Tuesday, April 7, 2015

ಸಾವಿನ ರುಚಿ ಮತ್ತು ವಾಸನೆ

ಅಡುಗೆ ಕೋಣೆಯಲ್ಲಿಟ್ಟಿದ್ದ ಪ್ಲಾಸ್ಟಿಕ್ಕಿನೊಳಗಿಂದ ಎಂಥದ್ದೋ ವಾಸನೆ ಹೊರಹೊಮ್ಮುತ್ತಿತ್ತು.ಎರಡು-ಮೂರು ಬಾರಿ ಆ ವಾಸನೆಯನ್ನು ಅನುಭವಿಸಿದಾಗ,ಸುಮಾರು ವರ್ಷಗಳ ಹಿಂದಿನ ಒಂದು ಘಟನೆಯ ನೆನಪು ಮೂಗಿಗೆ ಆವರಿಸಿಕೊಳ್ಳತೊಡಗಿತು.ನೆನಪು ವಾಸನೆಯ ರೂಪದಲ್ಲೂ(olfactory) ಅಸ್ತಿತ್ವದಲ್ಲಿರುತ್ತೆ ಅಂದಾಗ ಏನೋ ಒಂಥರಾ ವಿಚಿತ್ರ ಅನ್ನಿಸ್ತಾ ಇದೆ.


ಈ ಹಸಿಮೆಣಸಿನ ವಾಸನೆ ಅಂದ್ರೆ ಅಷ್ಟು ಚಂದ. ಗದ್ದೆಯು ಇದೇ ವಾಸನೆಯನ್ನು ಮೈ ತುಂಬ ತುಂಬಿಕೊಂಡಿತ್ತು.ದೊಗಲೆ ಚಡ್ಡಿಯನ್ನೇರಿಸಿಕೊಂಡು ಬಾವಿಯಿಂದ ನೀರು ತಂದು ಗಿಡಗಳಿಗೆ ಹಾಕುತ್ತಿದ್ದೆ.ಅದೊಂದು ಪ್ರಾಮಾಣಿಕ ಸೇವೆ.ಗಿಡಗಳೂ ಅಷ್ಟೇ ಪ್ರಾಮಾಣಿಕತೆಯಿಂದ ಅದನ್ನು ಸ್ವೀಕರಿಸುತ್ತಿದ್ದವು.


ಆ ದಿನದಲ್ಲೇ ನಾನು ಸಾವಿನ ರುಚಿ ಹೇಗಿರುತ್ತೆ ಅಂತ ಮೊದಲು ತಿಳಿದದ್ದು! ನೀರು ತರಲು ಹೋದವನು ಕಾಲುಜಾರಿ ಬಾವಿಯೊಳಗೆ ಬಿದ್ದುಬಿಟ್ಟೆ.(ಸಾಯುವುದಿದೆಯಲ್ಲಾ-ಅದು ಹೀಗೆ ಬರೆಯುವಷ್ಟು ಸುಲಭವಲ್ಲ!) ಸಾವು ನನ್ನ ನವದ್ವಾರಗಳಿಂದಲೂ ತುಂಬಿಕೊಳ್ಳಲು ತೊಡಗಿತು.ಆ ದಿನ ಸಾವಿಗೆ ಬಾವಿಯಲ್ಲಿದ್ದ ನೀರಿನ ರುಚಿಯಿತ್ತು.ಅಷ್ಟೆ.ಕೋಮಾದಿಂದ ಹೇಗೋ ಪಾರಾಗಿ ಬಂದೆ.ಸಾವಿಗೂ ಬೇಡವಾದ ಪುಣ್ಯಾತ್ಮ ನಾನು ಎಂದು ಈಗ ಅನ್ನಿಸ್ತಿದೆ .ಅದಕ್ಕಿಂತ ಹೆಚ್ಚಾಗಿ ,ಆ ಸಾವು ಮೆಣಸಿನಕಾಯಿಯ 'ವಾಸನೆ'ಯನ್ನೂ, ಬಾವಿಯ ನೀರಿನ 'ರುಚಿ'ಯನ್ನೂ ನನ್ನ ನೆನಪಿಗೆಂಬಂತೆ ಬಿಟ್ಟುಹೋಗಿದೆ!

*
ಸಾಯುವ ಮುಂಚೆ ಎಷ್ಟೋ ಸಲ ಈ 'ಸಾವು' ಮುಂದೂಡಲ್ಪಟ್ಟಿರುತ್ತೆ.ಎಲ್ಲ ಗೊತ್ತಿದ್ದೂ ಆ ನಡುವೆ ಹೇಗ್ಹೇಗೋ ಬದುಕ್ತೇವೆ,ಯಾರ್ಯಾರಿಗೋ ಕೇಡುಬಗೀತೇವೆ,ಕಿತ್ತಾಡಿಕೊಳ್ತೇವೆ,ಹಿಂಸಿಸ್ತೇವೆ,ಮುಖವಾಡ ತೊಟ್ಟು ಸಭ್ಯರ ಹಾಗೆ ನಾಟಕ ಮಾಡ್ತೇವೆ...


ಎಂಥ ವಿಚಿತ್ರವಪ್ಪಾ ಈ ಬದುಕು!
*

-ಕಾಜೂರು ಸತೀಶ್

No comments:

Post a Comment

ಕಡಲ ಕರೆಯ ಕುರಿತು ಡಾ.ಎಚ್.ಎಸ್.ಅನುಪಮಾ

Listen to Dr HS Anupama, speaking on kajooru Sathish's 'kadala kare', a kannada translation of contemporary malayalam poems #np...