ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, January 7, 2017

ಮೂಢರಾಗುತ್ತಿರುವ ಕಾಲದಲ್ಲಿ

ಮನುಷ್ಯ ತೀರಾ ಭಾವುಕನಾದಾಗ ಹುಟ್ಟುವ ಅಭಿವ್ಯಕ್ತಿ Talkative ಆಗಿದ್ದರೂ ಅದು ಸತ್ಯನಿಷ್ಠವಾಗಿಯೂ ಪ್ರಾಮಾಣಿಕವಾಗಿಯೂ ಆಗಿರುತ್ತದೆ.
*
ಒಬ್ಬ ವ್ಯಕ್ತಿಯನ್ನು ವೈಚಾರಿಕವಾಗಿ ದಮನ ಮಾಡುವುದು ಎಷ್ಟು ಸುಲಭ!

ತಿಳಿದೇ ಇರುವ ABCDಯನ್ನು ಓದಿಸುವುದು, ಬರೆಸುವುದು. ಮತ್ತೆ ಮತ್ತೆ ಓದಿಸುವುದು, ಬರೆಸುವುದು.

ಅಂಥವರನ್ನೇ ಕರೆದು ಗುಂಪು ಮಾಡಿ ವಾರವಿಡೀ ಅದನ್ನೇ ಬರೆಸುವುದು, ಓದಿಸುವುದು. ಹೇಗೆಲ್ಲ ಓದಬಹುದು ಹೇಗೆಲ್ಲ ಬರೆಯಬಹುದೆಂದು ಚರ್ಚೆ ಮಾಡಿಸುವುದು. ರಾಗವಾಗಿ ಓದಿಸುವುದು, ಹಾಡಿಸುವುದು. ನೃತ್ಯ ಮಾಡಿಸುತ್ತಾ ಓದಿಸುವುದು. ಡ್ರಾಯಿಂಗ್ ಶೀಟಿನಲ್ಲಿ ಬರೆಸುವುದು.

ಹೀಗೆಯೇ ಅಆಇಈ, ರಗಸದಅಗಳನ್ನು , Noun Pronounಗಳನ್ನು Suffix Prefixಗಳನ್ನು!

RIP ಮೇಷ್ಟ್ರೇ ಮತ್ತು ಬಡ ವಿದ್ಯಾರ್ಥಿಗಳೇ!!
*


ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗಿರದ ಶಿಕ್ಷಕ ಮತ್ತು ಅವನನ್ನು ಅಲ್ಲಿ ಇರಗೊಡದ ವ್ಯವಸ್ಥೆ ಘೋರ ಪಾಪವನ್ನು ಸುತ್ತಿಕೊಳ್ಳುತ್ತದೆ.
*

ಒಂದು ದಿನವೂ ತರಗತಿಗೆ ಹೋಗಿ ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವವನ್ನು ನೀಡದ ಆ ಇಬ್ಬರಿಗೆ ರಾಜ್ಯ ಪ್ರಶಸ್ತಿ ಸಿಕ್ಕಾಗ ನನ್ನ ಕಾಲದ ಚಿತ್ರ ಮತ್ತಷ್ಟೂ ಸ್ಪಷ್ಟವಾಯಿತು
*


ನಿಜವಾಗಿಯೂ ಶಿಕ್ಷಕರಿಗೆ ಎಂತಹ ತರಬೇತಿಯ ಅಗತ್ಯತೆಯಿದೆ? ಶಿಕ್ಷಕರನ್ನು ವಿದ್ಯಾರ್ಥಿಗಳ ಮಟ್ಟಕ್ಕಿಳಿಸಿ ಕೊಡುವ 'ಬುಡುಬುಡಿಕೆ'ಗಿಂತ ಈ ಬಗೆಯ ತರಬೇತಿಗಳನ್ನು ಕೊಡಬೇಕಾಗಿದೆ:

¶ ಅಕ್ಕಿ/ಬೇಳೆ/ಸಮವಸ್ತ್ರ/ಪುಸ್ತಕಗಳ ಚೀಲಗಳನ್ನು ಸರಾಗವಾಗಿ ಹೊತ್ತೊಯ್ಯುವ ತರಬೇತಿ

¶ ಕೆಲವೇ ಕೆಲವು ನಿಮಿಷಗಳಲ್ಲಿ ಶಾಲಾವರಣವನ್ನು ಗುಡಿಸಿ ಸ್ವಚ್ಛಗೊಳಿಸುವ ತರಬೇತಿ

¶ ವಾರಕ್ಕೆ ಕನಿಷ್ಟ ಮೂರು ದಿನಗಳಾದರೂ ಶಾಲೆಗೆ ಹೋಗಿ ನಿಯತ್ತಾಗಿ ದುಡಿಯುವ ತರಬೇತಿ

¶ ಎಲ್ಲ ಕೆಲಸಗಳನ್ನು ಮಾಡಲು ಬೇಕಾದ fitnessನ್ನು ಕಾಯ್ದುಕೊಳ್ಳುವ ತರಬೇತಿ

¶ ರಾಜಕಾರಣಿಗಳು, ಅಧಿಕಾರಿಗಳ ಬೆನ್ನುಬೀಳದೆಯೂ ಬದುಕುವ ತರಬೇತಿ

¶ ಏಕಕಾಲದಲ್ಲಿ ಏಳೂ ತರಗತಿಗಳನ್ನು ನಿಯಂತ್ರಿಸುವ, ಕಲಿಸುವ, ಅವಷ್ಟಕ್ಕೂ ಪಾಠಟಿಪ್ಪಣಿ, ಸಿಸಿಇ ದಾಖಲೆಗಳನ್ನು ಇಡುವ ತರಬೇತಿ

¶ ಬಿದ್ದು ಕೈಕಾಲು ಮುರಿದುಕೊಳ್ಳುವ ಅಥವಾ ಗಾಯಗೊಳ್ಳುವ ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡುವ ತರಬೇತಿ

¶ ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳುವ, ಉಗಿದರೂ ಒರೆಸಿಕೊಳ್ಳದೆ ಬದುಕುವ ತರಬೇತಿ

¶ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಜಗಳ ಬಿಡಿಸುವ ತರಬೇತಿ

¶ ಎಲ್ಲ ತರಬೇತಿಗಳನ್ನು ಸ್ವಂತ ಖರ್ಚಿನಿಂದ ಪೂರೈಸಿಯೂ ಬದುಕುವುದನ್ನು ಕಲಿಸುವ ತರಬೇತಿ


RIP ಮೇಷ್ಟ್ರಿಗೆ!
*

ಕಾಜೂರು ಸತೀಶ್

No comments:

Post a Comment