ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, July 18, 2015

'ಕಿಟಕಿ ಅಷ್ಟೆ ಸಾಕೆ?'

ಕನ್ನಡ ಕಾವ್ಯವು ನವೋದಯದಿಂದ ನವ್ಯಕ್ಕೆ ಮಗ್ಗಲು ಬದಲಾಯಿಸುತ್ತಿದ್ದ ಹೊತ್ತಿನಲ್ಲಿ
ತಮ್ಮನ್ನು ತಾವು ಮರುರೂಪಿಸಿಕೊಂಡು ಗಂಭೀರವಾಗಿ ಕಾವ್ಯಕಟ್ಟೋಣದಲ್ಲಿ ತೊಡಗಿಸಿಕೊಂಡವರು
ಕೆ.ಎಸ್.ನ. .ಅವರು ಪ್ರೇಮ -ದಾಂಪತ್ಯದ ನೆಲೆಗಳನ್ನು ರಮ್ಯವಾಗಿ ವಿಸ್ತರಿಸಿ ಜನಸಾಮಾನ್ಯರ
ಹೃದಯಗಳಿಗೆ ಲಗ್ಗೆಯಿಟ್ಟವರು.ಬದುಕಿನ ಕಟುಸತ್ಯವನ್ನು,ನಿಷ್ಠುರತೆಯನ್ನು ಭಿನ್ನ ಕ್ರಮಗಳಲ್ಲಿ
ಶೋಧಿಸಿ ಕಾವ್ಯದ 'ಬಾಗಿಲು ತೆರೆದು ' ತೋರಿಸಿ ಬೆರಗು ಹುಟ್ಟಿಸಿದವರು.



ಕೆ.ಎಸ್.ನರಸಿಂಹಸ್ವಾಮಿಯವರ ನವ್ಯದ ಸಂದರ್ಭದ ರಚನೆಗಳು ಗೋಪಾಲಕೃಷ್ಣ ಅಡಿಗರ
ಕಾವ್ಯಮಾರ್ಗಕ್ಕಿಂತ ಭಿನ್ನವಾಗಿ ,ಅದಕ್ಕೊಂದು ಪ್ರತ್ಯುತ್ತರವೆಂಬಂತೆ ಗೋಚರಿಸುತ್ತವೆ .ಅವರ
ಸುಕುಮಾರ ಜಗತ್ತು ಸಂಕೀರ್ಣತೆಗೆ ಹೊರಳಿಕೊಂಡಿದ್ದು ಕಾವ್ಯಪ್ರಿಯರಿಗೆ
ಅರಗಿಸಿಕೊಳ್ಳಲಾಗದಷ್ಟು ಸೋಜಿಗದ ಸಂಗತಿ . ಹೀಗಾಗಿಯೇ ಜನಪ್ರಿಯತೆ ಮತ್ತು ವಿಮರ್ಶೆಗಳೆರಡೂ
ಜೊತೆಜೊತೆಗೆ ಕವಿಯ ಮೇಲೆ ಮುಗಿಬಿದ್ದಿದ್ದವು . ಈ ಹೊತ್ತಿನಲ್ಲೂ ಅವರ ನವ್ಯ ಸಂದರ್ಭದ
ಕವಿತೆಗಳು ಪ್ರಾಮಾಣಿಕವಾಗಿ ವಿಮರ್ಶೆಗೆ ಒಳಪಟ್ಟಿಲ್ಲ ಎಂದೇ ಅನ್ನಿಸುತ್ತದೆ.



ಪ್ರಸ್ತುತ 'ಕಿಟಕಿ ಅಷ್ಟೇ ಸಾಕೆ?' ಎನ್ನುವುದು ಮೇಲಿನ ಮಾತುಗಳನ್ನು ಪ್ರತಿನಿಧಿಸುವ
ಪ್ರಾತಿನಿಧಿಕ ಕವಿತೆ. ಹದಿನಾಲ್ಕು ಸಾಲುಗಳುಳ್ಳ ಸ್ವಭಾವೋಕ್ತಿಯ ಕಾವ್ಯವಾದ ಇದು,
ಶೀರ್ಷಿಕೆಯ ಮೂಲಕ ಪ್ರಶ್ನೆಯೊಂದನ್ನು ಮುಂದಿಡುತ್ತಾ ಅದನ್ನು ನೀಗಿಸಿಕೊಳ್ಳುವ ಮಾರ್ಗವನ್ನು
ಸೂಚಿಸುತ್ತದೆ . ಪ್ರತಿಮಾ ಮಾರ್ಗದಲ್ಲಿ ಸಾಗಿ,ಚಿತ್ರ ಮತ್ತು ಚೌಕಟ್ಟುಗಳೆಂಬೊ ಒಳಹೊರಗನ್ನು
ತುಲನಾತ್ಮಕವಾಗಿ ಗ್ರಹಿಸುತ್ತದೆ:



ಚೌಕಟ್ಟು ಚಿನ್ನದ್ದು ,ಚಿತ್ರ ಸಾಧಾರಣ /
ನಿಮಗೆ ಬೇಕಾದ್ದು ಚೌಕಟ್ಟೊ ಚಿತ್ರವೊ ಹೇಳಿ.



ಕೆ.ಎಸ್.ನ. ಅವರು ತಮ್ಮ ಬದುಕು ಮತ್ತು ಕಾವ್ಯದ ನಡುವೆ ಎಂದೂ ಅಭೇದ ಕಲ್ಪಿಸಿಕೊಂಡವರಲ್ಲ.ಅವರ
ಪ್ರಕಾರ - ಬದುಕಿನಂತೆ ಕಾವ್ಯ,ಕಾವ್ಯದಂತೆ ಬದುಕು . ಸಾಧಾರಣ ಕಲೆಗೂ(ಮುಖ್ಯವಾಗಿ ಕಾವ್ಯಕ್ಕೆ
) ವಿಮರ್ಶಾ ವಲಯ ಚಿನ್ನದ ಚೌಕಟ್ಟು ತೊಡಿಸುತ್ತದೆ.ಆದರೆ ,ವಾಸ್ತವವಾಗಿ ಸಮಾಜದ ನಿರೀಕ್ಷೆ
ಅದಲ್ಲ.ಅದು ಚಿತ್ರವೆಂಬೊ ಆತ್ಮೋನ್ನತಿಯನ್ನು ಬಯಸುತ್ತದೆ.ಇಂಥ ಸೂಕ್ಷ್ಮಗಳನ್ನು ಯಾವ
ಅಬ್ಬರವೂ ಇಲ್ಲದೆ ನಿರಾಡಂಬರವಾಗಿ ಹೇಳುತ್ತಾರೆ ಕವಿ.



ನವೋದಯದ ಸಾಂಪ್ರದಾಯಿಕ ಶೈಲಿಯಿಂದ ಬಿಡಿಸಿಕೊಂಡು ಹೊಸದಿಕ್ಕಿಗೆ ಹೊರಳಿಕೊಂಡ ಹಿನ್ನೆಲೆಯನ್ನು
ಕವಿ ಇಲ್ಲಿ ಹೇಳಿದ್ದಾರೆ . ಅದು ಅಡಿಗರ 'ಅನ್ಯರೊರೆದುದನೆ ಬರೆದುದನೆ ಬರೆಬರೆದು
ಬಿನ್ನಗಾಗಿದೆ ಮನವು' ಎಂದು ಬೆನ್ನು ತಿರುಗಿಸಿ ನಡೆದ ಮಾದರಿಯದ್ದಾರೂ- ಶಿಲ್ಪ ,ವಸ್ತು
,ಪ್ರತಿಮೆ,ಭಾಷೆ ಮತ್ತು ಬದುಕಿನ ದರ್ಶನಗಳ ನೆಲೆಯಿಂದ ಭಿನ್ನವಾದದ್ದು;ಸಾಂಸ್ಕೃತಿಕವಾಗಿಯೂ
ವಿಭಿನ್ನವಾದದ್ದು.ಕೇವಲ ಕಾವ್ಯಶರೀರಕ್ಕಷ್ಟೇ ಹೆಚ್ಚು ಅಂಟಿಕೊಂಡಿದ್ದ ಅಲ್ಲಿ ಅರ್ಥದ ಆಳವೂ
ಇರಬೇಕೆನ್ನುವ ನಿಲುವು ಕವಿತೆಯಲ್ಲಿ ಕಾಣಿಸುತ್ತದೆ . ಕಾವ್ಯವನ್ನು ಮತ್ತು ಅದು
ಆಗುಮಾಡಿಕೊಳ್ಳುವ ಬದುಕನ್ನು ಹಾಗೂ ಒಟ್ಟು ಜಗತ್ತನ್ನು ಕಿಟಕಿಗಳ ಮೂಲಕವಷ್ಟೇ ಸೀಮಿತವಾಗಿ
ಪರಿಭಾವಿಸಿದರೆ ನಿಜದ ರಸಗ್ರಹಣ - ಅರ್ಥಗ್ರಹಣಗಳು ಅಸಾಧ್ಯವಾಗುತ್ತದೆ.



ನಿನ್ನ ಕಿಟಕಿಗಳಿಂದ ಏನ ನೋಡುವೆ ನೀನು/
ಕೆರೆ ಬತ್ತಿ ನೀರಿಲ್ಲ,ಇಲ್ಲ ಮೀನು !



ಇಲ್ಲಿ 'ಬತ್ತಿದ ಕೆರೆ,ಇಲ್ಲದ ಮೀನು' ನಮ್ಮ ಸೀಮಿತ ಗ್ರಹಿಕೆಯ ಫಲಗಳು .



ಕವಿ ಮತ್ತು ಕವಿತೆಯ ಆಶಯ ಎರಡನೇ ನುಡಿಯಲ್ಲಿ ಸ್ಪಷ್ಪವಾಗುತ್ತಾ ಹೋಗುತ್ತದೆ .ಛಂದಸ್ಸು -
ಪ್ರಾಸಗಳನ್ನು ಕವಿ 'ಚೌಕಟ್ಟು' ಎನ್ನುತ್ತಾರೆ . ಕಾವ್ಯದ ದೇಹವದು.ಅದರ
ಆತ್ಮದಲ್ಲಿರಬೇಕಾದದ್ದು ಭಾವ ಮತ್ತು ಮಂದಹಾಸ,ಹಾಗೆಯೇ ಚೆಲುವು-ಒಲವುಗಳಿಂದ ತುಂಬಿದ ಬದುಕು .
ಇದು ನವೋದಯದ ಏಕತಾನತೆಯನ್ನೂ,ನವ್ಯದ ಬಿಗುವನ್ನೂ ಮುರಿದು ಕಟ್ಟುವ ಬಗೆಯೂ ಹೌದು .



ಕೆ.ಎಸ್.ನ. ಅವರ ಆರಂಭಿಕ ಕವಿತೆಗಳ ಮೇಲೆ ಬಿ.ಎಂ.ಶ್ರೀ.ಯವರ 'ಇಂಗ್ಲಿಷ್ ಗೀತಗಳು' ಮತ್ತು
ಬರ್ನ್ಸ್ ಕವಿಯ ಜಾನಪದೀಯ ಒಳನೋಟಗಳ ಸ್ಪರ್ಶವಿದ್ದರೂ,ಅವು ಈ ನೆಲದ ಬದುಕನ್ನು ಬಿಟ್ಟು
ಸಾಗುವಂಥದ್ದಲ್ಲ.ಕವಿಯು ಇಲ್ಲಿ ಕವಿತೆ ಮತ್ತು ಬದುಕಿನ ಒಳಹೊರಗಿನ ಸಮತೋಲನ ಸಾಧಿಸಬೇಕಾದ
ತುರ್ತನ್ನು ಹೇಳುತ್ತಾರೆ .



ಛಂದಸ್ಸು ಚೌಕಟ್ಟು,ಅದರ ಜತೆಗಿದೆ ಪ್ರಾಸ/
ಕವಿತೆಯಲ್ಲಿ ಕಾಣಬೇಕಾದ್ದು ಮಂದಹಾಸ /
ಭಾವ ಹೊಳೆಯಲು ಬೇಕು ಚಿತ್ರದಲ್ಲಿ /
ಚೆಲುವು ಒಲವುಗಳಿಂದ ತುಂಬಿಕೊಂಡಿದೆ ಬದುಕು .



'ಭಾವ ಹೊಳೆಯಲು ಬೇಕು ಚಿತ್ರದಲ್ಲಿ ' ಎನ್ನುವಲ್ಲಿ 'ಭಾವ' ಎಂಬ ಅಮೂರ್ತ ಸಂಗತಿಯನ್ನು
ಚಿತ್ರದ ಹೊಳೆಯುವಿಕೆಗೆ ಆವಾಹಿಸಿ ಮೂರ್ತತೆಯನ್ನು ಸೃಷ್ಟಿಸುತ್ತಾರೆ. 'ಚಿತ್ರ'
,'ಚೌಕಟ್ಟು' ,'ಕಿಟಕಿ' ಮುಂತಾದ ಪ್ರತಿಮೆಗಳು ಬದುಕು -ಕಾವ್ಯದ ಅರ್ಥದ ಹರಹುಗಳನ್ನು
ವಿಸ್ತರಿಸುತ್ತಾ ಹೋಗುತ್ತವೆ .



ಕವಿ ಎಂದೂ ಸಿದ್ಧಾಂತದ ಹಂಗಿಗೆ ಒಳಪಟ್ಟವರಲ್ಲ.ಕಾವ್ಯ ಎಂದಿಗೂ ಅವರಿಗೆ ಜೀವಪರ
ಕಾಳಜಿಯುಳ್ಳದ್ದು.ಹಾಗೆ ನೋಡಿದರೆ ,ಅವರ 'ನವ್ಯಕಾಲದ' ಕವಿತೆಗಳನ್ನು ಅದರ ನಂತರದ 'ಸಮನ್ವಯ'ದ
ನೆಲೆಯಲ್ಲಿಯೇ ಗುರುತಿಸುವುದು ಸರಿಯೆನ್ನಿಸುತ್ತದೆ.



'ಕಿಟಕಿ ಅಷ್ಟೇ ಸಾಕೆ?' ಒಂದು ದರ್ಶನ ಕಾವ್ಯ. ಭಾವನೆಗಳು ಇಲ್ಲಿ ಚಿಂತನೆಗಳಾಗಿ
ಮಾರ್ಪಡುತ್ತವೆ.ನಾವು ಬರಡೆಂದುಕೊಳ್ಳುವ ಮರುಭೂಮಿಯಲ್ಲಿ ಕವಿ 'ಒಂಟೆ ಸಾಲನು' ಕಾಣುತ್ತಾರೆ.
'ಮಿಂಚೊ ಮಳೆಯೊ ಕಾಣೆ ಚಿತ್ರವಿದೆ ನೋಡಿದಿರ?' ಎನ್ನುತ್ತಾರೆ . ನವ್ಯ ಸಂದರ್ಭದ
ಪಾಶ್ಚಾತ್ಯರಿಂದ ಕಡಪಡೆದ ಅಭಿವ್ಯಕ್ತಿಯ ಮಾದರಿಯಲ್ಲಿ ಹತಾಶೆ,ಪರಿತ್ಯಕ್ತತೆಗಳೇ ಸ್ಥಾಯೀ
ಭಾವ. ಅವರ ಬದುಕಿನ ಕ್ರಮವೂ ಅದಕ್ಕಿಂತ ಭಿನ್ನವಾಗಿಲ್ಲ.ಅದಕ್ಕೆ ಮುಖಾಮುಖಿಯಾಗುವ ಕವಿ ಈ
ನೆಲದ ಚೆಲುವಿನ ಚಿತ್ರಗಳ ಮೋಡಿಗೆ ಒಳಗಾಗುತ್ತಾರೆ.ಅಂತಹ ಅಧಮ್ಯ ಜೀವನ ಪ್ರೀತಿಯ ,ಸೌಂದರ್ಯ
ಪ್ರಜ್ಞೆಯ ಶೃಂಗದಲ್ಲಿರುವ ,ತನ್ನದೇ ಕಾವ್ಯಮಾರ್ಗವೊಂದನ್ನು ರೂಪಿಸಹೊರಟಿರುವ ಕವಿಗೆ ಕುರುಡು
ವಿಮರ್ಶಕರಿಂದ ರಸಭಂಗವಾಗುವುದು ಇಷ್ಟವಿಲ್ಲ .('ನನ್ನನೆಬ್ಬಿಸಬೇಡಿ'); ಬದಲಾಗಿ ಅವರನ್ನು
ಮುಕ್ತ ಚರ್ಚೆಗೆ ಆಹ್ವಾನಿಸುತ್ತಾರೆ ('ಮಾತನಾಡಿ').



ನೆಲದ ಪ್ರಜ್ಞೆಯನ್ನು ಕೆರೆ,ಮೀನು ,ಮರುಭೂಮಿ,ಮಿಂಚು ,ಮಳೆ ಮುಂತಾದ ಜೈವಿಕ - ಅಜೈವಿಕ
ಅಂಶಗಳು ಸಾದರಪಡಿಸುತ್ತವೆ. ಕವಿ ಅಂತಹ ಪ್ರಜ್ಞೆಯನ್ನು ಬಿಟ್ಟು ಕಾವ್ಯ ಸೃಷ್ಟಿಗೆ
ತೊಡಗುವುದಿಲ್ಲ;ಅವುಗಳನ್ನು ಮರೆತೂ ಬದುಕಹೊರಡುವುದಿಲ್ಲ.



ಎಲ್ಲ ಅಕಾಡೆಮಿಕ್ ಶಿಸ್ತುಗಳ ಹೊರೆಯಿಂದ ಹೊರಗಿದ್ದ ಕೆ.ಎಸ್.ನ. ತಮ್ಮದೇ ಲಯದಲ್ಲಿ
ನಡೆದವರು.ಬದುಕು ಹಾಗೂ ಕಲೆಯ ಕುರಿತು ಪೂರ್ವಾಗ್ರಹಗಳಿಂದ ಬಂಧಿತವಾಗಿರುವ ಮಂದಿಯನ್ನು ಕಡೆಯ
ಎರಡು ಸಾಲುಗಳು ತೀಕ್ಷ್ಣವಾಗಿ ಕುಟುಕುತ್ತವೆ; ತಮ್ತಮ್ಮ ಅನುಭವಗಳನ್ನು
ವಿಸ್ತರಿಸಿಕೊಳ್ಳಲು ಕರೆಕೊಡುತ್ತವೆ.



ಕಿಟಕಿಯಿಂದೇಕೆ ನೋಡುವಿರಿ ಜಗತ್ತನ್ನು /
ಕಿಟಕಿ ಅಷ್ಟೇ ಸಾಕೆ,ಬಾಗಿಲು ತೆರೆದಿದೆ.



ಹಾಗೆ 'ತೆರೆದ ಬಾಗಿಲು ' ನೆಲದ ಅಂತಃಸ್ಸತ್ವವನ್ನೂ,ಪ್ರಚಂಡ
ಇಚ್ಛಾಶಕ್ತಿಯನ್ನೂ,ಆಶಾವಾದವನ್ನೂ ಒಳಗೆ ಬಿಟ್ಟುಕೊಳ್ಳುತ್ತದೆ.ಸರಳ,ಸಹಜವಾಗಿರುವ ಈ ಕವಿತೆಯು
ವಾಸ್ತವದ ಬಹಿರಾಡಂಬರವನ್ನು ಕಾವ್ಯ ಮತ್ತು ಬದುಕಿನ ದ್ವಿಮುಖ ಕೋನಗಳಲ್ಲಿ ಸುಪ್ತವ್ಯಂಗ್ಯದ
ಮೂಲಕ ಸೊಗಸಾಗಿ ತೆರೆದಿಡುತ್ತದೆ.





**

-ಕಾಜೂರು ಸತೀಶ್

Sunday, July 12, 2015

ನನ್ನೊಳಗೆ ಇಳಿಯುವಾಗ

ಕರೆಗಂಟೆ ಇಲ್ಲದ ಮನೆ ನನ್ನದು

ನನ್ನ ಪಕ್ಕೆಲುಬುಗಳ ತಟ್ಟಿದರೆ ಸಾಕು

ಬಾಗಿಲು ತೆರೆಯುವೆ.



ಎಲ್ಲ ಹೃದಯಗಳ ಬಣ್ಣ ನನ್ನ ಮನೆಗೆ.

ತಕರಾರು ತೆಗೆಯದೇ

ಪೈಂಟರ್ನಿಂದ ಬಳಿಸಿಕೊಂಡದ್ದು.



ಬನ್ನಿ

ಕರುಳ ಚಾಪೆ ಹಾಸುವೆ

ಕೂತು ಸುಧಾರಿಸಿಕೊಳ್ಳಿರಿ

ಬೇಕಿದ್ದರೆ

ಮೆದುಳು, ಹೃದಯ, ರಕ್ತದ ಕೋಣೆಗಳ ಬಗ್ಗೆ

ಚರ್ಚೆ ನಡೆಸಿರಿ.



ಬೀಗವೂ ಇಲ್ಲ ನನ್ನ ಮನೆಗೆ.

ಗಾಳಿ ಮಳೆಗೆ ಮುರಿದುಬಿದ್ದರೆ

ಮಣ್ಣೇ ನನ್ನ ಮನೆ.



ಅಲ್ಲಿಗೂ ಬರುವಿರಾದರೆ ಬನ್ನಿ

ಉಗುರು, ರೋಮ, ಮೂಳೆಗಳ ಬಗ್ಗೆ

ಚರ್ಚೆ ನಡೆಸಿರಿ.



ಕರೆಗಂಟೆ ಅಲ್ಲಿಲ್ಲದಿದ್ದರೂ

ಗಾಳಿಯನ್ನು ತಟ್ಟಿ ಸಾಕು

ಬಾಗಿಲು ತೆರೆಯುವೆ.



**
-ಕಾಜೂರು ಸತೀಶ್

ನನ್ನವರು

ಕಡುಗಪ್ಪು ಮಣ್ಣಿನುದ್ಭವಿಗಳಾದ ನನ್ನವರ
ಹಿಮಾಚ್ಛಾದಿತ ಕಣಿವೆ ಕಣ್ಗಳಲಿ
ಪಟಪಟನೆ ತೊಟ್ಟಿಕ್ಕುವ ಹನಿಯ ಗಾನ
ಶ್ರುತಿ ಸಂಗತಿಗಳು ಒಂದಿಷ್ಟೂ ತಪ್ಪದೆ
ಆಲಿಕಲ್ಲುಗಳ ಗಾತ್ರದಲ್ಲಿ ಸುರಿಯುತ್ತದೆ.


ಅವರ ಸಡುಸುಡುವ ಶುಕ್ರನ ಮೈಶಾಖಕ್ಕೆ
ಹೊರಬೀಳದ ಬೆವರು
ಒಳಗೊಳಗೇ ಕೊತಕೊತ ಕುದಿಯುವ
ಸಾವಿರಾರು ಬೆಂಕಿನದಿಗಳನ್ನು ಹರಿಸಿ
ಬಾಂಬುಗಳ ಹಾಗೆ ಸಿಡಿಯುವ ಥರ್ಮೋಮೀಟರುಗಳನ್ನು
ತೇಲಿಸಿಕೊಂಡು ಸಾಗುತ್ತದೆ.


ಝಗಮಗಿಸುವ ದೀಪ,ಬಿರುವೇಗದ ರಾಕೆಟುಗಳ
ಎವೆಯಿಕ್ಕದೆ ನೋಡುತ್ತಲೇ ಇರುವ ನನ್ನವರ ನೋಟ
ಮನೆಗೋ ಆಕಾಶಕ್ಕೋ ತಾರಸಿಗೆಂದು
ಓಲೆಗರಿಗಳಲ್ಲಿ ಕಾಣದ ಪೈಥಾಗೋರಸನನ್ನು ಹೆಣೆಯುತ್ತದೆ.





ಹಸಿರು ಕುಸುಮಗಳನ್ನೇ ಬಿಡಿಸುವ ನನ್ನವರ ಗಾಯಗೊಂಡ ಬೆರಳು
ಕೆಂಬಣ್ಣ ಹೀರಿ ದ್ರಾಕ್ಷಿಯಂತಾದ ಜಿಗಣೆಗಳ ಗೊಂಚಲುಗಳಲ್ಲಿ
ಉದುರುವ ಹೂವಿನ ದಳಗಳನ್ನು ಬಿಡಿಸುತ್ತದೆ.


ನೆರಳುಗಳ ದೇಹಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹೋದ ನನ್ನವರು
ಕತ್ತಲ ಸಂದುಗಳಲ್ಲಿ ಹೂತುಹೋಗಿ
ನಿಕ್ಷೇಪಗಳಾಗುತ್ತಿರುವ ದೃಶ್ಯ
ಗಣಿಧಣಿಗಳ ಮನೆಗೇ ನೇರಪ್ರಸಾರವಾಗುತ್ತಿದೆ.
**
-ಕಾಜೂರು ಸತೀಶ್
[೨೦೦೮]