ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, January 15, 2016

ಇನ್ನಾವ ರೂಪಕಗಳು ಬೇಕು ನಿಮಗೆ?!

ತಮ್ಮ ಚೊಚ್ಚಲ ಕೃತಿಗೆ 2015ರ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದಿರುವ ಪ್ರತಿಭಾವಂತ ಕವಿ ಕಾಜೂರು ಸತೀಶ್ ಅವರ ಕವನ ಸಂಕಲನ ಗಾಯದ ಹೂವುಗಳು. ಭಿನ್ನ ಅರ್ಥಗಳನ್ನು ಹುಟ್ಟಿಸುವ ಗಾಯದ ಹೂವುಗಳು ಎಂಬ ಶೀರ್ಷಿಕೆಯೇ ವಿಶಿಷ್ಟವಾಗಿದೆ.

ಮೊಸರಿನೊಳಗವಿತ ನವನೀತದಂತೆ ಗಾಯದ ಹೂವುಗಳಲ್ಲಿರುವ ಕವಿತೆಗಳ ಆಂತರ್ಯವನ್ನು ಕಡೆದು ಕಡೆದು ನಾವು ಪಡೆದುಕೊಳ್ಳಬೇಕು. ಇಲ್ಲಿರುವ ಕವಿತೆಗಳನ್ನು ಓದುತ್ತಿದ್ದರೆ ಇದು ಯುವ ಕವಿಯೋರ್ವರ ಕವಿತೆಗಳೆಂದು ಖಂಡಿತ ನಮಗನಿಸುವುದಿಲ್ಲ. ಏಕೆಂದರೆ ಅಂತಹ ಆಳವಾದ ಜೀವನಾನುಭವವಿದೆ:

"ಕೇಳಿಸಿಕೊಳ್ಳಿ
ಒಂದು ಇರುವೆ ಸತ್ತಿದೆ
ನನ್ನ ಕಾಲಬುಡದಲ್ಲಿ

ಏನು?
ಕೇಳಿಸುತ್ತಿಲ್ಲವೇ?

ದನಿ ಎತ್ತರಿಸಿ ಹೇಳುತ್ತಿದ್ದೇನೆ
ಒಂದು ಇರುವೆ ಸತ್ತಿದೆ
ನನ್ನ ಕಾಲ ಬುಡದಲ್ಲಿ
*

ಪ್ರಭೂ
ನಾನು ಸಾಯುವಾಗಲೂ
ಹೀಗೇ ಕೂಗಿ ಕರೆಯಲು
ಒಂದು ಇರುವೆಯನ್ನಾದರು ಬದುಕಿಸು
ನನ್ನ ಕಾಲಬುಡದಲ್ಲಿ".

ಬದುಕನ್ನು ನೋಡುವ ಕ್ರಮವೇ ಇಲ್ಲಿನ ಕವನಗಳ ಧಾಟಿ. ಪ್ರಾಮಾಣಿಕ ವಿಷಯಗಳ ಅಭಿವ್ಯಕ್ತಿಯೇ ಇಲ್ಲಿನ ಕವಿತೆಗಳ ಜೀವಾಳ. ಬಡತನದ ಬವಣೆ, ಅಪ್ರಾಮಾಣಿಕತೆ, ಹುಸಿ ಪ್ರೀತಿ, ನಂಬಿಕೆ ದ್ರೋಹ, ಭ್ರಷ್ಟತೆಯನ್ನು ದಿಕ್ಕರಿಸುವ ಎದೆಗಾರಿಕೆ ಕವಿತೆಗಳಲ್ಲಿವೆ.

"ಹಸಿದ ಹುಡುಗ
ಪರೀಕ್ಷೆಯಲ್ಲಿ
ಅರಮನೆಯ ವೈಭೋಗವನ್ನು
ವಿವರಿಸುತ್ತಿದ್ದಾನೆ.
ಅವನ ದು:ಖ
ನಡುನಡುವೆ ನುಸುಳಿ
ಉತ್ತರ ನಿರಾಭರಣವಾಗುತ್ತಿದೆ"

ಅನನ್ಯ ಚಿಂತನೆ ಇವರ ಬರಹದಲ್ಲಿದೆ. ಬದುಕಿನ ಏರಿಳಿತದ ಹಾದಿಯಲ್ಲಿ ಅಚಾನಕ್ಕಾಗಿ ಸಿಕ್ಕ ಕವಿತೆಗಳನ್ನೆಲ್ಲಾ ಆಗಲೇ ಆಯ್ದು, ಕಾಯ್ದಿರಿಸಿಕೊಂಡಿದ್ದಾರೆ!

"ಜೀವ ಚಡಪಡಿಸುವ ಹೊತ್ತಲ್ಲಿ ವೈದ್ಯರ ಬಳಿ ಹೋದೆ
ಹರಿದ ನನ್ನ ಜೇಬು ತಡಕಾಡಿದರು.
ಹೊರಬರುವ ಹೊತ್ತಲ್ಲಿ ಜೇಬಿನ ತುತ್ತತುದಿಯ ದಾರಕ್ಕೆ
ಪದ್ಯಗಳು ಜೋತುಬಿದ್ದಿದ್ದವು
ಅದರ ಬಲದಲ್ಲಿ ನಾನೀಗಲೂ ಬದುಕಿಕೊಂಡಿದ್ದೇನೆ"

ಎನ್ನುವ ಕವಿಗೆ ಜೀವನದ ಬಗ್ಗೆ ಅದಮ್ಯಆಶಾವಾದವಿದೆ. ಇಂತಹ ಭರವಸೆ ಇವರ ಕವಿತೆಯ ತಳಹದಿ.

ಕಾಲದ ಸರಹದ್ದು ಎಲ್ಲೆ ಮೀರಿ ಬೆಳೆದದ್ದನ್ನು ಕವಿ ಚಿತ್ರಿಸಿದ ಪರಿ ತುಂಬಾ ಪರಿಣಾಮಕಾರಿಯಾಗಿದೆ. ತಮ್ಮ ತಂದೆ ತಾಯಿ ಹಿರಿಯರ ಜೀವಿತವೆ ಕಣ್ಣ ಮುಂದಿನ ಸಾಲುಗಳಾಗಿ ಪಡಿಮೂಡಿವೆ.

"ನಿದ್ರಿಸಿದರೂ ಹೊಗೆಯಾಡುತ್ತದೆ
ಗತದ ಹಾಳೆ ತಾಗಿದೊಡನೆ
ಒಂದೇ ಉಸಿರಿಗೆ ಓದಿ ಮುಗಿಸುತ್ತದೆ...

ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ..."

ಗಾಯದ ಹೂವುಗಳಲ್ಲಿ ಮುಖ್ಯವಾಗಿ ತೋರುವ ಗುಣ ಶೋಷಿತರ ಪರವಾದ ಸ್ವರ. ಕೂಲಿ ಸಿಗದ ಕಾರ್ಮಿಕರ ಬಗ್ಗೆ, ಸುಡುವ ಬೀದಿಯಲ್ಲಿ ನಡೆವ ಪಾದದ ಕುರಿತು, ಅರ್ಜಿ ನೀಡಿ ಅಲೆದಾಡುವ ಸಾಮಾನ್ಯ ಜನರ ಕುರಿತು, ಹಸಿದ ಹೊಟ್ಟೆಯ ಸಂಕಟದ ಬಗ್ಗೆ ಮನಮುಟ್ಟುವ ಕವಿತೆಗಳಿವೆ.

"ಉಣಿಸುವವರ ವಿಷದ ಹಲ್ಲು ಕಿತ್ತರೆ
ಹಾಲೂ ಕುಡಿಯಬಲ್ಲುದು
ಹಣ್ಣೂ ತಿನ್ನಬಲ್ಲುದು..."

"ಎಲ್ಲಾದರುದೂರ ಸರಿ
ಮೈಯೆಲ್ಲಾ ಕಿವಿಯಾದ ಹಾವೆ
ಚಪ್ಪಲಿಗಳಿಗಾದರೋ ದನಿಯಿದೆ
ಬರಿಯ ಪಾದಗಳ ಚಲನೆಯ ಗ್ರಹಿಸು
ಬುಸುಗುಡಲು ಹೆಡೆಯಿರದಿದ್ದರೆ
ಬಡಿಯಲು ಬಾಲವನ್ನಾದರು ಎತ್ತು
ಕಳಚು ಸುತ್ತಲಿನ ಪೊರೆ
ಚರಿತ್ರೆಯ ಸಾಲ ತೀರಿಸಬೇಕು."

ಆ ಕ್ಷಣದ ಸತ್ಯವನ್ನು ಕವಿತೆಯಲ್ಲಿ ಹಿಡಿದಿಟ್ಟರೂ ಅದು ಭವಿಷ್ಯಕ್ಕೆ ತೋರುಬೆರಳಾಗಿದೆ. ಇದರಿಂದ ಕವಿತೆಯ ಬಲ ಇನ್ನೂ ಹಿಗ್ಗಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಇಲ್ಲಿರುವ ಕವಿತೆಗಳು ಎಂದೆಂದಿಗೂ ತನ್ನ ತಾಜಾತನವನ್ನು ಕಾಯ್ದುಕೊಳ್ಳು
ವುದರಲ್ಲಿ ಯಾವುದೇ ಸಂಶಯವಿಲ್ಲ.

"ಸಾವಿರಾರು ಬಿಳಿ ಕೂದಲುಗಳ ಒಡೆಯರೇ
ಒಳಗಿನ ಜೀವದ್ರವ್ಯ ಒಣಗಲು ಬಿಟ್ಟ
ನನ್ನ ಬರಿಮೈಯನ್ನೆ ನೋಡಿ
ಇನ್ಯಾವ ರೂಪಕಗಳು ಬೇಕು ನಿಮಗೆ?"

ಈ ಅಜ್ಞಾನಿಯ ದಿನಚರಿಯಲ್ಲಿ ಜ್ಞಾನದ ಹೂವು ಅನವರತ ಅರಳುತ್ತಿದೆ.ಆ ಹೂವಿಗೆ ಗಾಯದ ಹಂಗಿಲ್ಲ. ಗಾಯ ಮಾಗುವುದೆಂತು ಎಂದು ಕಾಯುವ ಹಪಾಹಪಿಯೂ ಇಲ್ಲ. ಕವಿ ಕಾಜೂರು ಸತೀಶ್ ರವರ ಕಾವ್ಯ ಹಾದಿಯಲ್ಲಿ ಸುಂದರ ಹೂವುಗಳು ಅರಳಿ ನಿಲ್ಲುವ ಎಲ್ಲಾ ಸೂಚನೆಯೂ ಸಂಕಲನದಲ್ಲಿದೆ.
*

ಸಂಗೀತಾ ರವಿರಾಜ್


No comments:

Post a Comment