ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, January 15, 2016

ಗಾಯದ ಹೂಗಳು ಮತ್ತು ನನ್ನ ಪಾಡಿಗೆ ನಾನು

ಸಮಕಾಲೀನ ಕನ್ನಡ ಕಾವ್ಯಜಗತ್ತು ಗಾಯದ ಹೂಗಳನ್ನು ಪ್ರೀತಿಯಿಂದ ನೇವರಿಸಿದ್ದೇ ನನ್ನಲ್ಲೊಂದು ರೋಮಾಂಚನವಾಯಿತು.ಬಹುಶಃ ಕಾಜೂರರ ಕವಿತೆಗಳ ರುಚಿ ಹತ್ತಿಸಿಕೊಂಡ ಪ್ರತಿಯೊಬ್ಬರಿಗೂ ಈ ಸಂಚಲನವಾಗಿರಬಹುದೇನೋ..

ಅಪರೂಪದ ಮಾತು,ಅದರಲ್ಲಿರುವ ಅಗಾಧ ಆಪ್ತತೆ ಮತ್ತು ಸದಾ ಕಾಡುವ ಅವರ ಮುಗ್ಧತೆ... ಕಾಜೂರರ ಬಗ್ಗೆ ಬರೆದಷ್ಟೂ ಸಾಲದು.ಕಾಲೇಜ್ ಮೇಟಾಗಿ,ಒಂದೇ ಸಂಸ್ಥೆಯಲ್ಲಿ ದುಡಿದು ನಂತರ ಇದೀಗ ಒಂದೇ ಇಲಾಖೆಯಲ್ಲಿ ದುಡಿಯುತ್ತಿದ್ದರೂ ಓರ್ವ ಶಿಕ್ಷಕನಾಗಿ,ಕವಿಯಾಗಿ ಗುರುತಿಸಿದಕ್ಕಿಂತ ಒಬ್ಬ ಜೀವದ ಗೆಳೆಯನಾಗಿ ನನ್ನ ಹೃದಯದಲ್ಲಿ ಸದಾ ಬೆಚ್ಚಗಿರುವುದು ನಿಜಕ್ಕೂ ನನಗೆ ಹೆಮ್ಮೆಯ ವಿಷಯ.ಕಾಜೂರರ ಕಾವ್ಯಲಹರಿಯನ್ನು ಆಸ್ವಾದಿಸುವಲ್ಲಿ ಈ ಲೇಖನ ನಿಮ್ಮನ್ನು ಪ್ರೇರೇಪಿಸಿದಲ್ಲಿ ಅದು ನನ್ನ ಪಾಲಿನ ಸೌಭಾಗ್ಯ.

" ಎದೆ ಸೀಳಿ
ತಲೆ ಸೀಳಿ
ಚರಿತ್ರೆ ಸೀಳಿ
ತೋರಿಸುವುದೆಲ್ಲ ಕಷ್ಟದ ಕೆಲಸ,,." ಎಂದು ಹಾಡಿಕೊಳ್ಳುವ ಸತೀಶ್ ಬಹಳಷ್ಟು ಸಹೃದಯರಿಗೆ ಒಂದು ವಿಸ್ಮಯ,ನಿಗೂಢ ಪ್ರಶ್ನೆ...ಒಬ್ಬ ಜೆನ್ ಗುರುವಿನಂತೆ,ಪ್ರವಾದಿಯಂತೆ ತನ್ನಷ್ಟಕ್ಕೆ ಹಾಡಿಕೊಳ್ಳುವ ಸತೀಶ್ ಬೆಳಕಿನೊಂದಿಗೆ ಕತ್ತಲನ್ನೂ ಪ್ರೀತಿಸುವವರು,ನಲಿವಿನಂತೆಯೇ ನೋವನ್ನೂ ಬಾಚಿ ತಬ್ಬಿಕೊಂಡಿರುವವರು.ಅದಕ್ಕೇನೋ ಅವರ ಗಾಯಗಳು ಹೂವಾಗಿ ಆಮೇಲೆ ಕವಿತೆಗಳಾಗಿ ನಮ್ಮನ್ನು ಈ ಪರಿಯಾಗಿ ಕಾಡುತ್ತಿರುವುದೇನೋ.

'ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳುಗಳು' ,'ನೋಟೀಸು' ,' ಸಲಾಮು' ,ನನ್ನ ಕವಿತೆ' ,'ಬಲಿ ' , 'ಅರ್ಥವಾಗಿರಬಹುದು'... ಮುಂತಾದ ಕವಿತೆಗಳು ಓದುಗರನ್ನು ಅತ್ಯಂತ ತೀವ್ರ ಭಾವೋದ್ರೇಕಕ್ಕೆ ನೂಕಬಲ್ಲ ಕವಿತೆಗಳು.ಒಬ್ಬ ಕವಿ ಕೊಳೆತು ನಾರುವ ತನ್ನ ಸಮಾಜವನ್ನು ಪ್ರತಿನಿಧಿಸುವಾಗ ಇದಕ್ಕಿಂತ ಯಾವ ರೀತಿಯ ಕವಿತೆಗಳು ಹುಟ್ಟಲು ಸಾಧ್ಯ?! ಕಾಜೂರರ ಈ ಸಂವೇದನಾಶೀಲತೆಯೆಂಬುದು ನಮ್ಮ ಬಹಳಷ್ಟು ಸಹೃದಯಿಗಳಿಗೆ ' ಒಂದು ಮೌನದ ಮಾತು'ಎಂದಾಗಿರಬಹುದು ಎಂದು ನಾನು ಭಾವಿಸುತ್ತೇನೆ.ಆದರೆ ನನ್ನ ಜೀವದ ಜೀವ ಉಸಿರಿನ ಉಸಿರಾದ ಕಾಜೂರರ ಈ ಕವಿತೆಗಳು ಉದ್ರಿಕ್ತಗೊಂಡ ಜ್ವಾಲಾಮುಖಿಗಳಾಗಿ,ಮೈಯೊಳಗೆಲ್ಲಾ ಬೆಂಕಿಹೊತ್ತು ಹೊರಗೆ ತಣ್ಣಗಿರುವ ಬಾಂಬಿನಂತೆಯೇ ಕಾಣುತ್ತದೆ..ಒಂದು ವಿಶೇಷವೆಂದರೆ ಈ ಕವಿತೆಗಳು 'ಆಕ್ರೋಶ'ವಲ್ಲ. ಬದಲಿಗೆ ಬರಲೇಬೇಕಾದ ಆದರೆ ಎಂದೂ ಬಾರದ ಭವ್ಯ ಕ್ರಾಂತಿಗೊಂದು ವಿಷಾದದ ಮುನ್ನುಡಿ,ಪ್ರೀತಿಯ ಕರೆಯೋಲೆ.

ವಿಶೇಷ ಆರ್ಥಿಕ ವಲಯ,ಕೈಗಾರೀಕರಣ,ಭ್ರಷ್ಟಾಚಾರ ಮುಂತಾದ ಬಡಿತಕ್ಕೆ ತುತ್ತಾಗಿ ಕಾಡುಪಾಲಾದ ಜನರು ಬಂದೂಕು ಹಿಡಿದಾಗ ' ನಕ್ಸಲ' ರೆಂದು ಬೇಟೆಯಾಡುವ ಸಮಾಜ ಮತ್ತು ಸರಕಾರ ಒಬ್ಬ ಬರಹಗಾರನನ್ನು ಬೇಟೆಯಾಡಿದಾಗ ಸುಮ್ಮಗಿರುವುದೇಕೆ? ಈ ಮೌನಕ್ಕೇ ಸವಾಲೆಸೆಯುವಂತಹ ' ಅರ್ಥವಾಗಿರಬಹುದು' ,' ಇರುವೆ ಸತ್ತಿದೆ ಕಾಲ ಬುಡದಲ್ಲಿ ' , 'ಬೇಲಿ ' , ' ನೀನು ಸತ್ತಾಗ ನಿನ್ನ ಅಂಗಿ ಧರಿಸಿ ಬರೆದದ್ದು ' ಮುಂತಾದ ಕವಿತೆಗಳನ್ನು ನಾವು ಕಾಣಬಹುದು.

ಕಾಜೂರರ ಕವಿತೆಗಳು ಈ ಮಾದರಿಯಲ್ಲಿ ಹುಚ್ಚೆಬ್ಬಿಸಿ ಕಾಡಲು ಕಾರಣವಾದರೂ ಏನು? ಬಹುಶಃ ಈ ಪ್ರಶ್ನೆ ಎಲ್ಲರನ್ನೂ ಕಾಡಿರಬಹುದೇನೋ. ಪಾಶ್ಚಾತ್ಯ ಮತ್ತು ಮಲೆಯಾಳಂ ಸಾಹಿತ್ಯದ ಆಳವಾದ ಜ್ಞಾನ ಮತ್ತು ತನ್ನ ಸಮಾಜದ ಒಳಿತು ಕೆಡುಕುಗಳಿಗೆ ಅವರು ತೋರುವ ಸಂವೇದನಾಶೀಲತೆ ಇವಿಷ್ಟು ಅವರ ಕವಿತೆಗಳ ಹಿಂದೆ ಮೋಡಿ ಮಾಡುವ ಅಂಶಗಳು..ಆದರೆ ನೋಡಿ, ಪಾಶ್ಚಾತ್ಯ- ಮಲೆಯಾಳಂ ಸಾಹಿತ್ಯದ ಅಮಲಿನಲ್ಲಿ ತೂರಾಡಿದರೂ ತನ್ನ ಸಂಸ್ಕೃತಿಯ ಮತ್ತು ತನ್ನತನದ ಜಾಡು ಬಿಡದೆ ನೆಲಮೂಲದ ಕವಿಯಾಗಿ ಕಂಗೊಳಿಸುತ್ತಿರುವುದು ಅವರ ಧೀಮಂತಿಕೆ. ಅವರ ಈ ಕಾವ್ಯಕೃಷಿಯಲ್ಲಿ ಮಹತ್ವದ ಹಾಗೂ ನಿರ್ಣಾಯಕ ಪಾತ್ರ ವಹಿಸಿದ್ದು ಅವರ ರೋಚಕ ಅನುವಾದಗಳು ಎಂಬುದು ನನ್ನ ಅನ್ನಿಸಿಕೆ.

' ನನ್ನ ಜನರೇ
ನಿಮ್ಮಲ್ಲುಕ್ಕುವ ಜಲಪಾತಗಳ
...............
ನಿತ್ಯ ಮೋಹಿಸುತ್ತೇನೆ [ ಕಾಡು ಕವಿತೆ ]

ಅವರವರ ಮರಣದ ಹಾಡು
ಅವರವರಿಗೇ ಕೇಳಿಸುವುದು.,
.........
ಕೀಲುಕೀಲುಗಳಲ್ಲೂ
ಹಳಿಬದಲಿಸುವ ಸದ್ದು,,,.[ ಮರಣದ ಹಾಡು]

ಶತಮಾನಗಳ ಎಣಿಸಿ
ಬರೆದಿಟ್ಟುಕೊಳ್ಳಬಹುದು
ಅಪ್ಪನ ಸಾಲದ ಪುಸ್ತಕದಲ್ಲಿ [ಹಾವು]
ಮುಂತಾದ ಕವಿತೆಗಳಲ್ಲಿ ಬರುವ ಪ್ರತಿಮೆಗಳು ಮತ್ತು ಕವಿತೆ ಕಟ್ಟುವ ಶೈಲಿ ಕನ್ನಡ ಕಾವ್ಯ ಜಗತ್ತಿನಲ್ಲೇ ವಿಶಿಷ್ಟವಾದುದು. ಪ್ರತಿಮೆ ಮತ್ತು ಪದಗಳನ್ನು ದುಡಿಸಿಕೊಳ್ಳುವ ಅವರ ಚಾಲಾಕಿತನ ಒಂದು ಕವಿತೆಯನ್ನು ಸದ್ದಿಲ್ಲದೇ ಕನ್ನಡಿಯಾಗಿಸಿ ನಮ್ಮ ಮುಂದೆ ಎದ್ದು ನಿಲ್ಲಿಸುತ್ತದೆ.ಪ್ರಾಸದ ಹಂಗಿಲ್ಲದೆ ಕವಿತ್ವದ ತೆಕ್ಕೆಗೆ ಬಿದ್ದು ಪದಪದಗಳ ಮೂಲಕ ಓದುಗನಲ್ಲಿರುವ ಸಂವೇದನಾಶೀಲತೆಯನ್ನು ಜಾಗೃತಗೊಳಿಸುವುದು ಇವರಿಗದೆಷ್ಟು ಸಲೀಸು,,..!



ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಕಾಜೂರರ ಕವಿತೆಗಳಲ್ಲಿ ಉಮ್ಮಳಿಸುವ ಪ್ರೀತಿ:

ಈ ಕತ್ತಲಲ್ಲಿ ನಿನ್ನ ಸಂದೇಶಗಳು
ಚಂದ್ರನಿಂದ ರವಾನೆಯಾಗುತ್ತಿವೆ
ನೀನಲ್ಲಿ ಹಿಂಡುತ್ತಿರುವ
ಕಣ್ಣ, ಬೆವರ ಸದ್ದನ್ನು
ಇಬ್ಬನಿಗಳು ಅನುಕರಿಸುತ್ತಿವೆ ಇಲ್ಲಿ [ ಕಡಲಾಚೆಯ ಹುಡುಗಿಗೆ]

ಬಾಡೂಟವ ಹಂಚುವಾಗ
ಅಗರಬತ್ತಿಯ ವಿಷಾದದ ಹೊಗೆ
ನನ್ನ ಕೊಂದು ಬಿಡಲಿ [ ನಾವಿಬ್ಬರೂ ತೀರಿಕೊಂಡ ಮೇಲೆ ]


ನನ್ನ ಹೊರಮೈಯ ಮಾಂಸವನ್ನು ಹಿಂಡಿ
ಒಣಗಿಸಿಡುತ್ತೇನೆ
ಕಾಮವಿಲ್ಲದ ಅದನ್ನು ನೀನು
ಪ್ರೀತಿಯಿಂದ ಅಪ್ಪಿಕೊಳ್ಳಬಹುದು,. [ ನೀನು ನನ್ನ ಜತೆ ಬದುಕಿಕೊಳ್ಳಬಹುದು ]
ಟಿ.ವಿ. ,ಇಂಟರ್ನೆಟ್ಟು,ಸಿನೆಮಾಗಳ ಆರ್ಭಟಕ್ಕೆ ಪ್ರೀತಿಯ ಪರಿಭಾಷೆಯೇ ತರಗೆಲೆಯಂತೆ ತೂರಾಡುತ್ತಿರುವ ಈ ಕಾಲದಲ್ಲಿ ಕಾಜೂರರ ಕವಿತೆಗಳಲ್ಲಿನ ' ಅಂಗ ಮೀರಿದ ಪ್ರೇಮ ' ಓದುಗನ ಹೃದಯದಲ್ಲಿ ಬೆಚ್ಚಗಿನ ಆಪ್ತತೆಯನ್ನು ಮೂಡಿಸುತ್ತದೆ.



ಹೊರಗಿನ ಜಗತ್ತಿನಿಂದ ದೂರ ಬಹು ದೂರ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಪ್ರಕೃತಿಯೊಂದಿಗೆ ದಿನದೂಡುತ್ತಿರುವ ನಮ್ಮಿಬ್ಬರ ಶಾಲೆಗಳಲ್ಲಿ- ಊರಿನಲ್ಲಿ ದಿನ ಬೆಳಗಾದರೆ ಕಂಡುಬರುವ ಮುಗ್ಧ ಮುಖಗಳು, ಅವರು ತೊಡುವ ಮುಖವಾಡ,ಅದರೊಳಗಿನ ವಿಚಿತ್ರ-ನಿಗೂಢ ಜೀವನಚಿತ್ರಗಳು,ಒಡೆದ ಕುಟುಂಬಗಳ ಕಣ್ಣೀರು,ನಿಟ್ಟುಸಿರು,...ಮಾನವೀಯತೆ ಮತ್ತು
ಪ್ರಕೃತಿಯ ಮೇಲೆ ನಿರಂತರವಾಗಿ ನಡೆವ ಅತ್ಯಾಚಾರ, ಜತೆಗೆ ಸರಕಾರದ ಸಿಕ್ಕಾಪಟ್ಟೆ ನಿರ್ಲಕ್ಷ್ಯ, ಭ್ರಷ್ಟಾಚಾರ ಇವೆಲ್ಲಾ ಸೇರಿ ಪದಗಳಾಗಿ ಪ್ರತಿಮೆಗಳಾಗಿ ಕಾಡಿಕಾಡಿ ಕಡೆಗೊಮ್ಮೆ ಕವಿತೆಗಳಾಗಿ ತನ್ನಷ್ಟಕ್ಕೆ ಹಾಡಿಕೊಳ್ಳುತ್ತವೆ,ಸುಮ್ಮಗೆ ಹರಿದು ಬಿಡುತ್ತವೆ,,, ಇಂತಹ ನಿಟ್ಟುಸಿರುಗಳ ಭಾರಕ್ಕೆ ಜಗ್ಗಿದ ಕವಿತೆಗಳ ಪುಸ್ತಕ ' ಗಾಯದ ಹೂಗಳು ' ಯಾವ ಶಿಫಾರಸ್ಸುಗಳಿಲ್ಲದೆ,ಒತ್ತಡವಿಲ್ಲದೆ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದದ್ದು ನಿಜಕ್ಕೂ ಸಂತಸದ ವಿಚಾರವಲ್ಲವೇ!?
ಆಲ್ಬರ್ಟ್ ಕ್ಯಾಮಸ್ ರಂತೆ ನಿರೀಶ್ವರವಾದಿಯಾಗಿ, ಸಿಲ್ವಿಯಾ ಪ್ಲಾತ್ ಳಂತೆ ವಿಷಾದವನ್ನು,ರೂಮಿಯಂತೆ ,ಗಿಬ್ರಾನನಂತೆ ತಣ್ಣಗೆ ಉಸುರಿ ಬಿಡುವ ಕಾಜೂರರ ಕವಿತೆಗಳು ಎಂದೂ ಓದುಗನ ನಿರೀಕ್ಷೆಯನ್ನು ಹುಸಿಗೊಳಿಸುವುದೇ ಇಲ್ಲ. ಓದಿದಷ್ಟೂ ಸಾಲದಾಗಿ ಇನ್ನೂ ಇನ್ನೂ ಓದಿಸಿಕೊಳ್ಳುವ ಗಾಯದ ಹೂಗಳು ಇನ್ನಷ್ಟು ಅರಳಲಿ ಎಂಬುದು ನನ್ನ ಹಾರೈಕೆ.
*

ಜಾನ್ ಸುಂಟಿಕೊಪ್ಪ

No comments:

Post a Comment