ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, September 4, 2015

ಎದೆಯಲ್ಲಿ ಉಳಿದದ್ದು ...

ಹಿಂದೊಮ್ಮೆ ನನ್ನ ಎಂದಿನ ಪೆದ್ದುತನವನ್ನು ಬಳಸಿ ಗೆಳೆಯನನ್ನು -"ಶಿಫಾರಸ್ಸಿಲ್ಲದೆ, ಲಾಬಿಯಿಲ್ಲದೆ ಕನ್ನಡ ಸಾಹಿತ್ಯದಲ್ಲಿ ಪ್ರಶಸ್ತಿಗಳು ಸಿಗುತ್ತವೆಯೇ? ಹಾಗೆ ಪ್ರಶಸ್ತಿ ಗಳಿಸಿದವರು ಯಾರಾದರೂ ಇದ್ದಾರೆಯೇ? ಅವರ ಹೆಸರು ಕೇಳಬೇಕೆಂಬ ಆಸೆಯಿದೆ" ಎಂದು ಪ್ರಶ್ನಿಸಿದ್ದೆ!

"ಇದ್ದಾರೆ " ಎಂದಿದ್ದೇ ತಡ, "ಯಾರವರು"? ಎಂದಿದ್ದಕ್ಕೆ ಕವಿಯೊಬ್ಬರ ಹೆಸರನ್ನು ಹೇಳಿದ್ದರು.
*

ಒಂದು ದಿನ ಕವಯಿತ್ರಿ ಸ್ಮಿತಾ ಅಮೃತರಾಜ್ ಅವರು ಕರೆಮಾಡಿ "ಕಡೆಂಗೋಡ್ಲು ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನಿಸಿದ್ದಾರೆ, ಆ ಪ್ರಶಸ್ತಿ ನಿಮಗೇ ಸಿಗುತ್ತದೆ " ಎಂದು ಹೇಳಿ ನನ್ನ ಮುಜುಗರವನ್ನು ಹೆಚ್ಚು ಮಾಡಿದ್ದರು. ನಾನು ನಗುತ್ತಾ ತಿರುಗುಬಾಣ ಬಿಡಲು ಪ್ರಯತ್ನಿಸಿದರೂ ಅವರ ಮಾತನ್ನು ತಿರಸ್ಕರಿಸುವಲ್ಲಿ ಸೋತಿದ್ದೆ. ಪ್ರೀತಿಯ ಕವಿ ವಾಸುದೇವ ನಾಡಿಗ್ ಅವರಿಂದ ವಿಮರ್ಶೆಯನ್ನು ಬರೆಸಿಕೊಂಡಿದ್ದ ಹಸ್ತಪ್ರತಿಗೆ ಒಂದಿಷ್ಟನ್ನು ಸೇರಿಸಿ(ಅವರಿಗೂ ತಿಳಿಸದೆ), ಕಳುಹಿಸಿ, ನಿರಾಳವಾಗಿ, ಆ ಕಡೆಗೆ ಯೋಚಿಸುವುದಕ್ಕೂ ಪುರುಸೊತ್ತಿಲ್ಲದಂತೆ ಬದುಕಿನ ಯಾತ್ರೆಯಲ್ಲಿ ತಲ್ಲೀನನಾಗಿದ್ದೆ.
*

ಮತ್ತೊಂದು ದಿನ ಎಂ.ಜಿ.ಎಂ. ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಗ್ರಂಥಪಾಲಕ , ಸ್ನೇಹಜೀವಿ ವೆಂಕಟೇಶ್ ಅವರು ಕರೆ ಮಾಡಿ ಕಡೆಂಗೋಡ್ಲು ಪ್ರಶಸ್ತಿಗೆ ಆಯ್ಕೆಯಾಗಿದ್ದನ್ನು ತಿಳಿಸಿದರು. ನಾನು ದಂಗಾಗಿ ಹೋದೆ! ಸುಡುವ ಏಕಾಂತದಲ್ಲಿ, ಸಾಹಿತ್ಯ ವಲಯದ ಪರಿಧಿಯ ಹೊರಗೆ ಕನಕನಂತೆ ಬದುಕುತ್ತಿರುವ ನನಗೆ ಅದೊಂದು ಬೆರಗು.ಇಂತಹ ಬೆರಗನ್ನು ಹುಟ್ಟಿಸಿದವರ ನ್ಯಾಯಪರತೆ, ಶಿಸ್ತು, ವಸ್ತುನಿಷ್ಠತೆಯು, ನನ್ನಂಥ ಕವಿತೆಯ ಕೊರಳಪಟ್ಟಿ ಹಿಡಿದು ನ್ಯಾಯ ಕೇಳ ಹೊರಡುವ ಮತ್ತಿನ್ನೆಷ್ಟೋ ಹುಡುಗರಿಗೆ ಬದುಕನ್ನೂ,ಸಾಹಿತ್ಯವನ್ನೂ ದಟ್ಟವಾಗಿ ಪ್ರೀತಿಸಲು ಕಲಿಸುವ ಸಂಗತಿ. ಶರಣು ಕಡೆಂಗೋಡ್ಲು ಪ್ರತಿಷ್ಠಾನಕ್ಕೆ ಮತ್ತು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ. ಜೊತೆಗೆ ಪ್ರೋತ್ಸಾಹಿಸಿದ ಪ್ರೊ. ಕೃಷ್ಣ ಭಟ್, ಡಾ. ಜಯರಾಮ ಕಾರಂತ, ಪ್ರೊ. ಮುರಳೀಧರ ಹಿರಿಯಡ್ಕ, ಡಾ.ಪ್ರಜ್ಞಾ ಮಾರ್ಪಳ್ಳಿ, ಡಾ. ಮಹಾಬಲೇಶ್ವರ ಭಟ್, ಸುಕನ್ಯ ಕಳಸ, ಡಾ.ನರೇಂದ್ರ ರೈ ದೇರ್ಲ ಅವರಿಗೆ .


ಈ ನೆಪದಲ್ಲಿ ಗೆಳೆಯರಾದ ಪ್ರವೀಣ್,ಭರಮಪ್ಪ , ಪ್ರವೀಣಕುಮಾರ ದೈವಜ್ಞಾಚಾರ್ಯರು ತುಂಬಿಕೊಟ್ಟ ಮರೆಯಲಾಗದ ಅನುಭವಗಳನ್ನು ಹೊತ್ತೊಯ್ಯುತ್ತಿದ್ದೇನೆ. ರಮ್ಯ ಕೆ.ಜಿ. ಮೂರ್ನಾಡು ,ಶುಭಲಕ್ಷ್ಮಿಯವರ ಉಪಸ್ಥಿತಿ ಹರ್ಷದ ಸಂಗತಿ.



**

-ಕಾಜೂರು ಸತೀಶ್

Tuesday, September 1, 2015

'ಗಾಯದ ಹೂವುಗಳು' ಕವನ ಸಂಕಲನದ ಕುರಿತು

"ಗಾಯದ ಹೂವುಗಳು" ಕುರಿತು ನನ್ನುಡಿ...

ಕೊಡಗಿನ ಸಾರಸ್ವತ ಲೋಕಕ್ಕೆ ತಮ್ಮ ವಿಶಿಷ್ಟ ಸಾಹಿತ್ಯ ಕೃಷಿಯ ಕೊಡುಗೆಯೊಂದಿಗೆ ಚಿರಪರಿಚಿತರಾಗಿರುವ ಪ್ರೀತಿಯ ಕವಿ ಶ್ರೀ ಕಾಜೂರು ಸತೀಶ್ ರವರಿಗೆ ೨೦೧೫ರ ಕಡೆಂಗೋಡ್ಲು ಕಾವ್ಯ ಪುರಸ್ಕಾರಕ್ಕಾಗಿ ತುಂಬು ಅಭಿನಂದನೆಗಳು...

ಪುಸ್ತಕ ಬಿಡುಗಡೆಯ ದಿನದಂದೇ ಕೈತಾಕಿದ ಕಾಜೂರರ "ಗಾಯದ ಹೂವುಗಳು"ನ್ನು ಮೂಸುತ್ತಲೇ ಇದ್ದೇನೆ... ಆಘ್ರಾಣಿಸಿದಷ್ಟೂ ಹಸಿ-ಹಸಿ ಕಾವ್ಯಗಳು ಕಣ್ತೆರೆದುಕೊಳ್ಳುತ್ತಲೇ ಇವೆ ನನ್ನೊಳಗೆ... ಕವಿತೆಗಳನ್ನು ವಿಮರ್ಶಿಸುವಷ್ಟು ಪ್ರಬುದ್ಧತೆ ನನ್ನಲ್ಲಿ ಇನ್ನೂ ಹುಟ್ಟಿಕೊಂಡಿಲ್ಲವಾದ್ದರಿಂದ ಪ್ರತೀ ಕವಿತೆಗಳನ್ನೂ ಹೃದಯಕ್ಕೇ ತೆಗೆದುಕೊಂಡು ಓದಿಕೊಂಡಿದ್ದೇನೆ... ಕೆಲವು ಕವಿತೆಗಳಲ್ಲಿ ವ್ಯಕ್ತಗೊಂಡ ಪ್ರತಿಮೆಗಳು ನನ್ನ ಗ್ರಹಿಕೆಗೆ ಒದಗದಿದ್ದರೂ ಹೊಸ-ಹೊಸ ಹೊಳಹುಗಳನ್ನು ನನ್ನೊಳಗೆ ಸ್ಫುರಿಸುತ್ತಿವೆ....

ಭಾವ ಬಾಂಧವ್ಯಗಳ ತಾಕಲಾಟದೊಳಗೆ ಜೀಕುತ್ತಿರುವ ಈ ಜೀವಜಗತ್ತಿನಲ್ಲಿ ಯಾವುದೂ ಮುಖ್ಯವಲ್ಲ ಎಂದುಕೊಳ್ಳುತ್ತಿರುವಾಗಲೇ ಯಾವುದೂ ಅಮುಖ್ಯವಲ್ಲ ಎಂದು ಕವಿತೆಗಳು ಮಾತಿಗಿಳಿದುಬಿಡುತ್ತವೆ.... ನೆಲ-ನಿಸರ್ಗದೊಂದಿಗೇ ಬದುಕು ಕಟ್ಟಿಕೊಂಡ ಈ ನೆಲದ ಕವಿಯ ಕವಿತೆಗಳೆಲ್ಲವೂ ಅನುಭವ ಪ್ರಾಮಾಣಿಕತೆಯಿಂದ ಅಭಿವ್ಯಕ್ತಗೊಂಡವುಗಳಾಗಿವೆ ಎಂಬುದು ನಿಸ್ಸಂದೇಹ... 'ಕಾಲ'ಬುಡದ ಇರುವೆ-ಚಪ್ಪಲಿಗಳು, ಸಂವೇದನೆಗಳನ್ನು ಉದ್ದೀಪನಗೊಳಿಸುವ ನದಿ, ಒಲೆ-ಅವ್ವನನ್ನು ಬಾಚಿ ತಬ್ಬಿಕೊಂಡ ಕವಿಯ ಆಂತರ್ಯ ನಿಜಕ್ಕೂ ಪರಿಪಕ್ವತೆಯ ವಿಕಾಸ....

ಸತೀಶ್ ರ ಎಲ್ಲಾ ಕವಿತೆಗಳನ್ನು ಆವಾಹಿಸಿಕೊಳ್ಳುವಾಗ,
ಇವು ದಮನಿತರ ದನಿಯಾಗಿ, ಆತ್ಮಾಭಿಮಾನವನ್ನು ಬಡಿದೆಬ್ಬಿಸಿಕೊಳ್ಳುವ ಕಾರಣವಾಗಿ ನಿಲ್ಲುತ್ತದೆ... ಕಲ್ಪನಾ ಸ್ವಾತಂತ್ರ್ಯವನ್ನು ಅತಿಯಾಗಿ ಬಳಸಿಕೊಳ್ಳದೆ ಅನುಭವದ ಹೊಳಹುಗಳೊಂದಿಗೆ ಹರವಿಕೊಂಡ ಕವಿತೆಗಳು ಆಪ್ತವೆನಿಸುತ್ತವೆ....
ಬೆರಗು ಹುಟ್ಟಿಸುತ್ತವೆ... ಕವಿಯ ಖಿನ್ನತೆಯೇ ಹಡೆದ ಈ ಕವಿತೆಗಳೆಲ್ಲಾ ಸಾರ್ವತ್ರಿಕತೆಯ ನೆಲೆಗಟ್ಟಿನಲ್ಲಿ ಗಟ್ಟಿಯಾಗಿ ಅನಾವರಣಗೊಂಡಿವೆ....
ಪ್ರಪಂಚದ ಬಹಿರ್ಮುಖತೆಯನ್ನು ಬಿಂಬಿಸಿದಷ್ಟೂ ಅಂತರ್ಮುಖತೆಯನ್ನು ಪ್ರತಿಬಿಂಬಿಸಿರುವುದು ವಿಶೇಷವೆನಿಸಿದೆ....

ಸಾವಿನಾಚೆಗೂ ಗುಟುರುಗುಟ್ಟುವ ಸಾಮಾಜಿಕ ತರತಮಗಳಾದ ಅಸ್ಪೃಶ್ಯತೆ, ಅತ್ಯಾಚಾರ, ಭ್ರಷ್ಟತೆ, ಮತಾಂಧತೆ, ಕುಟಿಲತೆ, ದುಷ್ಟತೆಗಳನ್ನು ಕಾಡುಕವಿತೆ, ಚಪ್ಪಲಿಗಳು, ಮೈಲಿಗೆ, ಕಡಲಾಚೆಗಿನ ಹುಡುಗಿಗೆ, ಹಾವು, ನಾವಿಬ್ಬರು ತೀರಿಕೊಂಡ ಮೇಲೆ- ಇವೇ ಮೊದಲಾದ ಕವಿತೆಗಳು ಅದ್ಭುತವಾಗಿ ಧ್ವನಿಸುತ್ತವೆ... ಜೊತೆಗೆ ಸಮಾಜಮುಖಿ ಸೂಕ್ಷ್ಮ ಸಂವೇದನೆಗಳ ದೃಷ್ಟಿಕೋನವನ್ನೂ; ದಿಟ್ಟಿಸಬೇಕಾದ ಪರಿಯನ್ನೂ; ಶೂನ್ಯತೆಯನ್ನು ತುಂಬಿಕೊಳ್ಳಬೇಕಾದ ತುರ್ತನ್ನೂ ಮುಂದಿಡುತ್ತವೆ... ಹೀಗಾಗಿ ಕವಿ ಪ್ರಬುದ್ಧರೆನಿಸುತ್ತಾರೆ... ಕರ್ತವ್ಯಪ್ರಜ್ಞರೆನಿಸುತ್ತಾರೆ...

ಈ ಲೋಕದೊಳಗಿನ ತಾಕಲಾಟಗಳಿಗೆ ಮೈಯೊಡ್ಡಿಕೊಂಡ ಭಾವದ ಹೂವುಗಳು ಗಾಯಗೊಂಡು ನರಳುತ್ತಿರುವ ಸಂದರ್ಭದಲ್ಲೇ ಕವಿ ತನ್ನ ಕವಿತೆಗಳ ಮೂಲಕವೇ ಮುಲಾಮನ್ನೂ ಹಚ್ಚುತ್ತಾರೆ...
ತಕ್ಷಣದ ಅಸಹಾಯಕತೆಯನ್ನು ಮೆಟ್ಟಿ ನಿಲ್ಲುವ ಛಲವನ್ನೂ ಮೂಡಿಸುತ್ತಾರೆ. ಕವಿತೆಗಳು ಜೀವಂತಿಕೆಯನ್ನು ಕಾಪಿಟ್ಟುಕೊಳ್ಳುವುದು ಇಂಥ ಮನೋಭೂಮಿಕೆಯಲ್ಲೇ. ಜಗದ ಗಾಯಗಳೆಲ್ಲವೂ ಬಿರಿದ ಹೂವುಗಳಾಗಲಿ ಎನ್ನುವ ಕವಿಯ ಆಶಯ ಹೃದ್ಯ, ಸುಂದರ.

ಒಂದು ಮಹಾಮೌನದೊಳಗಿನ ಚೈತನ್ಯ ಶಕ್ತಿಯಾಗಿರುವ ಶ್ರೀಯುತರು ನನ್ನ ಸಮಕಾಲೀನರು ಎನ್ನುವುದು ನನ್ನ ಅಭಿಮಾನ,ಹೆಮ್ಮೆ . ಅಪಾರ ಅಂತಃಶಕ್ತಿಯುಳ್ಳ ಇವರು ಇನ್ನೂ ಎತ್ತರಕ್ಕೆ ಏರಬಲ್ಲವರು, ಏರಲಿ. ತಮ್ಮ ಕಾವ್ಯದ ಮೂಲಕ ಮನಸ್ಸು-ಮನಸ್ಸುಗಳ ನಡುವಿನ ಅತೃಪ್ತಿಗಳನ್ನು ತಣಿಸುತ್ತಾ ಜನರನ್ನು ಮುಟ್ಟುತ್ತಿರಲಿ. ಶುಭವಾಗಲಿ.
**


-ರಮ್ಯ ಕೆ.ಜಿ. ಮೂರ್ನಾಡು