Saturday, September 10, 2016

ಸಾವಿನ ಮನೆ: ಸಹಾಯ ಮತ್ತು ಶೋಷಣೆ

ಸಾವು ಸಹಜ. ಈ ಸತ್ಯ ಎಲ್ಲರಿಗೂ ತಿಳಿದಿದ್ದರೂ ಪ್ರೀತಿಪಾತ್ರರನ್ನು ಬೀಳ್ಕೊಡುವುದು ಅಷ್ಟು ಸುಲಭವಲ್ಲ. ಎದೆಯೊಳಗೆ ಯಾರೋ ಮೆಣಸಿನ ಹೊಗೆ ಹಾಕಿದ ಹಾಗೆ- ಕಣ್ಣು, ಮೂಗುಗಳನ್ನು ತೇವಗೊಳಿಸುತ್ತಲೇ ಇರುತ್ತದೆ. ಸಹಜ ಸ್ಥಿತಿಗೆ ಮರಳುವುದು ಸಾಧ್ಯವಿಲ್ಲದಿದ್ದರೂ ಮರೆಯುವ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡು ಬದುಕಬೇಕಾದ ಸ್ಥಿತಿಯನ್ನು ಸ್ಥಾಪಿಸಿಕೊಳ್ಳುವುದು ನಮಗಿರುವ ಸವಾಲು; ಪ್ರಕೃತಿಯ ನಿಯಮ.

ಸಾವಿನ ಮನೆ ಮತ್ತು ಸಹಕಾರ

'ಸಾವು' ಎಂದೊಡನೆ ಸಾವಿನ ಮನೆಯಲ್ಲಿ ಜನಜಂಗುಳಿ ನೆರೆಯುತ್ತದೆ. ತಾವು ಸತ್ತರೂ ಹೀಗೇ ಜನಗಳು ಸೇರಿ ಅಂತ್ಯಸಂಸ್ಕಾರಕ್ಕೆ ಸಹಾಯ ಮಾಡಲಿ ಎಂಬ ದೂರಾಲೋಚನೆ ಅದರ ಹಿಂದಿರುವ ಸಂಗತಿ. ವಾಸನೆ ಬರದಿರಲೆಂದು ಅಗರಬತ್ತಿ ಹಚ್ಚುವ, ಕುಟುಂಬಕ್ಕೆ ನೆರವಾಗಲೆಂದು ಹಣವನ್ನು ಇಡುವ ಕ್ರಮವೂ ಇದೆ. ಜನ ಹಣದ ಅಪೇಕ್ಷೆಯಿಲ್ಲದೆ ಸಾವಿನ ಮನೆಯಲ್ಲಿ ದುಡಿಯುತ್ತಾರೆ. ಶತ್ರು-ಮಿತ್ರರೆನ್ನದೆ, ಜಾತಿ ಭೇದವಿಲ್ಲದೆ ಎಲ್ಲರೂ ಒಟ್ಟಾಗುತ್ತಾರೆ.[ಶವಸಂಸ್ಕಾರದ ಸಿದ್ಧತೆ ನಡೆಸುವ ಗುಂಪು ಹೆಂಡವನ್ನು ಬಯಸುವುದು ಬೇರೆ ಮಾತು!]


ಸಾವು ಮತ್ತು ಶೋಷಣೆ

ಸಾವಿನ ಮನೆಯಲ್ಲಿ 'ಶೋಷಣೆ'ಗೆ ಹೆಚ್ಚಿನ ಪಾಲು ದಕ್ಕುತ್ತದೆ. ಅದು ಜನರ ಗುಸುಗುಸು ಪಿಸಪಿಸಗಳಿಂದ ಮೊದಲ್ಗೊಳ್ಳುತ್ತದೆ. ಯಾರು ಹೇಗೆಲ್ಲ ಅಳುತ್ತಾರೆ, ಅವರ ಬಾಯಿಂದ ಯಾವೆಲ್ಲ ದುಃಖತಪ್ತ ನೆನಪುಗಳು ಅಳುತ್ತಾ ಹೊರಬರುತ್ತವೆ ಎನ್ನುವುದಕ್ಕಾಗಿ ಅವರ ಕಣ್ಣು-ಕಿವಿಗಳು ಕಾದು ಕೂತಿರುತ್ತವೆ. ಅಂತಹ ದುಃಖದ ಕ್ಷಣದಲ್ಲೂ ಉಟ್ಟ ಬಟ್ಟೆಯನ್ನು ಕಳಚಿ ಬಿಳಿ ಬಟ್ಟೆ ತೊಡುವಂತೆ ಮನೆಮಂದಿಯವರನ್ನು ಬಲವಂತ ಮಾಡಲಾಗುತ್ತದೆ. ಒಬ್ಬೊಬ್ಬ 'ಸಾಂಸ್ಕೃತಿಕ ಚಿಂತಕ'ನೂ ಸಂಪ್ರದಾಯದ ಗೆದ್ದಲು ಹಿಡಿದ ಒಂದೊಂದು ಸೌಟು ಹಿಡಿದು ಮನೆಯವರನ್ನು ಕಲಕಲು ತೊಡಗುತ್ತಾನೆ.

ಶವವನ್ನು ಸ್ನಾನ ಮಾಡಿಸುವ ಕೆಟ್ಟ ಪದ್ಧತಿಯು ಒಂದು 'ಮನರಂಜನಾ ಸಂಗತಿ'ಯಾಗುತ್ತಿರುವುದು ಮನುಷ್ಯನ ವಿಕೃತ ಮನಸ್ಥಿತಿಗಳನ್ನು ನೆನಪಿಸುತ್ತದೆ. ಅಂಗಾಂಗಗಳನ್ನು ವರ್ಣಿಸುವ, ಕಿಸಕ್ಕೆಂದು ನಗುವ ವರ್ತನೆಗಳು ಮನೆಯವರನ್ನು ಜೀವಂತ ಶವವಾಗಿಸುತ್ತವೆ.ಮನೆಮಂದಿಯಿಂದ ಶವದ ಸ್ನಾನ ಮಾಡಿಸಿ ಅವರ ದುಃಖವನ್ನು ಹೆಚ್ಚಿಸಿ ಶೋಷಿಸುವ ಪದ್ಧತಿ ನಮ್ಮ ನಡುವೆ ಬೀಡುಬಿಟ್ಟಿದೆ.

ಸ್ತ್ರೀ ಶೋಷಣೆ

ಸಾವಿನ ಮನೆಯಲ್ಲಿ ಸ್ತ್ರೀಯರ ಶೋಷಣೆಯಂತೂ ಘೋರ. ಹೆಂಡತಿಯ ತಾಳಿ ಕಳಚುವುದು, ಕೈಬಳೆಗಳನ್ನು ಪುಡಿಗಟ್ಟುವುದು, ಬೋಳು ಕೈ, ಬೋಳು ಹಣೆ, ಬೋಳು ಕುತ್ತಿಗೆಯಲ್ಲಿರಿಸಿ ಶವದ ಜೊತೆ ಆಟವಾಡಿಸುವ ಹೇಯ ವಿಧಾನಗಳು ಎದೆಬಿರಿಸಿಬಿಡುತ್ತವೆ. ಹೀಗೆ ಶೋಷಿಸುವವರಲ್ಲಿ ಪುರುಷರಷ್ಟೇ ಪಾಲು ಮಹಿಳೆಯರದ್ದೂ ಇದೆ.
ಅಕಾಸ್ಮಾತ್ ಮಹಿಳೆಯೊಬ್ಬಳು ಅವನ್ನೆಲ್ಲ ನಿರಾಕರಿಸಿದಳೆಂದರೆ ಮುಗಿಯಿತು - ಹೆಂಗಸರ ಮಾತಿಗೊಂದು ದೊಡ್ಡ ಸರಕು ಸಿಕ್ಕಿಬಿಟ್ಟಂತೆ!

ಮುಂದುವರಿಯುವ ಶೋಷಣೆ

ಅಂತಿಮ ಕ್ರಿಯಾವಿಧಿಯ ಸಂದರ್ಭದಲ್ಲೂ ಶೋಷಣೆಯು ಶೃಂಗವನ್ನು ಮುಟ್ಟಿರುತ್ತದೆ. ಶವದ ಸುತ್ತ ಹತ್ತಾರು ಸುತ್ತು ಬರುವುದು, ಮಡಿಕೆ ಒಡೆಯುವುದು ಇತ್ಯಾದಿ ಇತ್ಯಾದಿ. ಶವಸಂಸ್ಕಾರದ ನಂತರವೂ ಶೋಷಣೆ ಮುಂದುವರಿಯುತ್ತದೆ. ಸಮಾಧಾನಪಡಿಸಬೇಕಾದ ಮನಸುಗಳೇ ಸಂಪ್ರದಾಯದ ಅಮಲೇರಿಸಿಕೊಂಡು ಹೀಗೆಲ್ಲ ನರಳಿಸುತ್ತವೆ.

ದುಃಖವನ್ನು ಹಂಚಿಕೊಳ್ಳಲಾಗುವುದಿಲ್ಲ

ನಮ್ಮ ನಮ್ಮ ಆಪ್ತರನ್ನು ಕಳಕೊಂಡ ದುಃಖ ನಮಗಷ್ಟೇ ಆಗುತ್ತದೆ. ದುಃಖವನ್ನು ಹೆಂಡದ ಹಾಗೆ, ಹಾಸಿಗೆಯ ಹಾಗೆ ಹಂಚಿಕೊಳ್ಳಲು ಬರುವುದಿಲ್ಲ. ಹಾಗಾಗಿ ಮತ್ತೊಬ್ಬರಿಗೆ ಅದರ ಅನುಭವವಾಗುವುದಿಲ್ಲ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಸಹಜ ಸ್ಥಿತಿಗೆ ಹೊಂದಿಕೊಳ್ಳಲು ಬಿಡುವುದರ ಬದಲು ಮತ್ತಷ್ಟೂ ಹಿಂಸೆಯ ಕಂದಕಕ್ಕೆ ನೂಕಲಾಗುತ್ತದೆ.

ಆಯ್ಕೆಗಳು

ಇಷ್ಟೆಲ್ಲ ಹೇಳಿದ ಮೇಲೆ ನನಗೆ ಎರಡು ಆಯ್ಕೆಗಳಿವೆ: ನನ್ನ ಮರಣದ ನಂತರ ನನ್ನ ಕಣ್ಣು ಮತ್ತಿತರ ಅಂಗಗಳನ್ನು ದಾನ ಮಾಡಿ ಒಂದೋ ನನ್ನ ದೇಹವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸುವುದು ಅಥವಾ ಸತ್ತ ಕೂಡಲೇ ಯಾವುದಾದರೂ ನಿರ್ಜನ ಪ್ರದೇಶದಲ್ಲಿ ಎಸೆದು ಬರುವಂತೆ ಮಾಡುವುದು . ಕನಿಷ್ಟ ಬ್ಯಾಕ್ಟೀರಿಯಾ ವೈರಸ್ಸುಗಳಿಗಾದರೂ ನನ್ನಿಂದ ಉಪಯೋಗವಾಗಲಿ.

ಬುದ್ಧಂ ಶರಣಂ ಗಚ್ಛಾಮಿ.
*

ಕಾಜೂರು ಸತೀಶ್

No comments:

Post a Comment

ನಷ್ಟ

ಮೊದಲ ನೋಟದಲ್ಲಿ ಅಥವಾ ಪ್ರೀತಿಯ ಮೊದಲ ಪರ್ವದಲ್ಲಿ ನನಗೆ ನನ್ನ ಕಣ್ಣುಗಳು ನಷ್ಟವಾದವು. ಎರಡನೇ ಭೇಟಿಯಲ್ಲಿ ಅಥವಾ ಪ್ರೀತಿಯ ಮಧ್ಯ ಪರ್ವದಲ್ಲಿ ನನಗೆ ನನ್ನ ಹೃದಯ ನ...