ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, June 23, 2017

ಗಾಯದ ಹೂವುಗಳ ಕುರಿತು ಸಂಗೀತಾ ರವಿರಾಜ್

ತಮ್ಮ ಚೊಚ್ಚಲ ಕೃತಿಗೆ 2015ರ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದಿರುವ ಪ್ರತಿಭಾವಂತ ಕವಿ ಕಾಜೂರು ಸತೀಶ್ರವರ ಕವನ ಸಂಕಲನ ಗಾಯದ ಹೂವುಗಳು . ಯಾವ ಕೋನದಿಂದ ಆಲೋಚಿಸಿದರೂ ಅತ್ಯಂತ ಭಿನ್ನವಾದ ಅರ್ಥಗಳನ್ನು ಹುಟ್ಟಿಸುವ ಗಾಯದ ಹೂವುಗಳು ಎಂಬ ಶೀರ್ಷಿಕೆಯೇ ವಿಶಿಷ್ಟವಾಗಿದೆ. ಮೊಸರಿನೊಳಗವಿತ ನವನೀತದಂತೆ ಗಾಯದ ಹೂವುಗಳಲ್ಲಿರುವ ಕವಿತೆಗಳ ಆಂತರ್ಯವನ್ನು ಕಡೆದು ಕಡೆದು ನಾವು ಪಡೆದುಕೊಳ್ಳಬೇಕು. ಇಲ್ಲಿರುವ ಕವಿತೆಗಳನ್ನು ಓದುತ್ತಿದ್ದರೆ ಇದು ಯುವ ಕವಿಯೋರ್ವರ ಕವಿತೆಗಳೆಂದು ಖಂಡಿತ ನಮಗನಿಸುವುದಿಲ್ಲ. ಹಿಂದಿನ ಕಾಲದಂತೆ ಓದುಗರಿಗೆ ಬರಹಗಳ ಪರಿಚಯ ಮಾತ್ರ ಇರುವಂತಿದ್ದರೆ ಪ್ರಾಯ ಮಾಗಿರುವ ಕವಿಯೊಬ್ಬರ ಬರಹವೆಂದೇ ಎಲ್ಲರೂ ಭಾವಿಸುತ್ತಿದ್ದರೋ ಏನೋ! ಏಕೆಂದರೆ ಕಲ್ಪನೆಗಿಂತ ಹೆಚ್ಚಾಗಿ ಆಳವಾದ ಜೀವನಾನುಭವದಿಂದ ವಿರಚಿತಗೊಂಡಿರುವ ಇಲ್ಲಿರುವ ಕವಿತೆಗಳು ಅಭೂತ ಪೂರ್ವವಾಗಿವೆ.

**ಕೇಳಿಸಿಕೊಳ್ಳಿ
ಒಂದು ಇರುವೆ ಸತ್ತಿದೆ
ನನ್ನ ಕಾಲಬುಡದಲ್ಲಿ

ಏನು?
ಕೇಳಿಸುತ್ತಿಲ್ಲವೇ?

ದನಿ ಎತ್ತರಿಸಿ ಹೇಳುತ್ತಿದ್ದೇನೆ
ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ
*
ಪ್ರಭೂ
ನಾನು ಸಾಯುವಾಗಲೂ
ಹೀಗೇ ಕೂಗಿ ಕರೆಯಲು
ಒಂದು ಇರುವೆಯನ್ನಾದರೂ ಬದುಕಿಸು
ನನ್ನ ಕಾಲಬುಡದಲ್ಲಿ

ಬದುಕನ್ನು ನೋಡುವ ಕ್ರಮವೇ ಇಲ್ಲಿನ ಕವನಗಳ ಧಾಟಿ. ಹಾಗಾಗಿ ಪ್ರಾಮಾಣಿಕ ವಿಷಯಗಳ ಅಭಿವ್ಯಕ್ತಿಯೇ ಇಲ್ಲಿರುವ ಕವಿತೆಗಳ ಜೀವಾಳ. ಬಡತನದ ಬವಣೆಯನ್ನು ಅಪ್ರಾಮಾಣಿಕತೆಯನ್ನು, ಹುಸಿ ಪ್ರೀತಿಯನ್ನು, ನಂಬಿಕೆದ್ರೋಹವನ್ನು, ಭ್ರಷ್ಟತೆಯನ್ನು ದಿಕ್ಕರಿಸುವ ಎದೆಗಾರಿಕೆ ಕವಿಯ ನಿರ್ದಿಷ್ಟ ಮನೋಬಲದ ಕುರುಹಾಗಿದೆ.

ಹಸಿದ ಹುಡುಗ
ಪರೀಕ್ಷೆಯಲ್ಲಿ
ಅರಮನೆಯ ವೈಭೋಗವನ್ನು
ವಿವರಿಸುತ್ತಿದ್ದಾನೆ.

ಅವನ ದು:ಖ
ನಡುನಡುವೆ ನುಸುಳಿ
ಉತ್ತರ ನಿರಾಭರಣವಾಗುತ್ತಿದೆ..

ಅನುಭವಗಳೊಂದಿಗೆ ಉತ್ತಮ ಮುಂದಾಲೋಚನೆಗಳು ಸಮೀಕರಿಸಿದರೆ ಹುಟ್ಟುವಂತಹ ಅನನ್ಯ ಚಿಂತನೆ ಇವರ ಬರಹದಲ್ಲಿದೆ. ಬದುಕಿನ ಏರಿಳಿತದ ಹಾದಿಯಲ್ಲಿ ಅಚಾನಕ್ಕಾಗಿ ಸಿಕ್ಕ ಕವಿತೆಗಳನ್ನೆಲ್ಲಾ ಆಗಲೇ ಆಯ್ದಿರಿಸಿ, ಕಾಯ್ದಿರಿಸಿಕೊಂಡಿದ್ದಾರೆ.

ಜೀವ ಚಡಪಡಿಸುವ ಹೊತ್ತಲ್ಲಿ ವೈದ್ಯರ ಬಳಿ ಹೋದೆ
ಹರಿದ ನನ್ನ ಜೇಬು ತಡಕಾಡಿದರು
ಹೊರಬರುವ ಹೊತ್ತಲ್ಲಿ
ಜೇಬಿನ ತುತ್ತತುದಿಯ ದಾರಕ್ಕೆ ಪದ್ಯಗಳು ಜೋತುಬಿದ್ದಿದ್ದವು

ಅದರ ಬಲದಲ್ಲಿ ನಾನೀಗಲೂ ಬದುಕಿಕೊಂಡಿದ್ದೇನೆ

ಎಂಬುದಾಗಿ ಹೇಳುವ ಕವಿಯಲ್ಲಿ ಜೀವನದ ಬಗ್ಗೆ ಅದಮ್ಯ ಆಶಾವಾದವಿದೆ. ಇಂತಹ ಭರವಸೆಯ ಹಾದಿಯೇ ಇವರ ಜೀವನದ ಕವಿತಾ ಹಾದಿ.
ಕಾಲದ ಸರಹದ್ದು ಎಲ್ಲೆ ಮೀರಿ ಬೆಳೆದದ್ದನ್ನು ಕವಿ ಚಿತ್ರಿಸಿದ ಪರಿ ತುಂಬಾ ಪರಿಣಾಮಕಾರಿಯಾಗಿದೆ. ತಮ್ಮ ತಂದೆ ತಾಯಿ ಹಿರಿಯರ ಜೀವಿತವೆ ಕಣ್ಣ ಮುಂದಿನ ಸಾಲುಗಳಾಗಿ ಪಡಿಮೂಡಿವೆ. ಬವಣೆಗಳು ಬವಣೆಗಳಾಗಿ ಉಳಿಯದೆ ಶಿಲ್ಪಿಯ ಉಳಿಯ ಪೆಟ್ಟಿನ ತೆರೆದಿ ರೂಪುಗೊಂಡ ಜೀವದ ತುಡಿತವೆ ಧ್ವನಿಗಳಾಗಿ ವಿರಚಿತಗೊಂಡಿವೆ. ಒಂದು ಹೃದ್ಯವಾದ ರೂಪದಲ್ಲಿ ಕವಿತೆಯಾಗಿ ರೂಪ ತಳೆದಿದೆ.

ನಿದ್ರಿಸಿದರೂ ಹೊಗೆಯಾಡುತ್ತದೆ
ಗತದ ಹಾಳೆ ತಾಗಿದೊಡನೆ
ಒಂದೇ ಉಸಿರಿಗೆ ಓದಿ ಮುಗಿಸುತ್ತದೆ

ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ..

ಗಾಯದ ಹೂವುಗಳಲ್ಲಿ ಮುಖ್ಯವಾಗಿ ತೋರುವ ಗುಣ ಕಾಳಜಿ. ಕವಿಯಾದವನು ಸಮಾಜದ ಮುಖ್ಯವಾಹಿನಿಯಲ್ಲಿ ತ್ವರಿತವಾಗಿ ಮಾಡಬೇಕಾದ ಕೆಲಸವೆಂದರೆ ಇದು.
ಸಮಾಜದಲ್ಲಿ ಶೋಷಿತರ ಪರವಾದ ಸ್ವರವಾಗಬೇಕು. ಬಂಡಾಯ ಧೋರಣೆ ಸ್ವರೂಪದಲ್ಲಿರುವ ಇಲ್ಲಿರುವ ಕವಿತೆಗಳು ಕೂಲಿ ಸಿಗದ ಕಾರ್ಮಿಕರ ಬಗ್ಗೆ, ಸುಡುವ ಬೀದಿಯಲ್ಲಿ ನಡೆವ ಪಾದದ ಕುರಿತು, ಅರ್ಜಿ ನೀಡಿ ಅಲೆದಾಡುವ ಸಾಮಾನ್ಯ ಜನರ ಕುರಿತು, ಹಸಿದ ಹೊಟ್ಟೆಯ ಸಂಕಟದ ಬಗ್ಗೆ ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ನಾನು ಎಲ್ಲರಂತೆ ಸಾಮಾನ್ಯ ಮನುಷ್ಯ ಎಂಬುದಾಗಿ ಹೇಳುವ, ಎಲ್ಲರನ್ನು ನನ್ನ ಜನರೇ ಎಂಬುದಾಗಿ ಸಂಭೋದಿಸುವ ಇವರ ವಿನಯವಂತಿಕೆಯೇ ಕವಿತೆಯ ಜೀವದ್ರವ್ಯ. ಕ್ರಾಂತಿ, ಅಶಾಂತಿ, ಅಸಹಿಷ್ಣುತೆಗಳನ್ನು ಸಹಿಸದ ಧ್ಯೇಯ ಹೊಂದಿರುವ ಕವಿತೆಗಳು ನಮಗಿಲ್ಲಿ ಗೋಚರಿಸುತ್ತವೆ. ಇದರಿಂದಾಗಿ ಕವಿತೆಯ ಒಳಹೊರಗನ್ನು ಆಸ್ವಾದಿಸುವ ನಮ್ಮ ಸಂಯಮ ಇಮ್ಮಡಿಗೊಳ್ಳುತ್ತದೆ.

ಉಣಿಸುವವರ ವಿಷದ ಹಲ್ಲು ಕಿತ್ತರೆ
ಹಾಲೂ ಕುಡಿಯಬಲ್ಲದು
ಹಣ್ಣೂ ತಿನ್ನಬಲ್ಲದು

ಎಲ್ಲಾದರೂ ದೂರ ಸರಿ
ಮೈಯೆಲ್ಲಾ ಕಿವಿಯಾದ ಹಾವೇ
ಚಪ್ಪಲಿಗಳಿಗಾದರೋ ದನಿಯಿದೆ
ಬರಿಯ ಪಾದಗಳ ಚಲನೆಯ ಗ್ರಹಿಸು

ಬುಸುಗುಡಲು ಹೆಡೆಯಿರದಿದ್ದರೆ
ಬಡಿಯಲು ಬಾಲವನ್ನಾದರೂ ಎತ್ತು
ಕಳಚು ಸುತ್ತಲಿನ ಪೊರೆ
ಚರಿತ್ರೆಯ ಸಾಲ ತೀರಿಸಬೇಕು

ಆ ಕ್ಷಣದ ಸತ್ಯವನ್ನು ಕವಿತೆಯಲ್ಲಿ ಹಿಡಿದಿಟ್ಟರೂ ಅದು ಭವಿಷ್ಯದ ಅದ್ಭುತ ಸತ್ಯವಾಗಬಹುದು ಎಂಬುದನ್ನು ನಮ್ಮರಿವಿಗೆ ತಂದಿದೆ. ಇದರಿಂದ ಕವಿತೆಯ ಬಲ ಇನ್ನೂ ಹಿಗ್ಗಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಇಲ್ಲಿರುವ ಕವಿತೆಗಳು ಎಂದೆಂದಿಗೂ ತನ್ನ ತಾಜಾತನವನ್ನು ಕಾಯ್ದಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಬೂಟಾಟಿಕೆಯ ಬದುಕನ್ನು, ಬಹುಪರಾಕ್ ಹೇಳುವ ಹೊಗಳುಭಟರ ತೆವಲನ್ನು, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರನ್ನು ನಕಾರಾತ್ಮಕವಾಗಿ ಗುರುತಿಸಿದ ಗುರುತರ ಹೊಣೆಗಾರಿಕೆಯನ್ನು ಇಲ್ಲಿನ ಕವಿತೆಗಳು ಹೊತ್ತಿವೆ. ಎಲ್ಲೋ ಒಂದು ಕಡೆ ಈ ಗುರುತಿಸುವಿಕೆ ಸರ್ವರಿಗೂ ಒಳಿತನ್ನು ಉಂಟುಮಾಡಬಲ್ಲುದು ಎಂಬ ಆಶಾವಾದವನ್ನು ಲೇಖಕರು ಹೊಂದಿದ್ದಾರೆ.

ಸಾವಿರಾರು ಬಿಳಿಕೂದಲುಗಳ ಒಡೆಯರೇ
ಒಳಗಿನ ಜೀವದ್ರವ್ಯ ಒಣಗಲು ಬಿಟ್ಟ
ನನ್ನ ಬರಿಮೈಯನ್ನೆ ನೋಡಿ
ಇನ್ಯಾವ ರೂಪಕಗಳು ಬೇಕು ನಿಮಗೆ?

ಹಠಾತ್ತನೆ ಕುಸಿದ ಭಾವವು ಅಲ್ಲೆಲ್ಲೋ ಕವಿತೆಗಳಲ್ಲಿ ಇಣುಕಿದಂತೆ ಭಾಸವಾದರೂ ಅದು ಭಾವಪರವಶತೆ ಎಂದೆನಿಸಿಬಿಡುತ್ತದೆ! ಒಂದು ವಿಷಯದ ಮೇಲೆ ಅತೀ ತೀವ್ರವಾಗಿ ಒಳಗೊಳ್ಳಲು ಎಲ್ಲರಿಂದ ಸಾಧ್ಯವಾಗದ ಮಾತು .ಇಲ್ಲಿ ಕವಿಗೆ ತನ್ನ ಒಡಲ ಅಳಲನ್ನು ತೋಡಿಕೊಳ್ಳಲು ಕವಿತೆಯಿದ್ದರೆ ಮಾತ್ರ ಸಾಕು ಅಥವಾ ಸಾಕೇ? ಎಂಬ ಭಯಮಿಶ್ರಿತ ಪ್ರಶ್ನೆ ಅರೆಕ್ಷಣ ಕಾಡಿಬಿಡುತ್ತದೆ. ಅದರಾಚೆಗೆ ತಲೆಯಾನಿಸಿ ಮಲಗಲು ಇನ್ನೇನರದ್ದೋ ಇರುವ ಕೊರತೆಯನ್ನು ಕವಿತೆಯೆ ಅವರಿಗೆ ತುಂಬಿ ಬಿಡುತ್ತದೆ. ಈ
ಅಜ್ಞಾನಿಯ ದಿನಚರಿ**ಯಲ್ಲಿ ಜ್ಞಾನದ ಹೂವು ಅನವರತ ಅರಳುತ್ತಿದೆ. ಆ ಹೂವಿಗೆ ಗಾಯದ ಹಂಗಿಲ್ಲ. ಗಾಯ ಮಾಗುವುದೆಂತು ಎಂದು ಕಾಯುವ ಹಪಾಹಪಿಯೂ ಇಲ್ಲ. ಕವಿ ಕಾಜೂರು ಸತೀಶ್‍ರವರ ಕವಿ ಬದುಕು ಸುಂದರ ಹೂವಾಗಿ ಅರಳಿ ನಿಲ್ಲುವ ಎಲ್ಲಾ ನಿಖರತೆಯೂ ಸ್ಪಷ್ಟವಾಗಿ ಗೋಚರಿಸುತ್ತದೆ.
*

ಸಂಗೀತ ರವಿರಾಜ್

ವಿಳಾಸ :
ಸಂಗೀತ ರವಿರಾಜ್
ಬಾಲಂಬಿ ಅಂಚೆ
ಚೆಂಬು ಗ್ರಾಮ
ಮಡಿಕೇರಿ ತಾಲೂಕು
ಕೊಡಗು ಜಿಲ್ಲೆ -574234
ಚಲನವಾಣಿ : 7259135346

No comments:

Post a Comment