ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, April 19, 2015

ಹಲಸಿನ ಹಣ್ಣು


ಪ್ರಕಾಶನ್ ಮಡಿಕೈ


ಎಷ್ಟು ಬಲಿಷ್ಠ ಈ ಹಲಸಿನ ಹಣ್ಣು
ಎಷ್ಟೆತ್ತರದಿಂದ ಬಿದ್ದು ಉರುಳಿದರೂ
ಅದೇ ರುಚಿ
(ಬೇಡಿಕೆ ಕುಂದುತ್ತದಷ್ಟೆ).



ಹಲಸಿನ ಹಣ್ಣಿಗೆ
ಒಬ್ಬರ ಕುತ್ತಿಗೆ ಮುರಿಯಬೇಕೆನಿಸಿದರೆ
ಮರದಿಂದ ಕೆಳಗಿರುವವನ ತಲೆಗೆ ನೇರವಾಗಿ ಬಿದ್ದರೆ ಸಾಕು!


ಸುಮ್ಮನೆ ಬಿಡುವುದಿಲ್ಲ ಅದು-
ಕತ್ತರಿಸುವವರ ಬೆರಳುಗಳನ್ನೇ ಅಂಟಿಸಿ ಬಂಧಿಸಿಬಿಡುವುದು.
ಸ್ವಲ್ಪ ತಣ್ಣೀರು ಮುಟ್ಟಿ ಕತ್ತರಿಸಬೇಕು-
ಅಂಟಿಸಿಕೊಳ್ಳದಿರಲು
ಬಂಧಿಸಿಕೊಳ್ಳದಿರಲು.


ಹಣ್ಣುಗಳಿಗೂ ವರ್ಗಭೇದ ತಪ್ಪಿಲ್ಲ.
ತೂಕ ಹೆಚ್ಚಿದ್ದಕ್ಕೆ
ಉಳಿದ ಹಣ್ಣುಗಳೊಂದಿಗೆ ಜಾಗವಿಲ್ಲ,
ಮುದ್ದಿಸುವವರಿಲ್ಲ,
ಹಣ್ಣಿನಂಗಡಿಯಲ್ಲಿ
ಮಾರುವವರೂ ಇಲ್ಲ.


ಹಸಿವು ಪ್ರಾಣ ಹಿಂಡುವಾಗ
ಹಲಸಿನ ಹಣ್ಣೇ ಅಮೃತ.
ಚಿಕ್ಕ-ಚಿಕ್ಕ ಹಣ್ಣುಗಳನ್ನಷ್ಟೇ ಕೊಳ್ಳುವ ಧನಿಕರಿಗೆ
ಹಲಸಿನ ಹಣ್ಣೊಂದು ಕತ್ತರಿಸಿ ದನಕ್ಕೆಸೆಯುವ ವಸ್ತು.


ಹಲಸಿನ ಹಣ್ಣಿನ ಕವಿತೆ ಬರೆದರೆ
ಬಡವನೊಬ್ಬ ಎತ್ತಿಕೊಂಡು ಹೋಗಿ
ಹಿಟ್ಟುಮಾಡಿ ತಿನ್ನುತ್ತಾನೆ.
ಸಿರಿವಂತರಿಗೆ ಸಿಕ್ಕರೆ
ಕಾಲಡಿಯಲ್ಲಿ ಅಪ್ಪಚ್ಚಿ!
*

ಮಲಯಾಳಂ ಮೂಲ- ಪ್ರಕಾಶನ್ ಮಡಿಕೈ

ಕನ್ನಡಕ್ಕೆ -ಕಾಜೂರು ಸತೀಶ್

Tuesday, April 7, 2015

ಸಾವಿನ ರುಚಿ ಮತ್ತು ವಾಸನೆ

ಅಡುಗೆ ಕೋಣೆಯಲ್ಲಿಟ್ಟಿದ್ದ ಪ್ಲಾಸ್ಟಿಕ್ಕಿನೊಳಗಿಂದ ಎಂಥದ್ದೋ ವಾಸನೆ ಹೊರಹೊಮ್ಮುತ್ತಿತ್ತು.ಎರಡು-ಮೂರು ಬಾರಿ ಆ ವಾಸನೆಯನ್ನು ಅನುಭವಿಸಿದಾಗ,ಸುಮಾರು ವರ್ಷಗಳ ಹಿಂದಿನ ಒಂದು ಘಟನೆಯ ನೆನಪು ಮೂಗಿಗೆ ಆವರಿಸಿಕೊಳ್ಳತೊಡಗಿತು.ನೆನಪು ವಾಸನೆಯ ರೂಪದಲ್ಲೂ(olfactory) ಅಸ್ತಿತ್ವದಲ್ಲಿರುತ್ತೆ ಅಂದಾಗ ಏನೋ ಒಂಥರಾ ವಿಚಿತ್ರ ಅನ್ನಿಸ್ತಾ ಇದೆ.


ಈ ಹಸಿಮೆಣಸಿನ ವಾಸನೆ ಅಂದ್ರೆ ಅಷ್ಟು ಚಂದ. ಗದ್ದೆಯು ಇದೇ ವಾಸನೆಯನ್ನು ಮೈ ತುಂಬ ತುಂಬಿಕೊಂಡಿತ್ತು.ದೊಗಲೆ ಚಡ್ಡಿಯನ್ನೇರಿಸಿಕೊಂಡು ಬಾವಿಯಿಂದ ನೀರು ತಂದು ಗಿಡಗಳಿಗೆ ಹಾಕುತ್ತಿದ್ದೆ.ಅದೊಂದು ಪ್ರಾಮಾಣಿಕ ಸೇವೆ.ಗಿಡಗಳೂ ಅಷ್ಟೇ ಪ್ರಾಮಾಣಿಕತೆಯಿಂದ ಅದನ್ನು ಸ್ವೀಕರಿಸುತ್ತಿದ್ದವು.


ಆ ದಿನದಲ್ಲೇ ನಾನು ಸಾವಿನ ರುಚಿ ಹೇಗಿರುತ್ತೆ ಅಂತ ಮೊದಲು ತಿಳಿದದ್ದು! ನೀರು ತರಲು ಹೋದವನು ಕಾಲುಜಾರಿ ಬಾವಿಯೊಳಗೆ ಬಿದ್ದುಬಿಟ್ಟೆ.(ಸಾಯುವುದಿದೆಯಲ್ಲಾ-ಅದು ಹೀಗೆ ಬರೆಯುವಷ್ಟು ಸುಲಭವಲ್ಲ!) ಸಾವು ನನ್ನ ನವದ್ವಾರಗಳಿಂದಲೂ ತುಂಬಿಕೊಳ್ಳಲು ತೊಡಗಿತು.ಆ ದಿನ ಸಾವಿಗೆ ಬಾವಿಯಲ್ಲಿದ್ದ ನೀರಿನ ರುಚಿಯಿತ್ತು.ಅಷ್ಟೆ.



ಕೋಮಾದಿಂದ ಹೇಗೋ ಪಾರಾಗಿ ಬಂದೆ.ಸಾವಿಗೂ ಬೇಡವಾದ ಪುಣ್ಯಾತ್ಮ ನಾನು ಎಂದು ಈಗ ಅನ್ನಿಸ್ತಿದೆ .ಅದಕ್ಕಿಂತ ಹೆಚ್ಚಾಗಿ ,ಆ ಸಾವು ಮೆಣಸಿನಕಾಯಿಯ 'ವಾಸನೆ'ಯನ್ನೂ, ಬಾವಿಯ ನೀರಿನ 'ರುಚಿ'ಯನ್ನೂ ನನ್ನ ನೆನಪಿಗೆಂಬಂತೆ ಬಿಟ್ಟುಹೋಗಿದೆ!

*
ಸಾಯುವ ಮುಂಚೆ ಎಷ್ಟೋ ಸಲ ಈ 'ಸಾವು' ಮುಂದೂಡಲ್ಪಟ್ಟಿರುತ್ತೆ.ಎಲ್ಲ ಗೊತ್ತಿದ್ದೂ ಆ ನಡುವೆ ಹೇಗ್ಹೇಗೋ ಬದುಕ್ತೇವೆ,ಯಾರ್ಯಾರಿಗೋ ಕೇಡುಬಗೀತೇವೆ,ಕಿತ್ತಾಡಿಕೊಳ್ತೇವೆ,ಹಿಂಸಿಸ್ತೇವೆ,ಮುಖವಾಡ ತೊಟ್ಟು ಸಭ್ಯರ ಹಾಗೆ ನಾಟಕ ಮಾಡ್ತೇವೆ...


ಎಂಥ ವಿಚಿತ್ರವಪ್ಪಾ ಈ ಬದುಕು!
*

-ಕಾಜೂರು ಸತೀಶ್