ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, December 1, 2015

ಗಾಯದ ಹೂವುಗಳ ಕುರಿತು ಡಾ.ಕೃಷ್ಣ ಗಿಳಿಯಾರ್ ಅವರ ನುಡಿ

ಕಾಜೂರು ಸತೀಶರ 'ಗಾಯದ ಹೂಗಳು' ಕವಿತೆಗಳನ್ನು ಓದಿದೆ. ಕವಿತೆ ಸ್ವಲ್ಪವೂ ವಾಚ್ಯವೆನಿಸದಂತೆ ಕೆಲವರು ಕಷ್ಟಪಟ್ಟು ಬರೆಯುತ್ತಾರೆ. ಇಲ್ಲಿ ಮಾತ್ರ ಕವಿ ತನ್ನ ಭಾವತೀವ್ರತೆಯ ಸಹಜ ಭಾಷೆಯಾಗಿ ಪ್ರತಿಮೆಗಳನ್ನು ದುಡಿಸಿಕೊಂಡಿದ್ದಾರೆ. ಸಂಗತ ಸಂಗತಿಗಳನ್ನು ಅಸಂಗತದ ಮೂಸೆಯಲ್ಲಿ ಹದವಾಗಿ ಬೇಯಿಸಿದ್ದಾರೆ. ತಲ್ಲಣಗಳನ್ನು ಗ್ರಹಿಸಿ ಸ್ಪಂದಿಸುವಲ್ಲಿ ಹೊಸ ಮಾರ್ಗವನ್ನೇ ಕಂಡುಕೊಂಡಿದ್ದಾರೆ.

ನುಂಗಿದ ಇಲಿ
ಹೊಟ್ಟೆಯೊಳಗೆ ಬದುಕಿದ್ದಷ್ಟು ಹೊತ್ತು
ಮಗು
ಆಮೇಲೆ ಹಾವು (ಹಾವು)

ದುಃಖವೆಂದರೇನೆಂದೇ ಗೊತ್ತಿರದ ಗಾಳಿ
ಶವವನ್ನೂ ಬಿಡದಂತೆ ಅಪ್ಪಿ, ಮುದ್ದಾಡಿ
ಮೆಲ್ಲಗೆ ಕಣ್ಣು ಮುಚ್ಚಿಸಿ
ಹಿಂದಿನಿಂದ 'ಕೂ...' ಎನ್ನುವುದು (ಮೈಲಿಗೆ)

ಹುಟ್ಟುವಾಗ ಅಳುವುದಿಲ್ಲ
ಅವ್ವನ ಗುಪ್ತಾಗಗಳಿಗೆ
ನೋವು ಕೊಡುವುದಿಲ್ಲ
ಹುಟ್ಟಿಸಿದ ಅವಳ
ಮೈಯುದ್ದಕ್ಕೂ ಹರಿದಾಡಿ
ಹರಿದಲ್ಲೆಲ್ಲ ಪಾಚಿಯಂಥ ಹಸಿರು (ನದಿ)

ಹಸಿದ ಜಿಗಣೆಯೇ
ಬಾ, ಹೀರು ನನ್ನನ್ನು
ಸ್ವಲ್ಪದರಲ್ಲೇ ನೀನು
ದ್ರಾಕ್ಷಿಯಾಗಿ ಉದುರುತ್ತಿ
ನೀ ಹೆರುವ ಕೂಸಿಗೆ
ನನ್ನ ಹೆಸರಿಡುವುದ ಮರೆಯದಿರು
ಅಪ್ಪನಾಗುವ ಖುಷಿಯಿದೆ ನನಗೆ (ಮಿಕ್ಕವರಾರನ್ನೂ ಹೀರಕೂಡದು)

ಭೂಕಂಪವಾಗಲಿ
ಸುನಾಮಿಯಾಗಲಿ
ನಮ್ಮಿಬ್ಬರ ಗೋಡೆಗಳ ಮೇಲೆ
ನಮ್ಮಿಬ್ಬರ ಮಿಲನಕ್ಕಾಗಿ (ನಾವಿಬ್ಬರು ತೀರಿಕೊಂಡ ಮೇಲೆ)

ಇದುವರೆಗೆ ಬರೆಸಿಕೊಂಡ ನನ್ನ ಕವಿತೆಗಳೆಲ್ಲವೂ
ವೈದ್ಯನಿಗೆ ಕೊಡಲು ಕಾಸಿಲ್ಲದೆ
ನರಳುತ್ತಲೇ ಇವೆ ಹಸಿನೆಲದ ಮೇಲೆ (ಅಸ್ವಸ್ಥ ಕವಿತೆಗಳು)

ನನ್ನ ಖಿನ್ನತೆ
ಹಡೆಯುತ್ತಲೇ ಇರುತ್ತದೆ
ನಾನದಕ್ಕೆ ಕವಿತೆಯೆಂಬ
ಹೆಸರಿಡುತ್ತಲೇ ಬಂದಿದ್ದೇನೆ (ನನ್ನ ಕವಿತೆ)

ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ
ಒಸರುವ ಅಷ್ಟೂ ರಕ್ತವೂ ಹೂವಿಗೆ ಅಂದ ನೀಡಬೇಕು ( ಗಾಯದ ಹೂಗಳು)

ಲೋಕದ ಆಗುಹೋಗುಗಳಿಗೆ, ಆತ್ಮದ ನೋವಿಗೆ ತೆರೆದುಕೊಳ್ಳುವ ಸಹಜ ಅಭಿವ್ಯಕ್ತಿಯಾಗಿ ಇವರ ಕವಿತೆಗಳಿವೆ. ಓದುತ್ತಾ ಹೋದಂತೆ ಕಾಡುತ್ತಾ ಹೋಗುತ್ತವೆ.

ಅಭಿನಂದನೆಗಳು ಸತೀಶ್...
**

ಡಾ. ಕೃಷ್ಣ ಗಿಳಿಯಾರ್

ಗಾಯದ ಹೂವುಗಳ ಕುರಿತು ಎಂ. ಎಸ್. ರುದ್ರೇಶ್ವರಸ್ವಾಮಿ ಅವರ ಮಾತು

ಸಂಕೋಚ ಸ್ವಭಾವದ ಕವಿ ಕಾಜೂರು ಸತೀಶ್,
ಮಡಿಕೇರಿಯ ಎತ್ತರದ ಮರಗಳಲ್ಲಿನ ಮಿಣುಕು ಹುಳುಗಳನ್ನ
ಅವುಗಳ ಮಿಂಚನ್ನ
ಕವಿತೆಯೊಳಗೆ ಕರೆತರುವಾಗಲೂ
ಅವುಗಳಿಗೆ ಗಾಯವಾದೀತೆಂಬ ಅಳುಕುಳ್ಳವರು.
ಯಾವಾಗಲೂ ಒಂದು ಒಳ್ಳೆಯ ಕವಿತೆಗಾಗಿ ಕಾಯುವ ಸತೀಶ್
ಏನಾಯ್ತು, ಎಂದು ಕೇಳಿದರೆ.
ಏನಿಲ್ಲ, ಕವಿತೆ ತುಂಬಾ ಅವಸರದಲ್ಲಿತ್ತು
ಅದರ ಜೊತೆ ಹೆಜ್ಜೆ ಹಾಕಲಾಗಲಿಲ್ಲ
ಎಂದು ಹೇಳುವ Sense
And Sensibility ಯುಳ್ಳವರು.
ಈ ಸಂಕಲನದ ಹಸ್ತಪ್ರತಿಗೆ ೨೦೧೫ರ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪುರಸ್ಕಾರ
ದೊರೆತಿದೆ. ಇದು ಸತೀಶ್ ಅವರ ಮೊದಲ ಸಂಕಲನ ಕೂಡ.

೦೧.೧೨.೨೦೧೫
**

-ಎಂ.ಎಸ್. ರುದ್ರೇಶ್ವರಸ್ವಾಮಿ