ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 31, 2016

ಸಾವೊಂದನು ಬಿಟ್ಟು

ಇಂದಿನ ಸನ್ನಿವೇಶಗಳನ್ನು ಗಮನಿಸಿದರೆ ಫೇಸ್ಬುಕ್ಕು, ವಾಟ್ಸಾಪ್ಪು, ಗೋಷ್ಠಿಗಳಲ್ಲಿ ಗುರುತಿಸಿಕೊಂಡರೆ ಮಾತ್ರ ಕವಿ. ಎಲ್ಲೋ ತಮ್ಮ ಪಾಡಿಗೆ ತಾವು ಬರೆಯುತ್ತಿರುವ ಅದೆಷ್ಟೋ ಮಂದಿ ಮುಖ್ಯವಾಹಿನಿಗೆ ಬರದೆ ಒದ್ದಾಡುತ್ತಿದ್ದಾರೆ. ಪಾಪ, ಅವರಿಗೆ ಪ್ರಚಾರದ ಗಿಮಿಕ್ಕೂ ಗೊತ್ತಿರುವುದಿಲ್ಲ. ಕೆಲವೊಮ್ಮೆ ಪತ್ರಿಕೆಗಳೂ ಪ್ರೋತ್ಸಾಹ ನೀಡುವುದಿಲ್ಲ. ಮತ್ತೊಂದು ವಿಷಾದವೆಂದರೆ ಕೆಲವು ಖ್ಯಾತನಾಮರಿಗೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಪ್ರಶಸ್ತಿ, ಅದೂ ಇದೂ ಅಂತ ಸಿಗುತ್ತಿದೆ. ಇದು ಪ್ರತಿಭೆಗೆ ಸಂದದ್ದೋ ಅಥವಾ ಹೆಸರಿಗೆ ಸಂದದ್ದೋ ಎನ್ನುವುದೇ ಗೊಂದಲ. ಅದೇನೇ ಇರಲಿ ಕನ್ನಡದಲ್ಲಿ ಹಲವು ಯುವಕವಿಗಳು ತಮ್ಮ ಪಾಡಿಗೆ ತಾವು ಬರೆಯುತ್ತಾ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸುತ್ತಿರುವುದನ್ನು ಗಮನಿಸಿದರೆ ಖುಷಿಯಾಗುತ್ತದೆ

ಸ್ವಾಮಿ ಪೊನ್ನಾಚಿ swamyponnachi123@gmail.com

ಸಮಕಾಲೀನ ಕಾವ್ಯಲೋಕದ ಮುಖವಾಡಗಳನ್ನು ಹೀಗೆ ಬಯಲುಮಾಡುವ ಸ್ವಾಮಿ ಪೊನ್ನಾಚಿಯವರ ಸಾವೊಂದನು ಬಿಟ್ಟು ಎಂಬ ತಮ್ಮ ಪ್ರಥಮ ಕವನ ಸಂಕಲನವನ್ನು ಮೊನ್ನೆಯಷ್ಟೇ ಓದಿದೆ. ಪ್ರಚಾರದ ಬೆನ್ನುಹತ್ತದ (ಪತ್ರಿಕೆಗಳ ಪ್ರಿಜ್ಯುಡೀಸ್ಗೆ ತುತ್ತಾಗದ)ಈ ಕವಿ, ಪ್ರಥಮ ಸಂಕಲನದಲ್ಲೇ ಸಾಧಿಸಿದ ಸಿದ್ಧಿಯನ್ನು ನೋಡಿ ಬೆರಗುಗೊಂಡು ಇದನ್ನೆಲ್ಲ ಇಲ್ಲಿ ಬರೆಯುತ್ತಿದ್ದೇನೆ.
ಪ್ರೀತಿ, ವಿರಹ, ಅರಾಜಕತೆ, ಅಸಮಾನತೆಗಳನ್ನು ಕಾವ್ಯದ ವಸ್ತುವಾಗಿಸಿಕೊಂಡ ಪೊನ್ನಾಚಿಯವರ ಕವಿತೆಗಳು ಹೊಸಬಗೆಯ, ಎಚ್ಚರದ ಅಭಿವ್ಯಕ್ತಿ. ಎಲ್ಲೂ ಅವು ಬಂಡಾಯದ ಬೀಸು ಹೇಳಿಕೆಗಳಂತೆ, ಘೋಷಣೆಗಳಂತೆ ಕಾಣಿಸುವುದಿಲ್ಲ.

'ಸಾವೊಂದನು ಬಿಟ್ಟು' ಸಂಕಲನದ ಕೆಲವು ಕಾಡುವ ಸಾಲುಗಳು:

ರಾತ್ರಿಯಿಡೀ ಕನಸು ಕಂಡು ಕನವರಿಸಿದ ತಲೆ
ಎಲ್ಲಿ ಮಾಯವಾಯಿತು

(ಭವಾವಳೀ)


ಕಿತ್ತುಹೋದ ಯಕ್ಕಡಕ್ಕೆ ಪಿನ್ನು ಸಿಕ್ಕಿಸಿಕೊಂಡು ನಡೆದ ಈ ರಾಜಬೀದಿಯಲ್ಲೇ
ಚಕ್ರವರ್ತಿಯೊಬ್ಬ ದಿಗ್ವಿಜಯದ ಮೆರವಣಿಗೆ ಮಾಡಿಸಿಕೊಂಡಿದ್ದು

(ಮೋಟುಗೋಡೆ)


ಈ ರಾಜ್ಯದಲ್ಲಿ ಗಿಡಮರವೆಲ್ಲಾ ಚಿನ್ನದ ಹಣ್ಣು ಬಿಡತೊಡಗಿ
ರೆಕ್ಕೆಯಿಲ್ಲದ ನಾನು ಗಿಡದಿಂದ ಮುಗಿಲಿಗೆ ಹಾರತೊಡಗುತ್ತೇನೆ
ಪುಕ್ಕವಿಲ್ಲದ ಹಕ್ಕಿಗಳು ಗೂಬೆಗಳಂತೆ ಬೆಪ್ಪನೆ ನೋಡುತ್ತವೆ
ಹೊಲ ಗದ್ದೆಗಳಲಿ ನೋಟು ಚಿಗುರಿ ಚಿಲ್ಲರೆ ಉದುರುದುರಿ
ಝಣಝಣಗುಡಿಸಿ ಒಕ್ಕಣೆ ಮಾಡಿ ಚೀಲ ತುಂಬಿಸಿ ಸಾಗಿಸಿ
ಎಣಿಸಿಡುವುದರೊಳಗೆ ಆಕಾಶದಲ್ಲಿ ಬೆಳ್ಳಿಚುಕ್ಕೆ ಮೂಡಿಬಿಡುತ್ತದೆ

(ಚಿಗುರೊಡೆಯದ ಕನಸುಗಳು)


ಇರುವ ಒಂದು ಜಗತ್ತಿಗೆ
ಅದೆಷ್ಟು ಮಂದಿ ಜಗದ್ಗುರುಗಳೋ?

(ಗುಂಡುಬದನೆಕಾಯಿ)


ಬರಡು ಹೃದಯದಲಿ ಪ್ರೀತಿಬೀಜ ಬಿತ್ತಹೊರಟಿದ್ದು ನಿಮ್ಮದೇ ತಪ್ಪು
ಸುಂಕದ ಕಟ್ಟೆಯಲ್ಲಿ ಭಾವುಕತೆಯ ಕಣ್ಣೀರಿಟ್ಟಿದ್ದು ನಿಮ್ಮದೇ ತಪ್ಪು

(ನಿಮ್ಮದೇ ತಪ್ಪು)

*
ಇಂತಹ ಹೊಸ ಸಂವೇದನೆಗಳಿಗೆ ತೆರೆದುಕೊಳ್ಳೋಣ. ನಿಜದ ಕವಿತೆಗಳನ್ನು ಗೆಲ್ಲಿಸೋಣ.
ಸ್ವಾಮಿ ಪೊನ್ನಾಚಿಯವರಿಗೆ ಅಭಿನಂದನೆಗಳು.
*

ಕಾಜೂರು ಸತೀಶ್

ಕವಿತೆಯೊಂದು ಜನಿಸುವಾಗ

ನೋಡಿದ್ದು ನಾನೇ
ಹಣೆ ಹಣೆ ಚಚ್ಚಿಕೊಂಡಿದ್ದೂ ನಾನೇ
ಅತ್ತೂ ಅತ್ತೂ ಸ್ಫೋಟಗೊಂಡಿದ್ದೂ ನಾನೇ

ಕಾಲಿನ ಬೆರಳುಗಳ ಬಿಗಿದದ್ದು
ಸ್ನಾನ ಮಾಡಿಸಿದ್ದು
ಮೇಜಿನ ಮೇಲಿಂದೆತ್ತಿದ್ದು
ಅಗರಬತ್ತಿ ಹಚ್ಚಿಟ್ಟಿದ್ದೂ ನಾನೇ

ಜನವೋ ಜನ
ಹೂ ಹಾರ ಹಾಕಿ
ಹೊದಿಸಿದರು ಶ್ವೇತ ವಸ್ತ್ರ
ಕಡೆಯ ಚುಂಬನವೆಂಬಂತೆ
ಬೆನ್ನಿಗೊಂದು ಮುದ್ರೆ

ಇಷ್ಟೆಲ್ಲ ಜವಾಬ್ದಾರಿ ಹೊತ್ತು
ದುಃಖದ ಕೆಂಪು ಪೆಟ್ಟಿಗೆಯೊಳಗೆ
ಮಲಗಿಸಿದ್ದೂ ನಾನೇ

ಇದಕ್ಕಿಂತ ಹೆಚ್ಚಾಗಿ
ಮಣ್ಣು ಮುಚ್ಚಲಿಕ್ಕೆ
ಇನ್ನು ನನ್ನಿಂದಾಗದು
ನನ್ನಿಂದಾಗದು!
*

ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ- ಕಾಜೂರು ಸತೀಶ್

ಅಲೆ ತಾಕಿದರೆ ದಡ

ಕವಿತೆಯನ್ನು ಬರೆದು ಮುಗಿಸಿದ ಮೇಲೆ ಏರ್ಪಡುವ ತೃಪ್ತಿಯಷ್ಟೇ ಅತೃಪ್ತಿಯದ್ದೂ ಪಾಲಿರುತ್ತದೆ. ಈ 'ಅತೃಪ್ತಿ'ಯೇ ಕವಿತೆಯಾದಿಯಾಗಿ ಎಲ್ಲ ಕಲೆಗಳನ್ನು ಪಕ್ವಗೊಳಿಸುತ್ತಾ ಸಾಗುವುದು. ಯಾವುದೋ ಕ್ಷಣದಲ್ಲಿ 'ಸಂಭವಿಸುವ' ಈ ಪವಾಡ ಎಲ್ಲ ಕಲಾಕಾರರಿಗೊಂದು ಬೆರಗು.

' ಈ ಹೊತ್ತಿನ ಕವಿತೆಗೆ ನೈರಾಶ್ಯ ಬಾಧಿಸಿದೆ' - ಹೀಗೆಂದುಕೊಳ್ಳುತ್ತಲೇ ಕವಿತೆಗೆ ಮುಖಾಮುಖಿಯಾಗುತ್ತಿದ್ದೇವೆ. ಕಾವ್ಯದ ಕುರಿತ ಈ ಬಗೆಯ ನೇತ್ಯಾತ್ಮಕ ಅಂಶಗಳನ್ನು ನೀಗಿಸಿಬಿಡುವ ಸಂಕಲನಗಳು ಈಚೆಗೆ ಪ್ರಕಟವಾಗುತ್ತಿರುವುದು ಸಂತೋಷದ ಸಂಗತಿ. ವಾಸುದೇವ ನಾಡಿಗ್ ಅವರ ಅಲೆ ತಾಕಿದರೆ ದಡ ಅವುಗಳಲ್ಲಿ ಮುಖ್ಯವಾದುದು.

ವಾಸುದೇವ ನಾಡಿಗ್ ಅವರ ಆರನೆಯ ಕವನ ಸಂಕಲನವಿದು. ವಿಮರ್ಶೆ, ಪ್ರಬಂಧ, ಸಣ್ಣ ಕತೆ ಮುಂತಾದ ಪ್ರಕಾರಗಳ ಒಳಗೆ ಇಳಿಯಬಲ್ಲವರಾದರೂ, 'ಕವಿತೆ' ಎಂಬ ಧ್ಯಾನಸ್ಥ ಮಾರ್ಗವನ್ನೇ ತಮ್ಮ ಪ್ರಧಾನ ಅಭಿವ್ಯಕ್ತಿಯಾಗಿಸಿಕೊಂಡವರು.

ನಾಡಿಗರ ಹಿಂದಿನ ಎರಡು ಸಂಕಲನಗಳನ್ನು( ವಿರಕ್ತರ ಬಟ್ಟೆಗಳು , ನಿನ್ನ ಧ್ಯಾನದ ಹಣತೆ) ಓದಿಕೊಂಡಿರುವ ಅನುಭವದ ನೆಲೆಯಲ್ಲಿ ಸಾದೃಶ್ಯವೆನಿಸಿದರೂ, 'ಅಲೆ ತಾಕಿದರೆ ದಡ' ಅದಕ್ಕಿಂತ ಬೇರೆಯದೇ ಆದ ಗಟ್ಟಿ ಕಲಾಕೃತಿಯಾಗಿ ರೂಪಿತವಾಗಿದೆ.

ಇಲ್ಲಿನ ಕವಿತೆಗಳು ಬದುಕಿನ ತಾತ್ವಿಕತೆಯನ್ನು ಚಿಂತಿಸುವಲ್ಲಿ ತಳವೂರಿದೆ. ಬದುಕಿನ ವೈರುಧ್ಯಗಳ ಮೇಲಿನ ಗಹನ ಆಲೋಚನೆಯೇ ನಾಡಿಗ್ ಅವರ ಕವಿತೆಗಳು. ಅವು 'ನಿಶಬ್ದಗಳಲಿ ಏಳುವ ಶಬ್ದಗಳು', 'ಬದುಕಿನ ಸಂತೆಗಳಲಿ ಜೀವಪಡೆದು ಗದ್ದಲಗಳ ನಡುವೆ ಗದ್ದಲವಾಗದ ಹಾಗೆ' ಮೂಡುವಂಥವು. 'ಮನುಷ್ಯನೆಂಬ ಸೋಜಿಗದ ಪ್ರಾಣಿ ಮತ್ತು ಜೀವನವೆಂಬ ಅನೂಹ್ಯ ಬಯಲು ಎರಡನ್ನೂ ಕುರಿತು ಗಾಢವಾಗಿ ಚಿಂತಿಸುತ್ತಾ ಹೋದಾಗ' ಅಭಿವ್ಯಕ್ತಗೊಂಡುಬಿಡುತ್ತವೆ.


ವಾಸುದೇವ ನಾಡಿಗರ ಮಾಗುವಿಕೆಗೆ ಸಾಕ್ಷಿ ಅವರ ಶ್ರದ್ಧೆಯ ಕಾವ್ಯ ಕಟ್ಟುವಿಕೆ( ದೇಸೀಯ ಮತ್ತು ಐರೋಪ್ಯ ಮಾದರಿಗಳ ಹದಬೆರೆತ ಪಾಕ) ಮತ್ತು ಪ್ರತಿಮೆ, ನುಡಿಗಟ್ಟುಗಳನ್ನು ಸಹಜವಾಗಿ - ಪ್ರಮಾಣಬದ್ಧವಾಗಿ ದುಡಿಸಿಕೊಳ್ಳುವ ಕಲೆ. (ಅಡಿಗ+ಕೆ.ಎಸ್.ನ. ಹಾಗೆ)

ಇಷ್ಟು ಸುದೀರ್ಘವಾಗಿ ಕವನ ಸಂಕಲನವೊಂದು ನನ್ನನ್ನು ಓದಿಸಿಕೊಂಡ ಉದಾಹರಣೆಗಳಿಲ್ಲ. ಆ ಶ್ರೇಯಸ್ಸು 'ಅಲೆ ತಾಕಿದರೆ ದಡ'ಕ್ಕೆ ಸಲ್ಲಬೇಕು. ಅವರ ಕಾವ್ಯದ 'ನದಿಹರಿವು' ನಮ್ಮೊಳಗೆ ಹರಿಯುತ್ತಿರುವಾಗಲೇ ಕ್ಷಣಕ್ಷಣವೂ ನಿಂತು


ಏನನ್ನೋ ಗಹನವಾಗಿ ಆಲೋಚನೆಗೆ ಹಚ್ಚುತ್ತದೆ. ಅಂತಹ ಆಲೋಚನೆಗಳಲ್ಲಿ ಓಶೋ, ಬುದ್ಧ , ಗಾಂಧಿ ಮತ್ತಿತರ ಪಾತ್ರಗಳು ಬಂದುಹೋಗುತ್ತವೆ. ಬಹುದೊಡ್ಡ ಮಾನವೀಯ ಕಾಳಜಿ , ಕಾರುಣ್ಯದ ಹಂಬಲ, ನಾನತ್ವದ ಮತ್ತು ಪ್ರಭುತ್ವದ ವಿಡಂಬನೆ, ಸಂಬಂಧಗಳ ಶೋಧ, ನೆಲಮೂಲ ಪ್ರಜ್ಞೆಯ ವಿನಾಶ, ಸ್ತ್ರೀ ಪ್ರಜ್ಞೆ.. ಹೀಗೆ ವಿಭಿನ್ನ ಆಯಾಮಗಳ ಮೇಲೆ ಧ್ಯಾನ ಹೊರಳುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಇವು ಗಾಂಧೀಜಿಯವರ 'My Experiment with Truth' ಮಾದರಿಯವು.

'ಅಲೆ ತಾಕಿದರೆ ದಡ'ದ ಒಳಗಿಳಿಯುವ ಕೆಲವು ಸಾಲುಗಳು :
ಸಂದುಹೋದ ಅಪ್ಪ
ಪ್ರತಿ ವಸಂತಕ್ಕೂ ನೆನಪಾಗುತ್ತಾನೆ

(ಕಳೆದ ಶಿಶಿರಗಳಲಿ ಉದುರಿದ ಎಲೆಗಳು)
*

ಹೆಳವನ ಹೆಗಲು ಖಾಲಿಯಿದೆ
ಕುರುಡ ಕೂಡದಂತೆ ಕಾಯಬೇಕು

*

ಬೆಳಕನ್ನು ಕೆಣಕಲೆಂದೇ
ಜನ್ಮವೆತ್ತಿದ ಕತ್ತಲಿಗೆ
ಬೆಳಕನ್ನುಳಿದು ಬಾಳಿಲ್ಲ

(ಅಲೆ ತಾಕಿದರೆ ದಡ)
*

ಹಿಮದ ತರಗತಿಯಲ್ಲಿ
ಬರೀ ಬೆಂಕಿ ಕುರಿತೇ ಪಾಠ

(ನಿಂತರೆ ನೆಲೆ ಸೋತರೆ ಮುಕ್ತಿ)
*

ಏನೂ ಮಾತಾಡಲೊಲ್ಲದ
ಬೇರಿಗೆ ಎಲ್ಲ ಗೊತ್ತು

(ಸತ್ಯದ ಸಂಗ ಮೌನ)
*

ನೀರ ಸಖ್ಯಕ್ಕೆ ಬಿದ್ದ ಉಪ್ಪು
ಬಿಸಿಲ ಬಾಹುಗಳಲ್ಲಿ ಸಿಕ್ಕ ಸಮುದ್ರ
ಕಾಲ ಕಟಕಟೆಯಲ್ಲಿ ಸತ್ಯ ಚಿಗುರಿ
ಉಪ್ಪು ಸಮುದ್ರವಾಗಿ ಸಮುದ್ರ ಉಪ್ಪಾಗಿ
ರೂಪ ರೂಪಾಂತರಗಳಾಚೆ ಎಲ್ಲ ನಿರೂಪ

(ಸಮುದ್ರ ಮತ್ತು ಉಪ್ಪು)
*

ನದಿಗಳಲೂ ಉಳಿಯದ ಸುಖ
ಸಮುದ್ರದ ಪಾಲಾಯಿತು
ಉಪ್ಪು ತಿನ್ನುವುದಕೆ ಅಣಿಯಾಗಬೇಕು

(ಗಮ್ಯ)
*

ನನಗೆ ನಾನೇ ದುರ್ಗಂಧ ಬೀರುವ ಸತ್ಯ
ತಡವಾಗಿಯಾದರೂ ಅರಿವಾಯಿತು

(ನನಗೆ ನಾನೇ ದುರ್ಗಂಧ )
*

ಬದುಕುಗಳೆಲ್ಲ ಕತೆಗಳಾಗದೆ
ಕತೆಗಳ ಕೊನೆಯೇ ಬದುಕಾಗಿದ್ದರೆ
ಇಷ್ಟೊಂದು ಕತೆ ಹೇಳುವ ಹಾಗಿರಲಿಲ್ಲ ಕೇಳುವ ಹಂಗಿರಲಿಲ್ಲ

(ಕತೆಗಳ ಜೊತೆಜೊತೆಗೆ)
*

ಲೂಟಿಕೋರರೇ ರಾಜರಾದರೋ
ರಾಜರೇ ಲೂಟಿ
ಮಾಡಿದರೋ
ಗಾಯಗೊಂಡ ಮಣ್ಣು ಮಂದಿ
ಕೊತ್ತಲ ತುದಿಗೆ ಕಿಸಕ್ಕನೆ
ನಕ್ಕ ಲಾಂಛನ

(ಇತಿಹಾಸ )

ಹೊಸ ತಲೆಮಾರಿನ ಹುಡುಗರೊಂದಿಗೆ ಹುಡುಗನಾಗಿ ಬೆರೆಯುವ ನಾಡಿಗರ ಗುಣವೇ ಕವಿತೆಯಂತೆ . ಅವರ ಕವಿತೆಗಳಿಗೆ ಒಳ್ಳೆಯ ಓದುಗರು ಸಲ್ಲಲಿ; ಈ ಲೋಕದ ಆತ್ಮಶೋಧನೆಗೆ ಅವಕಾಶ ಒದಗಿ ಬರಲಿ.
ಅವರೇ ಹೇಳುವಂತೆ -
ದ್ವೀಪಗಳೆದುರು
ಹಚ್ಚಿಡಿ ದೀಪಗಳ
ಬೆಳಕಿಗಾಗಿ ಅಲ್ಲ
ಬದುಕಲಿಕೆ

(ದ್ವೀಪಗಳಲಿ ಬದುಕುವುದು ಸಾಕಾಗಿದೆ)
*

ಕಾಜೂರು ಸತೀಶ್

Saturday, December 24, 2016

RIP(ಇದು ಕವಿತೆಯಲ್ಲ)

RIP ಮೇಷ್ಟ್ರಿಗೆ!


ಎಂದೋ ಚುಚ್ಚಿದ ಆ ಸಿರಿಂಜು
ಸ್ವಲ್ಪ ಸ್ವಲ್ಪವೇ ಜೀವ ನೆಕ್ಕಿ
ಪೂರ್ಣ ಉಂಡು ತೇಗಿದಾಗ
ಆತ ಕೊಲೆಗೀಡಾದ ನನ್ನೊಳಗೆ
RIP

ಸಾಯುವುದಕ್ಕೆ ಎಷ್ಟು ಚಂದದ ತರಬೇತಿ!
ಮೊದಲು ರಗಸದಅ
ಕಾಗುಣಿತ ಎಬಿಸಿಡಿ
ಕೂಡು ಕಳೆ..

ಟಿಎ ಡಿಎ ಇಲ್ಲದಿದ್ದರೇನು?

ಹಕ್ಕಿ ಹೇಗೆ ಹಾರುತ್ತೆ
ನಾಯಿ ಹೇಗೆ ಬೊಗಳುತ್ತೆ
ಮಗು ಹೇಗೆ ಅಳುತ್ತೆ..
ಎಷ್ಟು ಚಂದದ ತರಬೇತಿ!

ತಿನ್ನುವ ಕೂರುವ
ಮಲಗುವ ಕೈತೊಳೆಯುವ
ಉಚ್ಚೆ ಹುಯ್ಯುವ ವಿಧಾನಗಳನ್ನು
ಪುಟಗಟ್ಟಲೆ ಬರೆಯುವುದನ್ನು
ಎಷ್ಟು ಚಂದ ಕಲಿಸಲಾಗುತ್ತದೆ

ಮೂಟೆ ಹೊರುವುದನ್ನು
ಕಸ ಗುಡಿಸುವುದನ್ನು
ಉಗಿದ ಉಗುಳನ್ನು
ಮುಖದಲ್ಲೇ ಇಟ್ಟುಕೊಳ್ಳುವುದನ್ನು
ಷಂಡನಾಗುವುದನ್ನು
ಎಷ್ಟು ಚಂದ ಕಲಿಸಲಾಗುತ್ತದೆ!

ಮಕ್ಕಳು ಬೀದಿಗೆ ಬಿದ್ದಾಗ
ಇಲ್ಲಿ ಹಸಿರು ಶಾಯಿಯಲ್ಲಿ
ಎದೆ ಸೀಳಿಸಿಕೊಳ್ಳಲು
ಮಗು ಅಲ್ಲಿ ಹಠ ಹಿಡಿದಾಗ
ಇಲ್ಲಿ
ಪೋಸ್ಟ್ಮಾರ್ಟಂ ಮಾಡಿಸಿಕೊಳ್ಳಲು
ಎಷ್ಟು ಚಂದ ಕಲಿಸಲಾಗುತ್ತದೆ!

ಕವರಿನಲ್ಲಿ ತುರುಕಿ
ಡ್ರಾಯರಿಗೆ ತುತ್ತುಣಿಸಲು
ಹಿಂಸೆಯ ಸಿರಿಂಜು ಚುಚ್ಚಿಸಿಕೊಳ್ಳಲು
ಎಷ್ಟು ಚಂದದ ತರಬೇತಿ!

RIP ನನ್ನೊಳಗಿನ ಮೇಷ್ಟ್ರಿಗೆ
RIP ಅವನ ಅಸಂಖ್ಯ ಮುದ್ದು ಮಕ್ಕಳಿಗೆ

ಉಘೇ ಉಘೇ ಕೊಲೆಗಡುಕರಿಗೆ!
*

ಕಾಜೂರು ಸತೀಶ್

Tuesday, December 13, 2016

ಆ ವೈದ್ಯ

ಆ ಸೊಳ್ಳೆ ಬಂದು ಚಿಕೂನ್ ಗುನ್ಯಾವನ್ನು ಈ ಊರಿಗೆ ಹಂಚಿ ಹೋಗಿತ್ತು. ಪರೀಕ್ಷಿಸಿಕೊಳ್ಳಲು ಸಮೀಪದಲ್ಲಿರುವ ಕೇರಳ ರಾಜ್ಯಕ್ಕೆ ಸೇರಿದ ಪ್ರಾಥಮಿಕ ಆರೋಗ್ಯ ಕೇಂದ್ರ(ನಮ್ಮ ತಾಲೂಕು/ಜಿಲ್ಲಾಸ್ಪತ್ರೆಯನ್ನು ಹೋಲುವ)ಕ್ಕೆ ಗೆಳೆಯನ ಜೊತೆ ಹೋಗಿದ್ದೆ.

ಆ ವೈದ್ಯರ (ಸಹಾಯಕ ಸರ್ಜನ್) ಮಲಯಾಳಂನಲ್ಲಿ ಅಷ್ಟು ಸ್ಪಷ್ಟತೆ ಇರಲಿಲ್ಲ. 'ತಮಿಳುನಾಡಿನವರಾ ಸರ್?' ಎಂದೆ. 'ಕರ್ನಾಟಕದವನು' ಎಂದರು. ಕನ್ನಡದಲ್ಲಿ ನಮ್ಮ ಮಾತು ಬೆಳೆದು ಅವರ ಊರಾದ ತುಮಕೂರಿನ 'ಶಿರ'(ಶಿರಾ)ಕ್ಕೆ ತಲುಪಿದೆವು.

ಆಮೇಲೆ ಸಿಕ್ಕಾಗಲೆಲ್ಲ ಸಿಕ್ಕಾಪಟ್ಟೆ ಖುಷಿಯಿಂದ ಮಾತನಾಡುತ್ತಿದ್ದರು.

ಕೇರಳದ ಎಲ್ಲೋ ಒಂದು ಕಡೆ- ಹೃದಯದಲ್ಲಿ ಕನ್ನಡ ತುಂಬಿದ ಅದೇ ಮಲಯಾಳಂನಲ್ಲಿ ವ್ಯವಹರಿಸುತ್ತಿರುವ ಆ ವೈದ್ಯರ ನೆನಪಾಗುತ್ತಿದೆ ಈಗ.
*

ಕಾಜೂರು ಸತೀಶ್

Saturday, December 3, 2016

ಹಿಂಸೆ

ಇಷ್ಟು ದಿನ ಅವರು ಒಟ್ಟಿಗಿದ್ದರು. ಇವನು ಕವಿತೆಗಳ ಕುರಿತು ಸೊಲ್ಲೆತ್ತಿದಾಗ, ಅವರು ಹಣದ ಕುರಿತು ಮಾತನಾಡುತ್ತಿದ್ದರು. ಇವನು ಹಸಿವಿನ ಕುರಿತು ಮಾತನಾಡಿದಾಗ, ಅವರು ಬಾಡೂಟದ ಕುರಿತು ಮಾತನಾಡುತ್ತಿದ್ದರು. ಇವನ ಕಥೆ-ಕವಿತೆಗಳು ಅರ್ಧಕ್ಕೆ ತಲುಪಿದಾಗ, ಅವರು ರಾಜಕೀಯದ ಮಾತೆತ್ತಿ ಅದನ್ನು ಸಾಯಿಸಿಬಿಡುತ್ತಿದ್ದರು.

ಅವರೆಲ್ಲ ಹೋದಮೇಲೆ ಹುಟ್ಟಿದ ದಟ್ಟ ಮೌನ ಎಷ್ಟು ಖುಷಿಕೊಡತೊಡಗಿತು ಎಂದರೆ, ಇವನಿಗೆ ಕುಣಿದಾಡಬೇಕೆನಿಸಿತು. ಅವರಿದ್ದಾಗ ಅರಿವಾಗದ ಅವರು ಕೊಡುತ್ತಿದ್ದ ಹಿಂಸೆ ಈ ಖುಷಿಯಲ್ಲಿ ಮತ್ತೆ ಮತ್ತೆ ಕಾಡತೊಡಗಿತು. ಇಷ್ಟು ಕಾಲ ಇಂತಹ ಪರಮ ಸುಖವನ್ನು ಕಳೆದುಕೊಂಡೆನಲ್ಲಾ ಎಂದು ಕ್ಷಣಕ್ಷಣವೂ ಕೊರಗಿ ಆಸ್ಪತ್ರೆ ಸೇರಿದ ಮತ್ತು ಸತ್ತೇ ಹೋದ.

ಅವರು ಮತ್ತೆ ಬಂದರು!
*

ಕಾಜೂರು ಸತೀಶ್

!

ಬೀದಿಯಲ್ಲಿ ಆಶ್ಚರ್ಯಸೂಚಕ ಚಿಹ್ನೆಯೊಂದು ಬಿದ್ದಿತ್ತು. ಯಾರಾದರೂ ಎತ್ತಿಕೊಳ್ಳಬಹುದೆಂದು ಆಸೆಯಿಂದ ದಾರಿಹೋಕರನ್ನು ನೋಡುತ್ತಿತ್ತು.

ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಒಂದು ದಿನ ಅದು ಕಂಪ್ಯೂಟರ್ , ಲ್ಯಾಪ್ಟಾಪ್, ಮೊಬೈಲ್ ಫೋನಿನೊಳಗೆ ಸೇರಿಕೊಂಡು ನಿದ್ದೆಗೆ ಜಾರಿತು.

ಮತ್ತೆ ಏಳಲಿಲ್ಲ!
*

ಕಾಜೂರು ಸತೀಶ್

Thursday, December 1, 2016

ಆಮೇಲೆ ?

ಒಂದು ಕಾಡು ಇತ್ತು
ಆಮೇಲೆ ?
ಒಂದು ಊರು ಇತ್ತು
ಆಮೇಲೆ ?
ನದಿ, ಕೆರೆ, ತೋಡುಗಳಿದ್ದವು
ಆಮೇಲೆ ?
ಕಾಡು, ನಾಡು, ನದಿ, ಕೆರೆ, ತೋಡುಗಳಿದ್ದವು

ಅಷ್ಟೆ !
*
ಮಲಯಾಳಂ ಮೂಲ- ಸೆಬಾಸ್ಟಿಯನ್

ಕನ್ನಡಕ್ಕೆ- ಕಾಜೂರು ಸತೀಶ್

ಮನಃಶಾಸ್ತ್ರಜ್ಞ

ಜನಜಂಗುಳಿಯಲ್ಲಿ ಎಷ್ಟು ಜನ ಹುಚ್ಚರಿದ್ದಾರೆಂದು ತಿಳಿಯಲು
ಒಂದು ದಾಸವಾಳವನ್ನು ಎತ್ತಿ ತೋರಿಸಿದ.

ಅದ ನೋಡಿದ ಕೆಲವರು ಬಿರುಸಾಗಿ ನಡೆದುಹೋದರು
ಕಣ್ಣೆತ್ತಿಯೂ ನೋಡಲಿಲ್ಲ ಕೆಲವರು.

ಕರಗತೊಡಗಿತು ಜನಜಂಗುಳಿ
ಉಳಿದದ್ದು ತಾನೊಬ್ಬನೇ.

ಮನುಷ್ಯರ ಕುರಿತು ನೆನೆನೆನೆದು
ಉಕ್ಕಿದ ನಗು ಬೆಳೆದು ಅಟ್ಟಹಾಸ.

ಎತ್ತಿ ಹಿಡಿದಿದ್ದ ಆ ಹೂವ ಕಿವಿಯ ಮೇಲಿಟ್ಟು
ಹುಡುಕಿ ಹೊರಟ
ಮತ್ತೊಂದು ನಗರಕ್ಕೆ
*
ಮಲಯಾಳಂ ಮೂಲ- ಸೆಬಾಸ್ಟಿಯನ್

ಕನ್ನಡಕ್ಕೆ- ಕಾಜೂರು ಸತೀಶ್