ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, August 27, 2017

ಮುಖಾಮುಖಿ

ಅವರ ಕಣ್ಣಿಗೆ ಬೀಳದಿರಲೆಂದು
ಬೆಳದಿಂಗಳನ್ನು ತಳ್ಳಿ ಆಚೆ ಕಳಿಸಿದೆ
ಪಾದಚಾರಿ ರಸ್ತೆ
ಭಯಪಡುವ ಅಗತ್ಯವಿಲ್ಲ
ಕ್ಯಾಂಪಿನಿಂದ ತಪ್ಪಿಸಿಕೊಂಡು ಹೊರನಡೆದೆ.

ಮರೆತುಹೋದ ದಾರಿ
ಗುಂಡಿಗಳು, ತಿರುವುಗಳು
ನಾಜಿ಼ ಗೋಡೆಗಳು
ಕೊಲೆಯಾದ ಜಾಗಗಳು...
ಉಕ್ಕಿ ಹರಿಯಲು
ಕಣ್ಣೀರೋ, ಹೊಳೆಯೋ...
ಬಿದ್ದು ಒದ್ದಾಡಲು
ಹೃದಯವೋ, ಭೂಮಿಯೋ...

ಖಾತ್ರಿಯಾಗಿತ್ತು
ಯಾವುದೂ ಸಾಕ್ಷಿಯಾಗಲಾರವೆಂದು.
ದಾರಿ ಇನ್ನೂ ದೂರವಿದೆ
ಮನಸ್ಸು ನಿನ್ನ ಕನಸಿನಲ್ಲಿ ಮುಳುಗಿದೆ
ನಿನ್ನ ಹಸಿಹಸಿ ತುಟಿಗಳ ನೆನಪು
ಇನ್ನೂ ಅಂಟಿಕೊಂಡಿದೆ ನನ್ನ ತುಟಿಗಳಲ್ಲಿ.

ಮುಂದೆ ಎಲ್ಲೋ ಸಿದ್ಧತೆಗಳ ಸದ್ದು
ಉಜ್ಜಿ ಹರಿತಗೊಳಿಸಿದ ಖಡ್ಗಗಳು
ಆರ್ಭಟಿಸುವ ಹಾಗೆ
ಬಂದೂಕಿನ ಉಂಡೆಗಳು
ಆಲಂಗಿಸಲು ಬರುವ ಹಾಗೆ.

ಚಂಗನೆ ಜಿಗಿದು
ಅಲ್ಲಿಂದ ತಪ್ಪಿಸಿಕೊಂಡು
ಪೊದೆಯಲ್ಲಿ ಅಡಗಿ ಕುಳಿತೆ
ಏದುಸಿರು ಬಿಟ್ಟು
ಗಡಗಡನೆ ನಡುಗಿ
ಅರೆಜೀವವಾಗಿ
ಹಿಂತಿರುಗಿ ನೋಡಿದರೆ
ಬೆನ್ನ ಹಿಂದೆಯೇ ನೀನು!
ಅಳು ತಡೆಯಲಾರದೆ ಅತ್ತುಬಿಟ್ಟೆ
ನೀನು ನಗುತ್ತಾ ಅಪ್ಪಿಕೊಂಡೆ.

ನನ್ನ ಮುದ್ದಿಸುವಾಗ
ನಿನ್ನ ನೀಳ ಅಂಗಿಯಲ್ಲಿ
ಸ್ವಸ್ತಿಕ್# ಚಿಹ್ನೆಯನ್ನು ಕಂಡೆ
ಕಪ್ಪು ಸಮವಸ್ತ್ರಕ್ಕೆ ಅಂಟಿಕೊಂಡ
ಅದ ನೋಡುತ್ತಲೇ
ಗುಂಡು ಎದೆ ಸೀಳುವ ಮೊದಲೇ
ನಾನು ಸತ್ತುಹೋಗಿದ್ದೆ.
*

ಮಲಯಾಳಂ ಮೂಲ - ಸುತಾರ್ಯ ಸಿ

ಕನ್ನಡಕ್ಕೆ- ಕಾಜೂರು ಸತೀಶ್

# ಸ್ವಸ್ತಿಕ್-ಹಿಟ್ಲರ್‍ನ ಚಿಹ್ನೆ

Monday, August 21, 2017

ಘಾಟಿಲ್ಲದ ಪರಿಮಳ - ಪಾರಿಜಾತದಂಥದೇ ಸ್ನಿಗ್ಧ ಸುವಾಸನೆ

ಒಂದೇ ವಿಷಯವನ್ನಾಧರಿಸಿ ಹಲವರು ಬರೆದ ಲೇಖನಗಳನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸುವುದಕ್ಕೂ, ಸಂಪಾದಕರು ಸೂಚಿಸಿದ ವಿಷಯವನ್ನು ಕುರಿತು ಆಹ್ವಾನಿತರು ಬರೆದದ್ದನ್ನು ಪ್ರಕಟಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದೇ ಇವೆ. ಇನ್ನು ಪ್ರಬಂಧ, ಕತೆ, ಕವಿತೆಗಳನ್ನು ಒಂದು ಸೂಚಿತ ವಿಷಯಾಧಾರಿಸಿ ಬರೆಸಿ ಸಂಪಾದಿಸಿ ಪ್ರಕಟಿಸುವುದಂತೂ ಅಪಾರ ಪರಿಶ್ರಮ, ತಾಳ್ಮೆ ಮತ್ತು ಲೇಖಕರ ಒಡನಾಟಗಳನ್ನಿಟ್ಟುಕೊಂಡ ಸಂಪಾದಕನಿಂದ ಮಾತ್ರ ಸಾಧ್ಯವಿರುವ ಸಂಗತಿ. ಇಂಥ ಕೆಲಸಗಳನ್ನು ಸಹಜವಾಗಿ ಪರಿಷತ್ತು ಅಥವ ಅಕಾಡೆಮಿಗಳು ಈಗಾಗಲೇ ಆಯಾ ಕ್ಷೇತ್ರದಲ್ಲಿ ಹೆಸರು ಮಾಡಿರುವವರಿಂದ ಒಂದು ವಿಶೇಷ ಸಂದರ್ಭಕ್ಕಾಗಿ ಮಾತ್ರ ಹಮ್ಮಿಕೊಳ್ಳುತ್ತವೆ. ಉದಾರಹರಣೆಗೆ ಹೇಳಬೇಕೆಂದರೆ ಸ್ವಾತಂತ್ರ್ಯ-೬೦, ಹಿಂದ್ ಸ್ವರಾಜ್-೧೦೦, ಮೈಸೂರುಮಲ್ಲಿಗೆಗೆ ಐವತ್ತು, ಗಾಂಧೀ ಸ್ತವನ, ಇತ್ಯಾದಿ ಇತ್ಯಾದಿ. ಆದರೆ ವ್ಯಕ್ತಿಯೊಬ್ಬರ ಖಾಸಗಿ ಸಮಾರಂಭಕ್ಕೆ ಒಂದು ವಿಷಯವನ್ನಾಧರಿಸಿ ಹಲವರ ಲೇಖನ/ಕವಿತೆಗಳನ್ನು ಪ್ರಕಟಿಸುವುದು ವಿಶೇಷವೇ ಸರಿ. ಶಿವಮೊಗ್ಗೆಯ ಸಾಹಿತ್ಯಾಭಿಮಾನಿಯೊಬ್ಬರು ಅವರ ಮನೆಯ ಗೃಹಪ್ರವೇಶಕ್ಕೆ ಮನೆ ಕುರಿತಂತೆ ರವಿ ಬೆಳಗೆರೆ ಯವರ ವಿಚಾರ ಸಿಡಿ ಮಾಡಿಸಿ ಉಡುಗೊರೆ ಕೊಟ್ಟ ಉದಾಹರಣೆಯಿದೆ.

ಈಗ ಅಂಥದೇ ಒಂದು ಖಾಸಗಿ ಉದ್ದೇಶಕ್ಕಾಗಿ ಪ್ರಕಟಿಸಲಾಗಿರುವ ಕವನ ಸಂಕಲನ " ಪಾರಿಜಾತ- ಪರಿ ಕವಿತೆಗಳು". ಕವಿ ವಾಸುದೇವ ನಾಡಿಗ್ ಸಂಪಾದಕತ್ವದಲ್ಲಿ ಕೆ.ಪಿ.ಮಂಜುನಾಥ ಮತ್ತು ಶುಭಮಂಗಳ ದಂಪತಿಯ ಹೊಸ ಮನೆ "ಪಾರಿಜಾತ" ದ ಗೃಹಪ್ರವೇಶ ಸಮಾರಂಭಕ್ಕಾಗಿ ನಾಡಿನ ಹಿರಿಕಿರಿಯ ಕವಿಗಳಿಂದ ಪಾರಿಜಾತ ಹೂವನ್ನು ಕುರಿತಂತೆ ಕವಿತೆಗಳನ್ನು ಆಹ್ವಾನಿಸಿ ಪ್ರಕಟಿಸಿರುವ ಕವನ ಸಂಕಲನ.


೨೯ ಕವಿಗಳು ಪಾರಿಜಾತ ಹೂವನ್ನು ಕುರಿತಂತೆ ಚಿಂತಿಸಿರುವ ಕ್ರಮವೇ ಚೇತೋಹಾರಿಯಾಗಿದೆ. ಸಹಜವಾಗಿ ಪಾರಿಜಾತ ಪುರಾಣದ ಹಿನ್ನೆಲೆ ಇರುವ ಹೂವಾಗಿರುವುದರಿಂದ ಕೃಷ್ಣ ಸತ್ಯಭಾಮೆ ರುಕ್ಮಿಣಿಯರ ಪ್ರಸಂಗ ನೆನಪಾಗುತ್ತದೆ. ಸ್ವರ್ಗದಿಂದ ಭೂಮಿಗೆ ತಂದ ಹೂ ಇದಾದ್ದರಿಂದ ಮತ್ತು ರಾತ್ರಿಯಲ್ಲರಳಿ ಹಗಲ ಬೆಳಕಿಗೆ ನಲುಗಿ ಹೋಗುವ ಸೂಕ್ಷ್ಮತೆಯ ಈ ಹೂವು ತನ್ನ ಪರಿಮಳಕ್ಕೆ ಹೆಸರುವಾಸಿ.

ಕಾಜೂರು ಸತೀಶ್, ಕೃಷ್ಣ ದೇವಾಂಗಮಠ, ಸ್ವಾಮಿ ಪೊನ್ನಾಚಿಯಂಥ ಭರವಸೆಯ ಯುವ ಕವಿಗಳ ಜೊತೆಗೇ ಸ್ವತಃ ಸಂಪಾದಕ ವಾಸುದೇವ ನಾಡಿಗ್, ಸತ್ಯನಾರಾಯಣ ರಾವ್ ಅಣತಿ, ಸುಬ್ರಾಯ ಚೊಕ್ಕಾಡಿ ಮುಂತಾದ ಹಿರಿಯರ ಕವಿತೆಗಳೂ ಈ ಸಂಕಲನದಲ್ಲಿರುವ ಕಾರಣ ಕುತೂಹಲ ಹುಟ್ಟಿಸುತ್ತದೆ. ಪಾರಿಜಾತದ ನೆವದಲ್ಲಿ ಪುರಾಣದೊಂದಿಗೆ ಮುಖಾಮುಖಿಯಾಗುತ್ತಲೇ ವರ್ತಮಾನದ ಸಂಕಟಗಳನ್ನು ಒಳಗೊಂಡಿರುವ ಈ ಸಂಕಲನದ ಬಹುತೇಕ ಕವಿತೆಗಳು ಅದನ್ನು ಪ್ರಕಟಿಸಿರುವ ವ್ಯಾಪ್ತಿಯಾಚೆಗೂ ನಿಂತು ಹಲವು ಕಾಲ ಕಾಡುತ್ತಲೇ ಇರುತ್ತವೆ.

ಆಗಾಗ ರೆಂಬೆ ಕತ್ತರಿಸಬೇಕು ಕಾಲದ
ಹೂವಿಗಾಗಿ
ಬೆಳಕಿಗಾಗಿ


ಎನ್ನುವ ನಿಲುವು ಕಾಜೂರು ಸತೀಶ ಅವರದ್ದಾದರೆ
ನಿನ್ನೆಯ ನೆನಪೇ ಇಲ್ಲದಂತೆ
ಹವಳದಂಟಿನ ಪಾರಿಜಾತ
ಎನ್ನುವ ಗಾಯತ್ರೀ ರಾಘವೇಂದ್ರ, ಆಗಸದ ಅಂಗೈ ಕೆಳಗೆ ಮಣ್ಣ ಹೂವಿನ ಬಂಧ ಎನ್ನುವ ಚೀಮನಹಳ್ಳಿ ರಮೇಶಬಾಬು, ಪಾರಿಜಾತದಲ್ಲಿ ರಾಧೆಯನ್ನರಸುವ ದೇವಯಾನಿಯವರ ಪ್ರಯತ್ನ, ನಿರ್ಮಲಾ ಶೆಟ್ಟರ್ ಮುಂದುವರೆಸಿ

ಉತ್ತರ ತಿಳಿದೂ ಗೊತ್ತಿಲ್ಲದಂತೆ ಕಾಡುತ್ತಲಿರಬಹುದು
ನಿನ್ನೊಳಗೂ
ಕತ್ತಲಿಗಷ್ಟೇ ಯಾಕೆ ನೀ ಮೀಸಲು
ಅಂತ ಕೇಳುತ್ತಾರೆ.

ಪುರಾಣವನ್ನೇ ಆಶ್ರಯಿಸಿದ ಸಿ.ಪಿ.ರವಿಕುಮಾರ್ ತಮ್ಮ " ಸತ್ಯಭಾಮೆ ಮತ್ತು ಪಾರಿಜಾತ" ದಲ್ಲಿ ರುಕ್ಮಿಣಿಯನ್ನು ತಾರದೆಯೂ ಪಾರಿಜಾತಕ್ಕೆ ಮತ್ತೊಂದು ಆಯಾಮವನ್ನೇ ನೀಡಿದ್ದಾರೆ.

ಇದ್ದರೆ ಇರಬೇಕು ಮರಳಿ ಏನನ್ನೂ ಬೇಡದೆ
ಹರ್ಷ ಸುರಿಸುವ ಪಾರಿಜಾತದಂತೆ
ಎಂದು ಮುಂದುವರೆಯುತ್ತದೆ.

ಹಗಲ ಬೆಳಕಲ್ಲರಳದ ಪಾರಿಜಾತ
ಇರುಳ ಸೆರಗಲ್ಲೇ ಅರಳಿ ನಗುವ ಹಾಗೇ
ಬದುಕ ಬೆದೆಯಲ್ಲರಳದ ಕವಿತೆ
ವಿಷಾದದ ಹಬೆಯಲ್ಲೇ ಕುಡಿಯೊಡೆಯುವುದು ಏಕೆ
(ಡಿ.ಎಸ್.ರಾಮಸ್ವಾಮಿ)ಎನ್ನುವ ಜಿಜ್ಞಾಸೆಯೂ ಇಲ್ಲಿದೆ.

ಒಬ್ಬೊಬ್ಬರಿಗೆ ಒಂದೊಂದು ವಾಸನೆಯ ನಾಳ
ನಿನ್ನ ಒಡಲೊಳಗೆ
ಮೈಮರೆತರೆ ಕೆಳಗೆ ನೆಲಕ್ಕೆ
ಬಿಟ್ಟರೆ ಹಗುರ ಮೇಲೆ
ಎನ್ನುವ ವಸಂತ ಕುಮಾರ ಪೆರ್ಲ,

ನಾಳೆ ಎಲ್ಲ ಬಿಟ್ಟು ಹೊರಡುವಾಗ
ಗಂಧ ಉಳಿಯಬೇಕು
ಅಂಗಿ ಕಳಚುವ ಹಾಗೆ ತೊಟ್ಟು ಕಳಚುವೆಯಲ್ಲ
ಬದುಕ ಮೋಹದ ಮರದಲಿರುವವರಿಗೆಲ್ಲ
ಬಿಟ್ಟು ಹೊರಡುವುದು ಯಾರಿಗೂ ಕಷ್ಟವಲ್ಲ
( ವಿದ್ಯಾರಶ್ಮಿ ಪೆಲ್ಲತಡ್ಕ)

ಹಾಸಿಗೆಯ ಮೇಲೆ ನಲುಗಿದ ಪಾರಿಜಾತಕ್ಕೀಗ
ಮಿಲನದ ನಂತರದ ಮತ್ತೇರಿಸುವ ಗಂಧ (ಶ್ರೀದೇವಿ ಕೆರೆಮನೆ)

ಮುಟ್ಟಿದರೆ ಮಾಸುವ ನರುಗಂಪು ದಳವೇ
ನಡುವೆ ನಸುಗೆಂಪು ಬೊಟ್ಟಿನ ಶೀಲ ಸಂಪನ್ನೆ ( ಅಣತಿ) ಎಂದೆಲ್ಲ ಕೊಂಡಾಡುತ್ತಿರುವಾಗ ಸ್ವಾಮಿ ಪೊನ್ನಾಚಿ
ಕೈ ಕೊಟ್ಟ ಪ್ರೇಮಿಯನು
ನೆನೆದು ಗೋಳಾಡುವ ನಿಮಗೆ
ಜೊತೆಯಾಗಬಹುದು ಈ ಹೂವು
ಭಗ್ನ ಹೃದಯದ ಸಾಂತ್ವನಕೆ
ಎನ್ನುವವರೆಗೂ ಮತ್ತೊಂದು ಆಯಾಮಕ್ಕೆ ಜಿಗಿಯುತ್ತದೆ.

ಸ್ಮಿತಾ ಅಮೃತರಾಜ್ ಪಾರಿಜಾತವನ್ನು ಆಯುವಾಗಲೆಲ್ಲ ಕೃಷ್ಣನನ್ನೇ ಕಂಡರೆ, ಚೊಕ್ಕಾಡಿಯವರಿಗೆ ಅದು ಧ್ಯಾನಸ್ಥವಾಗಿ ಆಕಾಶಕ್ಕೆ ಲಗ್ಗೆ ಇಟ್ಟಿದೆ.

ಹೀಗೆ ಪಾರಿಜಾತದ ಪರಿಯನ್ನು ಪರಿ ಪರಿಯಾಗಿ ಒಳಗೊಂಡ ಈ ಸಂಕಲನ ಸದ್ಯ ಬರೆಯುತ್ತಿರುವ ಹಲವು ವಿಭಿನ್ನ ಮನಸ್ಕ ಕವಿಗಳನ್ನು ಒಟ್ಟಿಗೆ ಸೇರಿಸಿದೆ. ಹಾಗೇ ಇಂಥ ಭಿನ್ನತೆಯಲ್ಲೂ ಇರುವ ಕವಿತೆಯೆಂಬ ಏಕೈಕ ಮೋಹಕ್ಕೆ ಆಡೊಂಬೊಲವನ್ನೂ ಕರುಣಿಸಿದೆ. ವಾಸುದೇವ ನಾಡಿಗರ ಶ್ರಮಕ್ಕೆ ಸಾಥಿಯಾದ ಪ್ರಕಾಶಕರು ಮುಖಪುಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿದ್ದಿದ್ದರೆ ಚೆನ್ನಿತ್ತು.
*

ಡಿ.ಎಸ್. ರಾಮಸ್ವಾಮಿ

############################
ಪುಸ್ತಕ - ಪಾರಿಜಾತ ಪರಿ ಕವಿತೆಗಳು
ಪ್ರಕಾರ - ಕವನ ಸಂಕಲನ
ಸಂಪಾದಕ - ವಾಸುದೇವ ನಾಡಿಗ್
ಪ್ರಕಾಶಕರು- ಇಂಡಿಗೋ ಮಲ್ಟಿಮೀಡಿಯ

Friday, August 18, 2017

ಗಾಯದ ಹೂವುಗಳು: ಮಾನವತ್ವದ ಕವಿತೆಗಳು

ಗಾಯದ ಹೂವುಗಳು
ಲೇ: ಕಾಜೂರು ಸತೀಶ್
ಪುಟ:120, ಬೆಲೆ:75/-
ಪ್ರಕಾಶನ: ಫಲ್ಗುಣಿ ಪುಸ್ತಕ ಬೆಂಗಳೂರು


ಕಾಜೂರು ಸತೀಶ್ ನಮ್ಮ ನಡುವೆ ಹೊಸ ಭರವಸೆ ಮೂಡಿಸಿರುವ ಸೂಕ್ಷ್ಮ ಸಂವೇದನಾಶೀಲ ಕವಿ ಮತ್ತು ಅನುವಾದಕ. ಮೂಲತಃ ಪರಿಸರ ಪ್ರೇಮಿಯಾದ ಇವರ ಕಾವ್ಯದಲ್ಲಿ ನೆಲಮೂಲದ ತುಡಿತವನ್ನು, ಜೀವಪರಿಸರದ ಅಭೀಪ್ಸೆಯನ್ನು, ಸಾಮಾಜಿಕ ಸಮಾನತೆಯನ್ನು ನಿಚ್ಚಳವಾಗಿ ಕಾಣಬಹುದು. ಮೆಲುಮಾತಿನಲ್ಲಿಯೇ ತನ್ನ ಬೆಂಕಿ ಒಡಲನ್ನು ತೆರೆದಿಡಬಲ್ಲ ಕಾಜೂರು ಸತೀಶ್ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಇವರ ಮನಸ್ಸು ತುಡಿಯುವುದು ಪ್ರೀತಿ ಮತ್ತು ಸ್ನೇಹದ ಪಾತಳಿಯಲ್ಲಿ.
ಪ್ರಸ್ತುತ ಗಾಯದ ಹೂವುಗಳು ಕಾಜೂರು ಸತೀಶ್ ಅವರ ಪ್ರಥಮ ಕವನಸಂಕಲನ. ಇದು 2015ರ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಕೃತಿ. ಈ ಕವನಸಂಕಲನದಲ್ಲಿ ಒಟ್ಟು ಐವತ್ತಮೂರು ಕವಿತೆಗಳಿವೆ. ಸಾಹಿತ್ಯದ ಯಾವ ಚಳವಳಿಗಳ ಹಣೆಪಟ್ಟಿ ಹಚ್ಚಿಕೊಳ್ಳದೆ ಬದುಕಿನಂಗಳದಲ್ಲಿ ನಿಂತು ನಡೆಯುವುದನ್ನೆಲ್ಲಾ ಕಂಡುಂಡು ಚಿತ್ರಿಸಿರುವುದನ್ನು ಇಲ್ಲಿ ಕಾಣುತ್ತೇವೆ. ಈ ಸಂಕಲನದ ಎಲ್ಲಾ ಕವಿತೆಗಳು ವಾಸ್ತವಿಕತೆಯ, ವಸ್ತುಸ್ಥಿತಿಯ, ವರ್ತಮಾನದ ಅನುಭವದಾಳದಿಂದ ಹೊರಹೊಮ್ಮಿವೆ. ಬದುಕಿನ ವಿಷಮತೆ, ಮೋಸ, ವಂಚನೆ, ನೋವು-ನಲಿವು, ಉಪದೇಶ, ಪ್ರೀತಿ, ಪ್ರೇಮ, ಹತಾಶೆ -ಹೀಗೆ ಬದುಕಿನಲ್ಲಿ ಕಂಡು ಕೇಳಿದ ವಿವಿಧ ರೀತಿಯ ಅನುಭವಗಳೇ ಇಲ್ಲಿಯ ಕವಿತೆಗಳ ವಸ್ತು. ಕಾಜೂರು ಸತೀಶ್ ಅವರದು ಆರ್ಭಟಿಸುವ ಕಾವ್ಯವಲ್ಲ. ಮೆಲುದನಿಯಲ್ಲಿಯೇ ಆಪ್ತವಾಗಿ ಮಾತನಾಡಿಸಲು ಹವಣಿಸುವ ಕಾವ್ಯ. ಕಾಜೂರು ಪ್ರಯತ್ನಪೂರ್ವಕವಾಗಿ ಕಾವ್ಯ ಹೊಸೆಯುವುದಿಲ್ಲ. ನಿಸ್ಸಂಶಯವಾಗಿ ಅವರದ್ದು ಭಾವಕ್ಕೆ ಮೂಡಿದ ಭಾಷೆ. ಅವರ ಕವಿತೆಗಳ ಒಡಲಿನಲ್ಲಿರುವ ತಣ್ಣನೆಯ ಬೆಂಕಿ ಓದುಗರನ್ನು ತಕ್ಷಣವೇ ತಟ್ಟುತ್ತದೆ. ಕಾಜೂರು ಅವರ ಕಾವ್ಯಗುಣ ವರ್ತಮಾನದ ದುಃಸ್ಥಿತಿಯ ಕುರಿತು ಭೀತಗೊಂಡಿದೆ. ಕಾವ್ಯಾಲಂಕಾರ ಅರ್ಥಾಲಂಕಾರವನ್ನು ಮೀರಿಸುವ ಭಾವಾಲಂಕಾರ ಪ್ರತಿಯೊಂದು ಕವಿತೆಯಲ್ಲಿಯೂ ಸ್ಪಂದಿಸುತ್ತದೆ. ಸಮಾನತೆಯ, ಆರೋಗ್ಯಪೂರ್ಣ, ಮಾನವೀಯ ಸಮಾಜವೊಂದು ರೂಪುಗೊಳ್ಳಬೇಕೆಂಬ ಹಂಬಲ ಸತೀಶ್‍ರ ಕಾವ್ಯಭೂಮಿಕೆಯನ್ನು ರೂಪಿಸಿದೆ. ಈ ಸಂಕಲನದ ಪ್ರತಿಯೊಂದು ಕವಿತೆಗಳಲ್ಲಿಯೂ ಅವರ ಈ ದನಿಯನ್ನು ಓದುಗರು ಕೇಳಿಸಿಕೊಳ್ಳಬಹುದು. ಇಲ್ಲಿನ ಕವಿತೆಗಳ ಸ್ಥಾಯಿಭಾವ ದಟ್ಟವಾದ ವಿಷಾದ ಮತ್ತು ಮಡುಗಟ್ಟಿದ ನೋವಿನ ಜಿನುಗುವಿಕೆ ಆಗಿದೆ.

ನನ್ನ ನಿನ್ನ ನಡುವೆ ಕಡಲಿಲ್ಲ
ಈ ಹೂವುಗಳನ್ನು ಮುಟ್ಟಲು
ಸುಟ್ಟುಹೋಗುತ್ತೇನೋ ಎಂಬ
ಭಯವಿದೆ ನನಗೆ

(ಕಡಲಾಚೆಯ ಹುಡುಗಿಗೆ)

ಎಂದು ಆತ್ಮಶೋಧ ಮಾಡಿಕೊಳ್ಳುತ್ತ ಕಾಜೂರು ಸತೀಶ್ ತಾನು ಪ್ರೀತಿಸಿದ ಹುಡುಗಿಯಿಂದ ತಿರಸ್ಕೃತನಾದ ನೋವು ಎದೆಯಲ್ಲಿ ಉಳಿದಿದೆ. ಆ ಪ್ರೇಮದ ಬಗೆಯನ್ನು ಅರಿಯುವ ಕ್ರಮ, ತನ್ನ ಪ್ರಿಯತಮೆಗೆ ಮನವರಿಕೆ ಮಾಡುವ ಕ್ರಮವಾಗಿ ಅನೇಕ ಕಡೆ ಕಾಣುತ್ತದೆ. ತನ್ನೆಲ್ಲ ವಿಹ್ವಲತೆ, ಸ್ವಪ್ನಗುಣ, ಜೀಕುಗಳಿಂದ ಈ ಕವಿತೆ ಆತ್ಮಶೋಧನೆಗೆ ಪ್ರೇರೇಪಿಸುತ್ತದೆ. ನೋಡಿದ್ದು, ಅನುಭವಿಸಿದ್ದು ಏನೋ ಇದೆಯಾದರೂ, ಕವಿಗೆ ಯಾವುದನ್ನು ಮುಟ್ಟಿ ಮಿಡಿಸುವ ಮನಸ್ಸಿಲ್ಲವಾದರೂ ಎಲ್ಲವನ್ನು ಹೇಳಿ ಮುಗಿಸಿಬಿಡಬೇಕೆಂಬ ನಿರ್ಧಾರವಿದೆ.

ಈ ರಾತ್ರಿಗಳಲ್ಲಿ ನಿದ್ರಿಸಲಾರೆ
ಹೃದಯ ರಿಂಗಣಿಸುತ್ತಲೇ ಇದೆ
ವ್ಯಾಪ್ತಿ ಪ್ರದೇಶಗಳಾಚೆಗೂ ಕೂಡ
ಉಗಾಂಡದ ಹುಡುಗ ಮುಲುಗುಡುತಿರಬಹುದು
ಅಮೀನನ ಉದ್ದ ಕೋರೆಗಳ ನಡುವೆ
ನಿದ್ದೆಹೋಗಿರಬಹುದು ನನ್ನೂರ ಹಸಿದ ಜನ ಹಸುಳೆಯಂತೆ

( ಈ ರಾತ್ರಿಗಳಲ್ಲಿ ನಿದ್ರಿಸಲಾರೆ)

ಜಗತ್ತು ಈಗ ಗಂಡಾಂತರದಲ್ಲಿದೆ. ಈ ಕವಿತೆಯ ಸಾಲುಗಳಲ್ಲಿರುವ ಸತ್ಯ, ವ್ಯಂಗ್ಯ ಸಾರ್ಥಕವಾಗಿದೆ. ಕವಿ ಸತೀಶ್ ಸಾಮಾಜಿಕವಾಗಿ ಎಷ್ಟು ಅಶಾಂತವಾಗಿದ್ದಾರೆ, ಅಸಹಾಯಕವಾಗಿದ್ದಾರೆ ಎಂಬುದನ್ನು ಈ ಕವಿತೆಯ ಸಾಲುಗಳಲ್ಲಿ ಸಹಜವಾಗಿ ಕಾಣಬಹುದು. ಇಂತಹ ವಾಸ್ತವ ಬದುಕಿನ ಬಗೆಗೆ ಕಾಳಜಿಯ ಸಾಲುಗಳು ಇಲ್ಲಿವೆ. ಹೀಗೆ ಕವಿಯ ವಿಚಾರ ಮಾರ್ಮಿಕವಾಗಿದೆ. ಜೀವನ ಮೌಲ್ಯಗಳ ಬಗೆಗೆ ಚಿಂತಿಸುವ ಕವಿ ಪ್ರಚಲಿತ ಸಮಸ್ಯೆಗಳ ಕುರಿತು ತಮ್ಮ ವಿಚಾರವನ್ನು ಹರಿಸಿದ್ದು ಸಮಂಜಸವಾಗಿದೆ.

ಸಾಕಿದ ಕಂತ್ರಿನಾಯಿ ಸಾವು ಸುಳಿವ ಹೊತ್ತಲ್ಲಿ
ಮನೆಬಿಟ್ಟು ದೂರ ಹೋದಂತೆ
ಜೋರುಮಳೆಯಲ್ಲಿ ನದಿಯೊಳಗಿನ ಮೀನು ಸತ್ತಂತೆ
ನೀನು ಸತ್ತ ಹೊತ್ತಲ್ಲಿ ನನಗೆ ಸಾವು ಬರಲಿ

(ನಾವಿಬ್ಬರು ತೀರಿಕೊಂಡ ಮೇಲೆ)

ಪ್ರೀತಿ-ಪ್ರೇಮದ ಪವಿತ್ರ ಆವಿಷ್ಕಾರವನ್ನು ಕವಿ ಮನೋಜ್ಞವಾಗಿ ಈ ಕವಿತೆಯಲ್ಲಿ ಚಿತ್ರಿಸಿದ್ದಾರೆ. ಪ್ರೇಮಿಗಳಿಬ್ಬರ ಬದುಕನ್ನು ಅದರೆಲ್ಲ ಸಮಗ್ರತೆಯೊಳಗೆ ತೆರೆದಿಡುವ ಈ ಕವಿತೆ ಹಲವು ಬಗೆಯ ಧ್ವನಿಸಾಮರ್ಥ್ಯವನ್ನು, ಅರ್ಥಛಾಯೆಯನ್ನು ಬಿಟ್ಟುಕೊಡುತ್ತದೆ. ಜೀವನದ ಮಿತಿಯನ್ನು ಕುರಿತಂತಹ ಹೆಚ್ಚು ಗಾಢವಾದ ಚಿಂತನೆ ಈ ಕವಿತೆಯಲ್ಲಿ ಅರಳಿದೆ. ಮನುಷ್ಯನ ಜೀವನ ಸುಖ-ದುಃಖಗಳ ಸಂಗಮ ತತ್ವದಿಂದ ಕೂಡಿರುವಂತಹದ್ದು. ಬದುಕು ಯಾತನೆ, ನೋವು, ಸೂತಕ, ಮೌನ ಮರ್ಮಗಳ ಜಾತ್ರೆ; ಈಗ ಹೊರಟಿದೆ ಹಾದಿ ಎದೆಯ ಮೇಲೆ ಬಿಳಿ ಹೆಣಮೋಡದ ಯಾತ್ರೆ.

ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ ಮುಂಜಾವದವರೆಗೂ
ಬೆಕ್ಕಿನ ಬೆಚ್ಚನೆಯ ಗುರುಗುರು ಲಾಲಿಹಾಡಿಗೆ
ಉರಿಯುತ್ತಾ ನಿದ್ದೆಹೋಗುತ್ತದೆ ಒಲೆ

(ಒಲೆ ಮತ್ತು ಅವ್ವ)

ಶ್ರಮಜೀವಿ ತಾಯಿಯನ್ನು ಕೇಂದ್ರವಾಗಿಟ್ಟುಕೊಂಡು ಅವಳೊಂದಿಗಿನ ಅನುಭವಕ್ಕೆ ಉತ್ಕಟವಾಗಿ ಪ್ರತಿಕ್ರಿಯೆ ನೀಡುತ್ತಾ, ಬದುಕಿನ ಇತರ ಸಂಗತಿಗಳ ಬಗ್ಗೆ ಬೆಳಕು ಬೀರುವ ಕಾವ್ಯದ ಕೌಶಲ್ಯವನ್ನು ಕಾಜೂರು ಸತೀಶ್‍ರು ಈ ಕವಿತೆಯಲ್ಲಿ ಸಾಧಿಸಿದ್ದಾರೆ. ಅವರು ತಾಯಿಯ ಮೂಲಕ ಕಾಣಿಸುವುದು, ಮತ್ತೆ ಮತ್ತೆ ಧ್ಯಾನಿಸುವುದು ಬದುಕಿನ ಬಹು ಮುಖ್ಯ ಮೂಲಭೂತ ಪ್ರಶ್ನೆಗಳನ್ನೇ; ಮನುಷ್ಯಪ್ರೀತಿ, ವ್ಯಾಮೋಹ, ತ್ಯಾಗ, ಚಡಪಡಿಕೆಗಳು ಈ ಕವಿತೆಯಲ್ಲಿ ಪರಿಣಾಮಕಾರಿಯಾಗಿ ರೂಪು ಪಡೆದಿವೆ.

ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ
ಒಸರುವ ಅಷ್ಟೂ ರಕ್ತವೂ ಹೂವಿಗೆ ಅಂದ ನೀಡಬೇಕು

ಸುಡಬಾರದು ಪಾದಗಳ ತೊಟ್ಟಿಕ್ಕುವ ಕೆಂಪುಹನಿಗಳು ಬೀದಿಬೀದಿಗಳಲ್ಲಿ
ಜಗದ ಅವ್ವಂದಿರು ಸುಡುವ ರೊಟ್ಟಿಯ ಎಸಳುಗಳಾಗಿ ಹಾರಿ ಹೂವಾಗಬೇಕು

(ಗಾಯದ ಹೂವುಗಳು)

ಹೀಗೆ ಸರಳ ಮಾತುಗಳಲ್ಲಿ ಬಿಚ್ಚಿಕೊಳ್ಳುವ ಈ ಕವಿತೆ ದುಃಖದ ಗಂಭೀರತೆಯನ್ನು ನಿಶ್ಯಬ್ದದಲ್ಲಿ ಹಿಡಿದುಕೊಡುತ್ತದೆ. ಈ ಜಗತ್ತಿನಲ್ಲಿ ಅಳಲುಗಳ ಹೊಳೆ ಹರಿಯುತ್ತಲೇ ಇದೆ; ಅದು ಮುಗಿಯುವ ಹಾಗೆ ಕಾಣುವುದಿಲ್ಲವೆಂಬ ವಿಷಾದ ಕವಿತೆಯದು. ಇಡೀ ಕವಿತೆ ಕಥನ ರೂಪದಲ್ಲಿ ರಚನೆಯಾಗಿದ್ದು ಹೃಸ್ವತೆಯಲ್ಲಿ ಅಪಾರತೆಯನ್ನು ತುಂಬಿಕೊಂಡಿದೆ. ಈ ಕವಿತೆಯ ಪರಿಣಾಮಶೀಲತೆಗೆ ಬಹುಮುಖ್ಯ ಕಾರಣ ಅದು ಬಿಡಿಸಿಡುವ ಸರಳ, ನೇರ, ಶಕ್ತ ಅಭಿವ್ಯಕ್ತಿ ಕ್ರಮ. ಅಲ್ಲದೆ ಅದು ಆತ್ಮೀಯವಾದ ಸಾಮಾಜಿಕ,ಸಾರ್ವತ್ರಿಕ ಚಿತ್ರಗಳ ಮುಖಾಂತರ ಜಿನುಗುವ ದುಃಖ ಮತ್ತು ವಿಷಾದ.

ಕಾರು ಸರಿಯದ ಕಾಡ ನಡುದಾರಿಯಲ್ಲಿ
ಹೂತುಬಿಡಿ ನನ್ನ
ಜೊತೆಗೆ ನನ್ನ ಹೆಸರು-ಭಾವಚಿತ್ರಗಳನ್ನು
ಬಿರಬಿರನೆ ಸರಿವ ನನ್ನವರ ಬರಿಗಾಲ ಚುಂಬನಕೆ
ಒಳಗೊಳಗೆ ಬಿರಿದು ಪುಳಕಗೊಳ್ಳುವೆನು

(ಉಯಿಲು)

ಇಂತಹ ಪಂಕ್ತಿಗಳು ಅಲ್ಲಲ್ಲಿ ಮಿನುಗುತ್ತವೆ. ಕವಿಯ ಅಂತರಂಗದಲ್ಲಿ ಮೂಡಿರುವ ಈ ಸಂಚಾರಿ ಭಾವ ಸಂಪೂರ್ಣವಾಗಿ ಹೃದಯತಾಪವಾಗಿದೆ. ಕಾಲದ ವಾಸ್ತವ ರೂಪಗಳ ಕುರಿತು ಗಾಢವಾದ ಅರಿವಿದ್ದು, ತನ್ನ ಸಮಚಿತ್ತ ಕಳೆದುಕೊಳ್ಳದ ಅನುಭವ ವಿನ್ಯಾಸದ ಈ ಕ್ರಮ ಮೆಚ್ಚುವಂತಹದ್ದು. ನಿಸರ್ಗ-ಮನುಷ್ಯ ಇವರ ನಡುವಿನ ಸಂಬಂಧ ಜಟಿಲವಾದದ್ದು. ಇಡೀ ಕವಿತೆಯನ್ನು ಓದುವಾಗ ಬಲಗೊಳ್ಳುತ್ತಾ ಹೋಗುವುದು ‘ನಾಯಕ’ನ ಪರದಾಟ ಮತ್ತು ನಿಸ್ಸಹಾಯಕತೆಗಳ ಭಾವನೆ.

ಕಾಜೂರು ಸತೀಶ್‍ರ ಕವಿತೆಗಳಲ್ಲಿ ಚೆಲುವಿದೆ; ಒಲವಿದೆ, ಉತ್ಸಾಹವಿದೆ, ಜೀವನದ ಗೆಲುವಿದೆ. ಆದರೆ ಆ ನಲಿವಿನ ಹಿಂದೆ ದುಃಖ ಮತ್ತು ವಿಷಾದಗಳ ತಳುಕು ಹಾಕಿಕೊಂಡಿವೆ. ಅವರ ಕಾವ್ಯದಲ್ಲಿ ಒಳಿತನ್ನು ನೋಡುವ ಕಣ್ಣಿಗೆ ಸಾವಿರದ ಮುಖ ದರ್ಶನವಾಗುತ್ತದೆ. ಸಾವು ಇಲ್ಲಿನ ಹಲವು ಕವಿತೆಗಳ ಶ್ರುತಿಯಾಗಿದೆ. ಇದು ನೋವು, ಸಂಕಟ,ತಳಮಳ, ಆತಂಕ, ಭಯ, ದಿಗ್ಭ್ರಮೆ, ವ್ಯರ್ಥತೆಗಳನ್ನು ಹೊಮ್ಮಿಸುವ ನೆಲೆಯಲ್ಲಿ ಆಕಾರ ಪಡೆದಿದೆ. ಜೀವಸಂಬಂಧಗಳ ಅನೂಹ್ಯ ನೆಲೆಗಳನ್ನು ಮೀಟುವಂತೆ ಈ ಕವಿತೆಗಳು ಬೆಳೆದಿರುವುದು ಪ್ರಮುಖವಾಗಿದೆ. ತಮ್ಮ ತೀವ್ರ ಕಂಪನದ ಕವಿತೆಯ ಸಾಲುಗಳಲ್ಲಿ ಶಕ್ತ ರೂಪಕಗಳನ್ನು ಸೃಷ್ಟಿಸಬಲ್ಲ ಕವಿ ಕಾಜೂರು ಸತೀಶ್ ಅಬ್ಬರಗಳಿಂದ ಹೊರತಾದ ಕವಿತೆಗಳನ್ನು ಈ ಸಂಕಲನದಲ್ಲಿ ಕೊಟ್ಟಿದ್ದಾರೆ. ಆದರೆ ಅವರ ಕೆಲವು ಕವಿತೆಗಳ ಸಂಯೋಜನೆಯ ನೆಲೆಯಲ್ಲಿ ಕಲಾತ್ಮಕತೆ ಕಡಿಮೆಯಾಗಿರುವುದರಿಂದ ಹಲವು ಕಡೆಗೆ ಇಲ್ಲಿಯ ಕವಿತೆಗಳು ಸೋಲುತ್ತವೆ.

ಕಾಜೂರು ಸತೀಶ್‍ರ ಈ ಸಂಕಲನದ ‘ಚಪ್ಪಲಿಗಳು’, ‘ಮರಣದ ಹಾಡು’, ‘ಮೈಲಿಗೆ’, ‘ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ’, ‘ನೆಲವಿಲ್ಲದವನ ಉಯಿಲು’, ‘ಕಾಡು ಕವಿತೆ’, ‘ಕಡಲಾಚೆಯ ಹುಡುಗಿಗೆ’, ‘ಈ ರಾತ್ರಿಗಳಲ್ಲಿ ನಿದ್ರಿಸಲಾರೆ’, ‘ಗಾಯದ ಹೂವುಗಳು’-ಮುಂತಾದ ಕವಿತೆಗಳು ಒಳ್ಳೆಯ ಕಾವ್ಯಾನುಭವ ನೀಡಿ ಓದುಗರ ಮನವನ್ನು ಕಲಕುತ್ತವೆ. ವಿಷಾದ, ದುಃಸ್ವಪ್ನಗಳನ್ನು ಈ ಕವಿತೆಗಳು ಅಭಿವ್ಯಕ್ತಿಸಿವೆ. ಕಾಜೂರು ವರ್ತಮಾನದ ವಿಷಾದದ ದನಿಯನ್ನು ದಾಖಲಿಸಿದ್ದಾರೆ. ಇಲ್ಲಿನ ಅನೇಕ ಕವಿತೆಗಳು ಆಧುನಿಕ ಜಗತ್ತಿನ ಬದುಕನ್ನು ಸಮರ್ಥವಾಗಿ ದರ್ಶಿಸುತ್ತವೆ. ಕಾಜೂರು ಸತೀಶ್ ಅನೇಕ ಕಡೆ ಹೊಸದೆನ್ನಿಸುವ ವಿಭಿನ್ನ ಪ್ರತಿಮೆ-ರೂಪಕಗಳನ್ನು ಈ ಸಂಕಲನದಲ್ಲಿ ಸಮರ್ಥವಾಗಿ ಬಳಸಿದ್ದಾರೆ. ಇದು ಸಾಮಾಜಿಕ ಕಾಳಜಿ ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಭಾವನೆಗಳನ್ನೊಳಗೊಂಡ ಕೃತಿ. ಈ ಸಂಕಲನದ ಕವಿತೆಗಳಲ್ಲಿ ಸಮಾನತೆ, ಭರವಸೆ, ಮಾನವತೆಗಳಿಗೆ ಪ್ರಾಧಾನ್ಯತೆ ಮತ್ತು ವೈಚಾರಿಕತೆಗೂ ಸ್ಥಾನ ದೊರಕಿದೆ. ಆದ್ದರಿಂದ ಇಲ್ಲಿಯ ಕವಿತೆಗಳು ಓದುಗರನ್ನು ಯೋಚನಾಮಗ್ನರನ್ನಾಗಿಸುತ್ತವೆ. ಸಂಕಲನದ ಹಲವಾರು ಕವಿತೆಗಳು ಒಂದೇ ಓದಿಗೆ ತನ್ನೆಡೆಗೆ ಸೆಳೆಯಬಲ್ಲ ಶಕ್ತಿ ಪಡೆದಿವೆ. ಪ್ರತಿಯೊಂದು ಕವಿತೆಗಳಿಗೂ ಸೂಕ್ತವಾದ ಚಿತ್ರಗಳನ್ನು ರಚಿಸಿರುವುದು ಈ ಕವನಸಂಕಲನದ ಪ್ರಮುಖ ಆಕರ್ಷಣೆಯಾಗಿದೆ.
*


ಸಿ.ಎಸ್.ಭೀಮರಾಯ
ಆಂಗ್ಲ ಉಪನ್ಯಾಸಕರು
ಅ/ಔ. ಸಿದ್ದಣ್ಣ ಬಿ. ಪೂಜಾರಿ
‘ಅಪೂರ್ವ ನಿವಾಸ’,
ಯಮುನಾ ನಗರ, ಕುಸನೂರ ರಸ್ತೆ,
ಕಲಬುರಗಿ-585105
ಮೊ. ನಂ-9008438993/9741523806




E-mail:csbhimaraya123@gmail.com

Saturday, August 12, 2017

ನಾನೊಬ್ಳೇ ಇದ್ದಾಗ ರಾತ್ರಿ ಕಳ್ಳನಾದ್ರೂ ಬಂದ್ಬಿಡ್ಲಿ

ಹೇ ಕಳ್ಳಾ...
ನೀನಾದ್ರೂ ಬಂದು ಸ್ವಲ್ಪ ಜೊತೆಗಿದ್ದು ಹೋಗು
ಆಗಾಗ ಮೊಬೈಲ್ನೊಳಗೆ ಇಣುಕಿ ಇಣುಕಿ ನೋಡೋದನ್ನ ಬಿಟ್ಟು
ಬ್ಯುಜಿ಼ ಗಿಜಿ಼ ಅಂತೆಲ್ಲಾ ಸುಳ್ಸುಳ್ಳು ಹೇಳೋದನ್ನೆಲ್ಲ ಬಿಟ್ಟು
ಏನಾದ್ರೂ ಒಂದಷ್ಟು ಹೊತ್ತು ಜೊತೆಗಿದ್ದು ಮಾತಾಡಿ ಹೋಗು.

'ಆಮೇಲೆ? ಆಮೇಲೆ?' ಅಂತ ನಾನು ಕೇಳ್ತಿರ್ತೀನಲ್ಲಾ ಆಗ
'ಆಮೇಲೇನೂ ಇಲ್ಲ' ಅಂತ ಮೂತಿ ಊದ್ಸಿ ಮಾತು ಮುಗ್ಸದೆ
ಏನಾದ್ರೂ ಮಾತಾಡ್ತನೇ ಇರು.

ಆದ್ರೆ ಈ ಚಿನ್ನ ಬೆಳ್ಳಿ ಬಗ್ಗೆ ಗ್ಯಾಸ್ ರೇಟಿನ್ಬಗ್ಗೆ
ಸಂಬ್ಳ ಬಡ್ತಿ ಬಗ್ಗೆ ಏನೂ ಮಾತಾಡ್ಬೇಡ ಪ್ಲೀಸ್.

ನಿನ್ಮಕ್ಳು ಮರಿಗಳು
ನನ್ಬೊಟ್ಟು ಅಲಂಕಾರ
ಹಾಳುಮೂಳು ಮಣ್ಣುಮಸಿ...
ಮಾತಾಡ್ತಲೇ ಇರು.

ನಾನೇ ಮಾಡಿಟ್ಟ
ಹಲ್ಸಿನ್ಕಾಯಿ- ಸೀಗ್ಡಿ ಚಟ್ನಿ ತಿಂದು
'ಹಾ... ಖಾರಽ... ಖಾರಾಽಽ..' ಅಂತ ಕಿರ್ಚಾಡ್ತಾ
ಅಪ್ಪಿ ಮುದ್ದುಮಾಡು ನನ್ನ.

ನಿನ್ಮಡ್ಲಲ್ಲಿ ನನ್ನ ಕೂರ್ಸಿ
ಕಳ್ತನ ಮಾಡ್ದ ಕತೆಗಳ್ನ ಹೇಳು
ಪ್ರೀತಿ ಇದ್ರೆ ಕದ್ದೂ ಮುಚ್ಚಿಯಲ್ಲ, ನೇರವಾಗೇ ಮುದ್ದು ಮಾಡು.

ನಾನೊಬ್ಳೇ ಇಲ್ಲಿ ಕೂತು ಸತ್ಯವಂತರ ಕತೆ ಓದುವಾಗ
ಮೆಲ್ಮೆಲ್ಲೆ ಬಂದು ಅದ್ರಲ್ಲಿರೋ ಸುಳ್ಳುಗಳ್ನ ಕದ್ಕೊಂಡ್ಹೋಗ್ಬಿಡು.

ಹೇ ಕಳ್ಳಾ..
ನಾನಿಲ್ಲಿ ಒಬ್ಳೇ ಇದ್ದೀನಿ ಕಣೋ..
ಸತ್ಯ!
*


ಮಲಯಾಳಂಮೂಲ- ಅಧೀನ ಡೈಸಿ

ಕನ್ನಡಕ್ಕೆ- ಕಾಜೂರು ಸತೀಶ್