ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, May 2, 2016

ಪಿಕಳಾರ ಹಕ್ಕಿ

ಗೂಡು ಕಟ್ಟಿದೆ ಪಿಕಳಾರ ಹಕ್ಕಿ
ಅಂಗಳದ ಹೂಗಿಡದಲ್ಲಿ

ಆಗಾಗ ಇಣುಕಿ ತೋರಿಸುತ್ತದೆ
ಕಪ್ಪು ತುಟಿ
ನುಣುಪು ಕೂದಲು
ಹೊಂಬಣ್ಣದ ತಾಳಿ

ಬಾಲದಲ್ಲೊಂದು ಕುಂಕುಮ ಬೊಟ್ಟು
ಹೆಂಗಸರ ಕಣ್ಣಿಗದು ಥೇಟ್ ಋತುಸ್ರಾವ
ಅಜ್ಜಿಯ ಬಾಯಲ್ಲದು ಋತುಸ್ರಾವದ ಪಕ್ಷಿ
'ಸ್ನಾನ ಸ್ನಾನ ಸ್ನಾನ' ಎಂದು ಹಾಡುತ್ತದಂತೆ

ಬೆಂಕಿ ಆರಿದ ಒಲೆಯಲ್ಲಿ
ಕೊಬ್ಬಿದ ಗಂಡು ಬೆಕ್ಕೊಂದು
ನಿದ್ದೆಯಿಂದೇಳುವ ಮೊದಲು
ಬೆಳಿಗ್ಗೆ ಬೇಗನೆ ಎದ್ದು
ಇಣುಕಿ ನೋಡುತ್ತೇನೆ ಗೂಡಿನೊಳಗೆ
ಅಲ್ಲೆರಡು ಮೃದುವಾದ
ತೆಳುಗೆಂಪು ಚುಕ್ಕಿಗಳುಳ್ಳ ಮೊಟ್ಟೆಗಳು

ಆಮೇಲೆ
ಅವು ಬಿರಿದು ಕಣ್ತೆರೆದು
ಅಂಟಿದ ಕೊಕ್ಕು ಬಿಡಿಸಿ
ಚಿಗುರಿಸಿಕೊಂಡವು ರೆಕ್ಕೆಗಳ.

ಈಗ ಅಲ್ಲೊಂದು ಖಾಲಿ ಗೂಡು ಮಾತ್ರ
ರೆಕ್ಕೆ ಬಲಿತು ಹಾರಿದ್ದೋ
ಕೊಬ್ಬಿದ ಗಂಡು ಬೆಕ್ಕು ತಿಂದಿದ್ದೋ ಗೊತ್ತಿಲ್ಲ

ಪಕ್ಕದ ಮನೆಯ ಅವಳಿ ಹುಡುಗಿಯರು
ಒಟ್ಟಿಗೆ ಋತುಮತಿಯಾದದ್ದು ಈಗ ಸುದ್ದಿ

ಚೀಲದಲ್ಲಿ ಹಾಕಿ ಕಟ್ಟಿ
ದೂರದ ಹೊಳೆ ದಾಟಿಸಬೇಕು ಬೆಕ್ಕನ್ನು!
*

ಮಲಯಾಳಂ ಮೂಲ- ಶಿವಕುಮಾರ ಅಂಬಲಪುಜ಼

ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment