ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, June 18, 2016

ದಿನಚರಿ-21


....ಹಾಗೆ ಕಚೇರಿಯ ಒಳನುಗ್ಗಿದ ಅವರು 'ನಾನು ಎನ್.ಕೆ. ಗೋಪಾಲ್, ಈ ಶಾಲೆಯ ಹಳೆಯ ವಿದ್ಯಾರ್ಥಿ.. ಸುಂಟಿಕೊಪ್ಪದಲ್ಲಿ ವೈದ್ಯನಾಗಿ ಕೆಲಸ ಮಾಡ್ತಿದ್ದೇನೆ' ಎಂದು ತಮ್ಮನ್ನು ಪರಿಚಯಿಸಿಕೊಂಡರು. ತಮ್ಮ ಕಾರಿನಲ್ಲಿ ನಮ್ಮ ಶಾಲೆಯ 83 ಮಕ್ಕಳಿಗೆಂದು ಇಡೀ ವರ್ಷಕ್ಕಾಗುವುಷ್ಟು ನೋಟ್ ಪುಸ್ತಕಗಳನ್ನು ತಂದಿದ್ದರು. ಮಧ್ಯಾಹ್ನ ಪಾಯಸ ಮಾಡಿಸಿ ಹಂಚಿದರು. ಇನ್ನೊಮ್ಮೆ ಬಂದಾಗ ದತ್ತಿನಿಧಿಯನ್ನು ಆರಂಭಿಸಿ ಮಕ್ಕಳನ್ನು ಪ್ರೋತ್ಸಾಹಿಸುವುದಾಗಿ ಹೇಳಿದರು.

ಶಾಲೆಯಿಂದ ಹೊರಡುವಾಗ ಏನನ್ನೋ ಸಾಧಿಸಿದ ಸಂಭ್ರಮವಿತ್ತು ಅವರ ಮುಖದಲ್ಲಿ.

ಯಾವ ಫಲಾಪೇಕ್ಷೆ ಇಲ್ಲದೆ ಸೇವೆಗೈಯ್ಯುವ ಇಂಥವರನ್ನು ನೆನೆದಾಗ ಮನುಷ್ಯರ ಬಗ್ಗೆ ಪ್ರೀತಿ ಹುಟ್ಟುತ್ತದೆ.

Monday, June 6, 2016

ನಮ್ಮ ಮನೆಗಳಲ್ಲಿ

ಊರ ಹಬ್ಬಕ್ಕೆಂದು ಡೊನೇಷನ್ನಿಗೆ ಹೋದಾಗ
ಪಾರ್ಟಿ ಮೀಟಿಂಗಿಗೆ ಕರೆಯಲು ಹೋದಾಗ
ಗ್ರಂಥಾಲಯದ ಉದ್ಘಾಟನೆಗೆ ಆಹ್ವಾನಿಸಲು ಹೋದಾಗ
ಬಾಗಿಲ ಬಳಿ ಬಂದು ಅಜ್ಜಿ ಅದನ್ನೇ ಹೇಳಿದ್ದು:
'ಇಲ್ಲಿ ಯಾರೂ ಇಲ್ಲ!'

ನಿಜ
ಅಜ್ಜಿಗೆ ತಾನೇನೂ ಅಲ್ಲ ಎಂದು ಅರಿವಾಗಿರಬಹುದು
ಅಥವಾ
ನಿತ್ಯವೂ ಮಾತ್ರೆ, ಔಷಧಿಗಳನ್ನು ಕೊಡುವವರು
ಹಾಗೆ ಮನದಟ್ಟು ಮಾಡಿಕೊಟ್ಟಿರಬಹುದು.
*

ಮಲಯಾಳಂ ಮೂಲ- ವೈಶಾಖ್ ವಿ

ಕನ್ನಡಕ್ಕೆ- ಕಾಜೂರು ಸತೀಶ್

ಮನೆ

ಸುಮಾರು ಕಿಟಕಿಗಳಿರುವ ಕೋಣೆಯಲ್ಲಿ
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಣ್ಣದ ಪೆನ್ಸಿಲುಗಳು.
ಮಗುವೊಂದು
ಗೋಡೆಗಳೇ ಇಲ್ಲದ
ಮನೆಯ ಚಿತ್ರ ಬಿಡಿಸುತ್ತಿದೆ.

ಆ ಮನೆ
ಮನೆಯಿಂದೆದ್ದು
ಬೀದಿಯಲ್ಲಿ ನಡೆದಾಡುತ್ತಿದೆ.

ಬೀದಿಯಲ್ಲೊಬ್ಬಳು ಹಾಡುಗಾರ್ತಿ
ಮತ್ತವಳ ಮಗು.
ಅವಳು ಗಡಿಗಳೇ ಇಲ್ಲದ ಲೋಕದ ಕುರಿತು
ಹಾಡುತ್ತಿದ್ದಾಳೆ.
ಮಗು ಮುದ್ದು ಮುದ್ದಾಗಿ ನಗುತ್ತಿದೆ.
ಅವಳ ಕಣ್ಣುಗಳು ಬೆಳಗುತ್ತಿವೆ.

ಆ ಬೀದಿ
ಬೀದಿಯಿಂದೆದ್ದು
ತನ್ನ ಮನೆಗೆ
ನಡೆದುಹೋಗುತ್ತಿದೆ.

ಮಗು ಬಿಡಿಸಿದ ಆ ಮನೆ
ಅಂಗಳದ ಬೇವಿನ ಮರವ ಸುತ್ತಿ
ಅದನ್ನು ಬಳಸಿದ ಮಲ್ಲಿಗೆ ಬಳ್ಳಿಯನ್ನು ಸುತ್ತಿ
ಗಿಳಿಗಳ ಕಣ್ಣಲ್ಲಿ ಕುಳಿತು
ಹಾರಿ ಹಾರಿ ಆಕಾಶಕ್ಕೇರುತ್ತಿದೆ.
*


ಮಲಯಾಳಂ ಮೂಲ- ಚಿತ್ರಾ ಕೆ ಪಿ

ಕನ್ನಡಕ್ಕೆ- ಕಾಜೂರು ಸತೀಶ್

Friday, June 3, 2016

ನಾವೊಂದು ಟ್ರಿಪ್ ಹೊರಟರೆ ಹೇಗೆ?

ನಾವೊಂದು ಟ್ರಿಪ್ ಹೊರಟರೆ ಹೇಗೆ?
ತುಂಬಾ ದೂರ ಏನೂ ಬೇಡ
ಇಲ್ಲೇ
ಕಣ್ಣ ಎದುರಿಗೆ
ಮೂಗಿನ ತುದಿಗೆ
ಒಂದು ಮುಳ್ಳುಬೇಲಿಯ ಆಚೆಗೆ
ಒಂದು ಕೂಗಳತೆಯ ದೂರಕ್ಕೆ
ಒಮ್ಮೆ ಇಣುಕಿ ನೋಡುವಷ್ಟು
ಒಂದು ಮಾರುತ್ತರ ಕೊಡುವಷ್ಟು.

ಅಲ್ಲಿ ಆ ಮರದಲ್ಲಿ
ಹಸುವೊಂದನ್ನು ಕಟ್ಟಿದ್ದಾರೆ
ತುಂಬು ಗರ್ಭಿಣಿ
ಇವತ್ತೋ ನಾಳೆಯೋ ಕರುಹಾಕುತ್ತೆ.

'ಅಯ್ಯೋ ಅದರಲ್ಲೇನು ವಿಶೇಷ
ನಿನ್ನ ಕವಿತೆ ಸರಿಯಿಲ್ಲ'
ಬಯ್ಯುತ್ತೀರಿ ನೀವು.

ಆದರೆ
ಕವಿತೆ ನಿಮ್ಮನ್ನು ಕರೆದೊಯ್ಯುವುದು
ಹಸುವಿನ ಬಳಿಯಲ್ಲ.
ಮರದ ಪೊಟರೆಯಲ್ಲಿ
ಹಾವೊಂದು ಮೊಟ್ಟೆಯಿಟ್ಟಿದೆ.
ಒಂದಲ್ಲ ಐದು!
ಅವನ್ನು ನಿಧಿಯ ಹಾಗೆ ಬಚ್ಚಿಟ್ಟಿವೆ.

'ಅಯ್ಯೋ
ಹಾವಿಗೆ ಮರಿಯಾಗುವುದರಲ್ಲೇನು ವಿಶೇಷ?
ನಿನ್ನ ಕವಿತೆ ಒಂದು ಕ್ಲೀಷೆ'
ಬಯ್ಯುತ್ತೀರಿ ನೀವು.

ಆದರೆ
ಕವಿತೆ ನಿಮ್ಮನ್ನು ಕರೆದೊಯ್ಯುವುದು
ಆ ಪೊಟರೆಯೊಳಕ್ಕಲ್ಲ.
ಮರದ ಕೊಂಬೆಯಲ್ಲಿ
ಕಾಗೆಯ ಗೂಡೊಂದಿದೆ.
ಮೊಟ್ಟೆಗಳಿಗೆ ಕಾವು ಕೂರುತ್ತಿದೆ ಕಾಗೆ.
ಅದೇನೂ ದೊಡ್ಡ ವಿಷಯವಲ್ಲ ಬಿಡಿ
ಕಾಗೆ ಮೊಟ್ಟೆ ಹಾಕಲ್ವಾ ಮತ್ತೆ?
ಆದರೆ ಗೂಡಿನ ಮೊಟ್ಟೆಗಳಲ್ಲೊಂದು
ಕಾಗೆಯದಲ್ಲ.
ಅದೂ ಸಹಜ ಬಿಡಿ
ಕೆಲವೊಮ್ಮೆ ಮೈಗಳ್ಳ ಕೋಗಿಲೆ
ಕಾಗೆಯನ್ನು ವಂಚಿಸುತ್ತದೆ.

'ನಿನ್ನದು ಸವೆದುಹೋದ ಕವಿತೆ'
ಬಯ್ಯುತ್ತೀರಿ ನೀವು.

ಆದರೆ
ಕವಿತೆ ನಿಮ್ಮನ್ನು ಕರೆದೊಯ್ಯುವುದು
ಕಾಗೆಯ ಗೂಡಿಗಲ್ಲ.
ಆ ಗೂಡಿನ ಪಕ್ಕದ ಕೊಂಬೆಯಲ್ಲಿ
ನೇತಾಡುತ್ತಿರುವ ಎರಡು ದೇಹಗಳಿವೆ
ಮೇಲ್ನೋಟಕ್ಕೆ ಎರಡು ದೇಹಗಳು ಅಲ್ಲಿ ಕಾಣಿಸುವುದಿಲ್ಲ.
ಆದರೆ ಎರಡು ದೇಹಗಳವು.
ತುಂಬು ಹೊಟ್ಟೆಯ
ಒಬ್ಬಳು ಹತ್ತನೇ ತರಗತಿ ಹುಡುಗಿ.

ಹಸು, ಹಾವು, ಕಾಗೆಗಳಿಗಾದರೆ
ಯಾರಿಗೂ ಉತ್ತರ ಕೊಡಬೇಕಾಗಿಲ್ಲ.

ಆದರೆ ಅವಳಿಗೆ ಹಾಗಲ್ಲ
ಅಪ್ಪ ಕೊಟ್ಟ
ಹುಟ್ಟುಹಬ್ಬದ ಉಡುಗೊರೆ
ದೊಡ್ಡದಾಗುತ್ತಿರುವಾಗ
ಉತ್ತರ ಹೇಳಲೇಬೇಕಲ್ಲ!
*

ಮಲಯಾಳಂ ಮೂಲ- ವೈಶಾಖ್ ವಿ

ಕನ್ನಡಕ್ಕೆ- ಕಾಜೂರು ಸತೀಶ್