ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, February 20, 2014

ಅವ್ವನ ಸೀರೆ


ಅವ್ವನನ್ನು ಕಂಡರೆ
ಅವಳ ಸೀರೆ ನೆನಪಾಗೋದೇ ಇಲ್ಲ.



ಒಣಗಲು ಹಾಕಿದಾಗಲಷ್ಟೆ ಅದನ್ನು ದಿಟ್ಟಿಸುತ್ತೇನೆ.
ಕಿಡಿಮುಟ್ಟಿದ ನೆನಪು ಅದರಲ್ಲಿ ತೂತುಬಿದ್ದಿರುತ್ತದೆ.
ಅವಳ ಚರ್ಮದಾಳಕ್ಕೂ ಇಳಿದಿರಬಹುದಾದ ಅದು
ಹೊಟ್ಟೆ ತುಂಬಿದಾಗಲೆಲ್ಲ
ಸುಡಲೆಂಬಂತೆ ಉಳಿದುಕೊಂಡಿದೆ.



ಇನ್ನೂ ಎಣಿಸಲಾಗಲಿಲ್ಲ
ಗಾರ್ಮೆಂಟ್ಸಿನ ಗೆಳೆಯ ಗೆಳತಿಯರು
ಬೆವರು ಬಸಿದು ಒತ್ತಿದ ಅದರ ಹೂವುಗಳನ್ನು.
ಹೀರಲು ಬಂದ ದುಂಬಿಗಳೆಲ್ಲ
ತುಟಿ ಸುಟ್ಟುಕೊಂಡಿವೆ.



ಒಣಗಲು ಬಿಟ್ಟ ಅವಳ ಸೀರೆಯಲ್ಲಿ
ತೊಟ್ಟಿಕ್ಕುವ ನೀರು
ಅವಳ ಕಣ್ಣೊಳಗೇ ಪರಕಾಯ ಪ್ರವೇಶ ಮಾಡಿಬಿಟ್ಟಿದೆ.



ಪ್ರತೀ ಸಂಜೆ
ಸೀರೆಯೂ,ಅವಳೂ
ಸೂರ್ಯನ ಜಠರದಿಂದ ಪಾರಾಗಿ ಬಂದಿರುತ್ತಾರೆ.
ತೂಗಿಕೊಂಡರೆ ತಂತಿಗೆ
ಒಂದು ಸಣ್ಣ ಗಾಳಿಗೂ ಹೊಯ್ದಾಟ.


ಅವ್ವನನ್ನು ಕಂಡರೆ
ಅವಳ ಸೀರೆ ನೆನಪಾಗೋದೇ ಇಲ್ಲ.


**

-ಕಾಜೂರು ಸತೀಶ್

2 comments:

  1. ಶೋಷಣೆಯ ಎಳೆ ಬಿಡಿಸುತ್ತಲೇ ಅವ್ವನ ಸೀರೆ ಮನದಲ್ಲಿ ಉಳಿಯುತ್ತೆ.

    ReplyDelete
  2. ಕಿಡಿಮುಟ್ಟಿದ ನೆನಪು ಅದರಲ್ಲಿ ತೂತುಬಿದ್ದಿರುತ್ತದೆ. ಗಾರ್ಮೆಂಟ್ಸಿನ ಗೆಳೆಯ ಗೆಳತಿಯರು
    ಬೆವರು ಬಸಿದು ಒತ್ತಿದ ಅದರ ಹೂವುಗಳನ್ನು.
    ಹೀರಲು ಬಂದ ದುಂಬಿಗಳೆಲ್ಲ
    ತುಟಿ ಸುಟ್ಟುಕೊಂಡಿವೆ. ಒಣಗಲು ಬಿಟ್ಟ ಅವಳ ಸೀರೆಯಲ್ಲಿ
    ತೊಟ್ಟಿಕ್ಕುವ ನೀರು
    ಅವಳ ಕಣ್ಣೊಳಗೇ ಪರಕಾಯ ಪ್ರವೇಶ ಮಾಡಿಬಿಟ್ಟಿದೆ.
    ಬದುಕಿನಿಂದಲೇ ಎದ್ದು ಬಂದ ಸಾಲುಗಳು. ಭಾವ ತೀವ್ರ. ಎಲ್ಲೋ ಓದಿದ ನೆನಪು' ಬಡತನ ಆರನೇ ಮಹಾ ಪಾತಕ' ಎಂದು. ಸರಿಯೆನಿಸುತ್ತದೆ.

    ReplyDelete