ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, October 20, 2015

ನನ್ನೊಳಗೆ ಅಚ್ಚಾದ ವ್ಯಕ್ತಿಯ ಚಿತ್ರ

ಕ್ಯಾಮರಾ, ಗಾಢ ವರ್ಣದ ಷರ್ಟ್, ಜರ್ಕಿನ್, ನೈಟ್ ಪ್ಯಾಂಟ್, ಶೂ, ಬ್ಯಾಗ್, ಕಾಗದಗಳು, ಪತ್ರಿಕೆಗಳು, ಬಿಳಿಯ ದಾಡಿ - ಇಷ್ಟೂ ಚಿತ್ರಗಳು ಒಟ್ಟಿಗೆ ಎದುರಾದಾಗ ಈ ಮನುಷ್ಯನ ನೆನಪಾಗುತ್ತದೆ.


ಮೊದಲ ಬಾರಿಗೆ ನೋಡಿದ್ದಾಗ ಇವರೊಬ್ಬರು ಫೊಟೊಗ್ರಾಫರ್ ಇರಬಹುದೆಂದುಕೊಂಡಿದ್ದೆ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲೊಂದು ಸಾಹಿತ್ಯ ಕಾರ್ಯಕ್ರಮ ನಡೆಯುತ್ತಿದ್ದಾಗ, ನೇರವಾಗಿ ವೇದಿಕೆಯ ಬಳಿ ಬಂದವರೇ ಫೊಟೊ ಕ್ಲಿಕ್ಕಿಸಿ ಅಲ್ಲಿಂದ ಮಾಯವಾಗಿದ್ದರು.


ಮರುವರ್ಷ ಗೋಣಿಕೊಪ್ಪದ ದಸರಾ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಲು ವೇದಿಕೆಯ ಮೇಲೇರಿದ ಇವರು ತಮ್ಮ ಕವಿತೆಯೊಂದನ್ನು ಓದಿ, ಏನೇನೋ ಮಾತನಾಡಲು ಶುರುವಿಟ್ಟರು. ಸಂಘಟಕರು ಗದರಿಸಿ ಅವರ ಮಾತನ್ನು ಮೊಟಕುಗೊಳಿಸಿ ವೇದಿಕೆಯಿಂದ ಕೆಳಗಿಳಿಸಿದ್ದರು.


ಸ್ವಲ್ಪ ದಿನಗಳ ನಂತರ ನನ್ನ ಸಹೋದ್ಯೋಗಿಗೆ ಕವಿಗೋಷ್ಠಿಯ ಆಹ್ವಾನ ಪತ್ರವೊಂದು ಬಂದಿತ್ತು. ಅದರಲ್ಲಿ 'ಇಂದ' ವಿಳಾಸ ನೋಡಿ ತುಂಬಾ ವಿಚಿತ್ರ ಅನ್ನಿಸಿತ್ತು. ಕವಿ, ಸಾಹಿತಿ, ನಟ, ನಿರ್ದೇಶಕ, ಪತ್ರಕರ್ತ ಹೀಗೆ ತಮ್ಮನ್ನು ಪರಿಚಯಿಸಿಕೊಂಡಿದ್ದ ಇದೇ ವ್ಯಕ್ತಿ, ತಮ್ಮ ವಿದ್ಯಾರ್ಹತೆಯಾದ SSLC ಯನ್ನೂ ನಮೂದಿಸಿದ್ದರು! ಆಶ್ಚರ್ಯವೆಂದರೆ ಆ ಕವಿಗೋಷ್ಠಿಯನ್ನು ಇವರೇ ಆಯೋಜಿಸಿದ್ದರು.


ಮೊನ್ನೆ ಮಡಿಕೇರಿ ದಸರಾ ಕವಿಗೋಷ್ಠಿಯಲ್ಲಿ ಮತ್ತೆ ಇವರ ದರ್ಶನವಾಯಿತು. ಮುಂದೆ ಕುಳಿತಿದ್ದ ಅವರು ಹಿಂದಿನ ದಿನದ ಪತ್ರಿಕೆಯನ್ನು ಓದುತ್ತಿದ್ದರು. ಜಿಲ್ಲಾಧಿಕಾರಿಯವರು ಬಂದಾಗ ಏನೋ ಒಂದು ಕಾಗದವನ್ನು ಕೊಟ್ಟರು. ಕಾರ್ಯಕ್ರಮ ಆರಂಭವಾಗುವ ಮೊದಲು ಹಿಂದೆ ಕುಳಿತು ಸುಮ್ಮನೆ ಇವರನ್ನೇ ಗಮನಿಸುತ್ತಿದ್ದೆ. ಅಷ್ಟು ಹೊತ್ತು ಇವರು ಅಲ್ಲಿದ್ದರೂ ಒಬ್ಬರೊಂದಿಗೂ ಮಾತನಾಡಲಿಲ್ಲ! ಕವಿಗೋಷ್ಠಿಯ ಸಂದರ್ಭ ನೋಡಿದೆ- ನಿದ್ರಿಸುತ್ತಿದ್ದರು. ಕಾರ್ಯಕ್ರಮ ಮುಗಿಯುವುದರೊಳಗೆ ಅಲ್ಲಿಂದ ತೆರಳಿದ್ದರು.




ಈಚೆಗೆ ಒಂದು ಕವಿಗೋಷ್ಠಿ ನಡೆಯಿತಂತೆ. ಅದರಲ್ಲಿ ಇಬ್ಬರೇ ಭಾಗವಹಿಸಿದರಂತೆ - ಇವರು ಮತ್ತು ಇನ್ನೊಬ್ಬರು! ಮುಂದೆ ಖಾಲಿ ಕುರ್ಚಿಗಳು! ಸಾಹಿತ್ಯದ ಕುರಿತು ಸುಮಾರು ಹೊತ್ತು ಮಾತನಾಡಿದರಂತೆ! ಈ ವಿಷಯವನ್ನು ಗೆಳೆಯ ಜಗದೀಶ್ ಜೋಡುಬೀಟಿಯವರಿಂದ ತಿಳಿದ ಮೇಲೆ ಅದೊಂದು ದೊಡ್ಡ ಪ್ರತಿಭಟನೆ ಎನಿಸಿತು. ಮಾರಣ್ಣ ದಿಲೀಪ್ ಕುಮಾರ್ ಎಂಬ ಈ ವಿಶಿಷ್ಟ ವ್ಯಕ್ತಿ ನನ್ನೊಳಗೆ ಅಚ್ಚಾಗಿ ಉಳಿದುಬಿಟ್ಟರು.
**

-ಕಾಜೂರು ಸತೀಶ್