ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, May 25, 2015

ನನ್ನಂಥವರು ಹುಟ್ಟಿದ ತಪ್ಪಿಗೆ

ನನ್ನಂಥವರು ಹುಟ್ಟಿದ ತಪ್ಪಿಗೆ
ವಿಷದ ಡಬ್ಬಿಗಳು ಖಾಲಿಯಾಗುತ್ತಿವೆ
ಕುಣಿಕೆಗಳು ಬಿಗಿದು ತುಂಡಾಗುತ್ತಿವೆ.


ನನ್ನಂಥವರು ಹುಟ್ಟಿದ ತಪ್ಪಿಗೆ
ಧರ್ಮಗಳು ಅನಾಥವಾಗುತ್ತಿವೆ
ಜಾತಿಗಳು ಭಿಕ್ಷೆ ಬೇಡುತ್ತಿವೆ.


ನನ್ನಂಥವರು ಹುಟ್ಟಿದ ತಪ್ಪಿಗೆ
ಕಣ್ಣೀರಿಗೆ ಪ್ರವಾಹ ಭೀತಿ
ಮನಸ್ಸುಗಳಿಗೆ ಹಿಸ್ಟೀರಿಯಾ.



ನನ್ನಂಥವರು ಹುಟ್ಟಿದ ತಪ್ಪಿಗೆ
ಕವಿತೆ ಬರೆಸಿಕೊಳ್ಳುತ್ತದೆ
ಅಕ್ಷರಗಳು ಗಾಯಗೊಂಡು ನರಳುತ್ತವೆ.


ನನ್ನಂಥವರು ಹುಟ್ಟಿದ ತಪ್ಪಿಗೆ
ಕೊಲೆಯಾಗುತ್ತಲೇ ಇರುತ್ತೇವೆ
ಇರುವೆಗಳೊಂದಿಗೆ ಸಾಯುತ್ತಲೇ ಇರುತ್ತೇವೆ.
**

-ಕಾಜೂರು ಸತೀಶ್

Tuesday, May 19, 2015

ತಲೆದಿಂಬು

-1-

ದಿಂಬು ಊದಿಕೊಳ್ಳುತ್ತದೆ
ನಿನ್ನ ಕಣ್ಣುಗಳ ಹಾಗೆ



ದುಃಖಿಸದಿರು
ತಲೆದಿಂಬು ಊದಿಕೊಂಡಿದ್ದು ಸಾಕು.



ಸರಿ, ದಿಂಬನ್ನೂ ಊದಿಸು
ಬಿಡುಗಡೆಗೊಳ್ಳಲಿ ನಿನ್ನ ಕಣ್ಣುಗಳು .


-2-

ಚಿಕ್ಕವನಿದ್ದಾಗಲೂ ದಿಂಬುಗಳಿದ್ದವು
ಹಳೆಯ ಅಂಗಿ-ಚಡ್ಡಿ ಅದರೊಳಗೆ.


ಎಷ್ಟು ಹೊಲಿದು ಬಾಯ್ಮುಚ್ಚಿದ್ದರೂ
ಅಂಗಿ ಚಡ್ಡಿಗಳ ಕೈಕಾಲುಗಳು ಇಣುಕಿ
ಬಾಲ್ಯ ಹೊರಬರುತ್ತಲೇ ಇರುತ್ತದೆ .


-3-

ಈಗೀಗ ಗಾಳಿ ತುಂಬಿಸುವ ದಿಂಬುಗಳಿವೆ.
ಊದಿದವರ ಒತ್ತಡ ಊದಿಸುತ್ತದೆ ಅದನು.


ಊದುವ ಗಾಳಿ ಒಳಗಿನದ್ದು.
ತುಂಬಿಕೊಳ್ಳುವ ದಿಂಬಿಗೂ ಗಾಳಿ ಒಳಗಿನದ್ದೇ.


ಹೊರಗಿನದ್ದು ತುಂಬಿಕೊಳ್ಳುವುದಿಲ್ಲ
ಬಯಲ ಬಲೂನಿಗೆ ಲೆಕ್ಕವಿಲ್ಲದಷ್ಟು ರಂಧ್ರಗಳು.

-4-

ದುಃಖಕ್ಕೆ ತಲೆಗೊಡುವ ದಿಂಬೇ,
ನಗು
ನಗು.

**

-ಕಾಜೂರು ಸತೀಶ್

Wednesday, May 13, 2015

ಒಂದು ಕೊಕ್ಕರೆಯ ಚಿತ್ರ

ಮೋಡವನ್ನು ದಿಟ್ಟಿಸಿದಾಗಲೆಲ್ಲ
ಆನೆ,ಮೊಲಗಳೆಲ್ಲ ಆಟವಾಡುತ್ತಿರುವಂತೆ
ಗುಬ್ಬಚ್ಚಿಗಳು ಚೀಂವ್ ಚೀಂವ್ ಹಾಡಿ
ನಿಧಾನಕ್ಕೆ ಹಾರುತ್ತಿರುವಂತೆ ತೋರುತ್ತದೆ.



ಮನೆಯ ಹಿಂದಿರುವ ಗದ್ದೆಬದಿಯಲ್ಲಿ
ನೀರಿನಾಳಕ್ಕೆ ಕಣ್ಣುನೆಟ್ಟು
ಧ್ಯಾನಿಸುವ ಕೊಕ್ಕರೆಯ ಚಿತ್ರವನ್ನು
ಆ ಕೊಳ ಹಿಡಿದಿಟ್ಟುಕೊಂಡಿದೆ.



ಬಿರುಬೇಸಿಗೆಯಲ್ಲಿ
ಕೊಳ ಬತ್ತಿದ ಮೇಲೆ
ಕೊಕ್ಕರೆ ಕಾಣಿಸುತ್ತಲೇ ಇಲ್ಲ,
ಏನು ಸಂಭವಿಸಿತೊ ಏನೊ ಆ ಚಿತ್ರಕ್ಕೆ.



ಈಗೀಗ
ಕೆಲವೊಮ್ಮೆ
ಮೋಡವನ್ನು ದಿಟ್ಟಿಸಿದರೆ
ಕಣ್ಣ ತುಂಬ ಅದೇ ಕೊಕ್ಕರೆಯ ಚಿತ್ರ.

**

ಮಲಯಾಳಂ ಮೂಲ- ವೀರಾನ್ಕುಟ್ಟಿ



ಕನ್ನಡಕ್ಕೆ -ಕಾಜೂರು ಸತೀಶ್

Monday, May 11, 2015

ವೀರಾನ್ಕುಟ್ಟಿ ಕವಿತೆಗಳು

**ಅನನ್ಯ**


ನೀನು ಎಣ್ಣೆ
ನಾನು ಬೆಂಕಿ
ನಮ್ಮಿಬ್ಬರು ಉರಿಯುವ
ಬೆಳಕಿನಲ್ಲಿ ಕುಳಿತ ದೇವರು
ಪ್ರೀತಿಯ ಕುರಿತ ಕವಿತೆ ಹೊಸೆಯುತ್ತಾರೆ.
*


**ಮರೆವು**


ನಿನಗೆಂದು ಹೇಳಲು ಉಳಿಸಿದ ರಹಸ್ಯ
ನಿನ್ನೆ ಗಾಳಿಯ ಪಾಲಾಯಿತು.
ಅದು ಯಾವ ಕೊಂಬೆಯಲ್ಲಿರುತ್ತೋ?
ಯಾವ ಬೆಂಕಿಯ ಗರ್ಭ ಸೇರಿರುತ್ತೋ?
ಯಾವ ಮಣ್ಣಲ್ಲಿ ಬೆರೆತುಹೋಗಿರುತ್ತೋ ಗೊತ್ತಿಲ್ಲ.

ಈಗ ನೀನೇ ಹೇಳಿಕೊಡಬೇಕು
ನಿನಗೆ ಹೇಳಲು ಉಳಿಸಿದ ಆ ರಹಸ್ಯ
ನನಗೀಗ ಮರೆತೇ ಹೋಗಿದೆ.
*


**ಹೆತ್ತೊಡಲು**

ನೆರಳುಗಳೆಂದರೆ
ಹೆತ್ತ ಒಡನೆಯೇ
ತೆವಳಿಹೋಗುವ ರಾತ್ರಿಯ ಮಕ್ಕಳು.

ಒಂದೊಮ್ಮೆ ನೆರಳುಗಳೇ ಇಲ್ಲದಿದ್ದರೆ
ರಾತ್ರಿಯ ಮುಖ ಹೀಗಿದೆಯೆಂದು
ಹಗಲಿಗೆ ತಿಳಿಯುತ್ತಲೇ ಇರಲಿಲ್ಲ.
*


**ಏಕಾಂತ**

ಈ ಏಕಾಂತ
ನನ್ನ ಜೊತೆಗೇ ಇದೆ
ನಾನೆಂದೂ ಒಂಟಿಯಲ್ಲ.
*


**ಮರಗಳ ನಡುವೆ**

ಮರಗಳ ನಡುವೆ
ನೀನು ನನ್ನನ್ನೇ ನೋಡಿಕೊಂಡಿರು
ನಾನು ನಿನ್ನನ್ನೇ ನೋಡಿಕೊಂಡಿರುವೆ.

ಯಾಕೆ ಗೊತ್ತಾ?

ಬೇಸಿಗೆ ಶುರುವಾದಾಗ
ನಮ್ಮಿಬ್ಬರಲ್ಲಿ ಯಾರು ಬೇಗ ಒಣಗುತ್ತಾರೆಂದು
ತಿಳಿಯಬೇಕು.
**

ಮಲಯಾಳಂ ಮೂಲ- ವೀರಾನ್ಕುಟ್ಟಿ


ಕನ್ನಡಕ್ಕೆ -ಕಾಜೂರು ಸತೀಶ್

Friday, May 8, 2015

ಕವಿ,ರಾಜಕಾರಣಿ ಮತ್ತು ಅರಳೀಮರ

-1-

'ಯಾರೆಲ್ಲ ಇದ್ದಾರೆ ಅಲ್ಲಿ' ಎಂದೆ.

'ಕವಿ ಮತ್ತು ರಾಜಕಾರಣಿ- ಇಬ್ಬರು' ಎಂದು ಎಣಿಸಿ ಹೇಳಿದ.

ಎರಡೆರಡು ಬಾರಿ ಎಣಿಸಿ ತೋರಿಸಿದೆ: 'ಕವಿ,ರಾಜಕಾರಣಿ ಮತ್ತು ಅರಳೀಮರ - ಒಟ್ಟು ಮೂವರು'.

(ಎಣಿಸಿ ಹೇಳಲು ಎಷ್ಟೆಷ್ಟೋ ಬಾಕಿ ಇವೆ ಅಲ್ಲಿ . ಬೇಡ ಬಿಡಿ.)


-2-

ಯಾರನ್ನಾದರೂ 'ಕವಿ' ಎಂದೋ , 'ರಾಜಕಾರಣಿ' ಎಂದೋ ಕರೆಯುವ ಮುನ್ನ ಸ್ವಲ್ಪ ಯೋಚಿಸಬೇಕು - ಅವರಲ್ಲಿ ಕೆಲವರಾದರೂ ಅರಳೀಮರದಂತಹ ಒಳ್ಳೆಯವರಿರುತ್ತಾರೆ!


-3-


ಒಬ್ಬರು ಅನಿಸಿದ್ದನ್ನು ಹೇಳುತ್ತಾರೆ.ಮತ್ತೊಬ್ಬರು ಅನಿಸಿದ್ದನ್ನು ಬರೆಯುತ್ತಾರೆ.ಮತ್ತೊಂದಿದೆಯಲ್ಲಾ- ಅದು ಹಾಗೆ ಮಾಡಲು ಅವರಿಬ್ಬರಿಗೂ ತನ್ನ ಉಸಿರನ್ನು ದಾನಮಾಡುತ್ತದೆ.


-4-

ಇಬ್ಬರ ಕೊರಳೂ ಸಣ್ಣವು.ಹೀಗಾಗಿ ,ಮೂರನೆಯದಕ್ಕೆ ಯಾರೂ ಹಾರ ಹಾಕುವುದಿಲ್ಲ.


-5-


ಒಬ್ಬರು ಜಾತಿಯ ಹೆಸರು ಹೇಳಿ ಪ್ರಶಸ್ತಿ ಪಡೆದರೆ,ಮತ್ತೊಬ್ಬರು ಓಟು ಪಡೆದರು. ಅರಳೀಮರಕ್ಕೆ ಜಾತಿಯ ಹೆಸರಿಟ್ಟಿದ್ದು ಮನುಷ್ಯನೇ ಆದ್ದರಿಂದ ,ಅದು ತನ್ನ ಪಾಡಿಗೆ ಉಸಿರಿನ ಕೊಡು-ಕೊಳ್ಳುವಿಕೆಯಲ್ಲಿ ನಿರತವಾಗಿತ್ತು.


**
-ಕಾಜೂರು ಸತೀಶ್