ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, January 13, 2017

ಪ್ರೀತಿಯ ಗುರುಗಳ ನೆನೆದು ನಾಲ್ಕು ಸಾಲು

ಅರ್ಜಿ ಹಾಕಲು ಬಂದ ದಿನ ಸಹಿ ಕಾಲಂನಲ್ಲಿ ಅವರ ಹೆಸರು ನೋಡಿದ್ದೆ. ಮೊದಲ ತರಗತಿಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯ ಶಿಕ್ಷಣದ ಅಗತ್ಯತೆಯನ್ನು ಕುರಿತು ಇಂಗ್ಲಿಷ್ನಲ್ಲಿ ಬರೆಯಲು, ಮಾತನಾಡಲು ಹೇಳಿದ್ದರು. ಮೊದಲು ಇಂಗ್ಲಿಷ್, ಆಮೇಲೆ ಮನೋವಿಜ್ಞಾನವನ್ನು(ಜೊತೆಗೆ ಸಂಗೀತ) ಹೇಳಿಕೊಟ್ಟರು.

ಇವೆಲ್ಲಕ್ಕಿಂತ ಹೆಚ್ಚಾಗಿ ಮನುಷ್ಯತ್ವವನ್ನು ಬದುಕಿ ತೋರಿಸಿದರು.

ಈ ಕಾರಣಗಳಿಂದಾಗಿಯೇ ಅವರ ವ್ಯಕ್ತಿತ್ವ ನನ್ನನ್ನು ಗಾಢವಾಗಿ ಕಾಡುತ್ತಿರುವುದು.


ವೇದಿಕೆಯೆಂದರೆ 'ಬಲಿಪೀಠ'ವೆಂದುಕೊಳ್ಳುತ್ತಿದ್ದ ನನಗೆ, ಜತನವಾಗಿ ಕಾಪಿಟ್ಟುಕೊಂಡ ಮೌನ ಅನೇಕ ಸೂಕ್ಷ್ಮಗಳನ್ನು ಹೇಳಿಕೊಟ್ಟಿದೆ. ನನ್ನ ಸುತ್ತಲನ್ನು ಬೆರಗುಗಣ್ಣುಗಳೊಂದಿಗೆ ಶೋಧಿಸುತ್ತಿದ್ದ ಆ ಮೌನ ಇಂತಹ ಗುರುಗಳನ್ನು ಗುರುತಿಸುವುದನ್ನೂ, ಗೌರವಿಸುವುದನ್ನೂ ಹೇಳಿಕೊಟ್ಟಿತ್ತು.

ಅವರು ಮೈಸೂರಿನಿಂದ ಬಂದು ಹೋಗುತ್ತಿದ್ದರು. ಸೂರ್ಯೋದಯಕ್ಕೂ ಮುಂಚೆ ತಿಂಡಿ ತಿಂದು ಕಾಲೇಜಿಗೆ ಬರುವ, ಸೂರ್ಯಾಸ್ತದ ನಂತರ ಮನೆಗೆ ಹಿಂತಿರುಗುವ ವಿಲಕ್ಷಣ ಸುಖವನ್ನು ನಾನೂ ಅನುಭವಿಸಿದ್ದೆ. ಆ ನಡುವೆ ಅವರ ವರ್ಗಾವಣಾ ಸುದ್ದಿ ಕೇಳಿ 'ಛೆ!' ಎಂದು ನನಗೇ ಕೇಳಿಸುವಷ್ಟು ಜೋರಾಗಿ ಉದ್ಘರಿಸಿದ್ದೆ. 'ಒಂದು ಮಾತಾದರೂ ಹೇಳಿ ಹೋಗಬಹುದಿತ್ತು' ಹೇಳಿಕೊಂಡಿದ್ದೆ ನನಗೆ ನಾನೇ.

ಒಮ್ಮೆ 'ತನುವು ನಿನ್ನದು' ಗೀತೆಯನ್ನು ಕಷ್ಟಪಟ್ಟು ಹಾಡಿದ್ದೆ. ಕುಸಿದುಹೋಗುತ್ತಿದ್ದ ನನ್ನನ್ನು ಅವರ ಮೆಚ್ಚುಗೆಯ ನುಡಿಗಳು ಮೇಲಿತ್ತಿದ್ದವು.

ಸಂಗೀತ ವಾದ್ಯಗಳ ನಿಯೋಜಿತ ಕಾರ್ಯವನ್ನು ಸಲ್ಲಿಸಲು 'ನಾಳೆಯೇ ಅಂತಿಮ ದಿನ' ಎಂದಿದ್ದಕ್ಕೆ ರಾತ್ರಿಯಿಡೀ ನಿದ್ದೆಗೆಟ್ಟು ಬರೆದು ನಿದ್ರಾ ಮಂಪರಿನಲ್ಲಿ ಅದನ್ನು ಮನೆಯಲ್ಲೇ ಇಟ್ಟು ಬಂದಿದ್ದೆ. 'ಮೇಡಂ ಮರೆತುಬಂದೆ' ಎಂದಿದ್ದಷ್ಟೆ 'ಆಯ್ತು' ಎಂದು ನಕ್ಕರು ಮುಗ್ಧವಾಗಿ.

ಇಂತಹ ಆರ್ದ್ರ ನೆನಪುಗಳೇ ನನ್ನನ್ನೂ, ನನ್ನೊಳಗಿನ ಕಾಲವನ್ನೂ ಮತ್ತೆ ಮತ್ತೆ ಬದುಕಿಸುತ್ತಿರುವುದು. ಈಗ ಅವರ ಮೊಬೈಲ್ ಸಂಖ್ಯೆ ಸಿಕ್ಕ ಮೇಲೆ ಇದನ್ನೆಲ್ಲ, ಹೀಗೆಲ್ಲ ಬರೆಯುತ್ತಿದ್ದೇನೆ.

ನಮಸ್ತೆ ಪ್ರೀತಿಯ ಶೋಭಾ ಮೇಡಂ, ನಿಮ್ಮಂತಹ ಗುರುಗಳು ಈ ಲೋಕಕ್ಕೆ ದಕ್ಕುತ್ತಲೇ ಇರಲಿ!

*

ಕಾಜೂರು ಸತೀಶ್

No comments:

Post a Comment