Saturday, December 31, 2016

ಅಲೆ ತಾಕಿದರೆ ದಡ

ಕವಿತೆಯನ್ನು ಬರೆದು ಮುಗಿಸಿದ ಮೇಲೆ ಏರ್ಪಡುವ ತೃಪ್ತಿಯಷ್ಟೇ ಅತೃಪ್ತಿಯದ್ದೂ ಪಾಲಿರುತ್ತದೆ. ಈ 'ಅತೃಪ್ತಿ'ಯೇ ಕವಿತೆಯಾದಿಯಾಗಿ ಎಲ್ಲ ಕಲೆಗಳನ್ನು ಪಕ್ವಗೊಳಿಸುತ್ತಾ ಸಾಗುವುದು. ಯಾವುದೋ ಕ್ಷಣದಲ್ಲಿ 'ಸಂಭವಿಸುವ' ಈ ಪವಾಡ ಎಲ್ಲ ಕಲಾಕಾರರಿಗೊಂದು ಬೆರಗು.

' ಈ ಹೊತ್ತಿನ ಕವಿತೆಗೆ ನೈರಾಶ್ಯ ಬಾಧಿಸಿದೆ' - ಹೀಗೆಂದುಕೊಳ್ಳುತ್ತಲೇ ಕವಿತೆಗೆ ಮುಖಾಮುಖಿಯಾಗುತ್ತಿದ್ದೇವೆ. ಕಾವ್ಯದ ಕುರಿತ ಈ ಬಗೆಯ ನೇತ್ಯಾತ್ಮಕ ಅಂಶಗಳನ್ನು ನೀಗಿಸಿಬಿಡುವ ಸಂಕಲನಗಳು ಈಚೆಗೆ ಪ್ರಕಟವಾಗುತ್ತಿರುವುದು ಸಂತೋಷದ ಸಂಗತಿ. ವಾಸುದೇವ ನಾಡಿಗ್ ಅವರ ಅಲೆ ತಾಕಿದರೆ ದಡ ಅವುಗಳಲ್ಲಿ ಮುಖ್ಯವಾದುದು.

ವಾಸುದೇವ ನಾಡಿಗ್ ಅವರ ಆರನೆಯ ಕವನ ಸಂಕಲನವಿದು. ವಿಮರ್ಶೆ, ಪ್ರಬಂಧ, ಸಣ್ಣ ಕತೆ ಮುಂತಾದ ಪ್ರಕಾರಗಳ ಒಳಗೆ ಇಳಿಯಬಲ್ಲವರಾದರೂ, 'ಕವಿತೆ' ಎಂಬ ಧ್ಯಾನಸ್ಥ ಮಾರ್ಗವನ್ನೇ ತಮ್ಮ ಪ್ರಧಾನ ಅಭಿವ್ಯಕ್ತಿಯಾಗಿಸಿಕೊಂಡವರು.

ನಾಡಿಗರ ಹಿಂದಿನ ಎರಡು ಸಂಕಲನಗಳನ್ನು( ವಿರಕ್ತರ ಬಟ್ಟೆಗಳು , ನಿನ್ನ ಧ್ಯಾನದ ಹಣತೆ) ಓದಿಕೊಂಡಿರುವ ಅನುಭವದ ನೆಲೆಯಲ್ಲಿ ಸಾದೃಶ್ಯವೆನಿಸಿದರೂ, 'ಅಲೆ ತಾಕಿದರೆ ದಡ' ಅದಕ್ಕಿಂತ ಬೇರೆಯದೇ ಆದ ಗಟ್ಟಿ ಕಲಾಕೃತಿಯಾಗಿ ರೂಪಿತವಾಗಿದೆ.

ಇಲ್ಲಿನ ಕವಿತೆಗಳು ಬದುಕಿನ ತಾತ್ವಿಕತೆಯನ್ನು ಚಿಂತಿಸುವಲ್ಲಿ ತಳವೂರಿದೆ. ಬದುಕಿನ ವೈರುಧ್ಯಗಳ ಮೇಲಿನ ಗಹನ ಆಲೋಚನೆಯೇ ನಾಡಿಗ್ ಅವರ ಕವಿತೆಗಳು. ಅವು 'ನಿಶಬ್ದಗಳಲಿ ಏಳುವ ಶಬ್ದಗಳು', 'ಬದುಕಿನ ಸಂತೆಗಳಲಿ ಜೀವಪಡೆದು ಗದ್ದಲಗಳ ನಡುವೆ ಗದ್ದಲವಾಗದ ಹಾಗೆ' ಮೂಡುವಂಥವು. 'ಮನುಷ್ಯನೆಂಬ ಸೋಜಿಗದ ಪ್ರಾಣಿ ಮತ್ತು ಜೀವನವೆಂಬ ಅನೂಹ್ಯ ಬಯಲು ಎರಡನ್ನೂ ಕುರಿತು ಗಾಢವಾಗಿ ಚಿಂತಿಸುತ್ತಾ ಹೋದಾಗ' ಅಭಿವ್ಯಕ್ತಗೊಂಡುಬಿಡುತ್ತವೆ.


ವಾಸುದೇವ ನಾಡಿಗರ ಮಾಗುವಿಕೆಗೆ ಸಾಕ್ಷಿ ಅವರ ಶ್ರದ್ಧೆಯ ಕಾವ್ಯ ಕಟ್ಟುವಿಕೆ( ದೇಸೀಯ ಮತ್ತು ಐರೋಪ್ಯ ಮಾದರಿಗಳ ಹದಬೆರೆತ ಪಾಕ) ಮತ್ತು ಪ್ರತಿಮೆ, ನುಡಿಗಟ್ಟುಗಳನ್ನು ಸಹಜವಾಗಿ - ಪ್ರಮಾಣಬದ್ಧವಾಗಿ ದುಡಿಸಿಕೊಳ್ಳುವ ಕಲೆ. (ಅಡಿಗ+ಕೆ.ಎಸ್.ನ. ಹಾಗೆ)

ಇಷ್ಟು ಸುದೀರ್ಘವಾಗಿ ಕವನ ಸಂಕಲನವೊಂದು ನನ್ನನ್ನು ಓದಿಸಿಕೊಂಡ ಉದಾಹರಣೆಗಳಿಲ್ಲ. ಆ ಶ್ರೇಯಸ್ಸು 'ಅಲೆ ತಾಕಿದರೆ ದಡ'ಕ್ಕೆ ಸಲ್ಲಬೇಕು. ಅವರ ಕಾವ್ಯದ 'ನದಿಹರಿವು' ನಮ್ಮೊಳಗೆ ಹರಿಯುತ್ತಿರುವಾಗಲೇ ಕ್ಷಣಕ್ಷಣವೂ ನಿಂತು


ಏನನ್ನೋ ಗಹನವಾಗಿ ಆಲೋಚನೆಗೆ ಹಚ್ಚುತ್ತದೆ. ಅಂತಹ ಆಲೋಚನೆಗಳಲ್ಲಿ ಓಶೋ, ಬುದ್ಧ , ಗಾಂಧಿ ಮತ್ತಿತರ ಪಾತ್ರಗಳು ಬಂದುಹೋಗುತ್ತವೆ. ಬಹುದೊಡ್ಡ ಮಾನವೀಯ ಕಾಳಜಿ , ಕಾರುಣ್ಯದ ಹಂಬಲ, ನಾನತ್ವದ ಮತ್ತು ಪ್ರಭುತ್ವದ ವಿಡಂಬನೆ, ಸಂಬಂಧಗಳ ಶೋಧ, ನೆಲಮೂಲ ಪ್ರಜ್ಞೆಯ ವಿನಾಶ, ಸ್ತ್ರೀ ಪ್ರಜ್ಞೆ.. ಹೀಗೆ ವಿಭಿನ್ನ ಆಯಾಮಗಳ ಮೇಲೆ ಧ್ಯಾನ ಹೊರಳುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಇವು ಗಾಂಧೀಜಿಯವರ 'My Experiment with Truth' ಮಾದರಿಯವು.

'ಅಲೆ ತಾಕಿದರೆ ದಡ'ದ ಒಳಗಿಳಿಯುವ ಕೆಲವು ಸಾಲುಗಳು :
ಸಂದುಹೋದ ಅಪ್ಪ
ಪ್ರತಿ ವಸಂತಕ್ಕೂ ನೆನಪಾಗುತ್ತಾನೆ

(ಕಳೆದ ಶಿಶಿರಗಳಲಿ ಉದುರಿದ ಎಲೆಗಳು)
*

ಹೆಳವನ ಹೆಗಲು ಖಾಲಿಯಿದೆ
ಕುರುಡ ಕೂಡದಂತೆ ಕಾಯಬೇಕು

*

ಬೆಳಕನ್ನು ಕೆಣಕಲೆಂದೇ
ಜನ್ಮವೆತ್ತಿದ ಕತ್ತಲಿಗೆ
ಬೆಳಕನ್ನುಳಿದು ಬಾಳಿಲ್ಲ

(ಅಲೆ ತಾಕಿದರೆ ದಡ)
*

ಹಿಮದ ತರಗತಿಯಲ್ಲಿ
ಬರೀ ಬೆಂಕಿ ಕುರಿತೇ ಪಾಠ

(ನಿಂತರೆ ನೆಲೆ ಸೋತರೆ ಮುಕ್ತಿ)
*

ಏನೂ ಮಾತಾಡಲೊಲ್ಲದ
ಬೇರಿಗೆ ಎಲ್ಲ ಗೊತ್ತು

(ಸತ್ಯದ ಸಂಗ ಮೌನ)
*

ನೀರ ಸಖ್ಯಕ್ಕೆ ಬಿದ್ದ ಉಪ್ಪು
ಬಿಸಿಲ ಬಾಹುಗಳಲ್ಲಿ ಸಿಕ್ಕ ಸಮುದ್ರ
ಕಾಲ ಕಟಕಟೆಯಲ್ಲಿ ಸತ್ಯ ಚಿಗುರಿ
ಉಪ್ಪು ಸಮುದ್ರವಾಗಿ ಸಮುದ್ರ ಉಪ್ಪಾಗಿ
ರೂಪ ರೂಪಾಂತರಗಳಾಚೆ ಎಲ್ಲ ನಿರೂಪ

(ಸಮುದ್ರ ಮತ್ತು ಉಪ್ಪು)
*

ನದಿಗಳಲೂ ಉಳಿಯದ ಸುಖ
ಸಮುದ್ರದ ಪಾಲಾಯಿತು
ಉಪ್ಪು ತಿನ್ನುವುದಕೆ ಅಣಿಯಾಗಬೇಕು

(ಗಮ್ಯ)
*

ನನಗೆ ನಾನೇ ದುರ್ಗಂಧ ಬೀರುವ ಸತ್ಯ
ತಡವಾಗಿಯಾದರೂ ಅರಿವಾಯಿತು

(ನನಗೆ ನಾನೇ ದುರ್ಗಂಧ )
*

ಬದುಕುಗಳೆಲ್ಲ ಕತೆಗಳಾಗದೆ
ಕತೆಗಳ ಕೊನೆಯೇ ಬದುಕಾಗಿದ್ದರೆ
ಇಷ್ಟೊಂದು ಕತೆ ಹೇಳುವ ಹಾಗಿರಲಿಲ್ಲ ಕೇಳುವ ಹಂಗಿರಲಿಲ್ಲ

(ಕತೆಗಳ ಜೊತೆಜೊತೆಗೆ)
*

ಲೂಟಿಕೋರರೇ ರಾಜರಾದರೋ
ರಾಜರೇ ಲೂಟಿ
ಮಾಡಿದರೋ
ಗಾಯಗೊಂಡ ಮಣ್ಣು ಮಂದಿ
ಕೊತ್ತಲ ತುದಿಗೆ ಕಿಸಕ್ಕನೆ
ನಕ್ಕ ಲಾಂಛನ

(ಇತಿಹಾಸ )

ಹೊಸ ತಲೆಮಾರಿನ ಹುಡುಗರೊಂದಿಗೆ ಹುಡುಗನಾಗಿ ಬೆರೆಯುವ ನಾಡಿಗರ ಗುಣವೇ ಕವಿತೆಯಂತೆ . ಅವರ ಕವಿತೆಗಳಿಗೆ ಒಳ್ಳೆಯ ಓದುಗರು ಸಲ್ಲಲಿ; ಈ ಲೋಕದ ಆತ್ಮಶೋಧನೆಗೆ ಅವಕಾಶ ಒದಗಿ ಬರಲಿ.
ಅವರೇ ಹೇಳುವಂತೆ -
ದ್ವೀಪಗಳೆದುರು
ಹಚ್ಚಿಡಿ ದೀಪಗಳ
ಬೆಳಕಿಗಾಗಿ ಅಲ್ಲ
ಬದುಕಲಿಕೆ

(ದ್ವೀಪಗಳಲಿ ಬದುಕುವುದು ಸಾಕಾಗಿದೆ)
*

ಕಾಜೂರು ಸತೀಶ್

No comments:

Post a Comment

ಕಡಲ ಕರೆಯ ಕುರಿತು ಡಾ.ಎಚ್.ಎಸ್.ಅನುಪಮಾ

Listen to Dr HS Anupama, speaking on kajooru Sathish's 'kadala kare', a kannada translation of contemporary malayalam poems #np...