Friday, October 14, 2016

ಸೈಫ್ ಜಾನ್ಸೆ ಕೊಟ್ಟೂರರು ಕಂಡ 'ಗಾಯದ ಹೂವುಗಳು'

ಗೆಳೆಯ ಕಾಜೂರು ಸತೀಶ್ ರವರ ಬಿಡಿ ಪದ್ಯಗಳನ್ನು ಹಾಗೂ ಮಲಯಾಳಂ ಕವಿತೆಯ ಅನುವಾದಗಳನ್ನು ಕಂಡುಂಡ ನನಗೆ ಗಾಯದ ಹೂಗಳು ಎಂಬ ಸಂಕಲನ ಓದುವ ಖುಷಿಯನ್ನು ಇಮ್ಮಡಿಗೊಳಿಸಿದೆ.

ಕವಿತೆಯೆಂದರೇನೆಂದೇ ತಿಳಿಯದ, ನನ್ನನ್ನೇ ಉಸಿರಾಡುತ್ತಿರುವ ಅಪ್ಪ-ಅಮ್ಮನಿಗೆ ಎಂದಾರಂಭಿಸುವ ಕವಿ ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ ಕವಿತೆಯ ತೆಕ್ಕೆಯೊಳಗೆ ಬಿದ್ದೆ.
ಖಿನ್ನತೆಯ ಶಿಖರದಲ್ಲಿದ್ದಾಗಲೂ ಒಂದು ಹೂವನ್ನೇ ಧ್ಯಾನಿಸುತ್ತಾ ಕೂರುವವನು ನಾನು. ಇಷ್ಟಾದರೂ ಬದುಕಿಕೊಳ್ಳಲು ಹಡೆದ ಕವಿತೆಗಳು ಎದೆಯ ಟನ್ನುಗಟ್ಟಲೆಯ ಭಾರವನ್ನು ಕೊಂಚ ಇಳಿಸಿವೆ
ಎನ್ನುವಂತಹ ಆಳದ ಮಾತುಗಳಿಂದ ತನ್ನ ಕವಿತೆಯ ಆಶಯಗಳನ್ನು ಕಟ್ಟಿಕೊಡುತ್ತಾರೆ.

ಸುಡುವ ತಣ್ಣನೆಯ ಹೂ ಹುಡುಕುತ್ತಾ ಎಂಬ ಶೀರ್ಷಿಕೆಯ ಅಡಿಯ ಮುನ್ನುಡಿಯಲ್ಲಿ ವಾಸುದೇವ್ ನಾಡಿಗ್ ಅವರು ಇಡೀ ಕವಿತಾ ಸಂಕಲನದ ಹಂದರವನ್ನು ಚಿಕಿತ್ಸಕ ಕಾಳಜಿಯಿಂದ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಲ್ಲಿ ಉದಾಹರಣೆಗಳಿಗಿಂತಲೂ ಹೆಚ್ಚು ಸ್ವಯಂ ಓದಿ ಅನುಭವಿಸುವ ತಾಜಾತನ ಆಪ್ತವಾಗಬಲ್ಲದು. ಪ್ರವೀಣ್ ಕುಮಾರ ದೈವಜ್ಞಾಚಾರ್ಯರವರು ಟಂಕಿಸಿರುವ ಬೆನ್ನುಡಿ ಬರಹದ ದಿಟ್ಟತೆ ಸಾರುವಂತೆ ಇವು ಯಾರು ಬೇಕಾದರೂ ಮುಡಿಯಬಹುದಾದ ಹೂಗಳು. ಸತೀಶ್ ಬದುಕು ಮತ್ತು ಕವಿತೆಯನ್ನು ಒಟ್ಟೊಟಿಗೆ ಸಮೀಕರಿಸುವ ಭರವಸೆಯ ಕವಿ. ಅವರ ಗಾಯದ ಹೂಗಳು ನಮ್ಮೊಲ್ಲೊಂದು ಆತ್ಮದೀಪ ಸ್ಫುರಿಸಬಲ್ಲದೆಂಬ ಭಾವ ಈ ಹೊತ್ತು ದಟ್ಟವಾಗಿದೆ ಎನ್ನುವ ಸಾಲುಗಳು ಸಂಕಲನದ ಪ್ರಾಣಕ್ಕೆ ದೀವಟಿಗೆ ಹಿಡಿಯಬಲ್ಲ ಕೈಯಾಸರೆಯಂತೆ ಕಾಣುತ್ತಿವೆ.

ಚುಟುಕೂ ಅಲ್ಲದೆ ನೀಳ್ಗವಿತೆಯೂ ಅಲ್ಲದ ನಡುಗಾತ್ರದ ಪರಿಮಿತಿಯಲ್ಲಿ ತನ್ನ ಪದ್ಯಗಳನ್ನು ಅಚ್ಚುಕಟ್ಟುತನದಿಂದ ನಿರ್ವಹಿಸುತ್ತಿರುವ ಕವಿ ಪದ್ಯ ಓದುವ ಕಾಲದ ದರ್ದುಗಳನ್ನು ಪ್ರಜ್ಞಾಪೂರಕವಾಗಿ ಮುಖಾಮುಖಿಯಾದಂತಿದೆ.

ಕವಿ, ಕವಿತೆ ಮತ್ತು ಚರಿತ್ರೆ ಎನ್ನುವ ಪದಗಳನ್ನು ಬಹುತೇಕ ಕವಿತೆಗಳಲ್ಲಿ ಮರು ಮಾತಿಗೆ ಕರೆಯುತ್ತಾರೆ. ಆ ಮಾತುಕತೆಯಲ್ಲೊಂದು ಸನಿಹವಿದೆ, ಗುದ್ದಾಟವಿದೆ, ಅನುಭವವಿದೆ, ಅನುಸಂಧಾನವಿದೆ. ಕವಿತೆ ಬರೀ ಕವಿತೆಗಾಗಿ ಅನ್ನಿಸದೇ ಬದುಕಿನ ಒಟ್ಟು ಅಭಿವ್ಯಕ್ತಿ ಎನಿಸಿದೆ.

ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ ಎನ್ನುವ ಸಾಲು ಸಾಕು ಉಳಿದದ್ದು ನೆಪವಾಗಿಬಿಡಬಹುದು.ಇನ್ನು ಕವಿಗೆ ಚರಿತ್ರೆಯೆಂದರೆ ಓದಿಕೊಳ್ಳುವ ಒಣ ಪ್ರಕ್ರಿಯೆಯೆನಿಸದೆ ಜೀವನದ ಪರಸ್ಪರ ಎದುರುಗೊಳ್ಳುವ ಸಂವಾದವಾಗಿಯೂ ಆಗಿಂದಾಗ್ಗೆ ನವೀಕರಿಸುವ ಇಂಧನದ ಒರತೆಯಂತೆಯೂ ಕಾಣಿಸಿದೆ. ಮುರಿದು ಕಟ್ಟುಕಟ್ಟುವ ಚಲನಶೀಲ ಕಾರ್ಯಗತಿಯೂ ಅನ್ನಿಸಿದೆ. ಆ ಕಾರಣಕ್ಕಾಗಿಯೇ ಇತಿಹಾಸದ ಕೊಂಡಿ ಕವಿತೆಗಳಲ್ಲಿ ಪ್ರತಿಧ್ವನಿಸಿದೆ.


ತನ್ನ ಸುತ್ತಲಿನ ತೆಕ್ಕೆಯಲ್ಲಿ ಹಾಯುವ ಕಾಡು ಬೀಜ ಮರ ಹೂವು ಹಣ್ಣು ಜಿಂಕೆ ಮೊಲ ಹಾವು ಹಕ್ಕಿ ಗೊಬ್ಬರಗಳಂಥಹ ನಿಸರ್ಗವಾದಿ ಪರಿಕರಗಳೇ ಕವಿತೆಯ ಮೂಲ ದ್ರವ್ಯವಾಗಿದ್ದಾಗಲೂ ಕವಿಯ ಧ್ಯಾನಕ್ರೇಂದ ಗಟ್ಟಿಯಾಗಿ ಮಾತನಾಡುತ್ತಿರುವುದು ಕಡೆಗಣಿಸಲ್ಪಟ್ಟ ಧ್ವನಿ ಮತ್ತು ಜಾಗತೀಕರಣದ ಸಿಡಿಲ ಸ್ಫೋಟಕ್ಕೆ ಕರಕಲಾದ ಮಿಣುಕು ನಕ್ಷತ್ರಗಳ ಬದುಕಿನ ಹಕ್ಕಿನ ಪ್ರಶ್ನೆಯನ್ನು ಕವಿಯ ತಾಕಲಾಟಗಳು ತಾರ್ಕಿಕ ಅಂತ್ಯಕ್ಕೆ ದಾಟಿಸುವ ಪ್ರಯತ್ನದಂತೆ ಕಾಣಿಸುತ್ತವೆ.

ಇಲ್ಲಿನ ಕವಿತೆಗಳಲ್ಲಿ ನಳನಳಿಸುವ ಜೀವಂತಿಕೆ ಇದೆ. ಶಬ್ದಗಳಿಗೆ ಸಂವೇದನೆಯಿದೆ. ಕಟ್ಟ ಕಡೆಯ ಕ್ಷಣಗಳಲ್ಲಿಯೂ ಬದುಕಿತೋರಿಸುವ ತ್ರಿವಿಕ್ರಮ ಛಲವಿದೆ. ಜಗತ್ತಿನ ಸಮಸ್ತವನ್ನು ಅಪ್ಪಿಕೊಳ್ಳುವ ಜೀವಪರತೆ ಇದೆ. ತುಳಿಯಲ್ಪಟ್ಟ ದನಿಗಳಿಗೆ ಪ್ರಾಣಮಿತ್ರನಂತೆ ಮಿಡಿಯುವ ಕವಿ ಗಹನವಾದ ನೋವನ್ನೂ ಕುಲುಮೆಯಲ್ಲಿ ಕಾಯಿಸಿ ಬಡಿದು ತಿದ್ದಿ ತೀಡಿ ದಾಟಿಸುವ ನುರಿತ ಲೋಹಗಾರನಂತೆ. ಇಲ್ಲಿ ಉರಿಗಟ್ಟುವ ಪ್ರತಿ ನೋವು ಹೆಪ್ಪುಗಟ್ಟಿದ ತಣ್ಣನೆಯ ರೂಪಾಂತರಗಳಲ್ಲಿ ಲೋಕದ ದೇಹ ಮತ್ತು ಮೆದುಳುಗಳೊಳಗೆ ದಾಟಿ ಆವರಿಸುವ ಕ್ರಮ ಕವಿಯ ಗಟ್ಟಿತನಕ್ಕೆ ಪುರಾವೆ ಒದಗಿಸುತ್ತಿವೆ.

ಕವಿ ತನ್ನ ಸುತ್ತಲೂ ತಾನೇ ಗರೆ ಎಳೆದುಕೊಂಡ ಗಮ್ಯಕೇಂದ್ರವನ್ನು ಒಡೆದು ಹೊರಬರಬೇಕಿದೆ. ತಪ್ಪಿಹೋದ ಅನುಭವದ ಕಡೆಗೂ ನೋಟ ಹಾಯಿಸಬೇಕಿದೆ. ಕಳಚಿಕೊಂಡ ನೆಲೆಗಳನ್ನು ಮರು ವಿಮರ್ಶಿಸಬೇಕಿದೆ;ಕಟ್ಟಿ ಬದುಕಿಸಬೇಕಿದೆ. ನೆಲಕ್ಕೆ ಪಿಡುಗಿನಂತೆ ಕಾಡುತ್ತಿರುವ ಕೋಮುವಾದ, ಲಂಪಟ, ದುರಾಸೆಯಿಂದ ಹುಟ್ಟುವ ವ್ಯಕ್ತಿಕೇಂದ್ರಿತ ಬದುಕಿನ ಅಧ್ವಾನಗಳು,ಮಹಿಳಾ ಅಸಮಾನತೆ, ನಗರಗಳು ಹಡೆದ ಅನಾಮಿಕ ಸರಪಳಿಗಳ ಕಡೆಗೊ ಕಾಜೂರರ ಕಾವ್ಯ ಹೊರಳುವ ಕಾಲವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇನೆ.
ಬದುಕಿನ ರಾಚುವ ರೌದ್ರವ ದಾರುಣತೆಯನ್ನು ಹೇಳುವ ಮಾರ್ಗಕ್ಕೂ ಸತೀಶ್ ರವರ ಕಾವ್ಯ ಝರಿಗೆ ಜಾಗವಿರಲಿ.

ವಿಮರ್ಶಕರ ಕಸರತ್ತಿನಾಚೆಗೂ
ಬೆನ್ನುಡಿಯ ಬೆಂಬಲದಾಚೆಗೂ
ಪರಿಚಯಕರ ಸಂಕಟಗಳಾಚೆಗೂ
ಓದುಗರ ಹಪಾಹಪಿಗಳಾಚೆಗೂ
ಈ ಕೃತಿ ಓದಿನ ಖುಷಿ ಅನುಭವಿಸಲು ರವಷ್ಟನ್ನು ಖಂಡಿತಾ ಉಳಿಸಿಕೊಟ್ಟಿದೆ. ಅದಕ್ಕಾಗಿ ಕಾಜೂರು ಸತೀಶ್ ಅಭಿನಂದನಾರ್ಹರು.
*

ಸೈಫ್ ಜಾನ್ಸೆ, ಕೊಟ್ಟೂರು

No comments:

Post a Comment

ಕಡಲ ಕರೆಯ ಕುರಿತು ಡಾ.ಎಚ್.ಎಸ್.ಅನುಪಮಾ

Listen to Dr HS Anupama, speaking on kajooru Sathish's 'kadala kare', a kannada translation of contemporary malayalam poems #np...