Thursday, December 18, 2014

ಕವಿತೆ,ಹಸ್ತಪ್ರತಿ ಮತ್ತು ನಾನು

ಎರಡು ಸಾವಿರ್ದ ಹತ್ರಲ್ಲಿ ಯಾರೋ ಕೇಳಿದ್ರು ಅಂತ ನನ್ನ ಕವಿತೆಗಳ್ನೆಲ್ಲ ಗುಡ್ಡೆಹಾಕಿ ಹೊಸ್ದಾಗಿ ಬಟ್ಟೆ ಹೊಲಿಯೋ ಟೈಲರ್ ಥರ ಒಂದು ಹಸ್ತಪ್ರತಿ ಹೊಲ್ದಿದ್ದೆ; ಕೇಳಿದ್ದವ್ರಿಗೆ ಕೊಟ್ಕಳ್ಸಿದ್ದೆ. ತಮಾಷೆ ಅಂದ್ರೆ ಅದೀಗ ಅವ್ರ ಹತ್ರ ಇಲ್ವಂತೆ. ಹಿಂಗೆ ಹೇಳ್ಕೊಳ್ತಿರೋ ಸಾಕ್ಷಿಯೊಂದನ್ನ ಬಿಟ್ರೆ ಹಸ್ತಪ್ರತಿ ಮಾಡಿದ್ದೆ ಅನ್ನೋದಕ್ಕೆ ನನ್ಹತ್ರ ಯಾವ್ದೇ ಸಾಕ್ಷಿಗಳಿಲ್ಲ.ಆ ಕವಿತೆಗಳೂ ಇಲ್ಲ;ಕವಿತೆ ಬರ್ದ ಆ ಕ್ಷಣಗಳೂ ಕೂಡ.ಮೊನ್ನೆ ಯಾವ್ದೋ ಒಂದು ಸಂದರ್ಭ ನನ್ನ ಎರಡನೇ ಹಸ್ತಪ್ರತಿಯನ್ನೂ 'ಬಿಡುಗಡೆ'ಗೊಳಿಸ್ಲಿಕ್ಕೆ ಒತ್ತಾಯ ಹೇರ್ತು. ಮತ್ತೆ ಗುಡ್ಡೆಹಾಕಿ ಒಂದಿಬ್ರಿಗೆ ಕಳಿಸ್ದೆ. ಪ್ರೀತಿಯ ಕವಿ ವಾಸುದೇವ ನಾಡಿಗ್ ಸರ್ ಅದ್ರಲ್ಲಿದ್ದ ಪೆಕ್ರು-ಪೆಕ್ರಾದ ಕವಿತೆಗಳನ್ನು ಚನ್ನಾಗಿ ವಿಶ್ಲೇಷಿಸಿ ಒಳ್ಳೆ ಸಲಹೆಗಳ್ನ ನೀಡಿದ್ರು. ಓದಿ ಖುಷಿಪಟ್ಟಿದ್ದೆ.ನಾಳೆ ಒಂದು ಒಳ್ಳೆಯ ಏಕಾಂತದಲ್ಲಿ ಒಲೆ ಉರಿಸ್ಲಿಕ್ಕೆ ,ಧೂಳು ಒರೆಸ್ಲಿಕ್ಕೆ,ಮತ್ತೊಂದು ಕವಿತೆ ಮತ್ತೆ ಇನ್ನೇನೇನೋ ಗೀಚ್ಲಿಕ್ಕೆ ಸದ್ಯಕ್ಕೆ ಉಳ್ದಿರೋ ಈ ಹಸ್ತಪ್ರತೀನ ಬಳಸಿದ್ರೂ ನನ್ನಲ್ಲಿ ಅಂತದ್ದೇನೂ ಬದ್ಲಾವಣೆ ಕಾಣ್ಸೋದಿಲ್ಲ.ಮಳೆ-ಚಳಿಗಾಲ್ದಲ್ಲಿ ಉರ್ಸಿದ್ರೆ ಒಂದಷ್ಟು ಉಪಕಾರವಾದ್ರೂ ಆಗ್ಬಹುದು ಅನ್ನಿಸ್ತಿದೆ.ನಾನು ಬರ್ದವೆಲ್ಲ ನನ್ನವೇ ಕೂಸುಗಳು ಅಂತ ಪತ್ತೆಹಚ್ಲಿಕ್ಕೆ ಯಾವ DNA ಪರೀಕ್ಷೆಯ ತಂತ್ರಜ್ಞಾನನೂ ಇನ್ನೂ ಬಂದಿಲ್ಲ ಅನ್ಸುತ್ತೆ .ಕವಿತೆ ಹುಟ್ಟುತ್ತಲ್ಲ -ಆ ಕ್ಷಣ ಯಾರ್ದು? ನನ್ನದಾ ಅಥವಾ ಇದ್ದಕ್ಕಿದ್ಹಂಗೆ ಗರ್ಭ ಕಟ್ಟಿಸೋ ಪರಿಸರದ್ದಾ? ಆದ್ರೆ ಒಂದು ವಿಷ್ಯ - ನನ್ನೊಳ್ಗೆ ಬರ್ಸ್ಕೊಂಡ ಎಲ್ಲ ಸಾಲುಗಳನ್ನೂ ನಾನು scientific ಆಗಿ prove ಮಾಡ್ತೀನಿ . ಅದಕ್ಕೆ ಬೇಕಾದ documents / witnesses ನನ್ಹತ್ರ ಇವೆ. ಅದೇ ದೊಡ್ಡ ಖುಷಿ ನಂಗೆ. ನಿಮ್ಗಿದೆಲ್ಲಾ ತಮಾಷೆ ಅನ್ನಿಸ್ಬಹುದೇನೋ!


ನಂಗೆ ಕವಿತೆ ಅನ್ನೋದು ಒಂದು defence mechanism . ಈ ಕವಿತೆಗಳ ಮೇಲೆ ಯಾಕೆ ಅಷ್ಟೊಂದು ಸಿಟ್ಟು ಅಂದ್ರೆ ,ಅವ್ಗಳ ಓದು ನಮ್ಮ ಸಾಹಿತ್ಯ ವಲಯದಲ್ಲಿ prejudice based ಆಗಿರೋದು.ಈಗಾಗ್ಲೇ ಕವಿ ಅಂತ ಗುರುತಿಸ್ಕೊಂಡವ್ರು,ನಾಲ್ಕಾರು ಪ್ರಶಸ್ತಿಗಳ್ನ ತಲೆ ಮೇಲೆ ಅಂಟಿಸ್ಕೊಂಡವ್ರು,famous ಆದವ್ರು ಏನು ಗೀಚಿದ್ರೂನೂ ಕವಿತೇನೇ.ಈ ಕಾಲ್ದಲ್ಲಿ ದಿನಕ್ಕೆ ಹತ್ತೊ- ಹದಿನೈದೊ ಕವಿತೆ ಹಡ್ಯೋರೂ ಇದ್ದಾರೆ ! ಕಾರಲ್ಲೇ ಹೋಗೋರು ಕಾಲ್ನಡಿಗೆಯ ಕವಿತೆಗಳ್ನ ತುಂಬಾ ಚೆನ್ನಾಗಿ ಕಟ್ತಿದ್ದಾರೆ! ನಂಗೆ ನಗು ಬರುತ್ತೆ.


ಹಿಂಗೆ ಹಸ್ತಪ್ರತಿಗಳ್ನ ಆಗಾಗ ಬಿಡುಗಡೆಗೊಳ್ಸೋ ಭಾಗ್ಯ ನಂಗೆ ಬರ್ತಾ ಇರ್ಲಿ ಅಂತ ಕಾಯ್ತಾನೇ ಇರ್ತೀನಿ. ಈ ವರ್ಷ ಕವಿತೆಗಳು ಹೆಚ್ಚೆಚ್ಚು ಸಯಾಮಿಗಳಾಗಿ ಹುಟ್ಟಿ ಮೂರ್ನೇ ಹಸ್ತಪ್ರತೀನ ನಾನೇ ಚಪ್ಪಾಳೆ ತಟ್ಟಿ ನಾನೇ ಬಿಡುಗಡೆಗೊಳಿಸ್ಕೋಬೇಕು ಅನ್ನೋ ಪ್ಲ್ಯಾನೂ ಇದೆ.


ನಿಜ, ಆಮೇಲೆ ನನ್ನನ್ನೇ ನಾನು ಬಿಡುಗಡೆಗೊಳಿಸ್ಕೋಬೇಕು ಅನ್ನೋ ಪ್ಲ್ಯಾನೂ ಕೂಡ ಬಾಕಿ ಇದೆ!!

**

-ಕಾಜೂರು ಸತೀಶ್

3 comments:

 1. satish avare tilisidanthe avara pekru pekraada kavanagalannu odhi bareyoke 5 tingalu tagande kanri!!! vasudeva nadig

  ReplyDelete
 2. ಅವು ನಿಮ್ಮನ್ನು ತುಂಬಾ ಹಿಂಸಿಸಿರ್ಬೇಕು ಅನ್ಸುತ್ತೆ !!

  ReplyDelete
 3. --
  ನಾನು ಕಂಡಂತೆ ಕವಿಗಳ ಗದ್ಯ ಕವಿತೆಗಳಿಗಿಂತ ಗಾಢವೂ ಆಪ್ತವೂ ಆಗಿರುತ್ತದೆ. ಅದಕ್ಕೆ ಈ ಪೆಕ್ರು ಪೆಕ್ರು ಸಾಲುಗಳೂ ಪುರಾವೆ. ಹಾಗಾಗಿ ಕವಿಗಳು ಕವಿತೆಗಳ ಜೊತೆ ಜೊತೆಗೇ ಅಕವಿತೆಗಳನ್ನೂ ಸೃಷ್ಟಿಸಿ ಧನ್ಯರಾಗಲಿ.

  ReplyDelete

ನಷ್ಟ

ಮೊದಲ ನೋಟದಲ್ಲಿ ಅಥವಾ ಪ್ರೀತಿಯ ಮೊದಲ ಪರ್ವದಲ್ಲಿ ನನಗೆ ನನ್ನ ಕಣ್ಣುಗಳು ನಷ್ಟವಾದವು. ಎರಡನೇ ಭೇಟಿಯಲ್ಲಿ ಅಥವಾ ಪ್ರೀತಿಯ ಮಧ್ಯ ಪರ್ವದಲ್ಲಿ ನನಗೆ ನನ್ನ ಹೃದಯ ನ...