ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, March 23, 2014

ಸ್ವಾತಂತ್ರ್ಯ

ಬಾಗಿಲು ಮುಚ್ಚುವಾಗಿನ ಸದ್ದು
ನಮ್ಮ ಸ್ವಾತಂತ್ರ್ಯವನ್ನು ಅಣಕಿಸುತ್ತದೆ.


*


ಗಡಿಯಲ್ಲಿ ಕಾವಲು ಕಾಯುತ್ತಿದ್ದಾರೆ
ಆಚೆ ಈಚೆಗೂ ದುಂಬಿಯೊಂದು
ಹಾಯಾಗಿ ಹಾರಾಡಿಕೊಂಡಿದೆ.


*


ಚರಿತ್ರೆಯ ಕಾಲಿಗೆ ಬಿಗಿದ
ಸರಪಳಿಯ ಬೀಗದ ಕೀ ಕಾಣೆಯಾಗಿದೆ
ಅದೀಗ ವಂಶವಾಹಿನಿಗೆ ಹಬ್ಬುತ್ತಿದೆ.


*


ಕೊಲೆಯಾದವನು ಮಣ್ಣಾದ ಮಣ್ಣಲ್ಲಿ
ಹುಟ್ಟಿದ ಹೂಗಳು ಕೊಲೆಯಾಗುವುದಿಲ್ಲ.


*


ಸುಡುವ ಬೀದಿಗಳಲ್ಲಿ
ಪಾದಗಳ ಊರಿ ನಡೆದುಹೋಗುತ್ತೇನೆ
ಊರಿದ ಒಂದು ಪಾದದಡಿಯ ನೆಲ ಯಾರದು?
ಗಾಳಿಯಲ್ಲಿರುವ ಇನ್ನೊಂದು ಪಾದದ ಬಗ್ಗೆ ನನಗೆ ಭಯವಿಲ್ಲ
ಅಲ್ಲಿ ಯಾರೂ ಬೇಲಿ ಹಾಕುವುದನ್ನು ಕಲಿತಿಲ್ಲ!


*


-ಕಾಜೂರು ಸತೀಶ್



ಚಿತ್ರ: ದಿನೇಶ್ ಕುಕ್ಕುಜಡ್ಕ
[ನನ್ನ ಕವಿತೆಯೊಂದಕ್ಕೆ ಬರೆದ ಚಿತ್ರ]

Saturday, March 22, 2014

'ಹನಿ'ಗಳು

ಹೂಳಲು,ಸುಡಲೂ ಕೂಡ
ಸ್ಥಳವಿರಬಾರದು.
ಕೆಲವು ನಾನ್ವೆಜ್ ಪ್ರಾಣಿಗಳ
ಹೊಟ್ಟೆಯಲ್ಲಾದರೂ
ಬದುಕಿಕೊಳ್ಳಬಹುದು!

*

ಜೀವ ಚಡಪಡಿಸುವ ಹೊತ್ತಲ್ಲಿ
ವೈದ್ಯನ ಬಳಿ ಹೋದೆ.
ಹರಿದ ಜೇಬು ತಡಕಾಡಿದ.


ಹೊರಬರುವ ಹೊತ್ತಲ್ಲಿ
ಜೇಬಿನ ತುತ್ತ ತುದಿಯ ದಾರಕ್ಕೆ
ಪದ್ಯಗಳು ಜೋತುಬಿದ್ದಿದ್ದವು.

ಅದರ ಬಲದಲ್ಲಿ
ನಾನೀಗಲೂ ಬದುಕಿಕೊಂಡಿದ್ದೇನೆ!

*

-ಕಾಜೂರು ಸತೀಶ್



ಇರಲಿ

ಆ ಬಳ್ಳಿ ಅಲ್ಲೇ ಇರಲಿ
ಅದರ ಕುಣಿಕೆ ಕೊರಳ ಜೋಕಾಲಿ ಯಾಡದಿರಲಿ.


ಆ ಕತ್ತಿ ಹಾಗೇ ಇರಲಿ
ಅದರ ಹರಿತಕ್ಕೆ ಗಾಳಿ ಮಾತ್ರ ಕೊಯ್ದುಕೊಳ್ಳುತಲಿರಲಿ.


ಆ ಬೆ೦ಕಿ ಹಾಗೇ ಇರಲಿ
ಅದ ಕುಡಿಯಲು ನಾಲಗೆ ತೇವವಾಗಿರಲಿ
ಆಮೇಲಾದರೂ ಅದು ಸುಖವಾಗಿರಲಿ.


ಈ ಬೀದಿಗಳಲ್ಲಿ ಮಳೆಯಾಗದಿರಲಿ
ಕಪ್ಪೆಗಳು
ಚಕ್ರಗಳಿ೦ದ
ಬರ್ಬರ ಕೊಲೆಯಾಗದಿರಲಿ.

ಈ ಕಪ್ಪು ಹಾಗೇ ಇರಲಿ
ಕಣ್ಣು ಸಹಿಸದಿದ್ದರೆ ನಿಮಗಿಷ್ಟದ ಬಣ್ಣ ಸುರಿದುಬಿಡಿ
ಚರ್ಮ ಸುಲಿದರೂ ಸರಿ 'ಹೋಳಿ' ಎ೦ದುಕೊಳ್ಳುವೆ.


ಪಾದುಕೆಗಳು ,ಒಳಉಡುಪುಗಳು ಕಳುವಾಗದಿರಲಿ
ರೊಟ್ಟಿಯ ತು೦ಡಲ್ಲಿ ಹಸಿದವರ ಹೆಬ್ಬೆಟ್ಟೊತ್ತಲು ಜಾಗವಿರಲಿ.

**

-ಕಾಜೂರು ಸತೀಶ್

ಗಾಯದ ಹೂಗಳು

ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ;
ಒಸರುವ ಅಷ್ಟೂ ರಕ್ತ ಹೂವಿಗೆ
ಅಂದ ನೀಡಬೇಕು.



ಮಿದುಳಿಗೊಯ್ಯಬೇಕು ಪರಾಗಗಳ ಅಲೆಅಲೆಯಾಗಿ ಅಲೆಯುವ ಹುಳುಗಳು ಬರಿಯ ಪಾದಗಳಲ್ಲಿ;
ಗರ್ಭಕಟ್ಟಿದ ಮೇಲೆ ಕಳ್ಳುಬಳ್ಳಿಗಳನ್ನು ಬಾಂಬುಗಳಿಂದಲೂ ಸಿಡಿಸಲಸಾಧ್ಯವಾಗಬೇಕು.



ಕರಕಲಾಗಬಾರದು ಹೀರುವ ಯಾವ ದುಂಬಿಗಳೂ ಸುಟ್ಟು;
ಹೀರಿದ್ದು ಮೀರಿದರೆ ಅವೂ ಕೆಂಪುಹೂಗಳಾಗಿ ಹಾರಿಹೋಗಬೇಕು.



ಬಣ್ಣ ಮುಗಿದಿದ್ದರೆ ಓಡಿಬರಬೇಕು ಕಲಾವಿದ- ಕತ್ತಿಯ ಕುಂಚ ಎಸೆದು;
ಗಾಯದ ಹೂಗಳು ಕಣ್ಣೊಳಗೂ ಇಳಿದು ಅವನ ಕಣ್ಣುಗಳೂ ಹೂವಾಗಬೇಕು.



ಬಿಳಿಹೂವಾಗಬೇಕು ಚರಿತ್ರೆಗುಡ್ಡದಲ್ಲಿ -ಹೊರಬರುತ್ತಿದ್ದರೆ ಗಾಯದ ಕೀವು;
ಹುಳುಹತ್ತಿದರೆ ಅವುಗಳ ಹಸಿದ ಹೊಟ್ಟೆಗೆ ಕೀವು ಜೇನಾಗಬೇಕು.



ಎಲ್ಲ ಗಾಯಗಳೂ ಹೂವಾಗಬೇಕು
ನನ್ನ-ನಿಮ್ಮ ಹೃದಯಗಳಲ್ಲಿ.


**

-ಕಾಜೂರು ಸತೀಶ್


ಬಣ್ಣಗಳು ಬೇಕಿಲ್ಲ ನಮಗೆ

ಹಸ್ತದಲ್ಲೊಂದು ಕಿರು ಗಾಯ ಸಾಕು
ನಿನ್ನ ಗೆಲ್ಲಿಸಲಿಕ್ಕೆ ಮುದ್ರೆಯೊತ್ತಲು.
ಗೆದ್ದ ಮೇಲೆ ನಮಗೆ ತುಂಬಿದರೆ ಸಾಕು.

ಆಮೇಲೆ-
ನಮ್ಮ ಮರೆತಾಗಲೆಲ್ಲ
ಹಿಂತಿರುಗಿ ಗೋಡೆಯಲ್ಲೊಮ್ಮೆ ಕಣ್ಣು ಹಾಯಿಸು.
ಅಥವಾ ನಿನ್ನ ಕಣ್ಗಳನ್ನೇ ಅಲ್ಲಿ ಪ್ರತಿಷ್ಠಾಪಿಸು.
ನಮ್ಮ ಹಸ್ತದ ಒಡಕುಗೆರೆಗಳು
ಅದಕ್ಕೆ ರೆಪ್ಪೆಗಳಾಗಿ ಕಾವಲಿರುತ್ತವೆ.

ಹೆಚ್ಚೆಂದರೆ
ಬಣ್ಣಗಳು ಬೇಕಿಲ್ಲ ನಮಗೆ
ರೆಟ್ಟೆ ಮೆದುವಾಗುವವರೆಗೆ!

***

-ಕಾಜೂರು ಸತೀಶ್


ಸುಡುವ 'ಹನಿ'ಗಳು

-1-
ಪರಮ ಹಿಂಸೆ.
ಕವಿತೆಯೊಂದು ತನ್ನನ್ನು ಬರೆಸಿಕೊಳ್ಳುತ್ತಿದೆ
ನನ್ನ ಎದೆಯ ರೋಮ ಸುಟ್ಟು
ಪತಂಗ ಸುಟ್ಟ ವಾಸನೆ
-2-
ಜಗದ ಬೆಂಕಿಯನ್ನು ಪ್ರಶ್ನಿಸಿದೆ:
ಪ್ರಶ್ನೆಯ ಕಡೆಗಿರುವ ಚಿಹ್ನೆಯೊಳಗೆ
ನನ್ನ ಕತ್ತು
ಇನ್ನೂ ಕೊಸರಾಡುತ್ತಿದೆ
-3-
ಸುಡಬಹುದು ಎಲ್ಲವನ್ನು
ಅವ್ವನ ಕಳ್ಳುಬಳ್ಳಿ ಮಾತ್ರ
ಪ್ರೀತಿಯ ಕಡಲಲ್ಲಿ
-4-
ಬೆಂಕಿಯನ್ನೂ ಸುಡಬಹುದು
ಕೊಲ್ಲಲಾಗದು.

-5-
ಎಲ್ಲ ತೀರಿಕೊಂಡರೂ
ಬೆಂಕಿ ಮಾತ್ರ ಸುಡುತ್ತಾ ಬದುಕಿಕೊಂಡಿದೆ.

-ಕಾಜೂರು ಸತೀಶ್




['ಕನ್ನಡ ಪ್ರಭ'ದಲ್ಲಿ ಪ್ರಕಟಿತ]

ಒಲೆ ಮತ್ತು ಅವ್ವ

ದೀಪ ಆರಿಸಿ
ಬೂದಿಯ ಹಾಸಿ ಮಲಗಿದರೂ
ಸುಡುವ ಕೆಂಡ ಒಳಗೆ.


ನಿದ್ರಿಸಿದರೂ ಹೊಗೆಯಾಡುತ್ತದೆ
ಗತದ ಹಾಳೆ ತಾಗಿದೊಡನೆ
ಒಂದೇ ಉಸಿರಿಗೆ ಓದಿ ಮುಗಿಸುತ್ತದೆ.


ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ ಮುಂಜಾವದವರೆಗೂ.
ಬೆಕ್ಕಿನ ಬೆಚ್ಚನೆಯ ಗುರುಗುರು ಲಾಲಿಹಾಡಿಗೆ
ಉರಿಯುತ್ತಾ ನಿದ್ದೆಹೋಗುತ್ತದೆ ಒಲೆ.


ಫೂ…ಫೂ…ಊದಿದರೂ ಹೊತ್ತದ ಹೊತ್ತು
ಸಂಕಟಗಳು ಬೆಂದು ಆವಿಯಾಗಲು
ಒಳಗೊಳಗೇ ಒಲೆಯಾಗುತ್ತಾಳೆ ಅವ್ವ.


ಹೊಗೆಯಾಡುತ್ತಲೇ ಇದೆ ಲೋಕದ ಒಲೆ
ಕಾಯುತ್ತಲೇ ಇದೆ ಸಿಡಿಮದ್ದಿನ ಬತ್ತಿಗಾಗಿ.


ಹೊಗೆಯಿಲ್ಲದ ಮಹಾನಗರದ ಒಲೆಗಳಲ್ಲಿ
ಸುಟ್ಟ ಸಂಬಂಧಕ್ಕೆ ಸಾಕ್ಷಿಯಾಗಿ
ಬೂದಿ ಕೂಡ ಉಳಿಯುವುದಿಲ್ಲ.


ಹೊತ್ತಿಕೊಂಡಿರಲಿ ಒಲೆ
ಅನ್ನ ಬೇಯುವವರೆಗೆ.


-ಕಾಜೂರು ಸತೀಶ್

ಕವಿತೆಗೆ

ನಿನ್ನೆದುರು ಸ್ಫೋಟಗೊಳ್ಳುತ್ತಿದ್ದೇನೆ
ಕವಿತೆಯೇ,
ಛಿದ್ರಗೊಂಡ ಮೇಲೆ
ನನ್ನನ್ನು ಹುದುಗಿಸಿಕೊ.

-ಕಾಜೂರು ಸತೀಶ್



ಚಿತ್ರ: ಡಾ. ಜಿ. ಕೃಷ್ಣ 

ಕಾಡಿನಂತಿರುವ ಊರಿನಲ್ಲಿ..

ಗೆಳೆಯ ಜಾನ್ ಸುಂಟಿಕೊಪ್ಪ ಸುಮಾರು ದಿನಗಳಿಂದ ಕಾಡಿನಂತಿರುವ ಕರಿಕೆ ಎಂಬ ಈ ಊರನ್ನು ನೋಡಲು ಬರುತ್ತೇನೆಂದು ಹೇಳುತ್ತಲೇ ಬಂದಿದ್ದರು.

೨೦೦೮ರ ಜನವರಿ ಮೊದಲ ವಾರ ಅವರೊಂದಿಗೆ ಕೊಡಗಿನ ಅತೀ ಎತ್ತರದ 'ತಡಿಯಂಡಮೋಳ್ ' ಬೆಟ್ಟವನ್ನು ಹತ್ತಿ ,ಹೊರಲಾರದ ಖುಷಿಯನ್ನು ಹೊತ್ತುಕೊಂಡಿದ್ದೆ.



ಫೆಬ್ರುವರಿ. ಸೂರ್ಯನ ಜ್ವರ 37 ಡಿಗ್ರಿಗಿಂತಲೂ ಸ್ವಲ್ಪ ಮೇಲಕ್ಕೆ ಏರುವ ಸಮಯ. ನಡೆಯಲು ಹೇಳಿ ಮಾಡಿಸಿಟ್ಟಂತಿರುವ ಸುಂದರ ರಸ್ತೆಗಳು.



ನಾವು ದಾರಿಯನ್ನಷ್ಟೇ ಸಾಗಲಿಲ್ಲ; ಬದುಕಿನ ಭೂತ-ಭವಿಷ್ಯತ್-ವರ್ತಮಾನಗಳ ಉದ್ದಗಲಕ್ಕೂ ಸಾಗಿದೆವು.



ಹಾಗೆ ಸಾಗಿ, ಮಲಯಾಳಂ-ತುಳು ಮಿಶ್ರಿತ ಭಾಷೆಯನ್ನಾಡುವ ಕುಡಿಯರ ದೇವಾಲಯವೊಂದರ ವೈಶಿಷ್ಟ್ಯತೆಯನ್ನು ತೋರಿಸಿ ಮತ್ತೊಂದು ದಾರಿಯಲ್ಲಿ ಹಿಂತಿರುಗಿ, ಹೊಳೆಯಲ್ಲಿ ನೀರಾಟವಾಡುತ್ತಿದ್ದ ನಮ್ಮ ವಿದ್ಯಾರ್ಥಿಗಳನ್ನು ಕೂಡಿಕೊಂಡೆವು. ಆಳವಾದ ಹೊಳೆಯ ಮೇಲೆ ಚಾಪೆ ಹಾಸಿ ಮಲಗಿದಂತೆ ಮಲಗುವ, ತಲೆಕೆಳಗು ಮಾಡಿ ನಿಲ್ಲುವ ಪರಿಗೆ ನಾವಿಬ್ಬರೂ ಮೂಕವಿಸ್ಮಿತ!




*
ಗೆಳೆಯ ಪೂರ್ತಿ ದಣಿದು ಏನೇನೋ ಆದ ಕಥೆ -ಅವರು ಮನೆ ಸೇರಿ ಒಂದೆರಡು ದಿನಗಳಾದ ಮೇಲಷ್ಟೆ ತಿಳಿಯಿತು!

-ಕಾಜೂರು ಸತೀಶ್

Tuesday, March 18, 2014

ಚಂದ್ರಗಿರಿಯ ತೀರದಲ್ಲಿ..

ಕೊಡಗು ಜಿಲ್ಲೆಯ ಕರಿಕೆ ಗ್ರಾಮದ 'ಪಟ್ಟಿ'ಯಲ್ಲಿ ಹುಟ್ಟುವ ನದಿಯೊಂದು ಕಾಸರಗೋಡು ಸಮೀಪದ 'ಕಳನಾಡು'[ಮೇಲ್ಪರಂಬ್ ] ಎಂಬಲ್ಲಿ ಅದ್ಭುತ ದೃಶ್ಯಕಾವ್ಯವನ್ನು ಸೃಷ್ಟಿಸುತ್ತದೆ.



ಈಚೆಗೆ,ಗೆಳೆಯ ಭರಮಪ್ಪ ಪಾಶಗಾರರೊಂದಿಗೆ ಅದನ್ನು ಹುಡುಕಿ ಹೊರಟಾಗ , ಇದೆಯೋ ಇಲ್ಲವೋ ಎಂಬತ್ತಿದ್ದ 'ಚಂದ್ರಗಿರಿ ಕೋಟೆ' ನಮ್ಮನ್ನು ಸ್ವಾಗತಿಸಿತು.



ಮಿನಿ ಬೇಕಲ ಕೋಟೆಯಂತಿರುವ ಅದು,ಪ್ರವಾಸಿಗರನ್ನು ಸೆಳೆಯಲು ಮಾತ್ರ ವಿಫಲವಾಗಿದೆ. ಹೀಗಾಗಿ, ಅವತ್ತು ಅಲ್ಲಿ ನಮ್ಮಿಬ್ಬರದೇ ರಾಯ'ಭಾರ'!



ಕ್ರಿ.ಶ. ಹದಿನೇಳನೇ ಶತಮಾನದಲ್ಲಿ ಶಿವಪ್ಪ ನಾಯಕ ಕಟ್ಟಿಸಿದ ಕೋಟೆಯದು.



ಅಲ್ಲಿಂದ ತುಸು ದೂರದಲ್ಲಿ ಚಂದ್ರಗಿರಿಯ ವೈಭವೋಪೇತ ನರ್ತನ, ರೈಲು ಹಾದುಹೋಗಲು ನಿರ್ಮಿಸಿದ ಸುಂದರ ಸೇತುವೆ, ಸುರಂಗ ಮಾರ್ಗ, ಸೀಗಡಿ ಮೀನು ಹಿಡಿಯುವ ಮಂದಿ..ಇವೆಲ್ಲಾ ಕಣ್ಣಿಗೆ ಅಂಟಿ ನಿಂತು ನರ್ತಿಸುತ್ತವೆ. ನಡೆದೇ ಹೋಗುವುದಾದರೆ-ಒಂದೂವರೆ ಕಿಲೋ ಮೀಟರ್ ಸಾಗಿದರೆ ಕಾಸರಗೋಡು ರೈಲ್ವೆ ನಿಲ್ದಾಣ.



ಅಂದು ನಮ್ಮಿಬ್ಬರ ಖಿನ್ನತೆಗೆ ಮದ್ದು ಸಿಕ್ಕಿತ್ತು!

**

-ಕಾಜೂರು  ಸತೀಶ್ 

Monday, March 17, 2014

ಅನಾಮಿಕ ಗುಡ್ಡದಲ್ಲೊಂದು ದಿನ..


ಮೊನ್ನೆ , 40 ಡಿಗ್ರಿಯಲ್ಲಿ ಕುದಿಯುತ್ತಿದ್ದ ಸೂರ್ಯನಿಗೆ ಬೆವರುಣಿಸುತ್ತಾ, ಕೇರಳ ರಾಜ್ಯಕ್ಕೆ ಸೇರಿದ ಈ ಅನಾಮಿಕ ಗುಡ್ಡವನ್ನು ಹತ್ತಿದೆವು.




ಆನೆ,ಕಾಡೆಮ್ಮೆ, ಕಾಡು ಹಂದಿ, ಜಿಂಕೆ,ಮೊಲಗಳ ಚಹರೆಗಳಷ್ಟೆ ಸಿಕ್ಕವು!




ಅಲ್ಲಿಂದ ನಿಂತು ನೋಡಿದರೆ, ಕೇರಳದ ಊಟಿ ಎಂದು ಕರೆಯಲ್ಪಡುವ ರಾಣಿಪುರಂನಿಂದ ಕೊಡಗಿನ ತಲಕಾವೇರಿಯವರೆಗಿನ ಶೋಲಾ ಬೆಟ್ಟಗಳು ಗೋಚರಿಸುತ್ತವೆ. ನಮ್ಮ ಶಾಲೆಯೂ ಬೆಂಕಿ ಪೊಟ್ಟಣದ ಹಾಗೆ ಕಾಣಿಸುತ್ತದೆ.


ಪಾಣತ್ತೂರು, ಸುಳ್ಯ, ಕಮ್ಮಾಡಿ, ತಣ್ಣಿಮಾನಿಯ ಹಸಿರು ಚಿತ್ರಗಳು ಕಣ್ಣಿಗೆ ಹಬ್ಬ.


ಗೆಳೆಯ- ಶಿಕ್ಷಕ ಭರಮಪ್ಪ ಪಾಶಗಾರ, ವಿದ್ಯಾರ್ಥಿಗಳಾದ ಸಿಜನ್, ವಿನೋದ್, ರದೀಶ್- ಇವರೊಂದಿಗೆ ಈ ಬೆರಗನ್ನು ಕಣ್ತುಂಬಿಕೂಂಡೆ.

Wednesday, March 12, 2014

ಸಭೆ



ಮಳೆಯ ಸಮಿತಿ ಸಭೆಯಲ್ಲಿ
ಹದಿನಾಲ್ಕು ಹೂವುಗಳೂ ಹಾಜರು.
ಮೋಡದಿಂದ ಟಿಪ್ಪಣಿ ತಯಾರಿ-
ಮಿಂಚಿನ ಬೆಳಕಲ್ಲಿ.
ಮಧ್ಯಾಹ್ನದ ಊಟಕ್ಕೆ
ಫ್ರಿಜ್ಜಿನಲ್ಲೊಂದು ಕಾಮನಬಿಲ್ಲು.
ಎಲ್ಲರಿಗೂ ಬಡಿಸಿದೆ
ನನ್ನ ರಶ್ಮಿಗಳ ಸಹಾಯದಿಂದ-
ಚಂದ್ರನ ತಟ್ಟೆಯಲ್ಲಿ.
ಯಾರ ಬಾಯಲ್ಲೂ ರಾಜಕೀಯದ ಮಾತೇ ಇಲ್ಲ.
***
ಮಲಯಾಳಂ ಮೂಲ- ಕೆ. ಸಚ್ಚಿದಾನಂದನ್

ಕನ್ನಡಕ್ಕೆ- ಕಾಜೂರು ಸತೀಶ್

Tuesday, March 11, 2014

ಎಡ ಮತ್ತು ಬಲ





ಮಗಾ,
ಇಸ್ಕೂಲು ಬುಟ್ಮೇಲೆ
ರಸ್ತೆಯ ಎಡಬದಿಯಲ್ಲೇ ನಡ್ಕೊಂಡು ಬಾ.
ಇಸ್ಕೂಲಿಗೆ ಹೋಗುವಾಗ್ಲೂ ಸಹ.


ವಾಹನಗಳು ಹೋಗೋ ರಸ್ತೆಯಂದ್ರೆ
ಹಂಗೇನೇ ಮಗಾ..
ಜ್ವಾಪಾನ.


ಇಲ್ನೋಡು ಹೊಲ್ತವ,
ಎಡಕ್ಕಾದ್ರೂ ಹೋಗು ಬಲಕ್ಕಾದ್ರೂ ಹೋಗು.
ಢಿಕ್ಕಿ ಹೊಡಿಯಕ್ಕೆ
ಯಾವ ವಾಹ್ನಗಳೂ ಇಲ್ಲ.
ನಡೀಬೇಕಂದ್ರೆ
ಒಸಿ ಬೆವ್ರು ಹರಿಸ್ಬೇಕು,
ಅಷ್ಟೇಯ.


ದೊಡ್ಡವ್ನಾದ್ಮೇಲೆ
ಎಡಕ್ಕೂ ಬೇಡ ಬಲಕ್ಕೂ ಬೇಡ.
ನೀನೇ ಒಂದು ವಾಹ್ನ ತಗೊಂಡು
ಮಧ್ಯದಲ್ಲೇ ಹೋಗು.



ಎಡ-ಬಲದಲ್ಲಿ ಚೆಲ್ಲಿರೋ ರಕ್ತ
ಸ್ವಲ್ಪ ಉಬ್ಬಿಕೊಂಡಿರೋ ಅಲ್ಲಿ
ನಿಲ್ಲೋದಿಲ್ಲ ಮಗಾ..
ನಿಲ್ಲೋದೇ ಇಲ್ಲ.
-ಕಾಜೂರು ಸತೀಶ್

Monday, March 10, 2014

ಬಲಿ

-೧-


'ನಿನ್ನ ಕಾಲಲ್ಲಿ ಕೆಸರಿದೆ?'


'ಉಂ.. ಬಸ್ಸಲ್ಲಿ ಆಕಸ್ಮಿಕವಾಗಿ ತುಳಿದದ್ದು'.


-೨-

'ನಿನ್ನ ಬಟ್ಟೆಯಲ್ಲಿ ಉಗುಳಿದೆ?'



'ಹುಂ.. ಆಕಸ್ಮಿಕವಾಗಿ ಉಗುಳಿದ ಸಹ ಪ್ರಯಾಣಿಕನ ಉಗುಳು'.


-೩-


'ನಿನ್ನ ಅಂಗಿಯಲ್ಲಿ ರಕ್ತವಿದೆ?'



'ಹೂಂ.. ಆಕಸ್ಮಿಕವಾಗಿ ದಾರಿಹೋಕನ ಉಗುರು ತಾಗಿದ್ದು'


-೪-


'ನಿನ್ನ ಮೈಮೇಲೆ ಮಣ್ಣಿದೆ?
ಗಾಯಗಳಿವೆ?
ರಕ್ತವಿದೆ?'



ಉತ್ತರವಿಲ್ಲ!

***

-ಕಾಜೂರು ಸತೀಶ್





Thursday, March 6, 2014

ಆ ಮನೆ


ಅಪ್ಪ ಅಲ್ಪ ಮೊತ್ತಕ್ಕೇ ಮನೆ ಮಾರಲು ಹೊರಟಿರುವ ಸುದ್ದಿ ಕೇಳಿ ನಾವೆಲ್ಲ ಬೆಚ್ಚಿಹೋಗಿದ್ದೆವು! ಆಗಷ್ಟೆ ನಾನು ಮೂರನೇ ತರಗತಿ ಉತ್ತೀರ್ಣನಾಗಿದ್ದೆ.

ಕೆಲವೇ ದಿನಗಳು ಕಳೆದ ಮೇಲೆ ಲಾರಿಯೊಂದು ಬಂದು ನಿಂತಿತ್ತು. ಮೇ ತಿಂಗಳು. ಮೋಡಗಳೆಲ್ಲ ಕಪ್ಪುಗಟ್ಟಿ ನಿಂತಿದ್ದವು.ನಮ್ಮೊಳಗಿನ ದುಃಖವೂ ತುಂಬು ಬಾಣಂತಿ! ಎಲ್ಲವನ್ನೂ ಆ ಗೂಡುಲಾರಿಯೊಳಗೆ ತುಂಬಿಸಲಾಯಿತು- ನಾಯಿ,ಕೋಳಿಗಳ ಸಮೇತ.


ನಮ್ಮ ಮನೆಯ ಹಿಂಬದಿಯಲ್ಲಿದ್ದ ಬೆಣ್ಣೆಹಣ್ಣು ಮರದ ತುಂಬ ಬಲಿತ ಕಾಯಿಗಳು ಜೋತುಬಿದ್ದಿದ್ದವು. ದಿನಾ ಬೆಳಿಗ್ಗೆದ್ದಾಗ ಅದನ್ನು ತಿನ್ನುವ ಕನಸ್ಸು ಕಾಣುತ್ತಿದ್ದ ನನಗೆ,ಎಲ್ಲವನ್ನೂ ಬಿಟ್ಟುಹೋಗುವಾಗ ದುಃಖ ಒತ್ತರಿಸಿ ಬರುತ್ತಿತ್ತು. ಅಪ್ಪನ ಪೆದ್ದುತನವನ್ನೇ ಬಂಡವಾಳವಾಗಿಸಿ ಮನೆ ಕಸಿಯುತ್ತಿರುವ ಮಂದಿಗೆ ಆ ಮರ ಸಿಗದ ಹಾಗೆ ಕಡಿದುಹಾಕಬೇಕೆಂದು ತೀರ್ಮಾನಿಸಿದೆ.ಆದರೆ, ಆ ಹೊತ್ತು ಯಾವುದಕ್ಕೂ ಅವಕಾಶ ಕೊಡಲಿಲ್ಲ. ಯಾವುದಕ್ಕೂ ಕೂಡ!



ಕಡೆಯ ಬಾರಿ ಬಲಭಾಗದಲ್ಲಿದ್ದ 'ಅಮ್ಮಡೆ' ಮರಕ್ಕೆ ಜೋತುಹಾಕಿ ಕಾಲುಗಳನ್ನು ಕೈಯ ಒಳಗೆ ತೂರಿಸಿ ಹಿಂದಕ್ಕೆ ಚಾಚಲು,ಕಿತ್ತಳೆ ಹಣ್ಣಿನ ಮರಕ್ಕೆ ದೊಣ್ಣೆ ಬೀಸಲು, ಮರಬಾಳೆಯ ಗಿಡಕ್ಕೆ ಹತ್ತಿ ಕಾಯಿಗಳನ್ನು ಮುಟ್ಟಲು, ಮರಕೋತಿ ಆಟದ ಆವಾಸ ಸ್ಥಾನವಾಗಿದ್ದ 'ಅಂಟುವಾಳ' ಮರದ ಮೇಲೆ ಹತ್ತಿ ಚಂಗನೆ ಜಿಗಿಯಲು, ಮೂರ್ನಾಲ್ಕು ಮಂದಿ ತಬ್ಬಿ ಹಿಡಿಯಬೇಕಿದ್ದ 'ಅನಲ್ತಾರಿ' ಮರದ ಕೆಳಗೆ ಕೂತು ಅದರಡಿಯಲ್ಲಿ ಉಕ್ಕುತ್ತಿದ್ದ ಜಲದಲ್ಲಿ ಕಾಗದದ ದೋಣಿ ಬಿಡಲು, ಬಾವಿಯ ಬಳಿ ಏಡಿ ಹಿಡಿಯಲು ಇತ್ಯಾದಿ,ಇತ್ಯಾದಿಗಳು ಆಸೆಗಳ ಪಟ್ಟಿಯಲ್ಲಷ್ಟೇ ಉಳಿದುಹೋದವು.


ನೆಲ ಮತ್ತು ನೆಲೆಗಳೆರಡನ್ನೂ ಕಳಕೊಂಡ ಮೇಲೆ ಮತ್ತೆ ನಾನು ಹುಟ್ಟಿ ಬೆಳೆದ, ನನ್ನ ಪುಟ್ಟ ಪಾದದ ಹೆಜ್ಜೆ ಗುರುತುಗಳು ಮಾಸದ ಆ ಮನೆಗೆ ಮತ್ತೆಂದೂ ಹೋಗಲಿಲ್ಲ. ಅದರ ಸುತ್ತ ನಾನು ಬಿಟ್ಟು ಬಂದ- ನಾನು ಸತ್ತರೂ ಸಾಯದ- ಯಾವ ನೆನಪುಗಳನ್ನೂ ಕಣ್ಣಾರೆ ಮತ್ತೆ
ಕಾಣಲಿಲ್ಲ.
*

-ಕಾಜೂರು ಸತೀಶ್ 

Wednesday, March 5, 2014

ಅಳು ಒಂದು ಕವಿತೆಯ ಹಾಗೆ!


ಆ ಹುಡುಗ ಶಾಲೆಯಲ್ಲಿ ಆಡುತ್ತಿದ್ದಾಗ ಬಿದ್ದುಬಿಟ್ಟಿದ್ದ. ಕೈ ಸ್ವಲ್ಪ ಊದಿಕೊಂಡಿತ್ತು. ಮರುದಿನ ಶಾಲೆಗೆ ಬರಲಿಲ್ಲ. ನೆರೆಮನೆಯ ಹುಡುಗನನ್ನು ಈ ಕುರಿತು ವಿಚಾರಿಸಿದೆ.

ಅವನು ಹೇಳಿದ್ದಿಷ್ಟು:

" ಸಾ..ಇವತ್ತು ಬರ್ತಿದ್ದಾಗ ಅವರಮ್ಮ ಅಳ್ತಿದ್ದ ಸದ್ದು ಕೇಳಿಸ್ತಿತ್ತು!"

ಒಮ್ಮೆಲೇ ಅದರ ಚಿತ್ರಗಳೆಲ್ಲ ಕಣ್ಣಿಗೆ ಕಾವಲು ಕಾಯಲೆಂಬಂತೆ ಬಂದು ಮರೆಯಾಯಿತು!