ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, May 26, 2016

ಈ ಪ್ರೀತಿ ಅನ್ನೋದೇ ಹೀಗೆ

ಈ ಪ್ರೀತಿ ಅನ್ನೋದೇ ಹೀಗೆ
ಒಂಥರಾ ಸಾಂಕ್ರಾಮಿಕ ಜ್ವರದ ಹಾಗೆ.
ಮೊದಮೊದಲು ಕೆಮ್ಮು
ಆಮೇಲಾಮೇಲೆ ಮೈಕೈ ನೋವು
ಬಿಸಿಬಿಸಿ ಕೆಂಡದ ಹಾಗೆ ದೇಹ
ವಾರವಿಡೀ ಕೆಟ್ಟ ಕನಸುಗಳು.
ಇಷ್ಟಾದರೂ ಮರೆವು ನಮ್ಮನ್ನು ಬದುಕಿಸಿಬಿಡುತ್ತದೆ.

ಈ ಪ್ರೀತಿ ಅನ್ನೋದೇ ಹೀಗೆ
ಒಂಥರಾ ಸಿಡುಬಿನ ಹಾಗೆ.
ಒಡೆಯುವುದು ಚಳಿಯೋ, ಹಣ್ಣೋ, ಬೀಜವೋ
ಏನೂ ತಿಳಿಯದೆ ಆತಂಕಕ್ಕೊಳಗಾಗುತ್ತೇವೆ
ಪ್ರೀತಿಯ ತಾಪದಲ್ಲಿ ಸುಟ್ಟು
ಕೆಂಪುಗಟ್ಟಿ ಹಣ್ಣಾಗುತ್ತದೆ ಒಡಲು.
ಹೇಗೋ ಬದುಕಿಕೊಳ್ಳುತ್ತೇವೆ ನಾವು.
ಆದರೆ ಸಂಕಟಗಳು ಒಳಗೇ ಉಳಿದುಬಿಡುತ್ತವೆ
ಜೀವನಪರ್ಯಂತ ಕಾಡುತ್ತವೆ
ನಾವು ಸಹಿಸಿಕೊಳ್ಳುತ್ತೇವೆ.

ಈ ಪ್ರೀತಿ ಅನ್ನೋದೇ ಹೀಗೆ
ಕ್ಯಾನ್ಸರ್ ರೋಗದ ಹಾಗೆ.
ಮೊದಮೊದಲು ತಿಳಿಯುವುದೇ ಇಲ್ಲ
ನೋವು ಶುರುವಾಗುವಷ್ಟರಲ್ಲಿ
ಕಾಲ ಮಿಂಚಿಹೋಗಿರುತ್ತದೆ
ಅವಳು ಮತ್ತೊಬ್ಬನ ತೋಳಲ್ಲಿರುತ್ತಾಳೆ
ಸುಮ್ಮನೇ ಬೆಳೆಯುವ ಪ್ರಣಯಕೋಶಗಳಿಗಿರುವ ಔಷಧಿಗಳು
ಹಿಂಡಿ ಹಿಪ್ಪೆ ಮಾಡುತ್ತವೆ ನಮ್ಮನ್ನು.
ಮತ್ತೆ ಮತ್ತೆ ಕಾಡಿದರೆ
ಕತ್ತಿಯೊಂದು ಬೇಕಾಗಬಹುದು
ಆಮೇಲೆ ಅಂಗವೊಂದನ್ನು ಕಳಕೊಂಡವರ ಹಾಗೆ
ನರಳುತ್ತಾ ಬದುಕುತ್ತೇವೆ
ಮತ್ತೂ ಅದು ಆವರಿಸಿದಾಗ
ಮರದ ಕೊಂಬೆಯಲ್ಲೋ, ನದಿಯಲ್ಲೋ
ಮನೆಯ ಬಾಲ್ಕನಿಯ ಮೇಲಿಂದಲೋ
ಒಂದು ಸಣ್ಣ ಸೀಸೆಯೊಳಗಿಂದಲೋ
ಸಾವು ಕೃಪೆ ತೋರುತ್ತದೆ.
ಹೀಗಿದ್ದಾಗ್ಯೂ ಹೇಗೋ ಬದುಕಿಕೊಳ್ಳುತ್ತೇವೆ ನಾವು.

ಕೆಲವು ಪ್ರಣಯಗಳೇ ಹೀಗೆ
ಹುಚ್ಚು ಹಿಡಿದ ಹಾಗೆ.
ಬರೀ ಭಾವನೆಗಳ ಪ್ರಪಂಚದಲ್ಲೇ ಮಗ್ನ
ಮತ್ತೊಬ್ಬರಿಗೆ ಅದು ಗೊತ್ತಾಗುವುದಿಲ್ಲ.
ಮೆತ್ತಗೆ ಮಾತನಾಡುತ್ತೇವೆ, ಹಾಡುತ್ತೇವೆ
ಒಬ್ಬೊಬ್ಬರೇ ನಗುತ್ತೇವೆ, ಕೋಪಗೊಳ್ಳುತ್ತೇವೆ
ಸುಮ್ಮನೆ ಸುತ್ತಾಡುತ್ತೇವೆ.
ಸರಪಳಿಯಿಂದ, ಶಾಕ್ ಟ್ರೀಟ್ಮೆಂಟಿನಿಂದ
ಗುಣಪಡಿಸಲಾಗುವುದಿಲ್ಲ ಅದನ್ನು.
ಏಕೆಂದರೆ ಅದು ರೋಗವೇ ಅಲ್ಲ
ಅದೊಂದು ಕನಸಿನ ಲೋಕ
ತಾರೆಗಳ ಲೋಕ.

ಒಮ್ಮೆಯೂ ಸಾಕ್ಷಾತ್ಕರಿಸಲಾಗದ ಪ್ರೀತಿಯೇ
ನಿಜವಾದ ಪ್ರೀತಿ
ಅದು ಅಳಿಯುವುದಿಲ್ಲ
ರಾಧೆಯೊಂದಿಗಿನ ಪ್ರೇಮದ ಹಾಗೆ.
*

ಮಲಯಾಳಂ ಮೂಲ- ಕೆ. ಸಚ್ಚಿದಾನಂದನ್

ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment