ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, September 21, 2014

ನನ್ನ ಜೀವನದ ಮೊಟ್ಟಮೊದಲ ಸ್ತ್ರೀಯು ಕಟ್ಟಕಡೆಯ ಸ್ತ್ರೀಗೆ ಹೇಳಿದ್ದು

ಮಗಳೇ,
ಅದು ಕಡಲ ತೀರ
ಕಗ್ಗತ್ತಲು
ಉರಿದುರಿದು ಹೋಗುತ್ತಿರುವ
ಕೋಣೆಯ ಮೇಣದ ಬತ್ತಿಗಳು.





ಪರ್ವತಾರೋಹಿಗಳು
ಕೈಕೊಡಲಿಯಿಂದ ಕೊಚ್ಚಿ ಊರುತ್ತಾ
ನನ್ನಾಳಕ್ಕೆ ನುಗ್ಗಿ ಮೇಲೇರುತ್ತಿದ್ದರು.
ಸುಟ್ಟು ಕರಿದರೂ
ಒಂದೆಲೆಯನ್ನು ಗಟ್ಟಿಯಾಗಿ ಹಿಡಿದು ನಿಂತ ಮರದಂತೆ
ಅವನನ್ನು ಹಸಿರಾಗಿಯೇ ನಿಲ್ಲಿಸಿದ್ದೆ.






ಕಡೆಗೆ ,
ಅವನು ಇಳಿದು ಹೋದ-
ನನ್ನಾಳದ ನೋವಿನಿಂದ
ನೋವೇ ಇಲ್ಲದ ಹಾಗೆ.
ತುಂಡಾದ ಕಳ್ಳುಬಳ್ಳಿ
ಮುಂಭಾಗದಲ್ಲೇ ಬಾಲವಿರುವ
ಒಂದು ಹಂದಿಯಾಗಿಸಿತು ನನ್ನನ್ನು .







ಈಗ ,
ಅದೇ ಹಂದಿ
ವಾರ್ಧಕ್ಯದ ಕೆಸರುಗುಂಡಿಯಲ್ಲಿ
ಮೈಮುದುರಿ ಮಲಗಿದೆ.
ನನಗೀಗ ಸಾವಿರ ಸಾವಿರ ಬಾಲಗಳು-
ಉಸಿರಾಡಲು
ಉಚ್ಚೆ ಉಯ್ಯಲು
ಊಟ ಮಾಡಲು
ಔಷಧಿ ಒಯ್ಯಲು.





ಮಗಳೇ,
ಈ ವಾರ್ಧಕ್ಯ ಅಂದ್ರೆ ಹಾಗೇನೇ.
ಅಲ್ಲಿ
ಬಾಲವೇ ತಲೆಗಿಂತ ದೊಡ್ಡದು
ನಿಶ್ಚಲತೆ ಚಲನೆಗಿಂತ ಸ್ಥಾಯಿ
ಫ್ಯಾನಿನ ಹೂದಳಗಳಂಥ ರೆಕ್ಕೆಗಳು
ಮಗನ ಕೈಗಳೆಂಬೊ ರೆಕ್ಕೆಗಳಿಗಿಂತ
ಪ್ರೀತಿಯನ್ನುಣಿಸುತ್ತದೆ.






ಮಗಳೇ,
ಅವನು
ನಿನ್ನ ಬೆರಳುಗಳಲ್ಲಿ ಬೆರಳು ಸೇರಿಸಿ
ಕೂರುವನೇ ನಿನಗಂಟಿಕೊಂಡು?
ನಾಲ್ಕೈದು ಮಾತ್ರೆಗಳ ಬದಲಿಗೆ
ಒಂದು ಚುಂಬನದಿಂದ
ಗುಣಪಡಿಸುವನೇ ನಿನ್ನ ಕಾಯಿಲೆಯನ್ನು ?
ಕಸಬಿದ್ದ ಕಣ್ಣಿಗೆ
ಫೂ..ಫೂ.. ಊದುವನೇ ನಿನ್ನನ್ನಪ್ಪಿ?
ಎಷ್ಟೆಷ್ಟೋ ಅಗ್ನಿಕುಂಡಗಳ
ಧಗಧಗಿಸುವ ಗಾಳಿಯನ್ನು
ಅವನೊಳಗೆ ಕೂಡಿಟ್ಟಿದ್ದೆ ನಾನು .






ಇಷ್ಟಾದರೂ ಅವನಿಗೆ ತಿಳಿದಿಲ್ಲ .
ಪ್ರಿಯ ಮಗಳೇ,
ಸುಮ್ಮನೆ ಅವನ ತೊಡೆಯನ್ನೊಮ್ಮೆ ಅಪ್ಪಿಕೊಂಡಿದ್ದಿದ್ದರೆ
ಸಾವು ಅವನ ಮುಖದ ಮೇಲೆ
ಮಂಜುಗಡ್ಡೆಯನ್ನಿಡುತ್ತಿತ್ತೇನೊ.






ಮುದ್ದು ಮಕ್ಕಳು
ಉತ್ತೀರ್ಣರಾಗುತ್ತಿದ್ದರೂ
ಅನುತ್ತೀರ್ಣಗೊಳ್ಳುತ್ತಲೇ ಇರುವ
ಶಾಲೆಗಳಂತೆ
ಏನಾದರೂ ಸರಿ
ನಾವು ತಳವೂರಿ ನಿಲ್ಲುತ್ತಿದ್ದೇವೆ.






ತೋಯ್ದು ತೊಪ್ಪೆಯಾಗಿ ಬರುವ
ಒಂದು ಬಲಿಷ್ಠ ನಾಯಿಗೆ
ಮುರಿದ ಗುಡಿಸಲಿನ ಕೆಳಗೆ
ಆಶ್ರಯ ಇನ್ನೂ ಇದ್ದೇಯಿದೆ.





ಆ ನಾಯಿ
ಅವನೇ ಆಗಿದ್ದರೂ ಕೂಡ .

**

ಮಲಯಾಳಂ ಮೂಲ: ಪಿ. ಎನ್. ಗೋಪಿಕೃಷ್ಣನ್

ಕನ್ನಡಕ್ಕೆ : ಕಾಜೂರು ಸತೀಶ್

Thursday, September 4, 2014

'ಗುರು' ಎಂಬೋ ಬೆಳಕಿನ ಬೀಜ.

-1-
ಮತ್ತೆ ಶಿಕ್ಷಕರ ದಿನ ಎದುರಿಗೆ ಬಂದಿದೆ .ಎಂಥವರೂ ತಮ್ತಮ್ಮ ಆದರ್ಶ ಶಿಕ್ಷಕರನ್ನು ನೆನೆದು ಭಾವುಕರಾಗುವ ದಿನವಿದು.


ಕಳೆದೆರಡು ವರ್ಷಗಳ ಹಿಂದೆ ನನ್ನ ಗೆಳೆಯನೊಬ್ಬ ನಮಗೆ ಹೈಸ್ಕೂಲಿನಲ್ಲಿ ಗಣಿತ ಪಾಠ ಹೇಳಿಕೊಡುತ್ತಿದ್ದ 'ಗುರುಸ್ವಾಮಿ ಮಾಸ್ಟ್ರ' ಮೊಬೈಲ್ ನಂಬರ್ ಕೊಟ್ಟಿದ್ದ . ಈವರೆಗೂ ನಾನವರಿಗೆ ಕರೆಮಾಡಲು ಹೋಗಲಿಲ್ಲ ; ಎಷ್ಟೋ ಬಾರಿ ಕರೆಮಾಡೋಣವೆಂದು ಮೊಬೈಲ್ ಕೈಗೆತ್ತಿಕೊಂಡರೂ ಮತ್ತೆ ಸುಮ್ಮನಾಗಿದ್ದೆ.


ನನ್ನ ಹೈಸ್ಕೂಲು ವಿದ್ಯಾಭ್ಯಾಸ ಮುಗಿದು ಮೂರು ವರ್ಷಗಳ ಮೇಲೆ ನಾನು ಮತ್ತು ಅವರು ಸಂಜೆಗತ್ತಲಿನಲ್ಲಿ ಭೇಟಿಯಾಗುತ್ತಿದ್ದೆವು.ಅವರ ಕೈಯಲ್ಲೊಂದು ಸಣ್ಣ ಟಾರ್ಚ್ ಇರುತ್ತಿತ್ತು .ನಾನು ಕಾಲೇಜು ಮುಗಿಸಿ ಮನೆಗೆ ಹಿಂತಿರುಗಲು ಗಡಿಯಾರದ ಮುಖವನ್ನೇ ನೋಡಿರದ ಸರ್ಕಾರಿ ಬಸ್ಸನ್ನು ಕಾಯುತ್ತಾ ಕೂತಿರುತ್ತಿದ್ದೆ. ಅವರೂ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಯ ಹಾದಿ ಹಿಡಿದಿರುತ್ತಿದ್ದರು .ರಾತ್ರಿ ಮನೆ ತಲುಪುತ್ತಿದ್ದದ್ದು 8ಕ್ಕೆ.ಬೆಳ್ಳಂಬೆಳಿಗ್ಗೆಯೇ ಮನೆಬಿಟ್ಟು ಶಾಲೆ ತಲುಪುತ್ತಿದ್ದರು. ಅವರ Dedication ನೆನೆದಾಗ ನಿಜಕ್ಕೂ ಮಾತು ಹೊರಳೋದಿಲ್ಲ.


ಗುರುಸ್ವಾಮಿ ಮಾಸ್ಟ್ರು ಮೂರು ವರ್ಷಗಳಲ್ಲಿ ನಮಗೆ ಹೇಳಿದ್ದು ಒಂದೇ ಒಂದು ಜೋಕ್-'ಭಾರತೀಯನ ಮೆದುಳು ಸವೆಯೋದಿಲ್ಲ'! [ತಮಾಷೆ ಅಂದ್ರೆ ,ನಾನು ಶಿಕ್ಷಕನಾದ ಮೇಲೆ ನನ್ನ ವಿದ್ಯಾರ್ಥಿಗಳಿಗೂ ಇದನ್ನು ಹೇಳಿಕೊಟ್ಟಿದ್ದೆ. ಮುಂದೆ ಅದೇ ಜೋಕನ್ನು ಅದೇ ಮಕ್ಕಳಿಗೆ ಮಾಸ್ಟ್ರು ಹೇಳಲು ಹೊರಟಾಗ 'ಇದನ್ನು ಸತೀಶ್ ಮಾಸ್ಟ್ರು ಹೇಳಿಕೊಟ್ಟಿದ್ದಾರೆ' ಎಂದರಂತೆ!]


ಒಮ್ಮೆ ಪ್ರಿನ್ಸಿಪಾಲರಾದ್ದ ಕೆಂಪಯ್ಯ ಸರ್ ಎಲ್ಲರ ಎದುರಿಗೆ 'ಗುರುಸ್ವಾಮಿ ಮಾಸ್ಟ್ರು ಈಗ ಒಂದು ಹಾಡು ಹಾಡುತ್ತಾರೆ' ಎಂದುಬಿಟ್ಟರು! ಮುಜುಗರಕ್ಕೊಳಗಾದ ಮಾಸ್ಟ್ರು ' ಭೂಮಿ ಹುಟ್ಟಿದ್ದು ಹೇಗೆ? ಹೇಗೆ? ಹೇಗೆ?' ಎಂದು ಹಾಡಲು ತೊಡಗಿದಾಗ ಒಂದು ಕ್ಷಣ ನಾವೆಲ್ಲರೂ ನಕ್ಕುಬಿಟ್ಟಿದ್ದೆವು!


ಒಂದು ಇರುವೆಯನ್ನೂ ನೋಯಿಸದ ವ್ಯಕ್ತಿ ಅವರು . ಆದರೆ ,ಸಿಟ್ಟು -ಸಂತೋಷದ ಸಂದರ್ಭಗಳಲ್ಲಿ ಇದ್ದಕ್ಕಿದ್ದಂತೆ ಭಾವುಕರಾಗಿಬಿಡುತ್ತಿದ್ದರು. ಗಾಂಧಿಯ ಪ್ರತಿರೂಪದಂತಿರುವ ಅವರು ಈಗ ಕುಶಾಲನಗರದ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಯಾವ ಪ್ರಶಸ್ತಿಗೂ ಅರ್ಜಿ ಸಲ್ಲಿಸದೆ ಮತ್ತದೇ ಸೇವಾ ಮನೋಭಾವದಿಂದ ದುಡಿಯುತ್ತಿದ್ದಾರೆ.


-2-

ಇಂತಹ ಅನೇಕ ಶಿಕ್ಷಕರುಗಳ ಬೆಳಕನ್ನು ಕಡೆಪಡೆದವರಂತೆ ಪಡೆದು ಬದುಕುತ್ತಿದ್ದೇವೆ. ಆದರೆ , ವಾಸ್ತವ ಅತ್ಯಂತ ಭೀಕರವಾಗಿದೆ. ಶಿಕ್ಷಕರ ನಡವಳಿಕೆಯ ಮೇಲೆ ಸಮಾಜ ಸಂಶಯಪಡುವಂತಾಗಿದೆ. ವೃತ್ತಿಯ ಒತ್ತಡ 'ಅತೃಪ್ತಿ'ಯನ್ನು ಉಡುಗೊರೆಯಾಗಿ ನೀಡುತ್ತಿದೆ .ಶಿಕ್ಷಕರೇ ಹಳೆಯ ವಿದ್ಯಾರ್ಥಿಗಳು ಸಿಕ್ಕಾಗ ಪರಿಚಯ ಹೇಳಿಕೊಳ್ಳುವ ಕಾಲ ಸೃಷ್ಟಿಯಾಗುತ್ತಿದೆ! ಅದರ ನಡುವೆ ಹುಣ್ಣಿಮೆ- ಅಮವಾಸ್ಯೆಗಳಂದು ಶಾಲೆಯ ಕಡೆ ಮುಖಮಾಡುವ 'ಶಿಕ್ಷಕ'ರೆನಿಸಿಕೊಂಡ ಕೆಲವರು 'ರಾಜ್ಯ ಪ್ರಶಸ್ತಿ'ಯನ್ನು 'ಪಡೆದು' ಬೀಗುತ್ತಿದ್ದಾರೆ.

ಈ ಕೊರತೆಗಳನ್ನು ಮೀರುವ ಕಾಲ ಬರುತ್ತದೆ ಎಂದು ನನಗೇನೂ ಅನ್ನಿಸುವುದಿಲ್ಲ. ಇಡೀ ವ್ಯವಸ್ಥೆಯೇ ಖಾಸಗೀಕರಣದ ಮುಖವನ್ನು ಧರಿಸುತ್ತಿದೆ. 'ಏಕರೂಪದ ವ್ಯವಸ್ಥೆ' ಈ ಶತಮಾನ ಕಳೆದರೂ ಜಾರಿಯಾಗುವುದಿಲ್ಲ ಎನ್ನಿಸುತ್ತಿದೆ.


ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು!


-ಕಾಜೂರು ಸತೀಶ್

Tuesday, September 2, 2014

ನನ್ನ ಪ್ರೀತಿಯ ಸಾವಿಗೆ

ಯಾಕೆ ಓಡಿಹೋಗುತ್ತಿರುವೆ
ಮುದಿ ವಯಸ್ಸಿನ ಮಂದಿಯ ಜೊತೆಗೆ
ಎಳೆ ವಯಸ್ಸಿನ ಮಕ್ಕಳ ಜೊತೆಗೆ .



ಮಳೆಗಾಲದ ಮೀನಿನ ಕಣ್ಣುಗಳನ್ನು ಧರಿಸಿರುವ ನಿನಗೆ
ದಾರಿ ತೋರುವೆ ಬಾ
ಇಕೋ ನನ್ನೆರಡು ಶುಭ್ರ ಕಣ್ಣುಗಳು .



ನೋಡಿಲ್ಲಿ
ತಾರುಣ್ಯವನ್ನು ಹೇಗೆ ಮೈದುಂಬಿ ನಿಂತಿದ್ದೇನೆ ನಾನು .



ಜಾತಿಯಿಲ್ಲದ, ಆಕಾರವೇ ಇಲ್ಲದ
ನೀನೆಂದರೆ ನನಗಿಷ್ಟ.
ಬಾ, ಕೈ ಕೈ ಹಿಡಿದು ಎಲ್ಲಾದರೂ ಓಡಿಹೋಗೋಣ
ಲೋಕಕ್ಕೆ ತಿಳಿಯದ ಹಾಗೆ .



ನೀನೊಂದು ಗಾಳಿಯ ಮುದ್ದೆ
ನಿನ್ನ ಗಾಳಿಬೆರಳು, ಗಾಳಿತುಟಿ
ಗಾಳಿಯದ್ದೇ ಅಂಗಾಂಗ
ನನ್ನ ಕಾದ ಮೈಗೆ ಅದೆಷ್ಟು ಮುದ ನೀಡಬಹುದು !



ಎರಡೇ ಎರಡು ಆಸೆ ನನಗೆ :
ನಿನ್ನೊಂದಿಗೆ ಕೂಡುವುದು
ಮತ್ತು
ನಿನ್ನೊಂದಿಗೆ suicide ಮಾಡಿಕೊಳ್ಳುವುದು !
**

-ಕಾಜೂರು ಸತೀಶ್