ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, February 8, 2015

ನಡೆದೂ ಮುಗಿಯದ ಹಾದಿ

ಕಂಡುಂಡದ್ದನ್ನು ತಮ್ಮ ಪಾಡಿಗೆ ತಾವು ಬರೆದು ಹಗುರಾಗುವ ಮಾರುತಿ ದಾಸಣ್ಣವರ ಸರ್ ,ಈಚೆಗೆ 'ನಡೆದೂ ಮುಗಿಯದ ಹಾದಿ' ಎಂಬ ತಮ್ಮ ಎರಡನೆಯ ಕವನ ಸಂಕಲನವನ್ನು ಹೊರತಂದರು.



ಮಾರುತಿ ಸರ್ ಅವರ ಪರಿಚಯ ನನಗಾದದ್ದು ಅವರ ಕವಿತೆಗಳ ಮೂಲಕ. ಒಂದು ದಶಕದ ಹಿಂದೆ 'ಮಯೂರ ಕಲ್ಪನೆ ' ವಿಭಾಗದಲ್ಲಿ ಬೆಳಗಾವಿ ಕನ್ನಡದ ಸಮರ್ಥ ಬಳಕೆಯೊಂದಿಗೆ ಕಟ್ಟುತ್ತಿದ್ದ ಕವಿತೆ ಮತ್ತು ಅದಕ್ಕೂ ಮಿಗಿಲಾಗಿ ,ಅದರ ಕೆಳಗೆ ಬರೆದುಕೊಳ್ಳುತ್ತಿದ್ದ 'ಗಾಳಿಬೀಡು' ಎಂಬ ಊರು . ಇವು ಪರಿಚಯದ ಹಿಂದಿರುವ ಕಾರಣಗಳು.



ಇಷ್ಟಾದರೂ ನಾನವರನ್ನು ಮೊದಲು ನೋಡಿದ್ದು ಫೆಬ್ರವರಿ 16, 2009ರಲ್ಲಿ. ಭಾಗಮಂಡಲದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ . ಆ ದಿನ ಅವರು 'ಯಾರೋ ಒಬ್ಬ ಮುದುಕ ' ಎಂಬ ಕವಿತೆಯನ್ನು ಓದಿದ್ದರು. ಅಲ್ಲೂ ನಾನವರನ್ನು ಮಾತನಾಡಿಸಿರಲಿಲ್ಲ! ಮತ್ತೆ 2011,ಜನವರಿ 27ರಂದು ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ನಾವಿಬ್ಬರು ಪರಸ್ಪರ ಪರಿಚಯ ಮಾಡಿಕೊಂಡೆವು.



ಅದಾದ ಮೇಲೆ ಅವರು ಮಡಿಕೇರಿ ಬಸ್ ನಿಲ್ದಾಣದಲ್ಲಿ ಸಿಕ್ಕಾಗ ವರ್ಗಾವಣೆಯ ನಿಮಿತ್ತ ಕೌನ್ಸಿಲಿಂಗಿಗೆ ಹೈದರಾಬಾದ್ ಹೊರಟಿದ್ದೇನೆ ಎಂದಿದ್ದರು. ಸ್ವಲ್ಪ ದಿನಗಳ ನಂತರ ಅವರದೇ ಶಾಲೆಯಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆದರೂ,ಅವರ ಉಪನ್ಯಾಸ ಕೇಳಿದರೂ ,ಮಾತನಾಡಿಸಲಾಗಲಿಲ್ಲ!




ಸದ್ಯ ಮಾರುತಿ ಸರ್ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.



ಮೊನ್ನೆ , 'ನಡೆದೂ ಮುಗಿಯದ ಹಾದಿ'ಯನ್ನು ಪ್ರೀತಿಯಿಂದ ಕಳುಹಿಸಿಕೊಟ್ಟಾಗ ಇಷ್ಟೆಲ್ಲಾ ನೆನಪಾಯಿತು . ಇಂಥ ಸೂಕ್ಷ್ಮಗಳನ್ನು ಈ ಕಾಲದ ತುರ್ತು ಎಂದುಕೊಂಡು ಇಲ್ಲಿ ಹೇಳಿಕೊಳ್ಳುತ್ತಿದ್ದೇನೆ.ಮತ್ತೂ ಆಶ್ಚರ್ಯವೆಂದರೆ,ಅವರು ಪುಸ್ತಕದಲ್ಲಿ ನನ್ನನ್ನು ನೆನಪುಮಾಡಿಕೊಂಡಿದ್ದಾರೆ.ಪುಸ್ತಕ ತಲುಪಿ ಇಷ್ಟು ದಿನಗಳಾದರೂ ,ತಲುಪಿರುವ ಕುರಿತು ಇನ್ನೂ ಏನೂ ಹೇಳದ ನನಗೆ ,
ಪಾಪಪ್ರಜ್ಞೆ ಹೆಗಲೇರಿಕೊಂಡಿದೆ.

*

ಬದುಕಿದಂತೆ,ಬದುಕುವಂತೆ ಬರೆಯುವ ('ನನ್ನ ಪಾಡೂ ಹಾಡಾಗಲಿ') ಬರೆಯುವ ಮಾರುತಿ ದಾಸಣ್ಣವರ ಸರ್,ತಮ್ಮ ಬದುಕನ್ನು ಕಾವ್ಯದ ಮೂಲಕ ಉಸಿರಾಡುವವರು.ಹಾಗೆಂದು ಅದನ್ನು ಖಾಸಗಿಯಾಗಿಸದೆ ತಮ್ಮ ಅನುಭವ ದರ್ಶನವನ್ನು ಸಾಂಸ್ಕೃತಿಕವಾಗಿ,ಮೌಲಿಕವಾಗಿ ದಾಟಿಸಬಲ್ಲವರು.



ಅವರ ಕವಿತೆಗಳಲ್ಲಿ ಇಣುಕುವ ಅಪ್ಪನ ಬದುಕಿನ ಮಾರ್ಗವೇ ಒಟ್ಟು ಸಮಾಜದ ಭಿನ್ನ ಸ್ತರಗಳನ್ನೂ,ಅವರ ಶೋಚನೀಯ ಸ್ಥಿತಿಗತಿಗಳನ್ನೂ ಬಿಂಬಿಸುವ ದರ್ಪಣ.(ಶ್ರೀಮಂತ ,ಬಡವ,ಕಲಾವಿದ ,ಹೆಡ್ಡ,ದೊಡ್ಡ ಕುಳ,ಗುಲಾಮ ). ಅಮ್ಮ ಇಲ್ಲಿ ಪ್ರಚಂಡ ಇಚ್ಛಾಶಕ್ತಿಯೊಂದಿಗೆ ಶಿಲ್ಪಿಯ ಉಳಿಪೆಟ್ಟಿಗೆ ಸದಾ ಮೈಯ್ಯೊಡ್ಡಿ ಕೂತ ಸಹನಶೀಲೆ.



ನನ್ನನ್ನು ಕಾಡುವುದು- ಮಾರುತಿ ಸರ್ ಅವರ ಕವಿತೆಗಳ ಪ್ರಾಮಾಣಿಕತೆ . ಇಲ್ಲಿನ ಅನೇಕ ಕವಿತೆಗಳಲ್ಲಿ ಕಾಲದ,ಸಂಬಂಧದ ಸೂಕ್ಷ್ಮಗಳು ನವಿರಾಗಿ ತೆರೆದುಕೊಳ್ಳುತ್ತವೆ.



ಅಪ್ಪ ಅವ್ವಂದಿರ ಸಂತೆಯ ಗಂಟು /
ಬಿಚ್ಚಿ ಹೋಗಿತ್ತೇ,ಹರಿದು ಹೋಗಿತ್ತೇ/
ಚುರುಮುರಿ ಬಟಗಡಲೆ/
ಬಿದ್ದಿವೆ ಅಲ್ಲಲ್ಲಿ.[ನಡೆದೂ ಮುಗಿಯದ ಹಾದಿ]



ಮೌಲ್ಯವಿರದ ತರುಣ ಪೀಳಿಗೆಯ ಮೇಲಿನ ಸಣ್ಣ ಆಕ್ರೋಶ ಹೀಗೆ ವ್ಯಕ್ತವಾಗುತ್ತದೆ :





ತಟ್ಟೆಯಲ್ಲಿ ಸ್ಟೈಲಾಗಿ ಅನ್ನ ಬಿಟ್ಟೇಳುವ/
ಮಗನ ಹಮ್ಮಿಗೆ ರೇಗುತ್ತೇನೆ.[ಅವ್ವ ಕಟ್ಟಿಕೊಟ್ಟ ಬುತ್ತಿ]







ಮಾರುತಿ ಸರ್ ತಮ್ಮ ದೇಸಿ ಭಾಷೆಯಲ್ಲಿ ಹಾಡು ಹೊಸೆಯುತ್ತಾ ಸಂಭ್ರಮಿಸುತ್ತಾರೆ(ಬಿದ್ಹೋದ ಬಿದಿರೂ ಕೊಳಲಾದ ಹಾಂಗ ). 'ಎಲ್ಲಿದ್ದಿ ಜೋಗಪ್ಪ','ಯಾರೋ ಬಂದು ', 'ಬಾಲ್ಯ ಹೊಲದ ತೆನೆ'- ಈ ಕವಿತೆಗಳು ಅವರ ಸಂಗೀತ ಪ್ರಜ್ಞೆಯನ್ನು ತೋರಿಸುತ್ತವೆ .



ಸಮಾಜದ ಬಿಕ್ಕಟ್ಟುಗಳನ್ನು,ವೈರುಧ್ಯಗಳನ್ನು ಸ್ವಯಂ ಅನುಭವಿಸಿ ,ಅವುಗಳನ್ನು ಭಿನ್ನವಾಗಿ ಕಟ್ಟಿಕೊಡುತ್ತಾರೆ.ಆಗ ಉದ್ಭವಿಸುವ ಆಕ್ರೋಶವೆಲ್ಲ ನ್ಯಾಯೋಚಿತವಾದದ್ದೇ:


ಏಕಲವ್ಯನ ಬೆರಳ ಕತ್ತರಿಸಿದಾಗ/
ಅತ್ತುಬಿಟ್ಟ ವಾಲ್ಮೀಕಿ[ವಿಪರ್ಯಾಸ]




ಮೂರ್ತಿಪೂಜೆಯ ಹಗ್ಗ /
ಹರಿದೊಗೆದ ನಿನಗೆ /
ಅದರದೇ ಉರಳು.



ಸಾದಾ ಸರಳ ಭಿಕ್ಕುವಿಗೆ /
ಎಷ್ಟೊಂದು ಗೋಲ್ಡನ್ನು /
ಟೆಂಪಲ್ಲುಗಳು.[ಬುದ್ಧನಿಲ್ಲದ ಬೋಧಿ]




ನನ್ನನ್ನಿರಲು ಬಿಡಿ ಹಾಗೇ/
ನಿಮ್ಮೊಳಗೆ ಬರೆಯದೇ ಉಳಿದ /
ಕವಿತೆಯಾಗಿ[ಗೋರಿ ಕಟ್ಟಬೇಡಿ]


----


ಅಸ್ತ್ರವಿಡಿದಿದ್ದಾಳೀಕೆ/
ಯಾರಿಗೋ ಗೊತ್ತಿಲ್ಲ /
ಆಟವಾಡಲು ಕೊಡು /
ಎಂದು ಮಗ/
ರಂಪ ಹೂಡಿದ್ದಾನೆ [ಯುದ್ಧ ಮುಗಿದ ಮೇಲೆ ]



ಆಧುನೀಕತೆಯು ಸಂಬಂಧಗಳನ್ನು ಛಿದ್ರಗೊಳಿಸುತ್ತಿರುವಾಗ,ಬಹುತೇಕ ಕವಿತೆಗಳು ಭೂತ-ವರ್ತಮಾನಗಳನ್ನು ತುಲನಾತ್ಮಕವಾಗಿ ಗ್ರಹಿಸುತ್ತವೆ. 'ಮಲ್ಲಿಗೆ ಮತ್ತು ಬೇವು', 'ಗೆಳೆಯನಿಗೆ', 'ಬೇಗ ಬಾ' , 'ಹಳೆಬೇರು-ಹೊಸಚಿಗುರು' -ಇಂತಹ ಮಾದರಿಯವು.





ಕೆರೆ ದಂಡೆಗೆ ಬೇಲಿಯು ಇದೆ/
ಈಜಾಡುವ ಹೈದರಿಲ್ಲ[ಹಳೆಬೇರು ಹೊಸಚಿಗುರು]




---



ಟಿ.ವಿ. ಕೇಬಲನ್ನು/
ತೆಗೆಸಿಬಿಡುತ್ತೇನೆ/
ಕಂಪ್ಯೂಟರನ್ನು ಆಫ್ ಮಾಡಿ/
ಮಲಗಿಸಿ ಬಿಡುತ್ತೇನೆ[ಗೆಳೆಯನಿಗೆ]



ಸಂಕೀರ್ಣ ಬದುಕಿನಿಂದ ಬಿಡಿಸಿಕೊಂಡು ಬದುಕಬೇಕಾದ ತುರ್ತನ್ನು ಹೇಳುವ,ವಾಸ್ತವದ ಲೆಕ್ಕ ತಪ್ಪಿದುದರ ಕುರುಹುಗಳಿರುವ ಇಂತಹ ಅನೇಕ ಕವಿತೆಗಳು ಸಂಕಲನದಲ್ಲಿವೆ .







'ಅವ್ವ ಮತ್ತು ಕುಂಕುಮ' ಕವಿತೆ ಇಲ್ಲಿ ಗಮನಾರ್ಹವಾದುದು.ಕನ್ನಡಿಯ ತುಣುಕು ,ಜೇನ ಮೇಣದ ಡಬ್ಬಿ,ಕುಂಕುಮ ಬಟ್ಟಲು- ಇವು ಅವ್ವನ ಸಿಂಗಾರ ಸಾಮ್ರಾಜ್ಯದ ಸರಕುಗಳು .



ಅಪ್ಪ ಕಾಯಿಲೆ ಬಂದು ಮಲಗಿದಾಗ/
ಅವ್ವನ ಕುಂಕುಮದ ಹಾರೈಕೆ/
ಇನ್ನೂ ಜೋರಾಗಿರುತ್ತದೆ.



ಮನಕಲಕುವ ಇಂತಹ ಸಂಗತಿಗಳನ್ನು ಕಾವ್ಯಾತ್ಮಕಗೊಳಿಸಿದ ಬಗೆ ಬೆರಗು ಹುಟ್ಟಿಸುತ್ತದೆ.ಕನ್ನಡಿ ಮತ್ತು ಕುಂಕುಮದ ಪ್ರತಿಮೆಗಳು ಶಕ್ತವಾಗಿ ಹೊರಹೊಮ್ಮಿವೆ.



ಕನ್ನಡಿ ಫಳಫಳ ಹೊಳೆಯುತ್ತದೆ/
ಕುಂಕುಮದ ಕೆಂಪು ತುಂಬಿಕೊಂಡು .





ಅಪ್ಪನನ್ನೂ ಕುಂಕುಮವನ್ನೂ/
ಮಗುವಿನಂತೆ ಸಾಕಿದ್ದ/
ಅವ್ವನ ಹಣೆ/
ಈಗ ಖಾಲಿಯಿದೆ(ಕೊರಳೂ)




ಹೀಗೆ ಬದುಕಿನ ಎಲ್ಲ ಸೂಕ್ಷ್ಮಗಳನ್ನು ಹೇಳಹೊರಡುವ ಮಾರುತಿ ಸರ್ ಅವರ ಕೆಲವು ಕವಿತೆಗಳಲ್ಲಿ ಮಾತು ಕೂಡ ಇಣುಕುತ್ತದೆ.ಅದನ್ನು ನೀಗಿಸಿಕೊಳ್ಳುವ ಎಲ್ಲ ಕಸುವೂ ಅವರಿಗಿದೆ.ನನ್ನಂಥವರನ್ನೂ ನೆನೆಸಿಕೊಳ್ಳುವ ಅವರ ದೊಡ್ಡಗುಣಕ್ಕೆ ಶರಣು!

**

-ಕಾಜೂರು ಸತೀಶ್

No comments:

Post a Comment