ಕತೆಗಳು. ನೆರಳು, ನನ್ನ ಹಾಡು ನನ್ನದು, ಬಾಹುಗಳು ಈ ಕತೆಗಳ ವಸ್ತು, ಆಶಯ ಉತ್ತಮವಾಗಿದ್ದರೂ ಅನಗತ್ಯ ವಿವರಗಳು ಇಡಿಕಿರಿದು ಟಾಕೇಟಿವ್ ಎನಿಸುತ್ತದೆ.

ಶಾಂತಿಯವರ ದಿಟ್ಟವಾದ ಕಥಾ ನಿರೂಪಣೆ ಮಹಿಳಾ ಸಾಹಿತ್ಯವು ಹೊಸ ತಲೆಮಾರಿನಲ್ಲಿ ಪುಟಿದೇಳುತ್ತಿರುವ ಸೂಚನೆಯನ್ನು ಕೊಡುತ್ತದೆ. ಮಹಿಳೆಯನ್ನು ಹತ್ತಿಕ್ಕಲಾದ ಸಿದ್ಧಮಾದರಿಗಳಿಂದ ಹೊರಬರುವ ಅವರ ಚಿಂತನೆಗಳು ಸಮಕಾಲೀನ ತುರ್ತುಗಳೂ ಹೌದು. ಅವರ ದಿಟ್ಟ ಅಭಿವ್ಯಕ್ತಿಗಳಿಗೆ ಸಾಕ್ಷಿ ಈ ಸಾಲುಗಳು:
_ಅವನ ತೊಡೆಯನ್ನು ನನ್ನ ಕಾಲು ತಲುಪಿದೆ. ಬೆಡ್ಶೀಟ್ನಿಂದ ಕಾಲುಗಳನ್ನ ಮುಚ್ಚಿಕೊಂಡಿದ್ದೇನಾದರೂ ಯಾವುದೋ ಒಂದು ಹಿತವಾದ ಶಾಖ? ಶಾಖದಂಥದ್ದೇ ಏನೋ ಒಂದು ಅವನ ತೊಡೆಗಳಿಂದ ಹಾದು ನನ್ನ ಹೆಬ್ಬೆರಳಿಗೆ ಇಳಿದು ಕಾಲುಂಗುರದ ಬೆರಳಿಗೆ ಹಾದು, ಅಂಗಾಲಿಡೀ ತುಂಬಿ, ಮೀನಖಂಡದ ಮೇಲೆ ಹತ್ತಿ, ತೊಡೆಯನ್ನೆಲ್ಲ ತುಂಬಿ, ಮುಂಬರಿದು ಮತ್ತೆಲ್ಲೋ ಜಮೆಯಾಗಿ, ಮತ್ತೂ ಹಾಗೆ ಮೇಲು ಮೇಲಕ್ಕೆ ತಲುಪಿ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ ಅನಿಸಿತು_(ಪಯಣ)

_ಕಮಲದ ಹೂವನ್ನು ಕಿತ್ತವರ ಕಾಲು ಕೆಸರಾಗಬಹುದು. ಹೂವಿಗೆ ಆ ಭಯವಿಲ್ಲ_ (ನನ್ನ ಹಾಡು ನನ್ನದು)

_ಮುಖದಲ್ಲಿನ್ನೂ ಒಂದು ಕಾಂತಿಯಿದೆ. ಹಾಗೇ ಚೂಡಿಯನ್ನೊಮ್ಮೆ ಸೊಂಟದ ಹಿಂದೆ ಕೈ ಹಾಕಿ ಬಿಗಿ ಮಾಡಿ ನೋಡಿದರೆ ಹೊಟ್ಟೆ ಒಂಚೂರು ಮುಂದೆ ಉಬ್ಬಿಕೊಂಡಿರುವುದು ಕಾಣುತ್ತದೆ..ಹಾಗಿಲ್ಲವಾದರೂ ಅನಾರ್ಕಲಿ ಚೂಡಿಯಲ್ಲಿ ಹೊಟ್ಟೆಯ ಉಬ್ಬು ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆ ಉಸಿರು ಒಳಕ್ಕೆಳೆದು ಹೊಟ್ಟೆಯನ್ನು ಒಳಕ್ಕೆಳೆದುಕೊಂಡು ನೋಡಿಕೊಂಡೆ..ಮೈಮಾಟ ಚೆನ್ನಾಗಿದೆ ಅನಿಸಿ ಖುಷಿಯಾಯ್ತು_(ಮನಸು ಅಭಿಸಾರಿಕೆ)


ಶಾಂತಿ ಕೆ ಅಪ್ಪಣ್ಣ ಅವರಿಗೆ ಅಭಿನಂದನೆಗಳು! ಕೊಡಗಿನ ಸದ್ಯದ ಮಹಿಳಾ ಸಾಹಿತ್ಯದ ದರ್ಶನಕ್ಕೆ ಅವಕಾಶವನ್ನಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೂ ಋಣಿ.
*

ಕಾಜೂರು ಸತೀಶ್

(ಫೆಬ್ರವರಿ ೪, ೨೦೧೭ರಂದು ಮಡಿಕೇರಿ ಪ್ರೆಸ್ ಕ್ಲಬ್ನಲ್ಲಿ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಂದರ್ಭ ವ್ಯಕ್ತಪಡಿಸಿದ ಅನಿಸಿಕೆಯ ಆಯ್ದ ಭಾಗ)




ಮರ

ಮುರಿದು ಬೀಳುವಾಗ
ಮರ ಮಾತನಾಡುತ್ತದೆ
ಜೀವಮಾನದ ನಾಲ್ಕೇ ನಾಲ್ಕು ಶಬ್ದ!
*
ಎಲ್ಲೋ ಮರಕಡಿಯುತ್ತಿದ್ದಾರೆ
ಕಿರುಚುತ್ತಿರುವುದು ಯಂತ್ರವೋ/ ಮರವೋ?
*
ಮರ ಮಾತು ಕಲಿತ ದಿನ
ಮನುಷ್ಯ ಭಿತ್ತಿಪತ್ರವಾಗಿ ಅಂಟಿಕೊಂಡಿರುತ್ತಾನೆ
ಅದರ ಗೋಂದಿನಲ್ಲಿ.
*
ಮರ
ಸದ್ದಿಲ್ಲದೆ ದೇವರುಗಳ ಸಾಕಿಕೊಂಡಿದೆ
ಮನುಷ್ಯ ಕೊಡಲಿ ಹಿಡಿದಿದ್ದಾನೆ.
*
ಶ್ವಾಸಕೋಶಕ್ಕೆ ಮರದ ಕಥೆ ಹೇಳಿದೆ
'ಒಂದು ಎಲೆಯನ್ನಾದರೂ ಮೂಗಿನೊಳಗಿಳಿಸು
ನೋಡಬೇಕು' ಎಂದಿತು.
*


ಎಂದೋ ಉರುಳಿಬಿದ್ದಿದೆ ಮರ
ಇನ್ನೂ ಶವದ ನಾತವಿಲ್ಲ.
*
ಈ ಮರ ಸತ್ತು ವರುಷ ಎರಡು.
ನಿಂತೇ ಇದೆ ಇನ್ನೂ
ದಿನಕ್ಕೆರಡು ಸಲ ಸೂರ್ಯನಿಗೆ ಸೋಮಾರಿ ಕಟ್ಟೆ.
*
ಅಷ್ಟೋ ಇಷ್ಟೋ ಉಳಿದ ಭೂಮಿಯನ್ನು
ಹಿಡಿದಿಟ್ಟುಕೊಂಡಿದೆ ಮರ ಬೇರಿನಲ್ಲಿ
*

ಕಾಜೂರು ಸತೀಶ್