ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, August 21, 2016

ಅಯ್ಯಂಗಾರಿಯ ಹತ್ತುಪೈಸೆಯ ಬ್ರೆಡ್ಡು



'ಯಾವುದೇ ವ್ಯವಸ್ಥೆಯಾದರೂ ಪರಾಕಾಷ್ಠೆಯ ಹಂತವನ್ನು ತಲುಪಿ ನಿಂತಾಗ ತನ್ನೊಳಗೆ ಕುದಿಯುತ್ತಿರುವ ಮನಸ್ಥಿತಿಯಿಂದಲೇ ಸಾಮಗ್ರಿಗಳನ್ನು ಆಯ್ದುಕೊಂಡು ಪರ್ಯಾಯವನ್ನು ರೂಪಿಸುತ್ತದೆ. ಜಗತ್ತು ಅದನ್ನು ಸದಾ ಸಾಧಿಸುತ್ತಲೇ ಬಂದಿದೆ. ನಾನು ಇಲ್ಲಿ ಅಂತಹದೇ ದಾಳಿಯನ್ನು ಕಾಣಬಯಸುತ್ತೇನೆ..'

ತಮ್ಮ ಕಾವ್ಯದ ದಾರಿ ಮತ್ತು ಚಹರೆಗಳ ಕುರಿತು ಹೀಗೆ ಬರೆದುಕೊಳ್ಳುವ ‪ಸೈಫ್ ಜಾನ್ಸೆ ಕೊಟ್ಟೂರು‬ ಅವರ ಮೊದಲ ಕವನ ಸಂಕಲನ ಅಯ್ಯಂಗಾರಿಯ ಹತ್ತುಪೈಸೆಯ ಬ್ರೆಡ್ಡು


ಕಾಲದ ಹಿಂಸೆ, ಬದುಕಿನ ಅಸಹಾಯಕತೆಗಳು ಮತ್ತು ಅವುಗಳನ್ನೇ ಅಪ್ಪಿ ಬದುಕಬೇಕಾದ ಅನಿವಾರ್ಯತೆಯನ್ನು ವಿಶಿಷ್ಟ ನುಡಿಚಿತ್ರಗಳಲ್ಲಿ ಕೊಟ್ಟೂರರು ಕಟ್ಟಿಕೊಡುತ್ತಾರೆ. ಕವಿತೆಗಳು ಇಂತಹ ಅಸಹಾಯಕತೆಗಳನ್ನು, ಅಮಾನುಷ ಸಂಗತಿಗಳನ್ನು ಬೆನ್ನುಹತ್ತಿವೆಯೆಂದರೆ- ಮಾನವೀಯತೆಯ ತುಡಿತವೇ ಅವುಗಳ ಕೇಂದ್ರಪ್ರಜ್ಞೆ ಎಂದರ್ಥ.
‪ಡಾ. ಅರುಣ್ ಜೋಳದಕೂಡ್ಲಿಗಿ‬ ಅವರು 'ಬೆನ್ನುಡಿ'ಯಲ್ಲಿ ಹೇಳುವಂತೆ 'ಸೈಫ್ ಪದ್ಯಗಳನ್ನು ಓದಿದಾಗ, ನಮ್ಮ ಕಾಲದಲ್ಲಿ ಉಸಿರುಗಟ್ಟಿದ ಧ್ವನಿ ಇಲ್ಲಿನ ಒಳತೋಟಿಯಾಗಿ ಉಸಿರಾಡಿದ' ಅನುಭವವನ್ನು ನೀಡುತ್ತದೆ:

~ಅವನು ದೊಡ್ಡ ದನಿಯಲಿ ಪಾಠ ಹೇಳುತ್ತಿರುವಾಗ
ತೂಕಡಿಸುತ್ತಿದ್ದ ಹುಡುಗ
ಬೆಚ್ಚಿಬಿದ್ದು ಮೈ ಕೊಡವಿದ್ದಾನೆ
ನಾನು ಹೇಳಿಯೇ ಇಲ್ಲವೆಂದು
ದೇವರು ಆರೋಪಿಸುತ್ತಿದ್ದಾನೆ.
[ರಕ್ತಬಾನಿ/೭]

~ಹಿಟ್ಟಾದ ಮಾಂಸದ ಚೂರೊಂದು
ಜೀವ ಪಡೆದು
ಗಂಟಲಲ್ಲಿ ಕೂತು ಕೂಗಿದ ಹಾಗೆ.
[ಕುಸಿತ/೫]

~ಕುರ್ಚಿಗಳಾಗಿರುವುದರಿಂದಲೋ ಏನೋ
ಕುಳಿತುಕೊಳ್ಳುವ ಹಂಬಲ
ಹೊರಟುಹೋಗಿದೆ.
[ಗೋರಿಗಳಿವೆ/೩೩]

~ಬಿಸಿಯ ಉಮ್ಮಳಿಕೆ ತಾಳಲಾರದೆ
ಸೂರ್ಯ ತನ್ನ ನೆರಳನ್ನೇ ವಾಂತಿಮಾಡಿಕೊಂಡ.
[ಅನಾಥ ಬೀಜ ಮತ್ತು ಅವರು/೪೧]

~ನಿನ್ನೆಯೇ ಸತ್ತ ಜೀನ್ಸ್ ಪ್ಯಾಂಟಿಗೆ
ಕಾಲುಗಳ ತೂರಿ ಜೀವ ತುಂಬುತ್ತಾರೆ.
[ಅಮಲೇರಿದ ಹುಡುಗಿಯರು/೪೩]

~ನಾಳೆ ಬೀಳುವ ಮಳೆಯನ್ನೇ
ಲೆಕ್ಕಕ್ಕಿಟ್ಟು ಹೇಳುವುದೆಂದರೆ
ಕನಿಷ್ಟ ಚೆಂಬುಗಳಷ್ಟಾದರೂ ನೀರು
ಇಂದು ಕುಡಿಯಲೇಬೇಕು.
[ಪಥ ಮತ್ತು ದೃಷ್ಟಿ/೭೧]

'ಅಯ್ಯಂಗಾರಿಯ ಹತ್ತುಪೈಸೆಯ ಬ್ರೆಡ್ಡು' ಎಂಬ ಸಂಕಲನದ ಪ್ರಧಾನ ಕವಿತೆಯು ಹಸಿವಿನ ರೂಪಾಂತರಗಳನ್ನು ಭೂತ-ವರ್ತಮಾನ-ಭವಿಷ್ಯತ್ತಿನ ಅಸ್ಥಿಪಂಜರದಲ್ಲಿ ಸಿಕ್ಕಿಸಿ ಮಾತನಾಡುತ್ತದೆ. ಭೂತದ ಬವಣೆಗಳನ್ನು ಎಷ್ಟು ಮರೆತರೂ ವಾಸ್ತವ ಅದನ್ನು ಮತ್ತೆ-ಮತ್ತೆ ನೆನಪಿಸುತ್ತದೆ. ಆ ಕಾಲದ ಹತ್ತುಪೈಸೆಯ ಬ್ರೆಡ್ಡು ಸಮಕಾಲೀನ 'ಫೈವ್ ಸ್ಟಾರ್'ಗಳಾಗಿ ಇಂಗದ ಹಸಿವಿನ ರೂಪಾಂತರವು-
~ಕಾಲದ ಸಿಕ್ಕುಗಳಲ್ಲಿ
ಸೀರಿನಿಂದ ಹೇನಾಗಿ ಬಡ್ತಿ ಹೊಂದುತ್ತಾ[೪೭]
ಸಾಗುತ್ತದೆ.

ಕಾಲದ ಆರ್ತ ಸ್ವರಗಳನ್ನು ತುಂಬಿಕೊಂಡ ಇಂತಹ ಕವಿತೆಗಳೇ ಕವಿಯನ್ನು ಬರೆಸಿಕೊಳ್ಳುವ ತುರ್ತಿನಲ್ಲಿ /ಭಾವತೀವ್ರತೆಯಲ್ಲಿ 'ಇಡಿ'ಯಾದ ಸ್ಪರ್ಶ(ಮಾಂತ್ರಿಕ ಸ್ಪರ್ಶ)ವನ್ನು ಸಾಧಿಸುವುದಿಲ್ಲ ಎನ್ನುವ ಅಂಶವನ್ನೂ ಇಲ್ಲಿ ಗಮನಿಸಬೇಕು:

~ಜಗದ ಮೊದಲ ತಂದೆ ತಾಯಿಗಳು
ಪಕ್ಕದ ತೊರೆಯಲ್ಲಿ ಊದಿಕೊಂಡು
ಪ್ರಶ್ನೆಗಳಾಗಿ ತೇಲುತ್ತಿರುವಾಗ
ಕಾಗೆಯೊಂದು ಗುಬ್ಬಿಗೆ
ಮೈಥುನದ ವೀಳ್ಯವಿಟ್ಟರೆ
ಪ್ರಾಣಿ-ಪಕ್ಷಿ ಸಂಕುಲದ ಊರಿನಲಿ
ಅಪನಂಬಿಕೆಯ ಮೊಳೆ ನೆಟ್ಟಿದೆ.
[ಸಲಿಂಗ/೧೩]

ಹೊಸ ಹಾದಿಯ, ಹೊಸ ನಡಿಗೆಯ ರೂಪಕಗಳನ್ನೂ, ಕವಿತೆಗಳನ್ನೂ ಕರುಣಿಸಿದ ಸೈಫ್ ಜಾನ್ಸೆ ಕೊಟ್ಟೂರರು ಹೊಸ ತಲೆಮಾರಿನ ಗಮನಾರ್ಹ ಕವಿ.
೨೦೧೧ರಲ್ಲಿ ಮುದ್ರಣವಾದ ಸಂಕಲನವಿದು. ಇದರ ಉತ್ತರಕಾಲದಲ್ಲಿ ಕಾಣುತ್ತಿರುವ ಕೊಟ್ಟೂರರ ಕವಿತೆಗಳು ನಿಖರವಾಗಿ ಹೇಳುವ, ಗಮ್ಯವನ್ನು ಮುಟ್ಟುವ ಕಸುವನ್ನು ಪಡೆದುಕೊಳ್ಳುತ್ತಿವೆ. ಅವರ ಕವಿತೆಯೇ ಹೇಳುವಂತೆ-

~ಸುಳ್ಳು ಹೊರಟುಹೋಗಿದೆ
ಸತ್ಯ ತೆರೆದುಕೊಂಡಿದೆ
ಕಳೆದದ್ದು ಸಿಕ್ಕಿದೆ
[ಕಳೆದದ್ದು ಸಿಕ್ಕಾಗ/೫೯]
*

ಕಾಜೂರು ಸತೀಶ್‬

No comments:

Post a Comment